logo
ಕನ್ನಡ ಸುದ್ದಿ  /  ಜೀವನಶೈಲಿ  /  ಜಿಮ್‌, ಡಯೆಟ್ ಅಂತ ಎಷ್ಟೇ ಪ್ರಯತ್ನಪಟ್ರೂ ತೂಕ ಕಡಿಮೆ ಆಗ್ತಿಲ್ಲ ಅನ್ನಿಸ್ತಿದ್ಯಾ, ನೀವು ಈ ತಪ್ಪುಗಳನ್ನು ಮಾಡ್ತಾ ಇರಬಹುದು ಗಮನಿಸಿ

ಜಿಮ್‌, ಡಯೆಟ್ ಅಂತ ಎಷ್ಟೇ ಪ್ರಯತ್ನಪಟ್ರೂ ತೂಕ ಕಡಿಮೆ ಆಗ್ತಿಲ್ಲ ಅನ್ನಿಸ್ತಿದ್ಯಾ, ನೀವು ಈ ತಪ್ಪುಗಳನ್ನು ಮಾಡ್ತಾ ಇರಬಹುದು ಗಮನಿಸಿ

Reshma HT Kannada

Nov 10, 2024 03:53 PM IST

google News

ತೂಕ ಕಡಿಮೆ ಆಗದೇ ಇರೋದಕ್ಕೆ ಕಾರಣ

    • ತೂಕ ಇಳಿಕೆ... ಈ ಪದ ಕೇಳಿದ್ರೆ ಇತ್ತೀಚಿನ ದಿನಗಳಲ್ಲಿ ಕಿವಿ ಚುರುಕಾಗುತ್ತೆ. ಯಾಕೆಂದರೆ ತೂಕ ಇಳಿಸೋದು ಈಗ ದೊಡ್ಡ ಸವಾಲಾಗಿರುವುದು ಸುಳ್ಳಲ್ಲ. ಇದಕ್ಕಾಗಿ ಜಿಮ್‌ನಲ್ಲಿ ಹರಸಾಹಸ ಪಟ್ಟು, ವಾಕಿಂಗ್‌ ಮಾಡಿ, ತಿನ್ನೋದೆಲ್ಲಾ ಕಡಿಮೆ ಮಾಡಿದ್ರೂ ತೂಕ ಹೆಚ್ತಾ ಇದೆ ಹೊರತು ಕಡಿಮೆ ಆಗ್ತಿಲ್ಲ ಅಂತಿದ್ರೆ ನೀವು ಈ ತಪ್ಪುಗಳನ್ನು ಮಾಡ್ತಾ ಇರಬಹುದು ಗಮನಿಸಿ.
ತೂಕ ಕಡಿಮೆ ಆಗದೇ ಇರೋದಕ್ಕೆ ಕಾರಣ
ತೂಕ ಕಡಿಮೆ ಆಗದೇ ಇರೋದಕ್ಕೆ ಕಾರಣ (PC: Canva)

ಒಮ್ಮೆ ತೂಕ ಹೆಚ್ಚಾಯ್ತು ಅಂದ್ರೆ ಇಳಿಸೋದು ಖಂಡಿತ ಸುಲಭದ ಮಾತಲ್ಲ. ಈಗಿನ ಜೀವನಶೈಲಿ, ಆಹಾರಗಳು ದಿನೇ ದಿನೇ ತೂಕ ಏರಿಕೆಯಾಗುವಂತೆ ಮಾಡುತ್ತಿರುವುದು ಸುಳ್ಳಲ್ಲ. ತೂಕ ಇಳಿಸುವ ಸಲುವಾಗಿ ನಾವೆಲ್ಲರೂ ಹರಸಾಹಸ ಮಾಡುತ್ತೇವೆ. ಕೈಲಾಗಿಲ್ಲ ಅಂದ್ರು ಜಿಮ್‌ನಲ್ಲಿ ಹೋಗಿ ಬೆವರಿಸುತ್ತೇವೆ. ಹಸಿವಾದ್ರೂ ಸಹ ತಡೆದುಕೊಂಡು ಡಯೆಟ್ ಮಾಡುತ್ತೇವೆ. ಬಾಯಿಗೆ ಬೀಗ ಹಾಕಿಕೊಂಡ ಸಿಹಿ, ಮಸಾಲೆ ಪದಾರ್ಥ ತಿನ್ನೋದು ಬಿಡ್ತೇವೆ.

ಇಷ್ಟೆಲ್ಲಾ ಮಾಡಿದ್ರು ಕೆಲವೊಮ್ಮೆ ತೂಕ ಹೆಚ್ಚಾಗುತ್ತೆ ವಿನಃ ಇಳಿಕೆಯಾಗಲ್ಲ. ಹಾಗಾದರೆ ಇದಕ್ಕೆ ಕಾರಣ ಏನಪ್ಪಾ ಅಂತ ನೀವು ಯೋಚಿಸಿ ತಲೆನೋವು ತಂದುಕೊಂಡಿರಬಹುದು. ಆದರೆ ಇದಕ್ಕೆ ಕಾರಣ ತೂಕ ಇಳಿಕೆಯ ಪಯಣದಲ್ಲಿ ನೀವು ಮಾಡುವ ಈ 5 ತಪ್ಪುಗಳು. ವ್ಯಾಯಾಮ ಮಾಡುವುದು, ಆರೋಗ್ಯಕರ ಆಹಾರಕ್ರಮ, ಆರೋಗ್ಯಕರ ಜೀವನಶೈಲಿ ಅಭ್ಯಾಸಗಳು ತೂಕ ಇಳಿಸುವ ದಿನಚರಿಗೆ ಸಾಕಾಗುವುದಿಲ್ಲ. ಈ ವಿಚಾರದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ನಿಮ್ಮ ದೈನಂದಿನ ದಿನಚರಿಯಲ್ಲಿ ಕೊಂಚ ವ್ಯತ್ಯಾಸವಾದ್ರೂ ತೂಕ ಕಡಿಮೆ ಆಗೊಲ್ಲ. ಹಾಗಾದರೆ ತೂಕ ಇಳಿಯುವ ವಿಚಾರದಲ್ಲಿ ನಾವು ಮಾಡುವ ತಪ್ಪುಗಳು ಯಾವುವು ನೋಡಿ.

ತೂಕ ಇಳಿಸುವ ವಿಚಾರದಲ್ಲಿನ 5 ಸಾಮಾನ್ಯ ತಪ್ಪುಗಳು

ಊಟ ಬಿಡುವುದು: ತೂಕ ಇಳಿಕೆಯ ವಿಚಾರಕ್ಕೆ ಬಂದಾಗ ಹಲವರು ಮಾಡುವ ಪ್ರಮುಖ ತಪ್ಪ ಎಂದರೆ ಊಟ ಬಿಡುವುದು. ಆದರೆ ಇದು ಹೆಚ್ಚು ಕ್ಯಾಲೊರಿ ಸೇವಿಸುವಂತೆ ಮಾಡುತ್ತದೆ. ಊಟ ಬಿಡುವುದರಿಂದ ತೂಕ ಕಡಿಮೆಯಾಗುತ್ತದೆ ಎನ್ನುವುದು ಕೇವಲ ಅನಿಸಿಕೆಯಾಗಿದೆ. ಇದರಿಂದ ಹಸಿವು ಹೆಚ್ಚಾಗಿ ಅತಿಯಾಗಿ ತಿನ್ನುವುದು ಅಥವಾ ಸಿಕ್ಕಿದ್ದನ್ನು ತಿನ್ನುವುದು ಮಾಡುತ್ತೇವೆ. ಅಲ್ಲದೇ ಇದು ಚಯಾಪಚಯವನ್ನು ನಿಧಾನಗೊಳಿಸುತ್ತದೆ. ಇದರಿಂದ ತೂಕ ನಷ್ಟ ಕಷ್ಟವಾಗಬಹುದು. ಊಟ ಬಿಡುವ ಬದಲು ದಿನದಲ್ಲಿ ಆರೋಗ್ಯಕರ ಆಹಾರವನ್ನು ಸಣ್ಣ ಪ್ರಮಾಣದಲ್ಲಿ ಆಗಾಗ ತಿನ್ನುತ್ತಿರಿ. ಶಕ್ತಿಯ ಮಟ್ಟವನ್ನು ಸ್ಥಿರವಾಗಿಡಲು ಲೀನ್ ಪ್ರೊಟೀನ್‌, ಧಾನ್ಯಗಳು ಹಾಗೂ ಸಾಕಷ್ಟು ಹಣ್ಣು, ತರಕಾರಿಗಳನ್ನು ಸೇವಿಸಿ.

ಫ್ಯಾಡ್‌ ಡಯೆ‌ಟ್ ಅನುಕರಣೆ: ಫ್ಯಾಡ್‌ ಡಯೆಟ್ ಎಂದರೆ ಕಡಿಮೆ ಪ್ರಯತ್ನದಿಂದ ತ್ವರಿತ ಫಲಿತಾಂಶ ನೀಡುವ ಡಯೆಟ್ ಕ್ರಮ. ಇದರ ಬಗ್ಗೆ ಜನರು ಹೆಚ್ಚು ಆಕರ್ಷಿತರಾಗುತ್ತಾರೆ. ಆದರೆ ಈ ಆಹಾರಗಳು ಸಾಮಾನ್ಯವಾಗಿ ತಾತ್ಕಾಲಿಕ ತೂಕ ನಷ್ಟಕ್ಕೆ ಕಾರಣವಾಗುತ್ತವೆ ಮತ್ತು ಇದರಿಂದ ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಕಾಡಲು ಆರಂಭವಾಗುತ್ತದೆ. ಇದು ಸಂಪೂರ್ಣ ಆಹಾರವನ್ನು ತ್ಯಜಿಸುವಂತೆ ಮಾಡಬಹುದು ಅಥವಾ ಅಸಹಜ ಆಹಾರಗಳ ಸೇವನೆಗೆ ಒತ್ತು ನೀಡಬಹುದು. ಇದನ್ನು ದೀರ್ಘಾವಧಿವರೆಗೆ ಪಾಲಿಸಿದರೆ ಆರೋಗ್ಯ ಕೆಡಲು ಆರಂಭವಾಗುತ್ತದೆ. ಫ್ಯಾಡ್‌ ಡಯೆಟ್ ಬದಲು ಸಮತೋಲಿತ ಆಹಾರ ಸೇವನೆ, ಆಹಾರದ ಪ್ರಮಾಣವನ್ನು ಮಿತಿಗೊಳಿಸುವುದು ಇಂತಹ ಕ್ರಮಗಳನ್ನು ಪಾಲಿಸಿ. ಇದರಿಂದ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ದೈಹಿಕ ಚಟುವಟಿಕೆ ನಿರ್ಲಕ್ಷಿಸುವುದು: ತೂಕ ಇಳಿಕೆಯಲ್ಲಿ ಡಯೆಟ್ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇದರೊಂದಿಗೆ ದೈಹಿಕ ಚಟುವಟಿಕೆ ಮಾಡದೇ ಇರುವುದು ಕೂಡ ತೂಕ ನಷ್ಟಕ್ಕೆ ಅಡ್ಡಿಯಾಗಬಹುದು. ಕೆಲವರು ತಿನ್ನುವುದನ್ನು ಕಂಟ್ರೋಲ್ ಮಾಡಿದರೆ ತಾನಾಗಿಯೇ ತೂಕ ಇಳಿಯುತ್ತದೆ ಎಂದು ಭಾವಿಸುತ್ತಾರೆ. ಆದರೆ ಇದರೊಂದಿಗೆ ದೈಹಿಕ ಚಟುವಟಿಕೆ ಮಾಡುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಕಾರ್ಡಿಯೊವೆಸ್ಕುಲರ್ ಹಾಗೂ ಸ್ಟ್ರೆಂಥನ್ ಟ್ರೈನಿಂಗ್ ಈ ಎರಡನ್ನೂ ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಇದು ಸ್ನಾಯುವಿನ ದ್ರವ್ಯರಾಶಿಯನ್ನು ಹೆಚ್ಚಿಸಿ, ಒಟ್ಟಾರೆ ಆರೋಗ್ಯ ಸುಧಾರಿಸಲು ಕಾರಣವಾಗುತ್ತದೆ.

ಆಹಾರ ಪ್ರಮಾಣದ ಮೇಲೆ ಗಮನ ಹರಿಸದೇ ಇರುವುದು: ನಿಮಗೆ ಇಷ್ಟದ ಆಹಾರ ಎಂದು ಸಿಕ್ಕಾಪಟ್ಟೆ ತಿನ್ನುವುದು, ಇಷ್ಟವಿಲ್ಲ ಎಂದು ಕಡಿಮೆ ತಿನ್ನುವುದು ಹೀಗೆ ಮಾಡುವುದರಿಂದ ಕೂಡ ತೂಕ ಇಳಿಕೆಯಾಗುವುದಿಲ್ಲ. ಆರೋಗ್ಯಕರ ಆಹಾರಗಳನ್ನಾದರೂ ಅತಿಯಾಗಿ ತಿಂದರೆ ತೂಕ ಹೆಚ್ಚುತ್ತದೆ. ಊಟ ಮಾಡಲು ಚಿಕ್ಕ ಪ್ಲೇಟ್ ಬಳಸಿ. ಒಂದು ಊಟವನ್ನು ಎರಡು ಭಾಗ ಮಾಡಿ ತಿನ್ನಿ. ಹಸಿವಿನ ಸೂಚನೆಗಳನ್ನು ಆಲಿಸಿ ಅದಕ್ಕೆ ತಕ್ಕಂತೆ ಸ್ವಲ್ಪ ಸ್ವಲ್ಪ ತಿನ್ನಿ. ಬಹಳ ಹೊತ್ತು ಹಸಿದುಕೊಂಡು ಇರುವುದರಿಂದ ಜಾಸ್ತಿ ತಿನ್ನುವಂತೆ ಆಗಬಹುದು.

ಸ್ಥಿರತೆಯ ಕೊರತೆ: ಸ್ಥಿರತೆ ಇಲ್ಲ ಎಂದರೆ ಯಾವುದೇ ಕೆಲಸದಲ್ಲೂ ಫಲಿತಾಂಶ ಸಿಗಲು ಕಷ್ಟವಾಗುತ್ತದೆ. ತೂಕ ಇಳಿಸುವ ವಿಚಾರಕ್ಕೆ ಬಂದಾಗಲೂ ಸ್ಥಿರತೆ ಬಹಳ ಮುಖ್ಯ. ನಿಯಮಿತ ವ್ಯಾಯಾಮವನ್ನು ತಪ್ಪದೇ ಮಾಡಬೇಕು. ಡಯೆಟ್ ಕ್ರಮವನ್ನು ಕೂಡ ನಿಯಂತರವಾಗಿ ಪಾಲಿಸಬೇಕು. ಈ ವಿಚಾರದಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸ್ಥಿರತೆ ಇಲ್ಲದೇ ಇರುವುದು ಕೂಡ ತೂಕ ಹೆಚ್ಚಲು ಅಥವಾ ಕಡಿಮೆಯಾಗದೇ ಇರುವುದಕ್ಕೆ ಕಾರಣವಾಗಬಹುದು.

ಈ ಎಲ್ಲಾ ತಪ್ಪುಗಳು ತೂಕ ಇಳಿಕೆಯ ಹಾದಿಯನ್ನು ಇನ್ನಷ್ಟು ಕಠಿಣಗೊಳಿಸಬಹುದು. ನಿಮಗೆ ನಿಜಕ್ಕೂ ತೂಕ ಇಳಿಸಿಕೊಳ್ಳಬೇಕು ಎನ್ನುವ ಬಯಕೆ ಇದ್ದರೆ ಈ ಮೇಲಿನ ತಪ್ಪಗಳನ್ನು ಎಂದಿಗೂ ಮಾಡದಿರಿ. 

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ