ಜಿಮ್‌ಗೂ ಹೋಗದೇ ಕಟ್ಟುನಿಟ್ಟಿನ ಡಯೆಟ್‌ ಕೂಡ ಮಾಡದೇ 20 ಕೆಜಿ ತೂಕ ಇಳಿಸಿಕೊಂಡ ಯುವತಿ; ಹೀಗಿತ್ತು ರಿಧಿ ಶರ್ಮಾರ ವೈಟ್‌ಲಾಸ್ ಪಯಣ
ಕನ್ನಡ ಸುದ್ದಿ  /  ಜೀವನಶೈಲಿ  /  ಜಿಮ್‌ಗೂ ಹೋಗದೇ ಕಟ್ಟುನಿಟ್ಟಿನ ಡಯೆಟ್‌ ಕೂಡ ಮಾಡದೇ 20 ಕೆಜಿ ತೂಕ ಇಳಿಸಿಕೊಂಡ ಯುವತಿ; ಹೀಗಿತ್ತು ರಿಧಿ ಶರ್ಮಾರ ವೈಟ್‌ಲಾಸ್ ಪಯಣ

ಜಿಮ್‌ಗೂ ಹೋಗದೇ ಕಟ್ಟುನಿಟ್ಟಿನ ಡಯೆಟ್‌ ಕೂಡ ಮಾಡದೇ 20 ಕೆಜಿ ತೂಕ ಇಳಿಸಿಕೊಂಡ ಯುವತಿ; ಹೀಗಿತ್ತು ರಿಧಿ ಶರ್ಮಾರ ವೈಟ್‌ಲಾಸ್ ಪಯಣ

ಪಿಸಿಒಡಿ, ಥೈರಾಯಿಡ್‌ನಂತಹ ಜೀವನಶೈಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಎದುರಾದಾಗ ಸಹಜವಾಗಿ ತೂಕ ಹೆಚ್ಚಳವಾಗುತ್ತದೆ. ಫಿಟ್‌ನೆಸ್‌ ಇನ್ಫ್ಲುಯೆನ್ಸರ್ ಒಬ್ಬರಿಗೆ ಪಿಸಿಒಎಸ್‌ ಸಮಸ್ಯೆಯಿಂದಾಗಿ ತೂಕ ಹೆಚ್ಚಾಗುತ್ತದೆ. ಆದರೆ ಆಕೆ ಜಿಮ್‌ಗೂ ಹೋಗದೇ ಕಟ್ಟುನಿಟ್ಟಿನ ಡಯೆಟ್ ಪಾಲಿಸದೇ 20 ಕೆಜಿ ಕಡಿಮೆಯಾಗುತ್ತಾರೆ. ಆಕೆ ಅನುಸರಿಸಿದ್ದು ಕೇವಲ ಈ 6 ಸೂತ್ರಗಳು ಮಾತ್ರ.

ತೂಕ ಇಳಿಕೆ ಸ್ಟೋರಿ
ತೂಕ ಇಳಿಕೆ ಸ್ಟೋರಿ

ತೂಕ ಇಳಿಸೋಕೆ ಇತ್ತೀಚಿನ ದಿನಗಳಲ್ಲಿ ಹಲವರು ಹಲವರು ರೀತಿಯ ಸಾಹಸಗಳನ್ನು ಮಾಡುತ್ತಾರೆ. ಜಿಮ್‌ನಲ್ಲಿ ಬೆವರಿಸುತ್ತಾರೆ, ನಾಲಿಗೆ ಚಪಲವನ್ನೆಲ್ಲಾ ಕಟ್ಟಿ ಹಾಕಿಕೊಂಡು ಡಯೆಟ್ ಪಾಲಿಸುತ್ತಾರೆ. ಆದರೆ ಇದ್ಯಾವುದನ್ನೂ ಮಾಡದೇ ಮನೆಯಲ್ಲೇ ತಯಾರಿಸಿದ ಆಹಾರ, ದಿನಕ್ಕೆ 10 ಸಾವಿರ ಹೆಜ್ಜೆ ನಡೆಯುವುದು ಹಾಗೂ ಇತರ ಕೆಲವು ಆರೋಗ್ಯಕರ ಅಭ್ಯಾಸದಿಂದ ತೂಕ ಇಳಿಸಿಕೊಳ್ಳಲು ಸಾಧ್ಯವೇ?

ಖಂಡಿತ ಸಾಧ್ಯ ಎನ್ನುತ್ತಿದ್ದಾರೆ ಖ್ಯಾತ ಫಿಟ್‌ನೆಸ್ ಇನ್ಫ್ಲುಯೆನ್ಸರ್ ಒಬ್ಬರು. ಆಕೆ ತಾವು ತೂಕ ಇಳಿಸಿಕೊಂಡ ಕ್ರಮವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ರಿಧಿ ಶರ್ಮಾ (@getfitwithrid) ಎನ್ನುವಾಕೆ ತಾವು ಜಿಮ್, ಡಯೆಟ್ ಏನೂ ಮಾಡದೇ 20 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ ಎಂಬುದನ್ನು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಆಕೆ ಪಿಸಿಒಎಸ್‌ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ತೂಕ ಏರಿಕೆಯಾಗಿತ್ತು.

20 ಕೆಜಿ ಇಳಿಸಲು 6 ನಿಯಮಗಳು

ರಿಧಿ ಅವರ ವಿಡಿಯೊ ಪ್ರಕಾರ, ತೂಕ ಹೆಚ್ಚಿರುವಾಗ ಹಾಗೂ ತೂಕ ಇಳಿಕೆಯ ನಂತರದ ಫೋಟೊಗಳನ್ನು ನಾವು ಗಮನಿಸಬಹುದು. ಮೊದಲೇ ಹೇಳಿದಂತೆ ಈ ಫಿಟ್‌ನೆಸ್‌ ಇನ್ಫ್ಲುಯೆನ್ಸರ್ ತೂಕ ಏರಿಕೆಯಾಯ್ತು ಎನ್ನುವ ಕಾರಣಕ್ಕೆ ಜಿಮ್‌ಗೂ ಹೋಗಿಲ್ಲ, ಬಾಯಿ ಕಟ್ಟಿಕೊಂಡು ಬದುಕಿಲ್ಲ. ಆದರೆ ಕೇವಲ ಈ 6 ನಿಯಮಗಳನ್ನು ಪಾಲಿಸಿದ್ದರು.

ರಿಧಿ ವಾರದಲ್ಲಿ 5 ರಿಂದ 6 ದಿನ 30 ರಿಂದ 40 ನಿಮಿಷಗಳ ಕಾಲ ಮನೆಯಲ್ಲಿ ವರ್ಕೌಟ್ ಮಾಡುತ್ತಿದ್ದರು. ವ್ಯಾಯಾಮದ ದಿನಚರಿಯು ಅವರ ದೇಹ ಟೋನ್ ಆಗಲು ಹಾಗೂ ಚರ್ಮ ಸಡಿಲವಾಗುವುದನ್ನು ತಡೆಯಲು ಸಹಾಯವಾಯಿತು. ‘ನಾನು ಯೋಗ ಮ್ಯಾಟ್, 2 ಡಂಬಲ್ಸ್‌ ಮತ್ತು ರೆಸಿಸ್ಟೆನ್ಸ್ ಬ್ಯಾಂಡ್‌ನೊಂದಿಗೆ ನಮ್ಮ ವೈಟ್‌ಲಾಸ್ ಪಯಣವನ್ನು ಆರಂಭ ಮಾಡಿದೆ ಎಂದು ರಿಧಿ ಹೇಳಿಕೊಂಡಿದ್ದಾರೆ.

ಮನೆ ಊಟಕ್ಕೆ ಆದ್ಯತೆ

ಯಾವುದೇ ಕಟ್ಟುನಿಟ್ಟಿನ ಆಹಾರಕ್ರಮದ ಬದಲಿಗೆ, ರಿಧಿ ಸರಳವಾದ ಮನೆಯಲ್ಲಿ ತಯಾರಿಸಿದ ಆಹಾರ ಸೇವನೆಗೆ ಒತ್ತು ನೀಡಿದ್ದರು. ‘ನಾನು ಯಾವುದೇ ನಿರ್ದಿಷ್ಟ ಡಯೆಟ್‌ ಪ್ಲಾನ್‌ ಅನುಸರಿಸಲಿಲ್ಲ. ಏಕೆಂದರೆ ನಾನು ಬಯಸಿದ್ದನ್ನು ತಿನ್ನಲು ಬಯಸುತ್ತೇನೆ, ಆದರೆ ನಾನು ಇತಿಮಿತಿಯಲ್ಲಿ ತಿನ್ನುತ್ತಿದೆ. ತೋಫು, ಪನೀರ್, ಸೋಯಾ, ದ್ವಿದಳ ಧಾನ್ಯಗಳು ಮತ್ತು ಬೀನ್ಸ್‌ಗಳಂತಹ ಪ್ರೊಟೀನ್-ಭರಿತ ಆಹಾರಗಳನ್ನು ತಿನ್ನುವುದರ ಮೇಲೆ ಕೇಂದ್ರೀಕರಿಸಿದೆ‘ ಎಂದು ಅವರು ವಿವರಿಸುತ್ತಾರೆ.

ಇವರು ತಮ್ಮ ಆಹಾರಕ್ರಮದಿಂದ ಸಿಹಿ ಹಾಗೂ ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸುತ್ತಾರೆ. ಬದಲಾಗಿ, ಅನಗತ್ಯ ಕ್ಯಾಲೊರಿಗಳನ್ನು ಹೊಂದುವುದನ್ನು ತಪ್ಪಿಸಲು ಅವರು ಸಂಪೂರ್ಣ, ಪೌಷ್ಟಿಕ ಆಹಾರಗಳನ್ನು ಸೇವಿಸುವುದರ ಮೇಲೆ ಕೇಂದ್ರೀಕರಿಸಿದರು. ಇವರು ಪ್ರತಿದಿನ 7ಸಾವಿರದಿಂದ 10 ಸಾವಿರ ಹೆಜ್ಜೆ ನಡೆಯುತ್ತಿದ್ದರು. ನಾನು ಬಹುತೇಕ ದಿನಗಳಲ್ಲಿ 10 ಸಾವಿರ ಹೆಜ್ಜೆ ನಡೆಯುತ್ತಿದ್ದೆ ಎಂದು ಅವರು ಹೇಳಿದ್ದಾರೆ.

ನಿದ್ದೆ ವಿಚಾರದಲ್ಲಿ ರಾಜಿ ಇಲ್ಲ

ಇದರೊಂದಿಗೆ ರಿಧಿ ತನ್ನ ನಿದ್ದೆಯ ವಿಚಾರದಲ್ಲೂ ರಾಜಿ ಮಾಡಿಕೊಳ್ಳಲಿಲ್ಲ. 20 ಕೆಜಿ ತೂಕ ಇಳಿಸಿಕೊಳ್ಳುವಲ್ಲಿ ನಿದ್ದೆಯು ಒಂದು ಅಂಶವಾಗಿತ್ತು. ನಾನು ಪ್ರತಿ ರಾತ್ರಿ 7-8 ಗಂಟೆಗಳ ಗುಣಮಟ್ಟದ ನಿದ್ರೆಯನ್ನು ಪಡೆದುಕೊಂಡಿದ್ದೇನೆ, ಇದು ನನ್ನ ತೂಕ ನಷ್ಟ ಮತ್ತು ಚೇತರಿಕೆಯಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ ಎನ್ನುವ ರಿಧಿ ನಿದ್ದೆಯ ಮಹತ್ವವನ್ನು ಒತ್ತಿ ಹೇಳುತ್ತಾರೆ.

ತೂಕ ಇಳಿಸುವ ಪ್ರಯಾಣದ ಸಮಯದಲ್ಲಿ ರಿಧಿಗೆ ಈ ಹಂತಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರೂ, ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಆರೋಗ್ಯ ಮತ್ತು ಅವಕಾಶಗಳು ಭಿನ್ನವಾಗಿರುತ್ತವೆ. ಆದ್ದರಿಂದ, ಯಾವುದೇ ಫಿಟ್ನೆಸ್ ದಿನಚರಿಯನ್ನು ತೆಗೆದುಕೊಳ್ಳುವ ಮೊದಲು, ವೃತ್ತಿಪರರನ್ನು ಸಂಪರ್ಕಿಸಿ.

(ಗಮನಿಸಿ: ಈ ಲೇಖನವನ್ನು ಮಾಹಿತಿ ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ)

Whats_app_banner