ಮನಸ್ಸಿನ ನೆಮ್ಮದಿ ಕೆಡಿಸದಿರಲಿ ಒತ್ತಡ, ಆತಂಕ, ಖಿನ್ನತೆ; ವಿಶ್ವ ಮಾನಸಿಕ ಆರೋಗ್ಯ ದಿನದ ಇತಿಹಾಸ, ಮಹತ್ವ, 2024ರ ಥೀಮ್ ಕುರಿತ ವಿವರ ಇಲ್ಲಿದೆ
Oct 10, 2024 12:31 PM IST
ವಿಶ್ವ ಮಾನಸಿಕ ಆರೋಗ್ಯ ದಿನ 2024
- ಇಂದಿನ ಬ್ಯುಸಿ ಜಮಾನದಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಾಗಿರುವುದು ಸುಳ್ಳಲ್ಲ. ಒತ್ತಡ ಎಂಬುದು ಒಂದು ರೀತಿಯ ಸಾಂಕ್ರಾಮಿಕ ಕಾಯಿಲೆಯಂತೆ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಈ ಸಂದರ್ಭದಲ್ಲಿ ಮಾನಸಿಕ ಆರೋಗ್ಯದ ಮಹತ್ವ ಅರಿಯುವುದು ಬಹಳ ಮುಖ್ಯವಾಗಿದೆ. ಈ ಕಾರಣದಿಂದಲೇ ಪ್ರತಿವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನ ಆಚರಿಸಲಾಗುತ್ತದೆ.
ಒತ್ತಡವು ಮಾನಸಿಕ ಸಮಸ್ಯೆಯಾದರೂ ಇದರಿಂದ ಹತ್ತಾರು ಆರೋಗ್ಯ ಸಮಸ್ಯೆಗಳು ಶುರುವಾಗುವುದು ಸುಳ್ಳಲ್ಲ. ಒತ್ತಡದಿಂದ ಜೀವನಶೈಲಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳು ಎದುರಾಗುತ್ತವೆ. ಒತ್ತಡ ಸೇರಿದಂತೆ ಖಿನ್ನತೆ, ಆತಂಕ ಇಂತಹ ಮಾನಸಿಕ ಸಮಸ್ಯೆಗಳು ಅತಿಯಾದ್ರೆ ದೇಹಾರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದು ಸುಳ್ಳಲ್ಲ. ಆ ಕಾರಣಕ್ಕೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ಮಹತ್ವ ನೀಡಬೇಕು ಎಂದು ಒತ್ತಿ ಒತ್ತಿ ಹೇಳಲಾಗುತ್ತಿದೆ.
ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್ 10 ರಂದು ವಿಶ್ವದಾದ್ಯಂತ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. 1992ರಲ್ಲಿ ವರ್ಲ್ಡ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್ (WFMH) ಒಂದು ಉಪಕ್ರಮವಾಗಿ ಇದನ್ನು ಮೊದಲ ಬಾರಿಗೆ ಆಚರಿಸಿತ್ತು. ಇದು ವಿಶ್ವಾದ್ಯಂತ ಮಾನಸಿಕ ಆರೋಗ್ಯವನ್ನು ಉತ್ತೇಜಿಸಲು ಮೀಸಲಾಗಿರುವ ಜಾಗತಿಕ ಸಂಸ್ಥೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳ ಸುತ್ತಲಿನ ಭಯವನ್ನು ಹೋಗಲಾಡಿಸಲು ಹೆಚ್ಚಿನ ದೇಶಗಳು ಮತ್ತು ಸಂಸ್ಥೆಗಳು ಅಭಿಯಾನಗಳಲ್ಲಿ ಭಾಗವಹಿಸುತ್ತಿವೆ.
ವಿಶ್ವ ಮಾನಸಿಕ ಆರೋಗ್ಯ ದಿನ 2024ರ ಥೀಮ್
ಈ ವರ್ಷದ ವಿಶ್ವ ಮಾನಸಿಕ ಆರೋಗ್ಯ ದಿನದ ಥೀಮ್ ‘ಕೆಲಸ ಅಥವಾ ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ ಎಂಬುದಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಮಾನಸಿಕ ಆರೋಗ್ಯ ಮತ್ತು ಕೆಲಸದ ಸ್ಥಳದ ನಡುವಿನ ಸಂಬಂಧವನ್ನು ಒತ್ತಿಹೇಳುತ್ತದೆ. ಸುರಕ್ಷಿತ, ಬೆಂಬಲಿತ ಕೆಲಸದ ವಾತಾವರಣವು ಮಾನಸಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವಲ್ಲಿ ರಕ್ಷಣಾತ್ಮಕ ಪಾತ್ರವನ್ನು ವಹಿಸುತ್ತವೆ. ಆದರೆ ಕಳಂಕ, ತಾರತಮ್ಯ, ಕಿರುಕುಳ ಮತ್ತು ಕೆಲಸದ ಸ್ಥಳದಲ್ಲಿನ ಅತಿಯಾದ ಒತ್ತಡ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಈ ಸವಾಲುಗಳು ಒಟ್ಟಾರೆ ಜೀವನದ ಗುಣಮಟ್ಟ, ಕೆಲಸದ ಭಾಗವಹಿಸುವಿಕೆ ಮತ್ತು ಉತ್ಪಾದಕತೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ.
ವಿಶ್ವ ಮಾನಸಿಕ ಆರೋಗ್ಯ ದಿನದ ಮಹತ್ವ
ವಿಶ್ವ ಮಾನಸಿಕ ಆರೋಗ್ಯ ದಿನದ ಮಹತ್ವವು ಮಾನಸಿಕ ಆರೋಗ್ಯವನ್ನು ಜಾಗತಿಕ ಆದ್ಯತೆಯನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದೆ. ಮಾನಸಿಕ ಆರೋಗ್ಯದ ಬಗ್ಗೆ ಮುಕ್ತ ಸಂಭಾಷಣೆಗಳನ್ನು ಪ್ರೋತ್ಸಾಹಿಸಲು ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಉಪಕ್ರಮಗಳನ್ನು ಉತ್ತೇಜಿಸಲು ದಿನವು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರತಿ ವರ್ಷ, ಮಾನಸಿಕ ಆರೋಗ್ಯದ ಒಂದು ನಿರ್ದಿಷ್ಟ ಅಂಶವನ್ನು ಪ್ರತಿಬಿಂಬಿಸಲು ಒಂದು ಥೀಮ್ ಅನ್ನು ಆಯ್ಕೆ ಮಾಡಲಾಗುತ್ತದೆ. ಮಾನಸಿಕ ಆರೋಗ್ಯ ಪರಿಸ್ಥಿತಿಗಳ ಅರಿವನ್ನು ಹೆಚ್ಚಿಸುವುದರಿಂದ ಜನರಲ್ಲಿ ಈ ಬಗ್ಗೆ ಒಂದಿಷ್ಟು ಅರಿವು ಮೂಡುತ್ತದೆ. ಅಲ್ಲದೇ ವಿವಿಧ ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸಹಾಯ ಮಾಡುವ ಉದ್ದೇಶವನ್ನೂ ಈ ದಿನ ಹೊಂದಿದೆ.
ವಿಶ್ವ ಮಾನಸಿಕ ಆರೋಗ್ಯ ದಿನದ ಇತಿಹಾಸ
ವಿಶ್ವ ಮಾನಸಿಕ ಆರೋಗ್ಯ ದಿನವು 1992 ರಲ್ಲಿ ಹುಟ್ಟಿಕೊಂಡಿತು, ಇದನ್ನು ಡೆಪ್ಯುಟಿ ಸೆಕ್ರೆಟರಿ ಜನರಲ್ ರಿಚರ್ಡ್ ಹಂಟರ್ ನೇತೃತ್ವದ ವರ್ಲ್ಡ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್ (WFMH) ಪ್ರಾರಂಭಿಸಿತು. ಮೊದಲ ಆಚರಣೆಯನ್ನು ಅಕ್ಟೋಬರ್ 10 ರಂದು 12 ದೇಶಗಳ ಭಾಗವಹಿಸುವಿಕೆಯೊಂದಿಗೆ ಆಚರಿಸಲಾಯಿತು. WFMH ನ ಗುರಿಯು ಮಾನಸಿಕ ಆರೋಗ್ಯ ಜಾಗೃತಿಯನ್ನು ಉತ್ತೇಜಿಸುವುದು, ಕಳಂಕವನ್ನು ಕಡಿಮೆ ಮಾಡುವುದು ಮತ್ತು ಜಾಗತಿಕ ಬೆಂಬಲವನ್ನು ಸಜ್ಜುಗೊಳಿಸುವುದು ಆಗಿದೆ. ಪ್ರತಿ ವರ್ಷ, ದಿನವು ನಿರ್ದಿಷ್ಟ ಥೀಮ್ ಅನ್ನು ತಿಳಿಸುತ್ತದೆ. ಇಂದು, 150ಕ್ಕೂ ಹೆಚ್ಚು ದೇಶಗಳು ಮಾನಸಿಕ ಆರೋಗ್ಯ ದಿನವನ್ನು ಆಚರಿಸುತ್ತವೆ. ಈ ದಿನವು ಮಾನಸಿಕ ಆರೋಗ್ಯ ರಕ್ಷಣೆಯನ್ನು ಮಾನವ ಹಕ್ಕು ಎಂದು ಪ್ರತಿಪಾದಿಸುತ್ತದೆ.