logo
ಕನ್ನಡ ಸುದ್ದಿ  /  ಕ್ರೀಡೆ  /  Ms Dhoni: ಸಿಎಸ್‌ಕೆ ನಾಯಕ ಧೋನಿಗೆ ಬಂದಿದ್ದ ಹಳೆಯ ಆಫರ್ ಲೆಟರ್ ವೈರಲ್; ಸಂಬಳ ಇಷ್ಟೇನಾ ಎಂದ ನೆಟ್ಟಿಗರು

MS Dhoni: ಸಿಎಸ್‌ಕೆ ನಾಯಕ ಧೋನಿಗೆ ಬಂದಿದ್ದ ಹಳೆಯ ಆಫರ್ ಲೆಟರ್ ವೈರಲ್; ಸಂಬಳ ಇಷ್ಟೇನಾ ಎಂದ ನೆಟ್ಟಿಗರು

Jayaraj HT Kannada

Jul 25, 2023 04:54 PM IST

google News

ಎಂಎಸ್‌ ಧೋನಿ

    • Mahendra Singh Dhoni: ಸಿಎಸ್‌ಕೆ ತಂಡದ ನಾಯಕನಿಗೆ 10 ವರ್ಷಗಳ ಹಿಂದೆ ಬಂದಿದ್ದ ಉದ್ಯೋಗದ ಆಫರ್‌ ಲೆಟರ್‌ ಈಗ ವೈರಲ್‌ ಆಗಿದೆ. ಇದರಲ್ಲಿ ಧೋನಿಗೆ ಆಫರ್‌ ಮಾಡಿದ್ದ ಸಂಭಾವನೆ ನೋಡಿ ನೆಟ್ಟಿಗರಿಗೆ ಅಚ್ಚರಿಯಾಗಿದೆ.
ಎಂಎಸ್‌ ಧೋನಿ
ಎಂಎಸ್‌ ಧೋನಿ (CSK Twitter)

ಜಾರ್ಖಂಡ್‌ ರಾಜ್ಯದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುವ ವ್ಯಕ್ತಿ ಎಂದರೆ ಅದು ಎಂಎಸ್‌ ಧೋನಿ. ಇವರು ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರಲ್ಲಿ ಒಬ್ಬರು. ಪ್ರಸ್ತುತ ಟೀಮ್‌ ಇಂಡಿಯಾ ಪರ ಮಾಹಿ ಆಡದಿದ್ದರೂ, ಐಪಿಎಲ್‌ನಲ್ಲಿ ಸಕ್ರಿಯವಾಗಿದ್ದಾರೆ. ಇದರೊಂದಿಗೆ ಕ್ರೀಡೆಗೆ ಸಂಬಂಧಿಸಿದ ಇತರ ಚಟುವಟಿಕೆ ಹಾಗೂ ಜಾಹೀರಾತುಗಳಿಂದಲೂ ಸಂಪಾದನೆ ಮಾಡುತ್ತಾರೆ. ಒಂದು ಸಾವಿಕ ಕೋಟಿ ರೂಪಾಯಿಗಳಿಗೂ ಹೆಚ್ಚು ನಿವ್ವಳ ಮೌಲ್ಯದ ಆಸ್ತಿಪಸ್ತಿಗೆ ಮಾಹಿ ಒಡೆಯ. ಅಲ್ಲದೆ ಕ್ರೀಡೆ ಹೊರತಾಗಿ ಹಲವು ಸದಭಿರುಚಿಗಳನ್ನು ಮಾಹಿ ಬೆಳೆಸಿಕೊಂಡಿದ್ದಾರೆ.

ಈಗಲೂ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಐಪಿಎಲ್‌ನಲ್ಲಿ ಪ್ರತಿ ವರ್ಷ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿರುವ ಧೋನಿಗೆ, ಹಿಂದೊಮ್ಮ ಬಂದ ಉದ್ಯೋಗದ ಆಫರ್ ಲೆಟರ್‌ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್‌ ಆಗಿದೆ. 2012ರ ಆಫರ್‌ ಲೆಟರ್‌ ಈಗ ಟ್ರೆಂಡಿಂಗ್‌ನಲ್ಲಿದೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಫರ್‌ ಲೆಟರ್‌ ಅನ್ನು ಮಾಜಿ ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ ವರ್ಷಗಳ ಹಿಂದೆ ಹಂಚಿಕೊಂಡಿದ್ದರು. ಹಳೆಯ ಪೋಸ್ಟ್‌ ಇತ್ತೀಚೆಗೆ ಭಾರಿ ವೈರಲ್‌ ಆಗಿದೆ.

43 ಸಾವಿರ ರೂಪಾಯಿ ಸಂಬಳದ ಕೆಲಸ

2012ರಲ್ಲಿ ಸಿಮೆಂಟ್ ಕಂಪನಿಯೊಂದರಿಂದ ಧೋನಿಗೆ ಕೆಲಸ ಆಫರ್‌ ಲೆಟರ್‌ ಬಂದಿದೆ. ಇಂಡಿಯಾ ಸಿಮೆಂಟ್ಸ್‌ನ ಉಪಾಧ್ಯಕ್ಷ ಹುದ್ದೆಗೆ ಸಿಎಸ್‌ಕೆ ನಾಯಕನಿಗೆ ಆಫರ್‌ ಲೆಟರ್‌ ನೀಡಲಾಗಿತ್ತು. ಹಳೆಯ ಆಫರ್ ಲೆಟರ್ ಇದೀಗ ವೈರಲ್ ಆಗಿದೆ. ಹತ್ತು ವರ್ಷಗಳ ಹಿಂದೆ ಎಂಎಸ್ ಧೋನಿಗೆ ಈ ಕೆಲಸಕ್ಕಾಗಿ ಆಫರ್‌ ಲೆಟರ್‌ನಲ್ಲಿ ನಮೂದಿಸಿದ ಸಂಭಾವನೆ ಕೇವಲ 43,000 ರೂಪಾಯಿ ಮಾತ್ರ. ಇದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.

ಚೆನ್ನೈನಲ್ಲಿರುವ ಇಂಡಿಯಾ ಸಿಮೆಂಟ್ಸ್ ಮುಖ್ಯ ಕಚೇರಿಯಲ್ಲಿ ಉಪಾಧ್ಯಕ್ಷ (ಮಾರ್ಕೆಟಿಂಗ್) ಹುದ್ದೆಗಾಗಿ 2012ರ ಜುಲೈ ತಿಂಗಳಲ್ಲಿ ಈ ಆಫರ್‌ ಮಾಡಲಾಗಿದೆ. ಈ ಲೆಟರ್‌ ಪ್ರಕಾರ, ಅವರ ಮಾಸಿಕ ವೇತನ 43,000 ರೂಪಾಯಿ ಆಗಿದ್ದರೆ, 21,970 ರೂಪಾಯಿ ತುಟ್ಟಿಭತ್ಯೆ ಮತ್ತು 20,000 ರೂ. ವಿಶೇಷ ವೇತನ ಕೊಡುವುದಾಗಿ ಹೇಳಲಾಗಿದೆ. ಇದರ ಹೊರತಾಗಿ 20,400 ರೂಪಾಯಿ ಎಚ್‌ಆರ್‌ಎ, ಸ್ಪೆಷಲ್‌ ಎಚ್‌ಆರ್‌ಎ 8,000 ರೂಪಾಯಿ, ರೂ.60,000 ವಿಶೇಷ ಭತ್ಯೆಯನ್ನು ಕೂಡಾ ಆಫರ್‌ ಮಾಡಲಾಗಿದೆ.

ಈ ಸಿಮೆಂಟ್‌ ಕಂಪನಿ ಯಾರದ್ದು?

ಇಂಡಿಯಾ ಸಿಮೆಂಟ್ಸ್ ಕಂಪನಿಯು ಎನ್ ಶ್ರೀನಿವಾಸನ್ ಒಡೆತನದ ಕಂಪನಿಯಾಗಿದೆ. ಗಮನಾರ್ಹ ಅಂಶವೆಂದರೆ, ಐಪಿಎಲ್‌ನಲ್ಲಿ ಎಂಎಸ್ ಧೋನಿ ಆಡುವ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯ ಮಾಲೀಕ ಕೂಡಾ ಇವರೇ. ಈ ಆಫರ್‌ ಲೆಟರ್‌ ಹೊರಬಂದ ವರ್ಷವೇ ಮಾಹಿಯವರನ್ನು 8.82 ಕೋಟಿ ರೂಪಾಯಿಗೆ ಸಿಎಸ್‌ಕೆ ಉಳಿಸಿಕೊಂಡಿದೆ.

ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡ ಭಾಗಿಯಾದ ಪ್ರತಿ ವರ್ಷವೂ ಧೋನಿ ಸಿಎಸ್‌ಕೆ ತಂಡದಲ್ಲಿಯೇ ಆಡುತ್ತಿದ್ದಾರೆ. ಐಪಿಎಲ್‌ನಿಂದ ಬ್ಯಾನ್‌ ಆದ ಎರಡು ವರ್ಷ ಮಾತ್ರ ಬೇರೆ ತಂಡದಲ್ಲಿ ಆಡಿದ್ದರು. ಈ ವರ್ಷ ಅಂತ್ಯಗೊಂಡ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಚಾಂಪಿಯನ್‌ ಆಗುವತ್ತ ಮಾಹಿ ಮುನ್ನಡೆಸಿದ್ದರು. ಅಲ್ಲದೆ ನಿವೃತ್ತಿ ಸದ್ಯಕ್ಕಿಲ್ಲ ಎಂಬುದಾಗಿ ಹೇಳಿದ್ದರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ