Weight Loss Story: ಜಿಮ್‌ಗೂ ಹೋಗಿಲ್ಲ, ಕಟ್ಟುನಿಟ್ಟಿನ ಡಯೆಟ್ ಕೂಡ ಮಾಡಿಲ್ಲ, ಆದ್ರೂ 6 ತಿಂಗಳಲ್ಲಿ 25 ಕೆಜಿ ತೂಕ ಇಳಿಸಿಕೊಂಡ ಯುವತಿ
Dec 02, 2024 12:39 PM IST
25 ಕೆಜಿ ತೂಕ ಇಳಿಸಿಕೊಂಡ ಸಾಕ್ಷಿ
- ಜಿಮ್‌ಗೂ ಹೋಗದೇ ಕಟ್ಟುನಿಟ್ಟಿನ ಡಯೆಟ್ ಕೂಡ ಮಾಡದೇ ತೂಕ ಇಳಿಸಿಕೊಳ್ಳಲು ಸಾಧ್ಯವೇ ಎಂದು ನೀವು ಕೇಳಿದ್ರೆ ಹೌದು ಅಂತಿದ್ದಾರೆ ಇಲ್ಲೊಬ್ಬರು ಯುವತಿ. ಇವರು 6 ತಿಂಗಳಲ್ಲಿ 25 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಇದಕ್ಕಾಗಿ ಅವರು ಅನುಸರಿಸಿದ್ದು ಕೇವಲ 9 ಸರಳ ವಿಧಾನ. ಹೇಗಿತ್ತು ಅವರ ವೈಟ್‌ಲಾಸ್ ಜರ್ನಿ ನೋಡಿ.
ವೈಟ್‌ಲಾಸ್ ಪಯಣ ಖಂಡಿತ ಸುಲಭದ್ದಾಗಿರುವುದಿಲ್ಲ. ಇದಕ್ಕಾಗಿ ಸಾಕಷ್ಟು ಶ್ರಮ ಹಾಕಬೇಕಾಗುತ್ತದೆ. ಜಿಮ್, ಯೋಗ ಅಂತ ದೇಹ ದಂಡಿಸಬೇಕು. ನಮಗೆ ಇಷ್ಟವಾಗಿರುವ ಎಲ್ಲಾ ಆಹಾರ ಖಾದ್ಯಗಳನ್ನು ತಿನ್ನದೇ ಇರಬೇಕು. ಹಾಗಂತ ತೂಕ ಇಳಿಕೆ ಅಸಾಧ್ಯ ಅನ್ನೋದು ಸುಳ್ಳು. ಇದಕ್ಕಾಗಿ ನೀವು ದೃಢ ಮನಸ್ಸು ಮಾಡೋದು ಮುಖ್ಯ.
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹಲವರು ತಾವು ತೂಕ ಇಳಿಸಿಕೊಂಡ ಕಥೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ಖಂಡಿತ ಹಲವರಿಗೆ ಸ್ಫೂರ್ತಿಯಾಗುವಂತಿರುತ್ತದೆ. ಇಂತಹ ಸ್ಫೂರ್ತಿದಾಯಕ ಕಥೆಯ ಭಾಗವಾಗಿದ್ದಾರೆ ಸಾಕ್ಷಿ ಯಾದವ್, ಇವರು ಯೋಗ ತರಬೇತುದಾರರು. ಈಕೆ 6 ತಿಂಗಳಲ್ಲಿ 25 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅವರ ತೂಕ ಇಳಿಕೆಯ ಕಥೆಯನ್ನ ನೀವೂ ಓದಿ.
ಸಾಕ್ಷಿ ಅವರ ವೈಟ್‌ಲಾಸ್ ಕಥೆ
ಸಾಕ್ಷಿ ಯಾದವ್ ತಮ್ಮ ಇತ್ತೀಚಿಗಿನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಾವು 25 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ ಎಂಬುದನ್ನು ಬರೆದುಕೊಂಡಿದ್ದಾರೆ. ಆಕೆಯೇ ಹೇಳಿದಂತೆ ಅವರು ಜಿಮ್‌ನಲ್ಲಿ ವರ್ಕೌಟ್ ಮಾಡಿಲ್ಲ, ಕಟ್ಟುನಿಟ್ಟಿನ ಡಯೆಟ್ ಕೂಡ ಪಾಲಿಸಿಲ್ಲ. ಆದರೆ ಅವರು ತಮ್ಮ ಫಿಟ್‌ನೆಟ್ ಗುರಿಗಾಗಿ 10 ನಿಯಮಗಳನ್ನು ಪಾಲಿಸಿದ್ದರು. ಈ 10 ನಿಯಮಗಳು ಖಂಡಿತ ಸರಳವಾಗಿವೆ. ಆ ನಿಯಮಗಳು ಏನು ನೋಡಿ.
ಮನೆಯಲ್ಲಿ ವರ್ಕೌಟ್: ಇವರು ವಾರದಲ್ಲಿ 6 ದಿನಗಳ ಕಾಲ 40 ರಿಂದ ನಿಮಿಷ ವ್ಯಾಯಾಮ ಮಾಡಿದ್ದರು.
ಮನೆ ಆಹಾರ: ಡಯೆಟ್ ಮೇಲೆ ಗಮನ ಹರಿಸದ ಇವರು ಮನೆಯಲ್ಲೇ ತಯಾರಿಸಿದ ಆಹಾರಗಳನ್ನು ತಿನ್ನುತ್ತಿದ್ದರು. ತಮ್ಮ ಆಹಾರದಲ್ಲಿ ಪ್ರೊಟೀನ್ ಹಾಗೂ ನಾರಿನಾಂಶ ಸಮೃದ್ಧವಾಗಿರುವಂತೆ ನೋಡಿಕೊಳ್ಳುತ್ತಿದ್ದರು.
ಸಿಹಿ ತಿನಿಸು, ಎಣ್ಣೆಯುಕ್ತ ಹಾಗೂ ಸಂಸ್ಕರಿಸಿ ಆಹಾರಕ್ಕೆ ಕಡಿವಾಣ: ಇವುಗಳಲ್ಲಿ ಹೆಚ್ಚಿನ ಕ್ಯಾಲೋರಿ ಇರುವ ಆಹಾರ ಹಾಗೂ ನಮ್ಮ ನಾಲಿಗೆಗೆ ರುಚಿಸಿ ನಾವು ಅಡಿಕ್ಟ್ ಆಗುವ ಆಹಾರಗಳ ಸೇವನೆಯನ್ನ ತಪ್ಪಿಸುತ್ತಿದ್ದರು.
ನಡಿಗೆ: ಇವರು ವಾಕಿಂಗ್ ಅಂತ ಹೋಗುತ್ತಿರಲಿಲ್ಲ. ಆದರೆ ಹೆಚ್ಚು ಹೆಚ್ಚು ನಡೆಯುತ್ತಿದ್ದರು, ಪ್ರತಿದಿನ 10000 ಹೆಜ್ಜೆ ನಡಿಗೆಯು ಇವರಿಗೆ ತೂಕ ಇಳಿಸಿಕೊಳ್ಳಲು ನೆರವಾಯ್ತು, ಫೋನ್ ಬಂದಾಗಲೂ ಅವರು ಕೂತು ಮಾತನಾಡುತ್ತಿರಲಿಲ್ಲ.
ಹೈಡ್ರೇಷನ್: ತೂಕ ಇಳಿಸುವಲ್ಲಿ ನೀರು ನಿರ್ಣಾಯಕ ಪಾತ್ರ ವಹಿಸುತ್ತದೆ ಎನ್ನುವ ಇವರು ಸಾಕಷ್ಟು ನೀರು ಕುಡಿಯುತ್ತಿದ್ದರು. ದಿನವಿಡೀ ಹೈಡ್ರೇಟ್ ಆಗಿರುವುದಕ್ಕೆ ಗಮನ ಕೊಡುತ್ತಿದ್ದರು.
ಸ್ಥಿರತೆ: ತೂಕ ಇಳಿಕೆಗೆ ಸ್ಥಿರವಾಗಿರುವುದು ಬಹಳ ಮುಖ್ಯ ಎಂಬ ತತ್ವವನ್ನು ಸಾಕ್ಷಿ ಕೂಡ ಹೇಳುತ್ತಾರೆ. ಸ್ಥಿರತೆ ಇಲ್ಲದೇ ನೀವು ಎಷ್ಟೇ ಪ್ರಯತ್ನ ಪಟ್ಟರೂ ಪ್ರಯೋಜನವಿಲ್ಲ.
ತಿನ್ನುವ ಪ್ರಮಾದ ಮಿತಿ: ಅತಿಯಾಗಿ ತಿನ್ನುವುದು ತೂಕ ಇಳಿಕೆಯ ಪಯಣಕ್ಕೆ ಅಡ್ಡಿಯಾಗಬಹುದು. ನಿಮ್ಮ ತೂಕ ನಷ್ಟ ಗುರಿಗಳನ್ನು ಸಾಧಿಸಲು ತಿನ್ನುವ ಪ್ರಮಾಣವನ್ನು ಕಡಿಮೆ ಮಾಡುವುದು ಅವಶ್ಯ.
ಹೋಲಿಕೆ ಮಾಡದಿರಿ: ನಿಮ್ಮ ತೂಕ ಇಳಿಕೆಯ ಪಯಣವನ್ನು ಬೇರೆಯವರೊಂದಿಗೆ ಹೋಲಿಸ ನೋಡಬೇಡಿ. ಮನುಷ್ಯ ದೇಹ ಪ್ರಕೃತಿಯು ಭಿನ್ನವಾಗಿರುವುದರಿಂದ ತೂಕ ಇಳಿಕೆಗೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತದೆ.
ತಾಳ್ಮೆ ಬಹಳ ಮುಖ್ಯ: ಒಂದೆರಡು ತಿಂಗಳು ನೀವು ಈ ಪ್ಲಾನ್ ಅನುಸರಿಸಿದ ಕೂಡಲೇ ತೂಕ ಇಳಿಯಬೇಕು ಅಂತೇನಿಲ್ಲ. ಕೆಲವು ದಿನಗಳ ಸತತ ಪ್ರಯತ್ನದಿಂದ ಮಾತ್ರ ತೂಕ ಇಳಿಕೆ ಸಾಧ್ಯ. ಇದಕ್ಕಾಗಿ ನೀವು ಸಾಕಷ್ಟು ತಾಳ್ಮೆಯಿಂದ ಇರಬೇಕು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)