logo
ಕನ್ನಡ ಸುದ್ದಿ  /  ಕ್ರೀಡೆ  /  ಸಾಯೋದು ಕನ್ಫರ್ಮ್, ಹೆದರ್ಕೊಂಡು ಪಾಕಿಸ್ತಾನಕ್ಕೆ ಬರದಿರಬೇಡಿ; ಜಾವೇದ್ ಮಿಯಾಂದಾದ್ ಅಚ್ಚರಿ ಹೇಳಿಕೆ

ಸಾಯೋದು ಕನ್ಫರ್ಮ್, ಹೆದರ್ಕೊಂಡು ಪಾಕಿಸ್ತಾನಕ್ಕೆ ಬರದಿರಬೇಡಿ; ಜಾವೇದ್ ಮಿಯಾಂದಾದ್ ಅಚ್ಚರಿ ಹೇಳಿಕೆ

Prasanna Kumar P N HT Kannada

Jun 19, 2024 05:51 PM IST

google News

ಸಾಯೋದು ಕನ್ಫರ್ಮ್, ಹೆದರ್ಕೊಂಡು ಪಾಕಿಸ್ತಾನಕ್ಕೆ ಬರದಿರಬೇಡಿ; ಜಾವೇದ್ ಮಿಯಾಂದಾದ್ ಅಚ್ಚರಿ ಹೇಳಿಕೆ

    • Javed Miandad: ಐಸಿಸಿ ಚಾಂಪಿಯನ್ಸ್ 2025 ಟ್ರೋಫಿಗೆ ಟೀಮ್ ಇಂಡಿಯಾ, ಪಾಕಿಸ್ತಾನ ದೇಶಕ್ಕೆ ಪ್ರಯಾಣಿಸುವ ಕುರಿತು ಜಾವೇದ್ ಮಿಯಾಂದಾದ್ ಅವರು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಸಾಯೋದು ಕನ್ಫರ್ಮ್, ಹೆದರ್ಕೊಂಡು ಪಾಕಿಸ್ತಾನಕ್ಕೆ ಬರದಿರಬೇಡಿ; ಜಾವೇದ್ ಮಿಯಾಂದಾದ್ ಅಚ್ಚರಿ ಹೇಳಿಕೆ
ಸಾಯೋದು ಕನ್ಫರ್ಮ್, ಹೆದರ್ಕೊಂಡು ಪಾಕಿಸ್ತಾನಕ್ಕೆ ಬರದಿರಬೇಡಿ; ಜಾವೇದ್ ಮಿಯಾಂದಾದ್ ಅಚ್ಚರಿ ಹೇಳಿಕೆ

2025ರ ಚಾಂಪಿಯನ್ಸ್ ಟ್ರೋಫಿಗೆ (ICC Champions Trophy 2025) ಪಾಕಿಸ್ತಾನ ಆತಿಥ್ಯ ವಹಿಸುತ್ತಿದೆ. ಈಗಾಗಲೇ ವೇಳಾಪಟ್ಟಿಯೂ ಅಂತಿಮಗೊಂಡಿದ್ದು, ಅಧಿಕೃತವಾಗಿ ಘೋಷಿಸಬೇಕಿದೆ. ಎಂಟು ತಂಡಗಳ ನಡುವೆ ನಡೆಯುವ ಈ ಐಸಿಸಿ ಟೂರ್ನಿಗೆ ಟೀಮ್ ಇಂಡಿಯಾ (Team India), ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುತ್ತಾ ಎಂಬ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ ಭಾರತ ಪ್ರಯಾಣ ಬೆಳೆಸುವ ಬಗ್ಗೆ ಪಾಕಿಸ್ತಾನ ದಿಗ್ಗಜ ಜಾವೇದ್ ಮಿಯಾಂದಾದ್ (Javed Miandad) ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ.

ಮಹತ್ವದ ಟೂರ್ನಿಗೆ ಪಾಕಿಸ್ತಾನವು ಆತಿಥ್ಯ ವಹಿಸುತ್ತಿರುವ ಕಾರಣ ಟೀಮ್ ಇಂಡಿಯಾ ಪ್ರಯಾಣ ಬೆಳೆಸುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದರೆ ಮಾತ್ರ ಭಾರತ ಪ್ರಯಾಣಿಸುವ ಸಾಧ್ಯತೆ ಇದೆ. ಟೀಮ್ ಇಂಡಿಯಾ ಪ್ರಯಾಣ ಅನುಮಾನ ಉಂಟು ಮಾಡಿರುವ ಕಾರಣ ಪಾಕ್ ಮಾಜಿ ಕ್ರಿಕೆಟರ್​ಗಳು ಟೀಕೆ ಮಾಡುತ್ತಿದ್ದಾರೆ. ಆದರೆ, ಜಾವೇದ್ ಮಿಯಾಂದಾದ್ ಅವರು ಟೀಕಿಸಿದ್ದು, ಆಕ್ರೋಶಕ್ಕೆ ಗುರಿಯಾಗಿದೆ.

ಜಾವೇದ್ ಮಿಯಾಂದಾದ್ ಹೇಳಿದ್ದೇನು?

ಜಾವೇದ್ ಅವರು ಪ್ರಸಿದ್ಧ ಪಾಕಿಸ್ತಾನಿ ಯೂಟ್ಯೂಬರ್‌ ಪಾಡ್​ಕಾಸ್ಟ್​​ನಲ್ಲಿ ಕಾಣಿಸಿಕೊಂಡಿದ್ದು, ಭಾರತವು ಪಾಕಿಸ್ತಾನಕ್ಕೆ ಭೇಟಿ ನೀಡಬೇಕೇ ಅಥವಾ ಬೇಡವೇ ಎಂದು ಪ್ರಶ್ನೆ ಎದುರಿಸಿದ್ದಾರೆ. ಮಿಯಾಂದಾದ್ ಪ್ರತಿಕ್ರಿಯಿಸಿ, ಭಾರತ ತಂಡವು ತಮ್ಮ ದೇಶದ ಭದ್ರತಾ ಕಾಳಜಿಯಿಂದ ಭಯಭೀತರಾಗಿದ್ದಾರೆ. ಭದ್ರತಾ ಬೆದರಿಕೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಏಕೆಂದರೆ ಪ್ರತಿಯೊಬ್ಬರೂ ಸಾಯಲೇಬೇಕು ಎಂದಿದ್ದಾರೆ.

ಎಲ್ಲರೂ ಸಾಯುವುದು ಖಚಿತ. ಸಾವಿನ ಚಕ್ರದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದು ಮೇಲಿನ ಪರಮಾತ್ಮನ ಕೈಯಲ್ಲಿ ಮಾತ್ರ ಇರುತ್ತದೆ. ನೀವು ಭದ್ರತೆಯ ಬಗ್ಗೆ ಕಾಳಜಿ ವಹಿಸಬೇಡಿ. ಏಕೆಂದರೆ ಸಾವು ಬರಬೇಕಾದಾಗ ಬರುತ್ತದೆ ಎಂದು ನಾವು ನಂಬುತ್ತೇವೆ. ಇದು ನನ್ನ ನಂಬಿಕೆ. ಜೀವನ ಮತ್ತು ಸಾವು ಅಲ್ಲಾ ಕೈಯಲ್ಲಿದೆ. ಹಾಗಾಗಿ ಹೆದರಿಕೊಂಡು ಪಾಕಿಸ್ತಾನಕ್ಕೆ ಬರದೇ ಇರಬೇಡಿ ಎಂದು ಹೇಳಿದ್ದಾರೆ.

2025ರಲ್ಲಿ ಪಾಕಿಸ್ತಾನಕ್ಕೆ ಟೀಮ್ ಇಂಡಿಯಾ ಪ್ರಯಾಣ ಬೆಳೆಸಬೇಕೇ ಬೇಡವೇ ಎನ್ನುವುದರ ಕುರಿತು ಬಿಸಿಸಿಐ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರದ ಕೈಯಲ್ಲಿದೆ. ಹೈಬ್ರಿಡ್ ಮಾದರಿ ಜಾರಿಗೆ ತರಲು ಐಸಿಸಿ ಒಪ್ಪಿಗೆ ನೀಡುತ್ತದೆಯೇ ಎಂಬುದು ಕುತೂಹಲಕಾರಿಯಾಗಿದೆ. ಆದರೆ ಭಾರತ ತಂಡದ ಪಂದ್ಯಗಳನ್ನು ಲಾಹೋರ್​​ನಲ್ಲಿ ಆಯೋಜಿಸಲು ಪಿಸಿಬಿ ಚಿಂತನೆ ನಡೆಸಿದೆ.

ಪಾಕಿಸ್ತಾನಿ ಸುದ್ದಿವಾಹಿನಿ ಎಆರ್​​ವೈ ನ್ಯೂಸ್‌ ಈ ಹಿಂದೆ ಭಾರತ, ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆ ಎಂದು ವರದಿ ಮಾಡಿತ್ತು. ಬಹುತೇಕ ಐಸಿಸಿ ಟೂರ್ನಿಯಲ್ಲಿ ಭಾರತದ ಎಲ್ಲಾ ಪಂದ್ಯಗಳನ್ನು ಲಾಹೋರ್‌ನ ಐಕಾನಿಕ್ ಗಡಾಫಿ ಸ್ಟೇಡಿಯಂನಲ್ಲಿ ನಡೆಸಲು ಸಿದ್ಧತೆ ನಡೆಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈಗಾಗಲೇ ತಮ್ಮ ತಾತ್ಕಾಲಿಕ ವೇಳಾಪಟ್ಟಿ ಮೊದಲ ಕರಡನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಕಳುಹಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು.

ವಾಘಾ ಗಡಿಗೆ (ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ) ಹತ್ತಿರವಿರುವ ಕಾರಣ, ಲಾಹೋರ್ ಅನ್ನು ಭಾರತೀಯ ತಂಡಕ್ಕೆ ಆತಿಥ್ಯ ವಹಿಸಲು ಪಿಸಿಬಿ ಆಯ್ಕೆ ಮಾಡಿದೆ. ನಗರವು ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೂ ಆತಿಥ್ಯ ವಹಿಸಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು. ಇದು ಲಾಜಿಸ್ಟಿಕ್ಸ್ ಮತ್ತು ಭದ್ರತಾ ಸಿದ್ಧತೆಗಳನ್ನು ಸರಾಗಗೊಳಿಸುತ್ತದೆ. ಪ್ರಯಾಣದ ವಿಷಯದಲ್ಲಿ ಭಾರತೀಯ ಅಭಿಮಾನಿಗಳಿಗೆ ತಲೆನೋವನ್ನು ಕಡಿಮೆ ಮಾಡುತ್ತದೆ.

ಹಾಲಿ ಚಾಂಪಿಯನ್-ರನ್ನರ್​ಅಪ್​

2017ರಲ್ಲಿ ಕೊನೆಯದಾಗಿ ಐಸಿಸಿ ಟೂರ್ನಿ ನಡೆದಿತ್ತು. ಅಂದು ಬದ್ಧವೈರಿ ಪಾಕಿಸ್ತಾನ ಮತ್ತು ಭಾರತ ತಂಡಗಳೇ ಫೈನಲ್​ನಲ್ಲಿ ಸೆಣಸಾಟ ನಡೆಸಿದ್ದವು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಫೈನಲ್​​ನಲ್ಲಿ ಸೋತು ಮುಖಭಂಗಕ್ಕೆ ಒಳಗಾಗಿತ್ತು. ಇದೀಗ 8 ವರ್ಷಗಳ ನಂತರ ನಡೆಯುವ ಚಾಂಪಿಯನ್ಸ್ ಟ್ರೋಫಿ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್-ರನ್ನರ್​​ಅಪ್ ತಂಡಗಳ ನಡುವೆ ಜರುಗುವ ಸಾಧ್ಯತೆ ಇದೆ.

 

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ