ಮುತ್ತಯ್ಯ ಮುರಳೀಧರನ್ ತಂದೆಯವರ ಪ್ರಸಿದ್ಧ ಬಿಸ್ಕತ್ ಕಂಪನಿಗೆ ಬೆಂಕಿ ಇಟ್ಟು ಸುಟ್ಟು ಹಾಕಿದ್ದ ಸಿಂಹಳೀಯರು!
Muttiah Muralidharan invest in Karnataka: ಮುತ್ತಯ್ಯ ಮುರಳೀಧರನ್ ಅವರ ತಂದೆ 1964ರಲ್ಲಿ ನಿರ್ಮಿಸಿದ್ದ ಬಿಸ್ಕತ್ ಕಂಪನಿಯನ್ನು ಸಿಂಹಳೀಯರು ಸುಟ್ಟು ಹಾಕಿದ್ದರು.
ಅದು ಲಕ್ಕಿಲ್ಯಾಂಡ್ ಬಿಸ್ಕತ್ತು ಕಂಪನಿ. ಶ್ರೀಲಂಕಾದಲ್ಲಿದೆ. ಯಾರೇ ಹೋಗಲಿ ಅವರನ್ನು ನಗುಮೊಗದಿಂದಲೇ ಸ್ವಾಗತಿಸುತ್ತಿದ್ದರು ಸಿನ್ನಸ್ವಾಮಿ ಮುತ್ತಯ್ಯ. ಶ್ರೀಲಂಕಾ ಗುರುತಿಸಲು ಈ ಕಂಪನಿಯೂ ಒಂದು ಕಾರಣ. ಅಷ್ಟರ ಮಟ್ಟಿಗೆ ಪ್ರಖ್ಯಾತಿ ಪಡೆದಿದೆ. ದೊಡ್ಡ ಕಣ್ಣುಳ್ಳ ಈ ವ್ಯಕ್ತಿ ಕ್ಯಾಂಡಿಯಲ್ಲಿ ತನ್ನದೇ ಆದ ಘನತೆ-ಗೌರವ ಹೊಂದಿದ್ದಾರೆ. ಈ ಮಾತುಗಳನ್ನು ಹೇಳಿದ್ದು ಅಲ್ಲಿನ ಜನರೇ.
ಸಿನ್ನಸ್ವಾಮಿ ಅವರಿಗೆ ನಾಲ್ವರು ಪುತ್ರರು. ಅವರಲ್ಲಿ ಒಬ್ಬರು ಇಡೀ ಜಗತ್ತಿಗೆ ಗೊತ್ತು. ಹೌದು, ಟೆಸ್ಟ್ ಕ್ರಿಕೆಟ್‌ನಲ್ಲಿ 800 ವಿಕೆಟ್ ಕಬಳಿಸಿ ಅತಿಹೆಚ್ಚು ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆತನ ಹೆಸರು ಮುತ್ತಯ್ಯ ಮುರಳೀಧರನ್. ತಂದೆ ಉದ್ಯಮದಲ್ಲಿ ಹೆಸರು ಸಂಪಾದಿಸಿದರೆ, ಮಗ ಕ್ರಿಕೆಟ್‌ನಲ್ಲಿ ಖ್ಯಾತಿ ಪಡೆದರು. ಇದೀಗ ತಂದೆಯಂತೆ ಉದ್ಯಮಕ್ಕೂ ಕಾಲಿಡುತ್ತಿದ್ದಾರೆ.
ಸಾರ್ವಕಾಲಿಕ ವಿಶ್ವ ಶ್ರೇಷ್ಠ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್, ನಮ್ಮ ಕರ್ನಾಟಕದಲ್ಲಿ ಉದ್ಯಮ ಆರಂಭಿಸಲು ಮುಂದಾಗಿದ್ದಾರೆ. ಈಗಾಗಲೇ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರೊಂದಿಗೆ ಮಾತುಕತೆಯೂ ನಡೆಸಿದ್ದಾರೆ. ಚಾಮರಾಜನಗರದ ಬದನಕುಪ್ಪೆಯಲ್ಲಿ ತಂಪು ಪಾನೀಯ ಮತ್ತು ಸಿಹಿ ತಿಂಡಿಗಳ ಉದ್ಯಮ ಆರಂಭಿಸುತ್ತಿದ್ದು, ಹಂತ-ಹಂತವಾಗಿ 1400 ಕೋಟಿ ಹೂಡಿಕೆ ಮಾಡಲು ಮುಂದಾಗಿದ್ದಾರೆ.
ಮುರಳೀಧರನ್ ಅವರ ತಂದೆ ಸಿನ್ನಸ್ವಾಮಿ ಮುತ್ತಯ್ಯ ಮತ್ತು ದಿವಂಗತ ಚಿಕ್ಕಪ್ಪ ಅವರು 1964ರಲ್ಲಿ ವ್ಯಾಪಾರವನ್ನು ಆರಂಭಿಸಿದರು. ಇಬ್ಬರು ವ್ಯಕ್ತಿಗಳಿಂದ ಆರಂಭಗೊಂಡ ವ್ಯಾಪಾರ ಈಗ ಸುಮಾರು 300 ಸಿಬ್ಬಂದಿಯನ್ನು ಹೊಂದಿದೆ. ಲಕ್ಕಿಲ್ಯಾಂಡ್ ಬಿಸ್ಕತ್ ಅನ್ನು ಭಾರತ, ಇಂಗ್ಲೆಂಡ್, ಘಾನಾ ಸೇರಿ ಪ್ರಮುಖ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಭಿನ್ನ ವಿಭಿನ್ನ ಚಾಕೋಲೇಟ್ಗಳು ಜನಮೆಚ್ಚುಗೆ ಪಡೆದಿವೆ.
ಆದರೆ, 1977ರಲ್ಲಿ ಚುನಾವಣೋತ್ತರ ಗಲಭೆಗಳಿಂದ ಶ್ರೀಲಂಕಾವು ಸುಮಾರು 300 ತಮಿಳರನ್ನು ಕೊಂದಿತ್ತು. ಕಾರ್ಖಾನೆಯ ಒಂದು ಭಾಗವನ್ನು ಸಿಂಹಳೀಯ ವಿರೋಧಿಗಳು ಸುಟ್ಟು ಹಾಕಿದ್ದರು. ಇದು ಭಾರಿ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟು ಮಾಡಿತ್ತು. ಸಾಕಷ್ಟು ಮಂದಿ ಕೆಲಸ ತೊರೆದರು. ಆಗಾಗ್ಗೆ ಸಿಂಹಳೀಯರಿಂದ ಬೆದರಿಕೆ ಬರುತ್ತಲೇ ಇದ್ದವು. ಆದರೂ ಕದ್ದುಮುಚ್ಚಿ ಕಂಪನಿ ನಡೆಸುತ್ತಿದ್ದರು.
ಸಿಂಹಳೀಯರು vs ತಮಿಳರು
ಸಿಂಹಳೀಯರು ಶ್ರೀಲಂಕಾದ ಮೂಲ ನಿವಾಸಿಗಳು. ಆದರೆ, ತಮಿಳರನ್ನು ವಲಸಿಗರು. ಶ್ರೀಲಂಕಾದ ಉತ್ತರ ಭಾಗವು ಮಿನಿ ಇಂಡಿಯಾ, ಮಿನಿ ತಮಿಳುನಾಡು ಎಂದೇ ಕರೆಸಿಕೊಂಡಿದೆ. ಇಲ್ಲಿ ತಮಿಳಿಗರು ತಮ್ಮ ಹಕ್ಕುಗಳಿಗಾಗಿ ಸಿಂಹಳೀಯರ ವಿರುದ್ಧ ಸಾಕಷ್ಟು ಹೋರಾಟ ನಡೆಸಿದ್ದಾರೆ. ದೊಡ್ಡಮಟ್ಟದಲ್ಲಿ ಸಂಘರ್ಷ ಕೂಡ ನಡೆದಿತ್ತು. ಚುನಾವಣೋತ್ತರ ಗಲಭೆ ಮಾತ್ರವಲ್ಲ, ಹಕ್ಕು ಕೇಳಿದ ತಮಿಳರನ್ನು ಸಿಕ್ಕ ಸಿಕ್ಕಲ್ಲಿ ಸಿಂಹಳರು ಕೊಂದಿದ್ದೂ ಇದೆ. ಜಾಫ್ನಾ ಮತ್ತು ಎಲ್ಟಿಟಿಇ (Liberation Tigers of Tamil Eelam) ನಡುವೆ ನಿರಂತರ ಸಂಘರ್ಷ ನಡೆಯುತ್ತಲೇ ಇತ್ತು.
ಇದರ ನಡುವೆ ದಿನೆದಿನೇ ಕಾರ್ಖಾನೆಯನ್ನು ಬೆಳೆಸುತ್ತಾ ಹೋದರು ಸಿನ್ನಸ್ವಾಮಿ. ಇದರ ನಡುವೆ ಮಗ ಮುರಳೀಧರನ್ ಕನಸನ್ನು ನನಸು ಮಾಡುತ್ತಾ ಹೋದರು. ಆರಂಭದಲ್ಲಿ ಮಧ್ಯಮ ವೇಗಿಯಾಗಿದ್ದ ಮುರಳೀಧರನ್ ಅವರು ನಂತರ ಸ್ಪಿನ್ನರ್ ಆಗಿ ಬದಲಾದರು. ಕೊಲೊಂಬೊದಲ್ಲಿ ಪದವಿ ಪೂರ್ಣಗೊಳಿಸಿದ ಮುರಳೀಧರನ್, 1992-2010ರವರೆಗೆ ಆಡಿ 800 ಟೆಸ್ಟ್ ವಿಕೆಟ್ ಕಿತ್ತರು. ಯಾವೊಬ್ಬ ಬೌಲರ್ ಕೂಡ ಇದುವರೆಗೂ ಟೆಸ್ಟ್ನಲ್ಲಿ 800 ವಿಕೆಟ್ ಕಿತ್ತಿಲ್ಲ.
ಶ್ರೀಲಂಕಾದ ಲೆಜೆಂಡರಿ ಸ್ಪಿನ್ನರ್ ತನ್ನ ತಂದೆಗಿಂತಲೂ ವಿಭಿನ್ನ. ಕ್ರಿಕೆಟ್‌ನಲ್ಲಿ ಸಾಕಷ್ಟು ಸ್ಟಾರ್ಗಿರಿ ಗಿಟ್ಟಿಸಿಕೊಂಡಿದ್ದರೂ ಬಿಸ್ಕಟ್ ಕಂಪನಿ ಬಗ್ಗೆ ಎಂದೂ ಪ್ರಚಾರ ಮಾಡಿದವರೇ ಅಲ್ಲ. ಬಿಸ್ಕತ್ ಪ್ಯಾಕೇಟ್ ಮೇಲೆ ತಮ್ಮ ಮಗನ ಫೋಟೋವನ್ನು ತಂದೆಯೂ ಬಳಸಿಲ್ಲ. ಶ್ರೀಲಂಕಾದಲ್ಲಿ ಅತಿ ದೊಡ್ಡ ಬಿಸ್ಕತ್ತು ಕಂಪನಿ 'ಸನ್‌ರಿಜ್ಸ್' ಪರ ಪ್ರಚಾರ ನಡೆಸಿದ್ದರು. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟು ಹಾಕಿತ್ತು. ತಂದೆಯನ್ನು ಕೈಬಿಟ್ಟಿದ್ದಾರೆ ಎಂಬ ಇಲ್ಲ ಸಲ್ಲದ ಆರೋಪಗಳು ಕೇಳಿ ಬಂದಿದ್ದವು.
ಕರ್ನಾಟಕದಲ್ಲಿ ಉದ್ಯಮ ಆರಂಭ
ಈಗಾಗಲೇ ಶ್ರೀಲಂಕಾದಲ್ಲಿ ಉದ್ಯಮ ಆರಂಭಿಸಿದ್ದಾರೆ. ಅಪ್ಪ ಬಿಸ್ಕತ್ ಕಂಪನಿ ಮುಂದುವರೆಸಿದರೆ, ಮುರಳೀಧರನ್ ತಂಪು ಪಾನೀಯ ಮತ್ತು ಸಿಹಿ ತಿಂಡಿಗಳ ಉದ್ಯಮ ಆರಂಭಿಸಿದರು. ಶ್ರೀಲಂಕಾದಲ್ಲಿ ಸಾಕಷ್ಟು ಯಶಸ್ಸು ಕೂಡ ಕಂಡಿದ್ದಾರೆ. ಇದೀಗ ಅದನ್ನು ವಿಸ್ತರಿಸಲು ನಿರ್ಧರಿಸಿದ ಮುರಳಿ, ಕರ್ನಾಟಕದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಸಜ್ಜಾಗಿದ್ದಾರೆ. ಹಂತ ಹಂತವಾಗಿ 1,400 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದಾರೆ. ಅಲ್ಲದೆ, ಧಾರವಾಡದಲ್ಲೂ ಹೂಡಿಕೆ ವಿಸ್ತರಿಸಲಿದ್ದಾರೆ.