logo
ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರಸವಾನಂತರ ಬಾಣಂತಿಯರನ್ನು ಕಾಡಬಹುದು ಅರಿಯದ ಆತಂಕ, ಖಿನ್ನತೆ: ಇದರ ಲಕ್ಷಣಗಳೇನು, ಇದರಿಂದ ಹೊರ ಬರುವುದು ಹೇಗೆ ನೋಡಿ

ಪ್ರಸವಾನಂತರ ಬಾಣಂತಿಯರನ್ನು ಕಾಡಬಹುದು ಅರಿಯದ ಆತಂಕ, ಖಿನ್ನತೆ: ಇದರ ಲಕ್ಷಣಗಳೇನು, ಇದರಿಂದ ಹೊರ ಬರುವುದು ಹೇಗೆ ನೋಡಿ

Priyanka Gowda HT Kannada

Oct 09, 2024 11:41 AM IST

google News

ಪ್ರಸವಾನಂತರದ ಖಿನ್ನತೆಯ ಲಕ್ಷಣಗಳು ಏನೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

    • ಪ್ರಸವಾನಂತರದ ಖಿನ್ನತೆಯು ಹೆರಿಗೆಯ ನಂತರ ಮಹಿಳೆಯರಲ್ಲಿ ಉಂಟಾಗಬಹುದಾದ ಮಾನಸಿಕ ಸ್ಥಿತಿ. ಹೆರಿಗೆ ನಂತರ ದುಃಖ, ಆತಂಕ, ಆಯಾಸದ ಲಕ್ಷಣಗಳು ಸಾಮಾನ್ಯವಾಗಿದ್ದರೂ ಇದು ನಿಧಾನವಾಗಿ ಹೆಚ್ಚಾಗಿ ಖಿನ್ನತೆಗೆ ಜಾರಬಹುದು. ಈ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ. 
ಪ್ರಸವಾನಂತರದ ಖಿನ್ನತೆಯ ಲಕ್ಷಣಗಳು ಏನೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಪ್ರಸವಾನಂತರದ ಖಿನ್ನತೆಯ ಲಕ್ಷಣಗಳು ಏನೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. (freepik)

ಗರ್ಭಿಣಿಯರಿಗೆ ಮೂಡ್ ಸ್ವಿಂಗ್ ಅಥವಾ ಮನಸ್ಸು ಚಂಚಲಗೊಳ್ಳುವಿಕೆ ಸಾಮಾನ್ಯವಾಗಿರುತ್ತದೆ. ಗರ್ಭಧಾರಣೆ ಸಮಯದಲ್ಲಿ ಕೆಲವರಿಗೆ ಸಣ್ಣ-ಪುಟ್ಟ ವಿಚಾರಕ್ಕೂ ಕೋಪ ಅಥವಾ ಸಿಟ್ಟು ಬಂದರೆ, ಇನ್ನೂ ಕೆಲವರಿಗೆ ಅಳು ಬರುತ್ತದೆ. ಸಣ್ಣ ವಿಚಾರಕ್ಕೂ ಅಳುತ್ತಾರೆ. ಹೀಗಾಗಿ ಪತಿಯಾದವನು ತನ್ನ ಪತ್ನಿಯನ್ನು ಅರ್ಥ ಮಾಡಿಕೊಂಡು, ಆಕೆಗೆ ಬೆನ್ನೆಲುಬಾಗಿರಬೇಕು. ಇದು ಅಂತಹ ದೊಡ್ಡ ಸಮಸ್ಯೆ ಅಲ್ಲದಿದ್ದರೂ, ಪ್ರಸವಾನಂತರದಲ್ಲಿ ಈ ರೀತಿ ಸಮಸ್ಯೆ ಕಂಡುಬಂದರೆ ಸೂಕ್ತ ಚಿಕಿತ್ಸೆ ಕೊಡಿಸುವುದು ಬಹಳ ಮುಖ್ಯ.

ಪ್ರಸವಾನಂತರದ ಖಿನ್ನತೆಯು ಹೆರಿಗೆಯ ನಂತರ ಮಹಿಳೆಯರಲ್ಲಿ ಉಂಟಾಗಬಹುದಾದ ಮಾನಸಿಕ ಸ್ಥಿತಿ. ಹೆರಿಗೆ ನಂತರ ದುಃಖ, ಆತಂಕ, ಆಯಾಸದ ಲಕ್ಷಣಗಳು ಸಾಮಾನ್ಯವಾಗಿದ್ದರೂ ಇದು ನಿಧಾನವಾಗಿ ಹೆಚ್ಚಾಗಿ ಖಿನ್ನತೆಗೆ ಜಾರಬಹುದು. ಪ್ರಸವಾನಂತರದ ಖಿನ್ನತೆಯು ಹೆಚ್ಚು ಗಂಭೀರವಾಗಿದ್ದು, ಬಹಳ ಕಾಲ ಇರುತ್ತದೆ. ಇದು ಮಹಿಳೆಯ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಮಾತ್ರವಲ್ಲದೆ ತನ್ನ ನವಜಾತ ಶಿಶುವನ್ನು ಮತ್ತು ತಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಪತಿಯು ತನ್ನ ಪತ್ನಿಯ ಬಗ್ಗೆ ವಿಶೇಷ ಆರೈಕೆ ತೆಗೆದುಕೊಳ್ಳಬೇಕಾದುದು ಬಹಳ ಮುಖ್ಯ. ಆರಂಭದಲ್ಲೇ ರೋಗಲಕ್ಷಣಗಳನ್ನು ಗುರುತಿಸುವುದು, ಪತ್ನಿಗೆ ಸರಿಯಾದ ರೀತಿಯಲ್ಲಿ ಬೆಂಬಲ ನೀಡುವುದು ಹಾಗೂ ಸೂಕ್ತ ಚಿಕಿತ್ಸೆ ಕೈಗೊಳ್ಳುವುದು ಅತ್ಯಗತ್ಯ. ಹಾಗಿದ್ದರೆ ಪ್ರಸವಾನಂತರದ ಖಿನ್ನತೆಯ ಲಕ್ಷಣಗಳು ಏನೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಪ್ರಸವಾನಂತರದ ಖಿನ್ನತೆಯ ಲಕ್ಷಣಗಳು

ಪ್ರಸಾವನಂತರದ ಖಿನ್ನತೆಯು ಸಾಮಾನ್ಯವಾಗಿ ಮಗುವಿನ ಜನನದ ನಂತರದ ಮೊದಲ ವಾರಗಳಲ್ಲಿ ಕಂಡು ಬರುತ್ತದೆ. ಆದರೆ, ಮೊದಲ ವರ್ಷದಲ್ಲಿ ಯಾವುದೇ ಸಮಯದಲ್ಲಿ ಈ ಸಮಸ್ಯೆ ಉದ್ಭವಿಸಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ದುಃಖ: ಖಿನ್ನತೆ ಹೊಂದಿರುವ ಬಾಣಂತಿಯರು ಯಾವಾಗಲೂ ಹತಾಶೆ/ಶೂನ್ಯತೆಯನ್ನು ಅನುಭವಿಸುತ್ತಾರೆ. ಏನಾದರೂ ಖುಷಿಯ ವಿಚಾರ ಇದ್ದಾಗಲೂ ಸಹ ಏನೋ ಯೋಚನೆಯಲ್ಲಿ ಮುಳುಗಿರುತ್ತಾರೆ. ಮಗುವಿನೊಂದಿಗೆ ಸಮಯ ಕಳೆಯಲು, ದೈನಂದಿನ ಚಟುವಟಿಕೆಗಳನ್ನು ಮಾಡಲು ಕಷ್ಟಕರವಾಗುತ್ತದೆ. ಯಾವಾಗಲೂ ಏನೋ ಯೋಚನೆ ಮಾಡುತ್ತಾ ಇರುತ್ತಾರೆ.

ಭಾವನಾತ್ಮಕ ಅಸ್ಥಿರತೆ: ಸಣ್ಣ-ಪುಟ್ಟ ವಿಚಾರಗಳಿಗೂ ಅಳುತ್ತಾರೆ. ಅಳುವು ಹೆಚ್ಚಿನ ಸಮಯ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಉದ್ಭವಿಸುತ್ತದೆ. ಯಾಕೆ ಅಳುತ್ತಿದ್ದಾರೆ ಎಂಬುದು ಅವರಿಗೇ ತಿಳಿದಿರುವುದಿಲ್ಲ. ಮನೆಯಲ್ಲಿರುವ ಕುಟುಂಬ ಸದಸ್ಯರು ಏನು ಹೇಳಿದ್ರೂ ಅದನ್ನೂ ಗಂಭೀರವಾಗಿ ತೆಗೆದುಕೊಂಡು, ತುಂಬಾ ಬೇಸರದಿಂದ ಇರುತ್ತಾರೆ.

ವಿಪರೀತ ಆಯಾಸ: ಬಾಣಂತಿಯು ಸಾಮಾನ್ಯವಾಗಿ ನಿದ್ದೆಯ ಅಭಾವವನ್ನು ಹೊಂದಿರುತ್ತಾರೆ. ಮಗು ಹೆಚ್ಚಾಗಿ ರಾತ್ರಿಯೆಲ್ಲಾ ಎಚ್ಚರವಿರುತ್ತದೆ. ಇದರಿಂದ ತಾಯಿಗೂ ನಿದ್ದೆ ಕಡಿಮೆಯಾಗಿ ಹೆಚ್ಚು ಆಯಾಸ, ದಣಿವು ಉಂಟಾಗುತ್ತದೆ. ನಿದ್ದೆಯಿಲ್ಲದ ಹಲವು ರಾತ್ರಿಗಳನ್ನು ಕಳೆದಾಗ ವಿಪರೀತ ಆಯಾಸವಾಗುವುದು ಸಾಮಾನ್ಯ. ಹೀಗಾಗಿ ಬಹಳಷ್ಟು ಮಹಿಳೆಯರು ಖಿನ್ನತೆಗೆ ಜಾರುತ್ತಾರೆ.

ಹಸಿವು ಕಡಿಮೆಯಾಗುವಿಕೆ: ಸರಿಯಾಗಿ ನಿದ್ದೆ ಆಗದಿರುವುದರಿಂದ ಇದು ಹಸಿವನ್ನು ಅಡ್ಡಿಪಡಿಸುತ್ತದೆ. ಹೀಗಾಗಿ ಕೆಲಮೊಮ್ಮೆ ಅತಿಯಾಗಿ ತಿನ್ನುವುದು ಅಥವಾ ತಿನ್ನಲು ಬೇಡ ಎಂದಾಗುದು ನಿದ್ದೆಯ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ಇದು ತೀವ್ರವಾದರೆ ಆತ್ಮಹತ್ಯೆಯ ಆಲೋಚನೆಗಳು ಅಥವಾ ಮಗುವಿಗೆ ಹಾನಿ ಮಾಡಲು ಪ್ರಯತ್ನಿಸಬಹುದು.

ಬೆಂಬಲ ಮುಖ್ಯ: ಬಾಣಂತಿ ಖಿನ್ನತೆಗೆ ಜಾರುವ ಮುನ್ನವೇ ಕುಟುಂಬ ಸದಸ್ಯರು, ಸ್ನೇಹಿತರ ಬೆಂಬಲ ಅತಿ ಮುಖ್ಯವಾಗಿದೆ. ಅದರಲ್ಲೂ ಪತಿಯು ತನ್ನ ಪತ್ನಿಯ ಮೇಲೆ ನಿಗಾವಹಿಸಬೇಕು. ಖಿನ್ನತೆಗೆ ಜಾರಿರುವ ರೋಗಲಕ್ಷಣಗಳನ್ನು ಆರಂಭದಲ್ಲೇ ಪತ್ತೆ ಹಚ್ಚುವುದು ಸೂಕ್ತ. ಇದಕ್ಕಾಗಿ ವೈದ್ಯರ ಮಾರ್ಗದರ್ಶನವನ್ನು ಸಹ ಪಡೆಯಬಹುದು. ಕುಟುಂಬದ ಎಲ್ಲಾ ಸದಸ್ಯರು ಬಾಣಂತಿಗೆ ಬೆಂಬಲ, ಪ್ರೋತ್ಸಾಹ ನೀಡಬೇಕಾಗಿರುವುದು ಬಹಳ ಮುಖ್ಯ.

ಸ್ವ-ನಿರ್ವಹಣೆ: ಪ್ರಸವಾನಂತರ ಖಿನ್ನತೆ ಸಮಸ್ಯೆ ಇರುವುದು ಸಾಮಾನ್ಯ ಎಂಬುದನ್ನರಿತು ಸ್ವತಃ ಬಾಣಂತಿಯು ಸ್ವಯಂ ನಿರ್ವಹಣೆ ಮಾಡಬಹುದು. ಇದಕ್ಕಾಗಿ ಹುರುಪಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು, ಪೌಷ್ಟಿಕ ಆಹಾರ ಸೇವನೆ ಮತ್ತು ವಿಶ್ರಾಂತಿ ತೆಗೆದುಕೊಳ್ಳುವುದು ಇತ್ಯಾದಿಯನ್ನು ಮಾಡುವುದು ಬಹಳ ಮುಖ್ಯ. ಸ್ವ-ನಿರ್ವಹಣೆ ಮಾಡುವುದು ಮಾನಸಿಕ ಯೋಗಕ್ಷೇಮವನ್ನು ಸುಧಾರಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ