ತೂಕ ಇಳಿಕೆಗೆ ಕಡಿಮೆ ಆಹಾರ ಸೇವಿಸುತ್ತಿದ್ದೀರಾ: ಹಾಗಿದ್ದರೆ ಪೌಷ್ಠಿಕಾಂಶಭರಿತ ಈ ಒಣಹಣ್ಣುಗಳು, ಬೀಜಗಳನ್ನು ಸೇವಿಸಿ
Sep 20, 2024 01:18 PM IST
ತೂಕ ಇಳಿಕೆಗೆ ಸಹಾಯ ಮಾಡುವ ಒಣಹಣ್ಣುಗಳು ಮತ್ತು ಬೀಜಗಳ ಬಗ್ಗೆ ಇಲ್ಲಿದೆ ಮಾಹಿತಿ.
ಬೀಜಗಳು ಮತ್ತು ಒಣಹಣ್ಣುಗಳನ್ನು ಸೇವಿಸುವುದು ಆರೋಗ್ಯಕರವಾಗಿದ್ದು, ತೂಕ ನಷ್ಟ ಪ್ರಯಾಣಕ್ಕೆ ಇವು ಸಹಾಯ ಮಾಡುತ್ತದೆ. ಇವುಗಳ ಸೇವನೆಯಿಂದ ದೇಹಕ್ಕೆ ಸಾಕಷ್ಟು ಪೌಷ್ಠಿಕಾಂಶವೂ ದೊರೆಯುತ್ತದೆ. ಜೊತೆಗೆ ತೂಕ ಇಳಿಕೆಗೂ ಸಹಕಾರಿ. ತೂಕ ಇಳಿಕೆಗೆ ಸಹಾಯ ಮಾಡುವ ಒಣಹಣ್ಣುಗಳು ಮತ್ತು ಬೀಜಗಳ ಬಗ್ಗೆ ಇಲ್ಲಿದೆ ಮಾಹಿತಿ.
ಬಹುತೇಕ ಮಂದಿ ತೂಕ ಇಳಿಕೆಗೆ ಪ್ರಯತ್ನಿಸುತ್ತಲೇ ಇರುತ್ತಾರೆ. ಇದಕ್ಕಾಗಿ ಡಯೆಟ್ ಮಾಡುವುದು, ವ್ಯಾಯಾಮ ಮಾಡುವುದು, ಜಿಮ್‍ಗೆ ಹೋಗುವುದು ಇತ್ಯಾದಿ ಪ್ರಯತ್ನಿಸುತ್ತಲೇ ಇರುತ್ತಾರೆ. ತೂಕ ಇಳಿಕೆಗೆ ನೀವು ಸಹ ಪ್ರಯತ್ನಿಸುತ್ತಿದ್ದರೆ ಆಹಾರವು ಕೂಡ ಬಹಳ ಪ್ರಾಮುಖ್ಯತೆ ಪಡೆದಿದೆ. ಕಟ್ಟುನಿಟ್ಟಾದ ಆಹಾರ ಪದ್ಧತಿಗಳನ್ನು ಕೆಲವರು ಅನುಸರಿಸುತ್ತಾರೆ. ಆದರೆ, ಇದರಿಂದ ಕೆಲವೊಮ್ಮೆ ಹಸಿವಾಗ ಬೇರೆ ಏನಾದರೂ ತಿನ್ನಲು ಪ್ರಯತ್ನಿಸಬಹುದು. ಹಾಗಂತ ಅನಾರೋಗ್ಯಕರ ಆಹಾರಗಳನ್ನು ಎಂದಿಗೂ ಸೇವಿಸಬಾರದು. ಆರೋಗ್ಯಕರ ಆಹಾರಗಳತ್ತ ಗಮನ ಹರಿಸುವುದು ಮುಖ್ಯ. ಹೀಗಾಗಿ ತೂಕ ಇಳಿಕೆಗೆ ಹಾಗೂ ಹಸಿವು ನಿಗ್ರಹಕ್ಕೆ ಒಣ ಹಣ್ಣುಗಳು ಮತ್ತು ಬೀಜಗಳು ಉತ್ತಮ ಆಯ್ಕೆ. ಆಹಾರ ಕ್ರಮದಲ್ಲಿ ಪ್ರೋಟೀನ್ ಅತ್ಯಗತ್ಯವಾಗಿದೆ. ಒಣಹಣ್ಣುಗಳು ಮತ್ತು ಬೀಜಗಳಲ್ಲಿ ಪೋಷಕಾಂಶಗಳಿಂದ ಹೇರಳವಾಗಿದೆ. ಇದು ತೂಕ ಇಳಿಕೆ ಮತ್ತು ಕೊಬ್ಬು ಬರ್ನ್ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಪೋಷಕಾಂಶಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಒಣಹಣ್ಣುಗಳು ಮತ್ತು ಬೀಜಗಳಲ್ಲಿ ಅಗತ್ಯವಾದ ಪ್ರೋಟೀನ್‌ಗಳು ಮಾತ್ರವಲ್ಲದೆ ಆರೋಗ್ಯಕರ ಕೊಬ್ಬುಗಳು ಮತ್ತು ಫೈಬರ್ ಅನ್ನು ಸಹ ಒದಗಿಸುತ್ತದೆ. ಇದರಿಂದ ನಿಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ನಿಮ್ಮ ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರು ಈ ಆರು ಪ್ರೋಟಿನ್‍ನಲ್ಲಿ ಅಧಿಕವಾಗಿರುವ ಒಣ ಹಣ್ಣುಗಳು ಮತ್ತು ಬೀಜಗಳನ್ನು ಸೇವಿಸಬಹುದು.
ತೂಕ ನಷ್ಟಕ್ಕೆ ಪ್ರೋಟೀನ್ ಭರಿತ ಒಣಹಣ್ಣುಗಳು ಮತ್ತು ಬೀಜಗಳು
ಬಾದಾಮಿ: ಪೌಷ್ಟಿಕಾಂಶದಲ್ಲಿರುವ ಸಮೃದ್ಧವಾಗಿರುವ ಬಾದಾಮಿಯಲ್ಲಿ, ಪ್ರತಿ 28 ಗ್ರಾಂನಲ್ಲಿ ಸುಮಾರು 6 ಗ್ರಾಂ ಪ್ರೋಟೀನ್ ಹೊಂದಿರುತ್ತದೆ. ಇವು ಆರೋಗ್ಯಕರವಾದ ಮೊನೊಸಾಚುರೇಟೆಡ್ ಕೊಬ್ಬುಗಳು, ಫೈಬರ್ ಮತ್ತು ವಿಟಮಿನ್ ಇ ಗಳಲ್ಲಿ ಸಮೃದ್ಧವಾಗಿವೆ. ಪ್ರೋಟೀನ್ ಮತ್ತು ಫೈಬರ್ ಇರುವುದರಿಂದ ಹಸಿವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಬಾದಾಮಿಯನ್ನು ಮಿತವಾಗಿ ಸೇವಿಸುವುದರಿಂದ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ ಜೊತೆಗೆ ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ.
ಕುಂಬಳಕಾಯಿ ಬೀಜಗಳು: ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕುಂಬಳಕಾಯಿ ಬೀಜಗಳಲ್ಲಿ ಮೆಗ್ನಿಸಿಯಮ್, ಸತು ಹಾಗೂ ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ. ಒಟ್ಟಾರೆ ಆರೋಗ್ಯಕ್ಕೆ ಇದು ಕೊಡುಗೆ ನೀಡುತ್ತದೆ. ಇದರಲ್ಲಿರುವ ಹೆಚ್ಚಿನ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನಂಶದಿಂದಾಗಿ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ದೊರೆಯುತ್ತದೆ. ಇದನ್ನು ಸಲಾಡ್‌ಗಳಲ್ಲಿ ಬಳಸಬಹುದು, ಸ್ಮೂಥಿಗಳಲ್ಲಿ ಬಳಸಿ ತಿನ್ನಬಹುದು ಅಥವಾ ಹಾಗೆಯೇ ಸೇವಿಸಬಹುದು.
ಕಾಮಕಸ್ತೂರಿ ಬೀಜಗಳು: ಚಿಯಾ ಬೀಜ ಅಥವಾ ಕಾಮಕಸ್ತೂರಿ ಬೀಜ ನೋಡಲು ಸಣ್ಣದಾಗಿದ್ದರೂ ಪ್ರೋಟೀನ್‍ನಿಂದ ಸಮೃದ್ಧವಾಗಿದೆ. ಇದರಲ್ಲಿ ನಾರಿನಾಂಶ ಅಧಿಕವಾಗಿದ್ದು, ನೀರನ್ನು ಇದು ಹೀರಿಕೊಳ್ಳುತ್ತದೆ. ಇದನ್ನು ಸ್ಮೂಥಿಗಳು, ಮೊಸರು ಅಥವಾ ಓಟ್ಮೀಲ್‍ಗೆ ಸೇರಿಸಿ ಸೇವಿಸಬಹುದು. ಇದರ ಸೇವನೆಯು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಚಿಯಾ ಬೀಜದಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳಿವೆ. ಇವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ.
ಸೆಣಬಿನ ಬೀಜಗಳು: ಪ್ರೋಟೀನ್‍ಗಳಲ್ಲಿ ಹೇರಳವಾಗಿರುವ ಸೆಣಬಿನ ಬೀಜಗಳು ಹಸಿವನ್ನು ನಿಗ್ರಹಿಸಲು ಸಹಕಾರಿಯಾಗಿದೆ. ಇವು ಆರೋಗ್ಯಕರ ಕೊಬ್ಬುಗಳಲ್ಲಿ ವಿಶೇಷವಾಗಿ ಒಮೆಗಾ -6 ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ. ವಿವಿಧ ಬಗೆಯ ಹಣ್ಣುಗಳನ್ನು ಕತ್ತರಿಸಿ ಸ್ಮೂಥಿ ತಯಾರಿಸಿ ಇದಕ್ಕೆ ಸೆಣಬಿನ ಬೀಜಗಳನ್ನು ಸೇರಿಸಿ ಸವಿಯಬಹುದು. ಸ್ನಾಯು ಚೇತರಿಕೆಯನ್ನು ಉತ್ತೇಜಿಸಲು ಸೆಣಬಿನ ಬೀಜಗಳು ಸಹಕಾರಿ. ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಿಗೆ ಇದು ತುಂಬಾನೇ ಸಹಕಾರಿಯಾಗಿದೆ.
ವಾಲ್‌ನಟ್ಸ್: ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಹೇರಳವಾಗಿರುವ ವಾಲ್‍ನಟ್ಸ್ ನಲ್ಲಿ ಪ್ರೋಟೀನ್ ಕೂಡ ಸಮೃದ್ಧವಾಗಿದೆ. ಇವು ಹೃದಯದ ಆರೋಗ್ಯಕ್ಕೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅನಾರೋಗ್ಯಕರ ತಿಂಡಿ ಸೇವನೆಯನ್ನು ಇದು ತಡೆಯುತ್ತದೆ. ಸ್ಮೂಥಿ, ಸಲಾಡ್‌ಗಳು ಅಥವಾ ಓಟ್‌ಮೀಲ್‌ಗೆ ವಾಲ್‍ನಟ್‍ಗಳನ್ನು ಬಳಸಿ ಸೇವಿಸಿ, ಪ್ರಯೋಜನವನ್ನು ಪಡೆಯಬಹುದು.
ಕಡಲೆಕಾಯಿಗಳು: ತೂಕ ಇಳಿಕೆ ಪ್ರಯತ್ನದಲ್ಲಿ ಬಡವರ ಬಾದಾಮಿ ಎಂದೇ ಖ್ಯಾತವಾಗಿರುವ ಕಡಲೆಕಾಯಿ ಕೂಡ ನಿರ್ಣಾಯಕ ಪಾತ್ರ ವಹಿಸುತ್ತದೆ. ಕಡಲೆಕಾಯಿ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದ್ದು, ನಾರಿನಾಂಶ ಹಾಗೂ ಪ್ರೋಟೀನ್ ಸಮೃದ್ಧವಾಗಿರುವುದರಿಂದ ತೂಕ ಇಳಿಕೆಗೆ ಸಹಾಯಕವಾಗಿದೆ. ಅಷ್ಟೇ ಅಲ್ಲ, ಇವು ಆರೋಗ್ಯಕರ ಕೊಬ್ಬುಗಳು ಮತ್ತು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ.
ಒಟ್ಟಿನಲ್ಲಿ ನಿಮ್ಮ ಆಹಾರದಲ್ಲಿ ಈ ಒಣಹಣ್ಣುಗಳು ಮತ್ತು ಬೀಜಗಳನ್ನು ಸೇವಿಸುವುದರಿಂದ ತೂಕ ಇಳಿಕೆಗೆ ಸಹಕಾರಿಯಾಗಿದೆ. ಹಾಗಂತ ಇವುಗಳನ್ನು ಸೇವಿಸಿದರೆ ತೂಕ ಇಳಿಕೆಯಾಗುತ್ತದೆ ಎಂದಲ್ಲ, ಪರಿಣಾಮಕಾರಿ ತಾಲೀಮು ಮಾಡುವುದು ಸಹ ಅಗತ್ಯವಿದೆ. ತೂಕ ಇಳಿಕೆ ಪ್ರಯಾಣದಲ್ಲಿ ಸಮತೋಲಿತ ಆಹಾರ ಸೇವಿಸುವಾಗ ದೇಹಕ್ಕೆ ಅಗತ್ಯ ಪೌಷ್ಟಿಕಾಂಶಗಳು ಕೂಡ ಬೇಕಾಗುತ್ತದೆ. ಹೀಗಾಗಿ ಒಣಹಣ್ಣುಗಳು ಮತ್ತು ಬೀಜಗಳನ್ನು ಸೇವಿಸಬಹುದು.