logo
ಕನ್ನಡ ಸುದ್ದಿ  /  ಕ್ರೀಡೆ  /  Asia Cup: ಬಿಸಿಸಿಐ ನಿರ್ಧಾರವೇ ನಮ್ಮ ನಿರ್ಧಾರ; ಏಷ್ಯಾಕಪ್ ವಿವಾದ ಕುರಿತು ಭಾರತಕ್ಕೆ ಶ್ರೀಲಂಕಾ ಬೆಂಬಲ

Asia Cup: ಬಿಸಿಸಿಐ ನಿರ್ಧಾರವೇ ನಮ್ಮ ನಿರ್ಧಾರ; ಏಷ್ಯಾಕಪ್ ವಿವಾದ ಕುರಿತು ಭಾರತಕ್ಕೆ ಶ್ರೀಲಂಕಾ ಬೆಂಬಲ

HT Sports Desk HT Kannada

May 31, 2023 07:00 AM IST

google News

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಪಾಕಿಸ್ತಾನದ ನಾಯಕ ಬಾಬರ್ ಅಜಮ್

    • Asia Cup controversy: ಶ್ರೀಲಂಕಾ ಕ್ರಿಕೆಟ್‌ ಮಂಡಳಿಯು ಏಷ್ಯಾಕಪ್‌ ಅನ್ನು ಆಯೋಜಿಸಲು ಸಿದ್ಧವಾಗಿದೆ. ಈ ಬಗೆಗಿನ ಅಂತಿಮ ನಿರ್ಧಾರ ಎಸಿಸಿಗೆ ಬಿಟ್ಟದ್ದು. ನಾವು ಬಿಸಿಸಿಐ ನಿರ್ಧಾರವನ್ನು ಬೆಂಬಲಿಸುತ್ತೇವೆ ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ತಿಳಿಸಿದೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಪಾಕಿಸ್ತಾನದ ನಾಯಕ ಬಾಬರ್ ಅಜಮ್
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಪಾಕಿಸ್ತಾನದ ನಾಯಕ ಬಾಬರ್ ಅಜಮ್ (REUTERS/File)

ಈ ವರ್ಷ ನಡೆಯಲಿರುವ ಏಷ್ಯಾಕಪ್ ಆತಿಥ್ಯ ಕುರಿತ ಗೊಂದಲ ಇನ್ನೂ ಬಗೆಹರಿದಿಲ್ಲ. ಈ ನಡುವೆ ಶ್ರೀಲಂಕಾದ ಕ್ರಿಕೆಟ್ ಮಂಡಳಿಯು (Sri Lanka Cricket - SLC) ಮುಂಬರುವ ಏಷ್ಯಾಕಪ್‌ಗೆ (Asia Cup) ಸಂಬಂಧಿಸಿದಂತೆ ಮಹತ್ವದ ಹೇಳಿಕೆ ನೀಡಿದೆ. ದ್ವೀಪ ರಾಷ್ಟ್ರವು ಮಹತ್ವದ ಟೂರ್ನಿಯನ್ನು ಆಯೋಜಿಸಲು ಸಿದ್ಧವಾಗಿದೆ ಎಂದು ಹೇಳಿದೆ.

ಎಸಿಸಿ (ಏಷ್ಯ ಕ್ರಿಕೆಟ್‌ ಮಂಡಳಿ) ಸಭೆ ನಡೆಯಲಿರುವ ಒಂದು ದಿನ ಮುಂಚಿತವಾಗಿ ಈ ಬೆಳವಣಿಗೆ ನಡೆದಿದೆ. ಹೀಗಾಗಿ ಇಂದು (ಬುಧವಾರ) ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಸದ್ಯದ ಪ್ರಕಾರ, ಏಷ್ಯಾಕಪ್ ಪಾಕಿಸ್ತಾನದಲ್ಲಿ ನಡೆಯಲಿದೆ. ಭದ್ರತೆಯ ದೃಷ್ಟಿಯಿಂದ ಭಾರತವು ನೆರೆಯ ದೇಶಕ್ಕೆ ತೆರಳುವುದಿಲ್ಲ ಎಂದು ಈ ಹಿಂದೆಯೇ ಬಿಸಿಸಿಐ ಸ್ಪಷ್ಟಪಡಿಸಿದೆ. ವಿಶ್ವದ ಶ್ರೀಮಂತ ಕ್ರಿಕೆಟ್‌ ಮಂಡಳಿಯ ನಿಲುವಿಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಹಾಗೂ ಅಲ್ಲಿನ ಮಾಜಿ ಕ್ರಿಕೆಟಿಗರಿಂದ ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಭಾರತವೇನಾದರೂ ಏಷ್ಯಾಕಪ್‌ನಲ್ಲಿ ಭಾಗಿಯಾಗಲು ಪಾಕ್‌ಗೆ ತೆರಳದಿದ್ದರೆ, ಆ ಬಳಿಕ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ವರದಿಗಳ ಪ್ರಕಾರ, ಪಿಸಿಬಿಯು ಹೈಬ್ರಿಡ್ ಮಾದರಿಯನ್ನು ಸಹ ಸೂಚಿಸಿದೆ. ಅದರ ಪ್ರಕಾರ, ಭಾರತವು ತನ್ನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ(ಪಾಕಿಸ್ತಾನದ ಹೊರಗೆ) ಆಡಬಹುದು. ಇದೇ ವೇಳೆ ಉಳಿದ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಬಹುದು. ಆದರೆ, ಭಾರತ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಸಂಪೂರ್ಣ ಟೂರ್ನಿಯನ್ನು ಪಾಕಿಸ್ಥಾನದಿಂದ ಸ್ಥಳಾಂತರಿಸುವಂತೆ ಬಿಸಿಸಿಐ ಒತ್ತಾಯಿಸಿದೆ.

ಇತ್ತ ಭಾರತ ಮತ್ತು ಪಾಕ್‌ ನಡುವೆ ಕೋಳಿ ಜಗಳ ನಡೆಯುತ್ತಿರುವ ಬೆನ್ನಲ್ಲೇ, ಶ್ರೀಲಂಕಾ ಕ್ರಿಕೆಟ್‌ ಮಂಡಳಿಯ ಉನ್ನತ ಅಧಿಕಾರಿಯೊಬ್ಬರು ಸೋಮವಾರ ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಕ್ರಿಕ್‌ಬಜ್ ಜೊತೆಗೆ ಮಾತನಾಡಿರುವ ಅವರು, “ಶ್ರೀಲಂಕಾ ಕ್ರಿಕೆಟ್‌ ಮಂಡಳಿಯು ಏಷ್ಯಾಕಪ್‌ ಅನ್ನು ಆಯೋಜಿಸಲು ಸಿದ್ಧವಾಗಿದೆ. ಈಗ ಈ ಬಗೆಗಿನ ಅಂತಿಮ ನಿರ್ಧಾರವು ಎಸಿಸಿಗೆ ಬಿಟ್ಟದ್ದು. ನಾವು ಬಿಸಿಸಿಐ ನಿರ್ಧಾರವನ್ನು ಬೆಂಬಲಿಸುತ್ತೇವೆ” ಎಂದು ಅಧಿಕಾರಿ ಹೇಳಿದ್ದಾರೆ. ಇದೇ ವೇಳೆ ಪಿಸಿಬಿಗೆ ಇತರ ಯಾವುದೇ ಎಸಿಸಿ ಸದಸ್ಯರ ಬೆಂಬಲ ಸಿಕ್ಕಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ನಡುವೆ ಈ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಪಾಕ್‌ ತಂಡದ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಐಸಿಸಿಯ ಹಿರಿಯ ಅಧಿಕಾರಿಗಳು ಪಾಕಿಸ್ತಾನಕ್ಕೆ ತೆರಳಿದ್ದಾರೆ.

ಏಷ್ಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರೂ ಆಗಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು, ಈ ವಾರ ಏಷ್ಯಾಕಪ್ ದಿನಾಂಕ ಮತ್ತು ಆತಿಥ್ಯ ಸ್ಥಳವನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ. ಅಕ್ಟೋಬರ್ ಹಾಗೂ ನವೆಂಬರ್‌ ತಿಂಗಳಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನ ವೇಳಾಪಟ್ಟಿಯನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಪಂದ್ಯದ ಬಳಿಕ ಪ್ರಕಟಿಸಲಾಗುತ್ತದೆ. ಡಬ್ಲ್ಯೂಟಿಸಿ ಫೈನಲ್‌ ಪಂದ್ಯವು ಜೂನ್ 7ರಿಂದ ಲಂಡನ್‌ನಲ್ಲಿ ನಡೆಯಲಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ