Ayushman Bharat: ಏನಿದು ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆ; ಅರ್ಹತೆ, ಪ್ರಯೋಜನ, ಆನ್‌ಲೈನ್ ನೋಂದಣಿ ಹೇಗೆ?
Sep 12, 2024 12:50 PM IST
ಏನಿದು ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆ; ಅರ್ಹತೆ, ಪ್ರಯೋಜನ, ಆನ್‌ಲೈನ್ ನೋಂದಣಿ ಹೇಗೆ
- Ayushman Bharat: ಕೇಂದ್ರ ಸರ್ಕಾರ ಘೋಷಿಸಿದ ಹೊಸ ಆರೋಗ್ಯ ವಿಮೆ ಎಂದರೇನು? ಹಿರಿಯ ನಾಗರಿಕರಿಗೆ ಸಿಗುವ ಪ್ರಯೋಜನಗಳು ಏನು? ಇದನ್ನು ರಿಜಿಸ್ಟರ್ ಮಾಡಿಕೊಳ್ಳುವುದೇಗೆ? ಇಲ್ಲಿದೆ ವಿವರ.
Ayushman Bharat: ಆಯುಷ್ಮಾನ್ ಭಾರತ್ ಯೋಜನೆ... ಇದು ಜನರಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆಯಾಗಿದೆ. ಸರ್ಕಾರದ ಈ ಆರೋಗ್ಯ ಯೋಜನೆಯ ಅಡಿಯಲ್ಲಿ 5 ಲಕ್ಷ ರೂಪಾಯಿವರೆಗೂ ಉಚಿತ ಚಿಕಿತ್ಸೆ ನೀಡಬಹುದು. ಸದ್ಯ ಈ ಯೋಜನೆಗೆ ಮಹತ್ವದ ನಿರ್ಧಾರ ಕೈಗೊಂಡಿದ್ದು, 70 ವರ್ಷ ಮೇಲ್ಪಟ್ಟ ಎಲ್ಲಾ ವೃದ್ಧರು ಸಹ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸಚಿವ ಸಂಪುಣ ತೀರ್ಮಾನಿಸಿದೆ. ಈ ಯೋಜನೆಯಡಿ 5 ಲಕ್ಷದವರೆಗೆ ಆರೋಗ್ಯ ವಿಮೆ ಪಡೆಯಲಿದ್ದಾರೆ.
34 ಕೋಟಿಗೂ ಹೆಚ್ಚು ಫಲಾನುಭವಿಗಳು
ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಫಲಾನುಭವಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. 2024ರ ಜೂನ್ 30ರ ಹೊತ್ತಿಗೆ ಅವುಗಳ ಸಂಖ್ಯೆ 34.7 ಕೋಟಿ ತಲುಪಿದೆ. ದೇಶದ 29,000ಕ್ಕೂ ಹೆಚ್ಚು ಪಟ್ಟಿ ಮಾಡಲಾದ ಆಸ್ಪತ್ರೆಗಳಲ್ಲಿ ನಗದುರಹಿತ ಮತ್ತು ಕಾಗದರಹಿತ ಆರೋಗ್ಯ ಸೇವೆ ಪಡೆಯಬಹುದು. ಈಗ 70 ವರ್ಷ ಮೇಲ್ಪಟ್ಟ ಹಿರಿಯರು ಸೇರಲಿದ್ದು, 4.5 ಕೋಟಿ ಕುಟುಂಬಗಳ 6 ಕೋಟಿ ಹಿರಿಯ ನಾಗರಿಕರಿಗೆ 5 ಲಕ್ಷ ರೂ ಉಚಿತ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲಾಗುತ್ತದೆ. ಹಾಗಾದರೆ ಆಯುಷ್ಮಾನ್ ಕಾರ್ಡ್ ಪಡೆಯುವುದೇಗೆ? ಎಲ್ಲಿ? ಇಲ್ಲಿದೆ ವಿವರ.
ಹಿರಿಯರಿಗೆ ಹೆಚ್ಚುವರಿ ಪ್ರಯೋಜನ
ಈ ಯೋಜನೆ ವ್ಯಾಪ್ತಿಗೆ ಒಳಪಡುವ 70 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ವಾರ್ಷಿಕ 25 ಲಕ್ಷ ರೂಪಾಯಿವರೆಗೆ ಹೆಚ್ಚುವರಿ ಟಾಪ್-ಅಪ್ ಪಡೆಯಲು ಅರ್ಹರಾಗುತ್ತಾರೆ. ಈಗಾಗಲೇ ಇತರ ಸಾರ್ವಜನಿಕ ಆರೋಗ್ಯ ವಿಮಾ ಯೋಜನೆಗಳನ್ನು ಉಪಯೋಗಿಸುತ್ತಿರುವ 70+ ಹಿರಿಯರು ತಮ್ಮ ಪ್ರಸ್ತುತ ಯೋಜನೆ ಇಟ್ಟುಕೊಳ್ಳಬಹುದು ಅಥವಾ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗೆ ಬದಲಾವಣೆ ಮಾಡಿಕೊಳ್ಳಬಹುದು. ಅವರ ಸಾಮಾಜಿಕ-ಆರ್ಥಿಕ ಸ್ಥಿತಿ ಲೆಕ್ಕಿಸದೆಯೇ ಈ ಯೋಜನೆಯ ಪ್ರಯೋಜನ ಪಡೆಯಬಹುದು.
ಕುಟುಂಬದ ಎಷ್ಟು ಸದಸ್ಯರು ಈ ಯೋಜನೆಗೆ ಅರ್ಹರು?
ಒಂದೇ ಕುಟುಂಬದ ಎಷ್ಟು ಜನರು ಆಯುಷ್ಮಾನ್ ಕಾರ್ಡ್ ಅನ್ನು ಪಡೆಯಬಹುದು ಎಂಬುದು ಸಾಕಷ್ಟು ಮಂದಿಗೆ ತಿಳಿದಿಲ್ಲ. ಅಲ್ಲದೆ, ಈ ಸರ್ಕಾರಿ ಯೋಜನೆಯ ಫಲಾನುಭವಿಯಾಗುವವರಿಗೆ ಯಾವುದೇ ಮಿತಿ ನಿಗದಿಪಡಿಸಿಲ್ಲ. ಕುಟುಂಬ ಎಲ್ಲಾ ಸದಸ್ಯರು ಈ ಯೋಜನೆಗೆ ಅರ್ಹರು.
ಯಾರು ಈ ಯೋಜನೆಯ ಲಾಭ ಪಡೆಯಬಹುದು?
ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಎಲ್ಲಾ ಜನರು, ಬುಡಕಟ್ಟು, ಪರಿಶಿಷ್ಟ ಜಾತಿ ಅಥವಾ ಪಂಗಡದವರು, ನಿರ್ಗತಿಕರು ಅಥವಾ ಅಂಗವಿಕಲರು ಅಥವಾ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರು ಅಥವಾ ದಿನಗೂಲಿ ಕಾರ್ಮಿಕರು ಈ ಯೋಜನೆ ಲಾಭ ಪಡೆಯಬಹುದು.
ಆನ್ಲೈನಲ್ನಲ್ಲಿ ಅರ್ಜಿ ಸುವುದು ಹೇಗೆ?
ಹಂತ 1: pmjay.gov.in ಅಧಿಕೃತ ವೆಬ್‌ಸೈಟ್ ಓಪನ್ ಮಾಡಿ.
ಹಂತ 2: ಮುಖಪುಟದಲ್ಲಿ 'ಆಮ್ ಐ ಎಲಿಜಿಬಲ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3: ನಂತರ ಕ್ಯಾಪ್ಚಾ ಎಂಟರ್ ಮಾಡಬೇಕು, ಅದರ ಕೆಳಗೆ 10 ಅಂಕಿಯ ಮೊಬೈಲ್ ಸಂಖ್ಯೆ ನಮೂದಿಸಿ ಒಟಿಪಿ ಪಡೆಯಬೇಕು.
ಹಂತ 4: ಒಟಿಪಿ ಎಂಟರ್ ಮಾಡಿದ ನಂತರ ಮತ್ತೊಂದು ಕ್ಯಾಪ್ಚಾ ನಮೂದಿಸಬೇಕು.
ಹಂತ 5: ಈಗ ಪರದೆಯ ಮೇಲೆ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ, ನಂತರ ಮೊಬೈಲ್ ಸಂಖ್ಯೆ ಮತ್ತು ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ.
ಹಂತ 6: ಇದರ ನಂತರ ನೀವು ಅರ್ಹರಾಗಿದ್ದೀರಾ ಅಥವಾ ಇಲ್ಲದಿರಲಿ ನಿಮ್ಮ ಪರದೆಯ ಮೇಲೆ ಸಂಪೂರ್ಣ ವಿವರ ಗೋಚರಿಸುತ್ತವೆ.
ಆಯುಷ್ಮಾನ್ ಭಾರತ್ ನೋಂದಣಿಗೆ ಅಗತ್ಯವಿರುವ ದಾಖಲೆಗಳ ಪಟ್ಟಿ
- ವಯಸ್ಸು ಮತ್ತು ಗುರುತಿನ ಪುರಾವೆ (ಆಧಾರ್ ಕಾರ್ಡ್/ಪ್ಯಾನ್ ಕಾರ್ಡ್)
- ಸಂಪರ್ಕ ವಿವರ: (ಮೊಬೈಲ್, ವಿಳಾಸ, ಇಮೇಲ್)
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣಪತ್ರ (ಗರಿಷ್ಠ ವಾರ್ಷಿಕ ಆದಾಯ ವರ್ಷಕ್ಕೆ ರೂ. 5 ಲಕ್ಷದವರೆಗೆ ಮಾತ್ರ)
- ಒಳಗೊಂಡಿರುವ ಕುಟುಂಬದ ಪ್ರಸ್ತುತ ಸ್ಥಿತಿಯನ್ನು ಡಾಕ್ಯುಮೆಂಟ್ ಪುರಾವೆ
ಆಯುಷ್ಮಾನ್ ಭಾರತ್ ಕಾರ್ಡ್ ಡೌನ್‌ಲೋಡ್ ಮಾಡುವುದೇಗೆ?
- ಮೊದಲಿಗೆ, ಆಯುಷ್ಮಾನ್ ಭಾರತ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- ಈಗ ನಿಮ್ಮ ಇಮೇಲ್ ಐಡಿಯೊಂದಿಗೆ ಲಾಗಿನ್ ಮಾಡಿ ಮತ್ತು ಪಾಸ್‌ವರ್ಡ್ ರಚಿಸಿ.
- ಮುಂದುವರಿಯಲು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ
- ಅನುಮೋದಿತ ಫಲಾನುಭವಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. (Click on the approved beneficiary option)
- ಅದನ್ನು ಈಗ ಅವರ ಸಹಾಯ ಕೇಂದ್ರಕ್ಕೆ ಮರುನಿರ್ದೇಶಿಸಲಾಗುತ್ತದೆ
- ಈಗ ಸಿಎಸ್ಸಿ (CSC - Common Service Centre)ನಲ್ಲಿ ನಿಮ್ಮ ಪಾಸ್‌ವರ್ಡ್ ಮತ್ತು ಪಿನ್ ಸಂಖ್ಯೆ ನಮೂದಿಸಿ
- ಅದನ್ನು ಮುಖಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ
- ನಿಮ್ಮ ಗೋಲ್ಡನ್ ಆಯುಷ್ಮಾನ್ ಕಾರ್ಡ್ ಸ್ವೀಕರಿಸಲು ಡೌನ್‌ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಈ ಯೋಜನೆಗೆ ಯಾರು ಅರ್ಹರಲ್ಲ?
- ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಅಥವಾ ಕಾರಿನಂತಹ ವಾಹನವನ್ನು ಹೊಂದಿರುವ ಜನರು
- ಸರ್ಕಾರಿ ನೌಕರರು
- ಮಾಸಿಕ ಆದಾಯ 10,000 ರೂ.ಗಿಂತ ಹೆಚ್ಚಿರುವ ಜನರು
- ಕೃಷಿ ಯಂತ್ರೋಪಕರಣ ಮತ್ತು ಉಪಕರಣಗಳನ್ನು ಹೊಂದಿರುವವರು
- ಸರಿಯಾದ ಮನೆ ಕಟ್ಟಿಕೊಂಡು ವಾಸ ಇರುವವರು
- ಕಿಸಾನ್ ಕಾರ್ಡ್ ಹೊಂದಿರುವವರು
- ಯಾಂತ್ರೀಕೃತ ಮೀನುಗಾರಿಕೆ ದೋಣಿಯನ್ನು ಹೊಂದಿರುವವರು
- 5 ಎಕರೆಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿರುವವರು
- ಸರ್ಕಾರ ನಡೆಸುವ ಕೃಷಿಯೇತರ ಉದ್ಯಮಗಳಲ್ಲಿ ಉದ್ಯೋಗದಲ್ಲಿರುವ ಜನರು
- ತಮ್ಮ ಮನೆಯಲ್ಲಿ ರೆಫ್ರಿಜರೇಟರ್ ಮತ್ತು ಸ್ಥಿರ ದೂರವಾಣಿಗಳನ್ನು ಹೊಂದಿರುವ ಜನರು
ಇದನ್ನೂ ಓದಿ: Ayushman Bharat; 70 ವರ್ಷ ಮೇಲ್ಪಟ್ಟವರೂ ಇನ್ನೂ ಆಯುಷ್ಮಾನ್ ಭಾರತ್ ಫಲಾನುಭವಿಗಳು, ಕೇಂದ್ರ ಕ್ಯಾಬಿನೆಟ್ ಮಹತ್ವದ ನಿರ್ಧಾರ