logo
ಕನ್ನಡ ಸುದ್ದಿ  /  ಜೀವನಶೈಲಿ  /  ಹುಡುಗಿಯರೇಕೆ ಹೀಗೆ? ಇಷ್ಟದ ಬಟ್ಟೆ ತೊಟ್ಟು ಸಾರ್ವಜನಿಕವಾಗಿ ಇರಿಸುಮುರಿಸು ಮಾಡಿಕೊಳ್ಳುವುದೇಕೆ? - ಅನಂತ ಕುಣಿಗಲ್ ಬರಹಕ್ಕೆ ನೂರಾರು ಕಾಮೆಂಟ್‌

ಹುಡುಗಿಯರೇಕೆ ಹೀಗೆ? ಇಷ್ಟದ ಬಟ್ಟೆ ತೊಟ್ಟು ಸಾರ್ವಜನಿಕವಾಗಿ ಇರಿಸುಮುರಿಸು ಮಾಡಿಕೊಳ್ಳುವುದೇಕೆ? - ಅನಂತ ಕುಣಿಗಲ್ ಬರಹಕ್ಕೆ ನೂರಾರು ಕಾಮೆಂಟ್‌

Suma Gaonkar HT Kannada

Sep 11, 2024 04:07 PM IST

google News

ಸಾಂದರ್ಭಿಕ ಚಿತ್ರ

    • ಈ ಹುಡುಗಿಯರು ಇಷ್ಟಪಟ್ಟು ಶಾಪಿಂಗ್ ಮಾಡಿ ಬಟ್ಟೆ ತೊಡುತ್ತಾರಲ್ಲವೇ? ಮತ್ತೇಕೆ ಈ ಚೂರುಪಾರು ಕಿಂಡಿಗಳನ್ನು ಕಾಣಿಸುವ ಬಟ್ಟೆ ತೊಟ್ಟು, ಸಾರ್ವಜನಿಕವಾಗಿ ಕಿರಿಕಿರಿ ಮಾಡಿಕೊಳ್ಳುತ್ತಾ ಪರದಾಡುತ್ತಾರೆ? (ಬರಹ - ಅನಂತ್ ಕುಣಿಗಲ್)
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗಣೇಶ ಚತುರ್ಥಿಯ ಪ್ರಯುಕ್ತ ಊರಿಗೆ ಹೊರಟಿದ್ದೆ. ರಾಮನಗರಕ್ಕೆ ಹೋಗುವ ದಾರಿಯಲ್ಲಿ ಕಾಫಿಗೆಂದು ಗಾಡಿ ನಿಲ್ಲಿಸಿದೆ. ಹೋಟೆಲ್ ನ ಆಚೆ ಇರುವ ಟೇಬಲ್ ಮೇಲೆ ಕೂತು ಕಾಫಿ ಕುಡಿಯುತ್ತಾ ಮೊಬೈಲ್ ತೆಗೆದು ಫೇಸ್ಬುಕ್ ಸುತ್ತ ಸುತ್ತುತ್ತಿದ್ದೆ. ಅದೇ ಸಮಯಕ್ಕೆ ಒಂದು ಜೋಡಿ ಬಂತು. ಅವರು ಜೋಡಿ ಎಂದು ಊಹಿಸಲು ಹಲವು ಕಾರಣಗಳಿವೆ. ಇಬ್ಬರೂ ಬ್ಲಾಕ್ ಟೀ ಶರ್ಟ್, ಬ್ಲೂ ಜೀನ್ಸ್ ಪ್ಯಾಂಟ್ ತೊಟ್ಟಿದ್ದರು. ಹುಡುಗಿ ಬೈಕಿನಿಂದಿಳಿದಾಕ್ಷಣ ಹುಡುಗನೇ ಹುಡುಗಿಯ ತಲೆಯಿಂದ ಹೆಲ್ಮೆಟ್ ತೆಗೆದ, ಹೋಟೆಲ್ ಒಳಗೆ ಓಡಿಹೋಗಿ ಮೆನು ಕಾರ್ಡ್ ತಂದು ಹುಡುಗಿಯ ಕೈಗಿತ್ತು, ವಿಧೇಯನಾಗಿ ನಿಂತಿದ್ದ.

ಅವಳಿಗೆ ಮೆನುಕಾರ್ಡ್ ನೋಡುವುದಕ್ಕಿಂತಲೂ ನನ್ನ ಕಣ್ಣಿಂದ ತಪ್ಪಿಸಿಕೊಳ್ಳುವುದು ಮುಖ್ಯವಾಗಿತ್ತು ಎನಿಸುತ್ತದೆ. ಗಂಡಸರನ್ನು ಕಂಡರೆ ಮುಜುಗರವಿರಬೇಕು. ನನ್ನ ಮುಂದಿನ ಟೇಬಲ್ ನಲ್ಲಿ ನನಗೆ ಬೆನ್ನು ಮಾಡಿ ಕೂತಳು. ಹುಡುಗನ ಮುಖದಲ್ಲೂ ಮಂದಹಾಸವಿತ್ತು. ತನ್ನ ಹುಡುಗಿ ಪೊಸೆಸಿವ್ ಇದಾಳೆ ಎಂದು. ಅವಳೇನು ಅಪರೂಪದ ಸುಂದರಿಯೇನಲ್ಲ! ಹುಡುಗರಿಗೆ ಎರಡು ಸೆಕೆಂಡ್ ಸಾಕು, ಆ ಗ್ಯಾಪಲ್ಲೇ ಸುಂದರಿ, ತ್ರಿಪುರ ಸುಂದರಿ, ಸಾಧಾರಣ ಎಂದೆಲ್ಲ ಮನಸ್ಸಿನಲ್ಲೇ ಅಳತೆ ಮಾಡಿಬಿಡುತ್ತಾರೆ. ಇದು ಆಕೆಗೂ ಗೊತ್ತಾಗಿರಬೇಕು!

ಹುಡುಗಿಯರೇಕೆ ಹೀಗೆ?

ಹುಡುಗ ಹೋಗಿ ಐಸ್ ಕ್ರೀಂ ಆರ್ಡರ್ ಮಾಡಿ ಬಂದ. ಆತನೂ ನನಗೆ ಬೆನ್ನು ಹಾಕಿ ಕೂತ. ಹುಡುಗಿಯ ಪರದಾಟ ಇಲ್ಲಿಂದ ಶುರು. ಅವಳು ತೊಟ್ಟಿರುವ ತುಂಡು ಟೀ ಶರ್ಟ್ ಅವಳ ಬೆನ್ನನ್ನು ಇಣುಕಿಣುಕಿ ತೋರುತ್ತಿತ್ತು. ಅದನ್ನು ನನಗೆ ತೋರಿಸಬಾರದು ಅಂತ ಅವಳು ಪಣ ತೊಟ್ಟಿರಬೇಕು. ಪದೇ ಪದೇ ಹಿಂದೆಯಿಂದ ಟೀ ಶರ್ಟ್ ಸರಿ ಮಾಡಿಕೊಳ್ಳುತ್ತಿದ್ದಳು. ಹುಡಗನೇ ಐಸ್ ಕ್ರೀಂ ತಂದು ತಿನ್ನಿಸಲು ಶುರುಮಾಡಿದ. ಹುಡುಗಿಯ ಟೀ ಶರ್ಟ್ ಸರಿ ಮಾಡಿಕೊಳ್ಳುವ ಪರದಾಟ ನಿಂತಿರಲಿಲ್ಲ.

ಇಂಥಹ ಸಂದರ್ಭಗಳಿಗೆ ಅನೇಕ ಬಾರಿ ಸಾಕ್ಷಿಯಾಗಿದ್ದೇನೆ. ಈ ಹುಡುಗಿಯರು ಇಷ್ಟಪಟ್ಟು ಶಾಪಿಂಗ್ ಮಾಡಿ ಬಟ್ಟೆ ತೊಡುತ್ತಾರಲ್ಲವೇ? ಮತ್ತೇಕೆ ಈ ಚೂರುಪಾರು ಕಿಂಡಿಗಳನ್ನು ಕಾಣಿಸುವ ಬಟ್ಟೆ ತೊಟ್ಟು, ಸಾರ್ವಜನಿಕವಾಗಿ ಕಿರಿಕಿರಿ ಮಾಡಿಕೊಳ್ಳುತ್ತಾ ಹೀಗೆ ಪರದಾಡುವುದು? ನನಗಂತೂ ಇದು ಅರ್ಥವಾಗದ ಸಂಗತಿ ನೋಡಿ. ಐಸ್ ಕ್ರೀಂ ಹುಡುಗನ ಪ್ರೀತಿಯಹಾಗೆ ಕರಗಿಹೋಯಿತೇನೋ.. ಟಿಶ್ಯೂ ತರಲು ಆತ ಎದ್ದು ಹೋದ. ನಾನು ಖಾಲಿ ಗ್ಲಾಸ್ ಮುಂದಿಟ್ಟುಕೊಂಡು ಎಷ್ಟೊತ್ತು ಕೂರಲಿ? ಅವರು ಹೋಗುವವರೆಗೂ ಇಷ್ಟನ್ನು ಬರೆದೆ ನೋಡಿ. ನೀವು ಓದುತ್ತಿದ್ದೀರೆಂದರೆ ಆ ಪರದಾಟವನ್ನು ಈಗ ನೀವೂ ನೋಡಿದಹಾಗಾಯ್ತು. ನನ್ನದೇನಾದರೂ ತಪ್ಪಿದ್ದರೆ, ಅದು ನಿಮ್ಮದೂ ಹೌದು!

ಈ ಪ್ರಸಂಗ ಬರೆದ ನನ್ನನ್ನು ಇನ್ಮುಂದೆ ಈ ಸಮಾಜ ಯಾವ ದೃಷ್ಟಿಯಿಂದ ನೋಡುತ್ತೋ!

ಯಾರು ಯಾವ ಬಟ್ಟೆ ತೊಟ್ಟಿದ್ದಾರೆ ಎಂಬುದರ ಬಗ್ಗೆ ನನ್ನ ಮಾತುಗಳಿಲ್ಲ, ಅದು ಅವರವರ ಆಯ್ಕೆ ಅಥವಾ ನೋಡುಗರ ಕರ್ಮವಿರಬಹುದು! ಆದರೆ ಅವರಿಷ್ಟಪಟ್ಟ ಬಟ್ಟೆಯನ್ನೇ ತೊಟ್ಟು, ಸಾರ್ವಜನಿಕವಾಗಿ ಇರಿಸುಮುರಿಸು ಮಾಡಿಕೊಂಡು ನಮ್ಮಂಥವರನ್ನು ಕೇಡಿಗಳ ಥರ ಸಂದೇಹ ಬರುವಂತೆ ಅಜೀಬು ಮಾಡುವ ಹುಡುಗಿಯರ ಬಗ್ಗೆ ಹೇಳಿಕೊಳ್ಳಲಾಗದ ಬೇಜಾನ್ ಕಂಪ್ಲೇಂಟುಗಳು ಮತ್ತು ತೋರಿಸಿಕೊಳ್ಳಲಾಗದ ಅಗಾಧ ಪ್ರಮಾಣದ ಕೋಪಗಳು ಇವೆ.

(ಅನಂತ್ ಕುಣಿಗಲ್ ಅವರ ಅವರ ಫೇಸ್‌ಬುಕ್‌ ಪೋಸ್ಟ್‌ ಅನ್ನು ಇಲ್ಲಿ ಯಥಾವತ್ತು ಮರುಪ್ರಕಟಿಸಲಾಗಿದೆ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ