ಪ್ರೊ ಕಬಡ್ಡಿಯಲ್ಲಿ ಜೈಪುರ ವಿರುದ್ಧ ಗೆದ್ದು ಚೊಚ್ಚಲ ಫೈನಲ್‌ಗೇರಿದ ಹರಿಯಾಣ; ಪ್ರಶಸ್ತಿ ಸುತ್ತಿನಲ್ಲಿ ಪುಣೇರಿ ಎದುರು ಫೈಟ್ !
Feb 28, 2024 11:16 PM IST
ಸೆಮಿಫೈನಲ್ನಲ್ಲಿ ಜೈಪುರ ವಿರುದ್ಧ ಚೊಚ್ಚಲ ಫೈನಲ್‌ಗೇರಿದ ಹರಿಯಾಣ
- Pro Kabaddi League 10 Semifinal: ಪ್ರೊ ಕಬಡ್ಡಿ ಲೀಗ್ - 10ನೇ ಆವೃತ್ತಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್ ಗೆದ್ದು ಫೈನಲ್ ಪ್ರವೇಶಿಸಿದೆ.
ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ಗೆ ಸೋಲುಣಿಸಿದ ಹರಿಯಾಣ ಸ್ಟೀಲರ್ಸ್ ಪ್ರೊ ಕಬಡ್ಡಿ ಲೀಗ್ ಎರಡನೇ ಸೆಮಿಫೈನಲ್ನಲ್ಲಿ ಗೆದ್ದು ಎರಡನೇ ತಂಡವಾಗಿ ಫೈನಲ್ ಪ್ರವೇಶಿಸಿದೆ. ಮೊದಲ ಸೆಮೀಸ್ನಲ್ಲಿ ಜಯಿಸಿ ಪ್ರಶಸ್ತಿ ಸುತ್ತಿಗೇರಿದ ಪುಣೇರಿ ಪಲ್ಟನ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. 2ನೇ ಸೆಮೀಸ್ನಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ದಿಗ್ವಿಜಯ ಸಾಧಿಸಿದ ಹರಿಯಾಣ, ಕಬಡ್ಡಿ ಲೀಗ್ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಶಸ್ತಿಗೆ ಪ್ರವೇಶಿಸಿದೆ.
27-31 ಅಂಕಗಳಿಂದ ಗೆದ್ದ ಹರಿಯಾಣ
ವಿನಯ್ ಮತ್ತು ಶಿವಂ ಪರಾಟೆ ಅವರ ಕ್ಲಾಸಿಕ್ ರೈಡಿಂಗ್ ನೆರವಿನಿಂದ ಜೈಪುರ ವಿರುದ್ಧ ಹರಿಯಾಣ 27-31 ಅಂಕಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದೇ ವೇಳೆ ಟ್ಯಾಕಲ್‌ನಲ್ಲಿ 4 ಅಂಕಗಳ ಕಾಣಿಕೆ ನೀಡಿದ ಆಶೀಶ್, ಗೆಲುವಿನಲ್ಲಿ ಪಾತ್ರವಹಿಸಿದರು. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಹರಿಯಾಣ, ಕೊನೆಯವರೆಗೂ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಹರಿಯಾಣದ ಅದ್ಭುತ ಆಟದ ಮುಂದೆ ಹಿನ್ನಡೆ ಕಂಡ ಜೈಪುರ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಲು ವಿಫಲವಾಯಿತು.
ಅತ್ತ ಅರ್ಜುನ್ ದೇಶವಾಲ್ 14 ಅಂಕ, ರೆಜಾ ಮಿರಬಗೇರಿ 4, ಭವಾನಿ 3 ಅಂಕ ಪಡೆದಿದ್ದಾರೆ. ಆದರೆ ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಹೊರ ಬರಲಿಲ್ಲ. ಆರಂಭದಲ್ಲಿ ಹರಿಯಾಣ ಮುನ್ನಡೆ ಪಡೆದಿತ್ತು. ಹೀಗಾಗಿ 7-13 ಅಂಕಗಳಿಂದ ಮುನ್ನಡೆಯಲ್ಲಿತ್ತು. ಈ ವೇಳೆ ಜೈಪುರ ಆಲೌಟ್ ಆಗಿತ್ತು. ಎದುರಾಳಿಗೆ ಪೈಪೋಟಿ ನೀಡಿತಾದರೂ ಅವರು ಬಳಿಕ ಮುನ್ನಡೆ ಕಾಯ್ದುಕೊಳ್ಳಲು ಸಾಧ್ಯವಾಗಲೇ ಇಲ್ಲ. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿ ಸೆಮೀಸ್ನಲ್ಲಿ ಮುಗ್ಗರಿಸಿತು.
ಮಾರ್ಚ್ 1ರಂದು ಫೈನಲ್
ಫೈನಲ್ ಪ್ರವೇಶಿಸಿದ ಹರಿಯಾಣ ತಂಡವು ಲೀಗ್ ಹಂತದಲ್ಲಿ ಆಡಿದ 22 ಪಂದ್ಯಗಳಿಂದ 70 ಅಂಕ ಗಳಿಸಿತು. ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದ ಹರಿಯಾಣ, 2ನೇ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ 25-42 ಅಂಕಗಳಿಂದ ಗೆದ್ದು ಸೆಮಿಫೈನಲ್ಗೆ ಅರ್ಹತೆ ಪಡೆದಿತ್ತು. ಇದೀಗ ಈ ತಂಡವು ಫೈನಲ್ನಲ್ಲಿ ಪುಣೇರಿ ಪಲ್ಟನ್ಸ್ ತಂಡವನ್ನು ಎದುರಿಸಲಿದೆ. ಫೈನಲ್ ಪಂದ್ಯವು ಮಾರ್ಚ್ 1ರಂದು ಹೈದರಾಬಾದ್ನ ಗಚ್ಚಿಬೋಲಿ ಮೈದಾನದಲ್ಲಿ ನಡೆಯಲಿದೆ.
ಯಾವ ತಂಡಗಳು ಇನ್ನೂ ಚಾಂಪಿಯನ್ ಆಗಿಲ್ಲ
ಗುಜರಾತ್ ಜೈಂಟ್ಸ್
ಹರಿಯಾಣ ಸ್ಟೀಲರ್ಸ್
ಪುಣೇರಿ ಪಲ್ಟನ್
ತಮಿಳು ತಲೈವಾಸ್
ತೆಲುಗು ಟೈಟಾನ್ಸ್
ಯುಪಿ ಯೋಧಾ