Ayushman Bharat; 70 ವರ್ಷ ಮೇಲ್ಪಟ್ಟವರೂ ಇನ್ನು ಆಯುಷ್ಮಾನ್ ಭಾರತ್‌ ಫಲಾನುಭವಿಗಳು, ಕೇಂದ್ರ ಕ್ಯಾಬಿನೆಟ್ ಮಹತ್ವದ ನಿರ್ಧಾರ-health news ayushman bharat pm jan arogya yojana expands to cover all seniors 70 and above union cabinet decisions uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ayushman Bharat; 70 ವರ್ಷ ಮೇಲ್ಪಟ್ಟವರೂ ಇನ್ನು ಆಯುಷ್ಮಾನ್ ಭಾರತ್‌ ಫಲಾನುಭವಿಗಳು, ಕೇಂದ್ರ ಕ್ಯಾಬಿನೆಟ್ ಮಹತ್ವದ ನಿರ್ಧಾರ

Ayushman Bharat; 70 ವರ್ಷ ಮೇಲ್ಪಟ್ಟವರೂ ಇನ್ನು ಆಯುಷ್ಮಾನ್ ಭಾರತ್‌ ಫಲಾನುಭವಿಗಳು, ಕೇಂದ್ರ ಕ್ಯಾಬಿನೆಟ್ ಮಹತ್ವದ ನಿರ್ಧಾರ

ಆಯುಷ್ಮಾನ್ ಭಾರತ್ ಯೋಜನೆ ವ್ಯಾಪ್ತಿಗೆ 70 ವರ್ಷ ಮೇಲ್ಪಟ್ವವರನ್ನೂ ಸೇರಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಇದರೊಂದಿಗೆ, 70 ವರ್ಷ ಮೇಲ್ಪಟ್ಟವರೂ ಇನ್ನು ಆಯುಷ್ಮಾನ್ ಭಾರತ್‌ ಫಲಾನುಭವಿಗಳು.

Ayushman Bharat; 70 ವರ್ಷ ಮೇಲ್ಪಟ್ಟವರೂ ಇನ್ನೂ ಆಯುಷ್ಮಾನ್ ಭಾರತ್‌ ಫಲಾನುಭವಿಗಳು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯ ಕೇಂದ್ರ ಕ್ಯಾಬಿನೆಟ್ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.
Ayushman Bharat; 70 ವರ್ಷ ಮೇಲ್ಪಟ್ಟವರೂ ಇನ್ನೂ ಆಯುಷ್ಮಾನ್ ಭಾರತ್‌ ಫಲಾನುಭವಿಗಳು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯ ಕೇಂದ್ರ ಕ್ಯಾಬಿನೆಟ್ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. (PTI)

ನವದೆಹಲಿ: ಆಯುಷ್ಮಾನ್ ಭಾರತ್ ಯೋಜನೆ ವ್ಯಾಪ್ತಿಗೆ 70 ವರ್ಷ ಮೇಲ್ಪಟ್ವವರನ್ನೂ ಸೇರಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಇದರೊಂದಿಗೆ, 70 ವರ್ಷ ಮೇಲ್ಪಟ್ಟವರೂ ಇನ್ನು ಆಯುಷ್ಮಾನ್ ಭಾರತ್‌ ಫಲಾನುಭವಿಗಳಾಗಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ಆರೋಗ್ಯ ರಕ್ಷಣೆಯ ಪ್ರಸ್ತಾವನೆಯನ್ನು ಅನುಮೋದಿಸಿದೆ. ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (AB PM-JAY)ಯಲ್ಲಿ ಇದು ಒಳಗೊಂಡಿದ್ದು, ಸರಿಸುಮಾರು 4.5 ಕೋಟಿ ಕುಟುಂಬಗಳ ಆರು (6) ಕೋಟಿ ಹಿರಿಯ ನಾಗರಿಕರು ಫಲಾನುಭವಿಗಳಾಗಲಿದ್ದಾರೆ. ಇವರಿಗೆ ಕುಟುಂಬದ ಆಧಾರದ ಮೇಲೆ 5 ಲಕ್ಷ ರೂಪಾಯಿ ತನಕದ ಉಚಿತ ಆರೋಗ್ಯ ವಿಮಾ ರಕ್ಷಣೆ ಸಿಗಲಿದೆ.

ಈ ಅನುಮೋದನೆಯೊಂದಿಗೆ, 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲ ಹಿರಿಯ ನಾಗರಿಕರು, ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯ ಹೊರತಾಗಿ, ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. 70 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಇದು ಅನ್ವಯವಾಗುವುದಿಲ್ಲ.

ಅರ್ಹ ಹಿರಿಯ ನಾಗರಿಕರಿಗೆ ಆಯುಷ್ಮಾನ್‌ ಭಾರತ್‌ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯಲ್ಲಿ ಹೊಸ ಅನನ್ಯ ಕಾರ್ಡ್ ನೀಡಲಾಗುತ್ತದೆ. ಈಗಾಗಲೇ ಈ ಯೋಜನೆಯ ವ್ಯಾಪ್ತಿಗೆ ಒಳಪಡುವ ಕುಟುಂಬಗಳಲ್ಲಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಇದ್ದರೆ ಅವರು ವರ್ಷಕ್ಕೆ 5 ಲಕ್ಷ ರೂಪಾಯಿವರೆಗೆ ಹೆಚ್ಚುವರಿ ಟಾಪ್-ಅಪ್ ಕವರ್ ಅನ್ನು ಪಡೆಯುತ್ತಾರೆ (ಅದನ್ನು ಅವರು ಇತರ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಬೇಕಾಗಿಲ್ಲ).

ಯಾರು ಅರ್ಹರು, ಅನ್ಯ ಯೋಜನೆಗಳಲ್ಲಿರುವವರಿಗೆ ಆಯ್ಕೆ ಏನು

ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CGHS), ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ (ECHS), ಆಯುಷ್ಮಾನ್ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPF) ನಂತಹ ಇತರ ಸಾರ್ವಜನಿಕ ಆರೋಗ್ಯ ವಿಮಾ ಯೋಜನೆಗಳ ಪ್ರಯೋಜನಗಳನ್ನು ಈಗಾಗಲೇ ಪಡೆಯುತ್ತಿರುವ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ತಮ್ಮ ಆಯ್ಕೆ ಮಾಡಬಹುದು.

ಅಂದರೆ, ಅಸ್ತಿತ್ವದಲ್ಲಿರುವ ಯೋಜನೆ ಅಥವಾ ಆಯುಷ್ಮಾನ್‌ ಭಾರತ್‌ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ ಆಯ್ಕೆ ಮಾಡಬೇಕು. ಎರಡೂ ಯೋಜನೆಗಳನ್ನು ಒಟ್ಟಿಗೆ ಹೊಂದುವಂತೆ ಇಲ್ಲ. ಖಾಸಗಿ ಆರೋಗ್ಯ ವಿಮಾ ಪಾಲಿಸಿಗಳು ಅಥವಾ ಉದ್ಯೋಗಿಗಳ ರಾಜ್ಯ ವಿಮಾ ಯೋಜನೆ ಅಡಿಯಲ್ಲಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಏನಿದು ಆಯುಷ್ಮಾನ್‌ ಭಾರತ್‌ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ

ಆಯುಷ್ಮಾನ್‌ ಭಾರತ್‌ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯು ವಿಶ್ವದ ಅತಿದೊಡ್ಡ ಸಾರ್ವಜನಿಕ ನಿಧಿಯ ಆರೋಗ್ಯ ಭರವಸೆ ಯೋಜನೆಯಾಗಿದೆ. ಇದು 12.34 ಕೋಟಿ ಕುಟುಂಬಗಳ 55 ಕೋಟಿ ವ್ಯಕ್ತಿಗಳಿಗೆ ದ್ವಿತೀಯ ಮತ್ತು ತೃತೀಯ ಆರೈಕೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂಪಾಯಿ ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಇದು ಅರ್ಹ ಕುಟುಂಬಗಳ ಎಲ್ಲಾ ಸದಸ್ಯರು, ಅವರ ವಯಸ್ಸನ್ನು ಲೆಕ್ಕಿಸದೆ, ಯೋಜನೆಯ ಫಲಾನುಭವಿಗಳನ್ನಾಗಿ ಸೇರ್ಪಡೆ ಮಾಡಿಕೊಂಡಿದೆ. ಈ ಸರ್ಕಾರಿ ಯೋಜನೆಯಡಿ ಶೇ.49 ಮಹಿಳಾ ಫಲಾನುಭವಿಗಳು ಸೇರಿ 7.37 ಕೋಟಿ ಫಲಾನುಭವಿಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಯೋಜನೆಯಡಿ ಸಾರ್ವಜನಿಕರಿಗೆ 1 ಲಕ್ಷ ಕೋಟಿಗೂ ಹೆಚ್ಚು ಪ್ರಯೋಜನವಾಗಿದೆ ಎಂದು ಸರ್ಕಾರ ವಿವರಿಸಿದೆ.

70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಆರೋಗ್ಯ ವಿಮಾ ರಕ್ಷಣೆಯ ವಿಸ್ತರಣೆಯನ್ನು ಮಾಡುವುದಾಗಿ 2024ರ ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.