Asia Cup: ಅವರೇನು ಏಲಿಯನ್‌ಗಳಾ, ಪಾಕಿಸ್ತಾನವಿಲ್ಲದೆ ಕ್ರಿಕೆಟ್ ಅಸಾಧ್ಯ; ಪಾಕ್ ಪ್ರವಾಸ ನಿರಾಕರಿಸಿದ ಭಾರತವನ್ನು ಟೀಕಿಸಿದ ಜುನೈದ್ ಖಾನ್
May 11, 2023 08:04 PM IST
ಭಾರತ ತಂಡವನ್ನು ಟೀಕಿಸಿದ ಜುನೈದ್ ಖಾನ್
- Asia Cup 2023: ಭದ್ರತಾ ವಿಚಾರವನ್ನು ಮುಂದಿಟ್ಟು ಪಾಕಿಸ್ತಾನಕ್ಕೆ ಏಕೆ ಬರುತ್ತಿಲ್ಲ. ಅವರೇನು ಏಲಿಯನ್‌ಗಳಾ? ಪಾಕಿಸ್ತಾನವಿಲ್ಲದೆ ಕ್ರಿಕೆಟ್ ಅಸಾಧ್ಯ ಎಂದು ಪಾಕ್ ಪ್ರವಾಸ ನಿರಾಕರಿಸಿದ ಭಾರತವನ್ನು ಟೀಕಿಸಿದ ವೇಗಿ ಜುನೈದ್ ಖಾನ್ ಟೀಕಿಸಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ (ICC ODI World Cup 2023) ಟೂರ್ನಿಗೆ ಇನ್ನೈದು ತಿಂಗಳಷ್ಟೆ ಬಾಕಿ ಇದೆ. ಭಾರತವೇ ಟೂರ್ನಿಯ ಆಯೋಜನೆಗೆ ಆತಿಥ್ಯ ವಹಿಸಿಕೊಂಡಿದೆ. ಆದರೆ ಪಾಕಿಸ್ತಾನ ತಂಡವು (Pakistan Cricket Team), ಭಾರತಕ್ಕೆ ಹೆಜ್ಜೆ ಇಡುತ್ತಾ? ಇಲ್ಲವೋ? ಎಂಬ ಗೊಂದಲ ಇನ್ನೂ ಕಾಡುತ್ತಿದೆ. ಕೆಲ ವರದಿಗಳ ಪ್ರಕಾರ, ಪಾಕ್ ತಂಡವು ಭಾರತದಲ್ಲಿ ಆಡಲು ಒಮ್ಮತ ಸೂಚಿಸಿದೆ ಎನ್ನಲಾಗಿದೆ. ಇನ್ನು ಕೆಲವು ವರದಿಗಳು ಈ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಹೇಳುತ್ತಿವೆ.
ಕಳೆದ ವರ್ಷ ಏಷ್ಯಾಕಪ್ ಟಿ20 ಟೂರ್ನಿ (Asia Cup 2022) ಆರಂಭಕ್ಕೂ ಮುನ್ನ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah), 2023ರ ಏಷ್ಯಾಕಪ್ ಏಕದಿನ ಟೂರ್ನಿ (Asia Cup 2023) ಕುರಿತು ಸಂಚಲನ ಹೇಳಿಕೆ ನೀಡಿದ್ದರು. ಏಷ್ಯಾಕಪ್ ಪಾಕಿಸ್ತಾನದಲ್ಲಿ ನಡೆದರೆ ಟೀಮ್ ಇಂಡಿಯಾ ಅಲ್ಲಿಗೆ ಪ್ರಯಾಣ ಬೆಳೆಸುವುದಿಲ್ಲ. ನಮ್ಮ ಆಟಗಾರರಿಗೆ ಭದ್ರತೆ ಸಿಗುವುದಿಲ್ಲ. ಬೇರೆ ದೇಶದಲ್ಲಿ ಟೂರ್ನಿ ನಡೆದರೆ ಮಾತ್ರ ಪಾಲ್ಗೊಳ್ಳುತ್ತೇವೆ ಎಂದು ಅಂದು ಜಯ್ ಶಾ ನೀಡಿದ್ದ ಹೇಳಿಕೆಗೆ ಈಗಲೂ ಆಕ್ರೋಶ ವ್ಯಕ್ತವಾಗುತ್ತಿದೆ.
ಇದರ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೂ (Pakistan Cricket Board) ತಿರುಗೇಟು ನೀಡಿತ್ತು. ಏಷ್ಯಾಕಪ್-2023 ಟೂರ್ನಿಗೆ ಪಾಕಿಸ್ತಾನಕ್ಕೆ ಟೀಮ್ ಇಂಡಿಯಾ ಬರದಿದ್ದರೆ, ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನಾವು ಸಹ ಪಾಲ್ಗೊಳ್ಳುವುದಿಲ್ಲ ಎಂದು ಪಿಸಿಬಿ ಸ್ಪಷ್ಟಪಡಿಸಿತ್ತು. ಅದಕ್ಕಾಗಿ ಏಷ್ಯಾಕಪ್ 2023 ಟೂರ್ನಿಯನ್ನು ಪಾಕಿಸ್ತಾನಕ್ಕೆ ಆತಿಥ್ಯ ಸಿಕ್ಕಿದೆ. ಆದರೆ, ಟೀಮ್ ಇಂಡಿಯಾದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಲು ಪಿಸಿಬಿ ಯೋಜನೆ ರೂಪಿಸಿದೆ.
ಟೂರ್ನಿಯನ್ನು ಪಾಕಿಸ್ತಾನದಿಂದ ಬೇರಡೆ ಸ್ಥಳಾಂತರಿಸಲು ಬಿಸಿಸಿಐ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಸಭೆಯಲ್ಲಿ ಹೇಳಿತ್ತು. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಪ್ಪಿಗೆ ಸೂಚಿರಲಿಲ್ಲ. ಆದರೆ ಭಾರತದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಿಸಲು ಸಮ್ಮತಿ ನೀಡಿತ್ತು. ಇದಾದ ನಡುವೆಯೂ ಈ ಟೂರ್ನಿ ಬಗ್ಗೆ ಇನ್ನೂ ಅನಿಶ್ಚಿತತೆ ಕಾಡುತ್ತಿದೆ. ಅದಕ್ಕಾಗಿ ದೇಶಗಳ ರಾಜಕೀಯ ಗಲಾಟೆಗಳು ಕೂಡ ಇದಕ್ಕೆ ಅಡ್ಡಿಯಾಗುತ್ತಿದೆ.
ಇದರ ನಡುವೆಯೇ ಪಾಕ್ ವೇಗಿ ಜುನೈದ್ ಖಾನ್ (Pakistan Fast Bowler Junaid Khan), ಭಾರತದ ವಿರುದ್ಧ ಸಿಡಿದೆದ್ದಿದ್ದಾರೆ. ಪಾಕಿಸ್ತಾನದಲ್ಲಿ ಈಗ ಪರಿಸ್ಥಿತಿ ಉತ್ತಮವಾಗಿದೆ. ಬೇರೆ ತಂಡಗಳೂ ಇಲ್ಲಿಗೆ ಬಂದು ಆಡುತ್ತಿವೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಈಗಾಗಲೇ ಆಗಮಿಸಿವೆ. ಈ ತಂಡಗಳಿಗೆ ಇಲ್ಲದ ಭದ್ರತಾ ಸಮಸ್ಯೆ ಭಾರತಕ್ಕೇನು ಎಂದು ಪ್ರಶ್ನಿಸಿದ್ದಾರೆ.
ಹಾಗಾದರೆ, ಅವರು ಬೇರೆ ಗ್ರಹದಿಂದ ಬಂದಿದ್ದಾರೆಯೇ? ಭದ್ರತಾ ಸಮಸ್ಯೆಗಳಿರುತ್ತವೆ ಎಂದು ಹೇಳಲು ಅವರು ಅನ್ಯಲೋಕಕ್ಕೆ ಸೇರಿದ ಏಲಿಯನ್‌ಗಳಾ? ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ವಿಚಾರವನ್ನು ಐಸಿಸಿ ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದಲ್ಲಿ ಪಾಕಿಸ್ತಾನ ಎಲ್ಲಿಗೂ ಹೋಗಲ್ಲ. ಪಾಕಿಸ್ತಾನ ಇಲ್ಲದೆ ಕ್ರಿಕೆಟ್ ಆಡುವುದು ಅಸಾಧ್ಯ ಎಂದು ಹೇಳಿಕೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಏಕದಿನ ಕ್ರಿಕೆಟ್ನಲ್ಲಿ ಪಾಕಿಸ್ತಾನ ನಂಬರ್ 1 ಸ್ಥಾನಕ್ಕೆ ಏರಿದೆ. ಸದ್ಯ ಅಗ್ರ ಮೂರು ತಂಡಗಳಲ್ಲಿ ಸ್ಥಾನ ಪಡೆದಿದೆ ಎಂದು ಜುನೈದ್ ಖಾನ್ ಹೇಳಿದ್ದಾರೆ.