Virender Sehwag: ಆದಿಪುರುಷ್ ನೋಡಿದ್ಮೇಲೆ ಗೊತ್ತಾಯ್ತು ಕಟ್ಟಪ್ಪ, ಬಾಹುಬಲಿಯನ್ನು ಕೊಂದಿದ್ದು ಯಾಕೆ ಅಂತ; ಸೆಹ್ವಾಗ್ ಫನ್ನಿ ಟ್ವೀಟ್ ವೈರಲ್
Jun 25, 2023 03:46 PM IST
ಆದಿಪುರುಷ್ ಚಿತ್ರ ವೀಕ್ಷಿಸಿದ ಬಳಿಕ ಸೆಹ್ವಾಗ್ ಪ್ರತಿಕ್ರಿಯೆ
- ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ವೀಕ್ಷಿಸಿರುವ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಮತ್ತು ಬಾಲಿವುಡ್ ನಟಿ ಕೃತಿ ಸನನ್ (Kriti Sanon) ಅಭಿನಯದ ಓಂ ರಾತ್ (Om Raut) ಅವರ ನಿರ್ದೇಶನದ ರಾಮಾಯಣ ಮಹಾಕಾವ್ಯ ಆಧರಿಸಿ ನಿರ್ಮಿಸಲಾಗಿರುವ 'ಆದಿಪುರುಷ್' ಚಿತ್ರವು (Adipurush) ಇದೇ ತಿಂಗಳ 16ರಂದು ಬಿಡುಗಡೆಯಾಗಿದೆ. ಅಂದಿನಿಂದಲೂ ವಿವಾದಗಳ ಕೇಂದ್ರ ಬಿಂದುವಾಗಿದೆ. ನಾನಾ ರೀತಿಯಲ್ಲಿ ಟೀಕೆಗಳು ಬರುತ್ತಿವೆ.
ರಾಮಾಯಣವನ್ನು ಹೊಸ ರೀತಿಯಲ್ಲಿ ತೋರಿಸಲಾಗಿದೆ ಎಂದು ಕೆಲವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೆ, ಕೆಲವರು ಆದಿಪುರುಷ ಚಿತ್ರದ ಹೆಸರಿನ ಮೂಲಕ ರಾಮಾಯಣಕ್ಕೆ ಮಸಿ ಬಳಿಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಿಂಚಿತ್ತೂ ತಿಳುವಳಿಕೆಯಿಲ್ಲದೆ ಈ ಸಿನಿಮಾ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.
ಸಿನಿಮಾ ಬಿಡುಗಡೆ ಆದಾಗಿನಿಂದಲೂ ಸಿನಿಮಾ ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರವರೆಗೂ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಆದರೆ ಈವರೆಗೂ ಬಂದಿರುವ ಯಾವುದೇ ರಾಮಾಯಣ ಕೃತಿಗೂ ಇದಕ್ಕೂ ಹೋಲಿಕೆ ಇಲ್ಲ ಎಂಬುದು ಹಲವರ ಅಭಿಪ್ರಾಯ. ಮತ್ತೊಂದೆಡೆ ವಿವಾದದಿಂದ ಹನುಮಂತನ ಸಂಭಾಷಣೆ ಬದಲಿಸಲಾಗಿದೆ ಎಂದು ವರದಿಯಾಗಿದೆ.
ಈ ಸಿನಿಮಾದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ನಿರ್ವಹಿಸಿದ ರಾವಣನ ಪಾತ್ರಕ್ಕೆ ಹೆಚ್ಚು ನೆಗಟಿವ್ ಪ್ರತಿಕ್ರಿಯೆಗಳು ಬರುತ್ತಿವೆ. ಇದೀಗ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ (Virender Sehwag), ಈ ಚಿತ್ರವನ್ನು ವೀಕ್ಷಿಸಿ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಸೆಹ್ವಾಗ್ ಫನ್ನಿಯಾಗಿ ಟ್ವೀಟ್ ಮಾಡಿರುವುದರ ಜೊತೆಗೆ ವ್ಯಂಗ್ಯವಾಡಿದ್ದಾರೆ. ಕೊನೆಯಲ್ಲಿ ಸ್ಮೈಲಿ ಎಮೋಜಿಯನ್ನೂ ಬಳಸಿದ್ದಾರೆ.
ಟ್ವೀಟ್ನಲ್ಲಿ ಏನಿದೆ?
ಸೆಹ್ವಾಗ್ ಇಂದು (ಜೂನ್ 25) 10.22ಕ್ಕೆ ಟ್ವೀಟ್ ಮಾಡಿದ್ದು, 'ಆದಿಪುರುಷ್ ಚಿತ್ರ ನೋಡಿದ ನಂತರ, ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂದು ನನಗೆ ಅರ್ಥವಾಯಿತು ಎಂದು ಪೋಸ್ಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ನೆಟಿಜನ್ಸ್ ವಿಭಿನ್ನ ಪ್ರತಿಕ್ರಿಯೆ ನೀಡುವ ಮೂಲಕ ಮನರಂಜನಾ ವಸ್ತುವಾಗಿ ಮಾರ್ಪಾಡಿಸಿದ್ದಾರೆ.
ಸೆಹ್ವಾಗ್ ವಿರುದ್ಧ ಪ್ರಭಾಸ್ ಅಭಿಮಾನಿಗಳು ಕಿಡಿಕಾರಿದ್ದರೆ, ಕೆಲವರು ಇನ್ನೂ ಕೆಲವರು ನಿಜ, ಸಿನಿಮಾವನ್ನು ಇನ್ನೂ ಅದ್ಭುತವಾಗಿ ತೆಗೆಯಬಹುದಿತ್ತು ಎಂದು ಬೆಂಬಲಿಸಿದ್ದಾರೆ. ಎನ್ಟಿಆರ್, ಮಹೇಶ್ ಬಾಬು, ಅಲ್ಲು ಅರ್ಜುನ್, ಪವನ್ ಕಲ್ಯಾಣ್.. ಹೀಗೆ ತೆಲುಗು ನಟರ ಅಭಿಮಾನಿಗಳು ಸೆಹ್ವಾಗ್ ಟ್ವೀಟ್‌ಗೆ ಪ್ರತಿಕ್ರಿಯಿಸಿ, ನಮ್ಮ ಹೀರೋನೇ ಗ್ರೇಟ್ ಎಂದು ಬರೆಯುತ್ತಿದ್ದಾರೆ.
ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ
ಸುಮಾರು 500 ಕೋಟಿ ರೂಪಾಯಿ ಅದ್ಧೂರಿ ಬಜೆಟ್ನ ಈ ಚಿತ್ರ ಬಿಡುಗಡೆಯಾಗಿ ಟೀಕೆ ವ್ಯಕ್ತವಾದ ನಂತರ, ಓಂ ರಾವುತ್, ಇದು ರಾಮಾಯಣ ಅಲ್ಲ. ನಾವು ಆ ಕಥೆಯಿಂದ ಸ್ಫೂರ್ತಿ ಪಡೆದಿದ್ದೇವೆ ಎಂದು ಪ್ರತಿಕ್ರಿಯಿಸಿದ್ದರು. ತೀವ್ರ ಟ್ರೋಲ್ ಉಂಟಾದ ಪರಿಣಾಮ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಸದ್ದು ಮಾಡಲಿಲ್ಲ.
ವಿಪರೀತ ನೆಗೆಟಿವ್ ಟಾಕ್ ಎದುರಾದ ಪರಿಣಾಮ ಚಿತ್ರಮಂದಿರಕ್ಕೆ ಬಂದ ಮೊದಲ 3 ದಿನದಲ್ಲಿ ‘ಆದಿಪುರುಷ್’ ತನ್ನ ಬಜೆಟ್ನ ಶೇ 60ರಷ್ಟು ಹಿಂಪಡೆಯುವಲ್ಲಿ ಯಶಸ್ಸು ಕಂಡಿದೆ. ‘ಬಾಹುಬಲಿ’ ಸಿನಿಮಾದ ನಂತರ ಪ್ರಭಾಸ್, ವಿಶ್ವವ್ಯಾಪಿ ಜನಮನ್ನಣೆ ಪಡೆದಿದ್ದರು. ಆದರೆ ಅದನ್ನು ಉಳಿಸಿಕೊಳ್ಳುವಲ್ಲಿ ಪ್ರಭಾಸ್ ವಿಫಲವಾಗುತ್ತಿದ್ದಾರೆ. 'ಬಾಹುಬಲಿ' ನಂತರ 'ಸಾಹೋ', 'ರಾಧೆ ಶ್ಯಾಮ್' ಮತ್ತು 'ಆದಿಪುರುಷ್' ಚಿತ್ರಗಳು ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿವೆ.