ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಕೈ ಹಿಡಿದ ವೆಂಕಟ್ ದತ್ತಾ ಸಾಯಿ; ಉದಯಪುರ ವಿವಾಹದ ಮೊದಲ ಫೋಟೋ ಇಲ್ಲಿದೆ
Dec 23, 2024 02:12 PM IST
ಪಿವಿ ಸಿಂಧು ಕೈ ಹಿಡಿದ ವೆಂಕಟ್ ದತ್ತಾ ಸಾಯಿ; ಉದಯಪುರ ವಿವಾಹದ ಮೊದಲ ಫೋಟೋ ಇಲ್ಲಿದೆ
- ಉದಯಪುರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಮತ್ತು ವೆಂಕಟ್ ದತ್ತಾ ಮದುವೆಯಾಗಿದ್ದಾರೆ. ಅದ್ಧೂರಿ ಕಾರ್ಯಕ್ರಮದಲ್ಲಿ ನವಜೋಡಿಯ ವಿವಾಹದ ಮೊದಲ ಫೋಟೋ ವೈರಲ್ ಆಗಿದೆ.
ಒಲಿಂಪಿಕ್ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಮತ್ತು ಉದ್ಯಮಿ ವೆಂಕಟ್ ದತ್ತ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿಸೆಂಬರ್ 22ರಂದು ರಾಜಸ್ಥಾನದ ಉದಯಪುರದಲ್ಲಿ ನಡೆದ ಸುಂದರ ವಿವಾಹ ಸಮಾರಂಭದಲ್ಲಿ ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭಾಗಿಯಾಗಿ, ನವದಂಪತಿಗೆ ಶುಭಹಾರೈಸಿದ್ದಾರೆ. ಸಚಿವರು ಸ್ಟಾರ್ ದಂಪತಿಯ ಮೊದಲ ಫೋಟೋವನ್ನು ಹಂಚಿಕೊಂಡಿದ್ದಾರೆ.
ನವಜೋಡಿಯು ಸಾಂಪ್ರದಾಯಿಕ ಮದುವೆಯ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಮದುವೆಯ ಮೊದಲ ಚಿತ್ರವನ್ನು ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, “ನಿನ್ನೆ ಸಂಜೆ ಉದಯಪುರದಲ್ಲಿ ವೆಂಕಟ ದತ್ತ ಸಾಯಿ ಅವರೊಂದಿಗೆ ನಮ್ಮ ಬ್ಯಾಡ್ಮಿಂಟನ್ ಚಾಂಪಿಯನ್ ಪಿವಿ ಸಿಂಧು ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕೆ ಸಂತೋಷವಾಯಿತು. ದಂಪತಿಯ ಹೊಸ ಜೀವನಕ್ಕೆ ನನ್ನ ಶುಭಾಶಯ ಮತ್ತು ಆಶೀರ್ವಾದವನ್ನು ತಿಳಿಸಿದ್ದೇನೆ,” ಎಂದು ಬರೆದುಕೊಂಡಿದ್ದಾರೆ.
ಸಿಂಧು ಮತ್ತು ವೆಂಕಟ್ ದತ್ತಾ ಕುಟುಂಬಗಳು ದೀರ್ಘಕಾಲದಿಂದ ಆಪ್ತ ಸ್ನೇಹಿತರಾಗಿದ್ದು, ಇಬ್ಬರ ನಡುವೆ ಆತ್ಮೀಯ ಬಂಧ ಬೆಸೆಯಲು ಮುನ್ನುಡಿಯಾಗಿದೆ. ಈ ಬಗ್ಗೆ ಮದುವೆಗೂ ಮುಂಚೆ ದಂಪತಿ ಹೇಳಿಕೊಂಡಿದ್ದಾರೆ. ಸಿಂಧು ಈ ವರ್ಷ ಮದುವೆಯಾಗಲು ನಿರ್ಧರಿಸಿದರು.
“ಪಿವಿ ಸಿಂಧುಗೆ ಇದು ಸೂಕ್ತ ಸಮಯವಾಗಿತ್ತು. ಒಲಿಂಪಿಕ್ಸ್ ನಂತರ ಅವರು ಸ್ಥಿರತೆಯನ್ನು ಕಂಡುಕೊಳ್ಳಲು ಮತ್ತು ತಮ್ಮ ಪ್ರಯಾಣದ ಮುಂದಿನ ಅಧ್ಯಾಯದತ್ತ ಗಮನ ಹರಿಸಲು ಬಯಸಿದ್ದರು” ಎಂದು ದತ್ತಾ ಹೇಳಿದರು. “ಇದು ಸರಿಯಾದ ಹೆಜ್ಜೆ ಎಂದು ನಮ್ಮಿಬ್ಬರಿಗೂ ತಿಳಿದಿತ್ತು. ಏಕೆಂದರೆ ಇದು ಆ ಕ್ಷಣದ ಬಗೆಗಿನ ಯೋಚನೆಯಲ್ಲ. ಜೊತೆಯಾಗಿ ಭವಿಷ್ಯವನ್ನು ರೂಪಿಸುವ ಬಗ್ಗೆ” ಎಂದು ಅವರು ಹೇಳಿದರು.
ಮದುವೆ ಫೋಟೋ
ಅಧ್ಧೂರಿ ಕಾರ್ಯಕ್ರಮ, ಸೀಮಿತ ಅತಿಥಿಗಳು
ವಿವಾಹ ಕಾರ್ಯಕ್ರಮದಲ್ಲಿ ಹೆಚ್ಚು ಜನರಿಗೆ ಆಹ್ವಾನ ಇರಲಿಲ್ಲ. ಆತ್ಮೀಯರು, ಹತ್ತಿರದ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಂದೆ ಕುಟುಂಬವು ಉದಯಪುರದಿಂದ ಹೈದರಾಬಾದ್‌ಗೆ ಮರಳಿ ವಿವಾಹ ಆರತಕ್ಷತೆಯಲ್ಲಿ ಭಾಗಿಯಾಗಲಿದೆ. ಆರತಕ್ಷತೆ ಕಾರ್ಯಕ್ರಮಕ್ಕೆ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿದ್ದಾರೆ. ಇದರ ಜೊತೆಗೆ ಅಮಿತ್ ಶಾ, ಶಿವರಾಜ್ ಸಿಂಗ್ ಚೌಹಾಣ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಸೇರಿದಂತೆ ಹಲವು ರಾಜಕೀಯ ಗಣ್ಯರು ಭಾಗವಹಿಸುವ ಸಾಧ್ಯತೆ ಇದೆ. ಹೀಗಾಗಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುವ ನಿರೀಕ್ಷೆ ಇದೆ.
“ನಾವಿಬ್ಬರೂ ಹಬ್ಬಗಳನ್ನು ಆಚರಿಸಲು ಇಷ್ಟಪಡುತ್ತೇವೆ. ಕುಟುಂಬ ಸಂಪ್ರದಾಯಗಳು ಕೂಡಾ ನಮಗೆ ಬಹಳ ಮುಖ್ಯ. ಮುಂಬರುವ ವರ್ಷಗಳಲ್ಲಿ ನಾವು ಈ ಸಂಪ್ರದಾಯಗಳನ್ನು ತುಂಬಾ ಸಂತೋಷದಿಂದ ಮುಂದುವರಿಸುತ್ತೇವೆ” ಎಂದು ಸಿಂಧು ದಂಪತಿ ಹೇಳಿಕೊಂಡಿದ್ದಾರೆ.
ಭಾರತ ತಂಡದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮದುವೆಯಾದ ಹೋಟೆಲ್ನಲ್ಲೇ ಪಿವಿ ಸಿಂಧು ವಿವಾಹವಾಗಲಿದ್ದಾರೆ ಎಂಬುದು ವಿಶೇಷ. ಉದಯಪುರದ ಉದಯ್ ಸಾಗರ್ ಸರೋವರದ ನಡುವಿನ ಪಂಚತಾರಾ ರಾಫೆಲ್ಸ್ ಹೋಟೆಲ್ನಲ್ಲಿ ಮದುವೆ ಕಾರ್ಯಕ್ರಮ ನಡೆದಿದೆ ಎಂದು ವರದಿಯಾಗಿದೆ.
ದಂಪತಿಗಳು ಡಿಸೆಂಬರ್ 23ರಂದು ಉದಯಪುರದಿಂದ ಹೊರಡಲಿದ್ದಾರೆ. ಡಿಸೆಂಬರ್ 24 ರಂದು, ನಾಳೆ ಹೈದರಾಬಾದ್‌ನಲ್ಲಿ ಆರತಕ್ಷತೆ ಆಯೋಜಿಸಲಾಗಿದೆ.