ಪಟ್ನಾ ಪಲ್ಟಿ ಹೊಡೆಸಿ ಸತತ 2ನೇ ಬಾರಿ ಪಿಕೆಎಲ್‌ ಫೈನಲ್‌ ಪ್ರವೇಶಿಸಿದ ಪುಣೆರಿ ಪಲ್ಟನ್; ಚೊಚ್ಚಲ ಟ್ರೋಫಿಗೆ ಒಂದೇ ಹೆಜ್ಜೆ
ಕನ್ನಡ ಸುದ್ದಿ  /  ಕ್ರೀಡೆ  /  ಪಟ್ನಾ ಪಲ್ಟಿ ಹೊಡೆಸಿ ಸತತ 2ನೇ ಬಾರಿ ಪಿಕೆಎಲ್‌ ಫೈನಲ್‌ ಪ್ರವೇಶಿಸಿದ ಪುಣೆರಿ ಪಲ್ಟನ್; ಚೊಚ್ಚಲ ಟ್ರೋಫಿಗೆ ಒಂದೇ ಹೆಜ್ಜೆ

ಪಟ್ನಾ ಪಲ್ಟಿ ಹೊಡೆಸಿ ಸತತ 2ನೇ ಬಾರಿ ಪಿಕೆಎಲ್‌ ಫೈನಲ್‌ ಪ್ರವೇಶಿಸಿದ ಪುಣೆರಿ ಪಲ್ಟನ್; ಚೊಚ್ಚಲ ಟ್ರೋಫಿಗೆ ಒಂದೇ ಹೆಜ್ಜೆ

Pro Kabaddi League: ಅಸ್ಲಾಂ ಇನಾಮ್ದಾರ್‌ ಹಾಗೂ ಪಂಕಜ್‌ ಮೋಹಿತೆ ಮಾಸ್ಟರ್‌ ಕ್ಲಾಸ್‌ ರೈಡಿಂಗ್‌ ನೆರವಿಂದ ಪಿಕೆಎಲ್‌ ಸೆಮಿಫೈನಲ್‌ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ವಿರುದ್ಧ ಪುಣೆರಿ ಪಲ್ಟನ್ 37-21 ಅಂಕಗಳ ಅಂತರದಿಂದ ಗೆದ್ದು ಬೀಗಿದೆ. ಆ ಮೂಲಕ ಸತತ ಎರಡನೇ ಬಾರಿಗೆ ಪ್ರೊ ಕಬಡ್ಡಿ ಲೀಗ್‌ ಫೈನಲ್‌ ಪ್ರವೇಶಿಸಿದೆ.

ಸತತ 2ನೇ ಬಾರಿ ಪಿಕೆಎಲ್‌ ಫೈನಲ್‌ ಪ್ರವೇಶಿಸಿದ ಪುಣೇರಿ ಪಲ್ಟನ್
ಸತತ 2ನೇ ಬಾರಿ ಪಿಕೆಎಲ್‌ ಫೈನಲ್‌ ಪ್ರವೇಶಿಸಿದ ಪುಣೇರಿ ಪಲ್ಟನ್

ಪುಣೆರಿ ಪಲ್ಟನ್‌ ತಂಡವು ಪ್ರೊ ಕಬಡ್ಡಿ (Pro Kabaddi League) ಸೀಸನ್‌ 10ರ ಫೈನಲ್‌ ಪ್ರವೇಶಿಸಿದೆ. ಪಟ್ನಾ ಪೈರೇಟ್ಸ್‌ ವಿರುದ್ಧದ (puneri paltan vs patna pirates) ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ತಂಡವು ಮೊದಲ ತಂಡವಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದೆ. ಕಳೆದ ಬಾರಿ ನಡೆದ ಪಿಕೆಎಲ್‌ 9ನೇ ಆವೃತ್ತಿಯಲ್ಲೂ ಫೈನಲ್‌ ಪ್ರವೇಶಿಸಿದ್ದ ಪುಣೆ, ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು. ಇದೀ ಸತತ ಎರಡನೇ ಬಾರಿಗೆ ಫೈನಲ್‌ ಆಡಲು ಸಜ್ಜಾಗಿರುವ ಆರೇಂಜ್‌ ಆರ್ಮಿ, ಚೊಚ್ಚಲ ಕಪ್‌ ಗೆಲುವಿಗೆ ಒಂದು ಹೆಜ್ಜೆ ದೂರದಲ್ಲಿದೆ.

ಅಸ್ಲಾಂ ಇನಾಮ್ದಾರ್‌ ಹಾಗೂ ಪಂಕಜ್‌ ಮೋಹಿತೆ ಮಾಸ್ಟರ್‌ ಕ್ಲಾಸ್‌ ರೈಡಿಂಗ್‌ ನೆರವಿಂದ ಪಟ್ನಾ ವಿರುದ್ಧ ಪುಣೆ 37-21 ಅಂಕಗಳ ಅಂತರದಿಂದ ಗೆದ್ದು ಬೀಗಿದೆ. ಇದೇ ವೇಳೆ ಟ್ಯಾಕಲ್‌ನಲ್ಲಿ ತಂಡಕ್ಕೆ ಭರ್ಜರಿ ಕೊಡುಗೆ ನೀಡಿದ ಮಹಮದ್ರೇಜಾ ಶಾದ್ಲೋಯಿ ಹೈ ಫೈವ್‌ ಪೂರ್ಣಗೊಳಿಸಿದರು. ಆರಂಭದಿಂದಲೂ ಲೀಡಿಂಗ್‌ನಲ್ಲೇ ಸಾಗಿದ ಪುಣೆ, ಕೊನೆಯವರೆಗೂ ಅಂಕಗಳಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿತು.

ಇದನ್ನೂ ಓದಿ | ಪ್ರೊ ಕಬಡ್ಡಿ 2024 ಸೆಮಿಫೈನಲ್; ವೇಳಾಪಟ್ಟಿ, ಅರ್ಹತೆ ಪಡೆದ ತಂಡಗಳು ಹಾಗೂ ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ

ಅತ್ತ ಪಟ್ನಾ ಪರ ಸಚಿನ್‌ 5 ರೈಡ್‌ ಪಾಯಿಂಟ್‌ ಗಳಿಸಿದರೆ, ಮಂಜೀತ್‌ ಮತ್ತು ಸುಧಾಕರ್‌ ತಲಾ 4 ಅಂಕ ಕಲೆ ಹಾಕಿದರು. ಉಳಿದಂತೆ ತಂಡದಿಂದ ಉತ್ತಮ ಪ್ರದರ್ಶನ ಹೊರಬರಲಿಲ್ಲ.

ಎರಡು ಬಾರಿ ಆಲೌಟ್

ಆರಂಭದಲ್ಲಿ ಉಭಯ ತಂಡಗಳು ತಲಾ 5 ಅಂಕಗಳನ್ನು ಗಳಿಸಿದವು. ಆ ಬಳಿಕ ಎರಡೂ ತಂಡಗಳ ಅಂಕಗಳು 8-8ರಲ್ಲಿ ಸಮಬಲಗೊಂಡಿತು. ಆ ಬಳಿಕ ಮುನ್ನಡೆ ಕಾಯ್ದುಕೊಂಡ ಪುಣೆ, ಎಲ್ಲೂ ಹಿಂದೆ ಬೀಳಲಿಲ್ಲ. ಈ ನಡುವೆ ಎರಡು ಬಾರಿ ಎದುರಾಳಿ ತಂಡದ ಕೋರ್ಟ್‌ ಖಾಲಿ ಮಾಡಿ ಹೆಚ್ಚುವರಿ ಆಲೌಟ್‌ ಅಂಕಗಳನ್ನು ತೆಕ್ಕೆಗೆ ಹಾಕಿಕೊಂಡಿತು.

ಇದನ್ನೂ ಓದಿ | ಕೆಲವರಿಗೆ ಟೆಸ್ಟ್ ಕ್ರಿಕೆಟ್ ಆಡುವ ಸಾಮರ್ಥ್ಯವಿಲ್ಲ: ಐಪಿಎಲ್​ಗೆ ಗಮನ ಹರಿಸಿದ ಇಶಾನ್​ ವಿರುದ್ಧ ಸುನಿಲ್ ಗವಾಸ್ಕರ್ ಟೀಕೆ

ಫೈನಲ್‌ ಪ್ರವೇಶಿಸಿದ ಪಲ್ಟನ್ ತಂಡವು ಲೀಗ್ ಹಂತದಲ್ಲಿ ಆಡಿದ 22 ಪಂದ್ಯಗಳಿಂದ 96 ಅಂಕಗಳನ್ನು ಗಳಿಸಿತು. ಒಟ್ಟು 253 ಅಂಕಗಳ ವ್ಯತ್ಯಾಸದೊಂದಿಗೆ ಅಗ್ರ ತಂಡವಾಗಿ ಲೀಗ್‌ ಹಂತವನ್ನು ಮುಗಿಸಿತು. ಹೀಗಾಗಿ ತಂಡವು ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು. ಇದೀಗ ತಂಡವು ಪೈನಲ್‌ ಪ್ರವೇಶಿಸಿದೆ. ಜೈಪುರ ಪಿಂಕ್‌ ಪ್ಯಾಂಥರ್ಸ್‌ ಮತ್ತು ಹರಿಯಾಣ ಸ್ಟೀಲರ್ಸ್‌ ನಡುವೆ ನಡೆಯುವ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ ಫೈನಲ್‌ನಲ್ಲಿ ಆಡಲಿದೆ.

ಕಳೆದ ಆವೃತ್ತಿಯಲ್ಲೂ ಪುಣೆ ಫೈನಲ್‌ ಪ್ರವೇಶಿಸಿತ್ತು. ಆದರೆ, ಫೈನಲ್ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ ಸೋತು ರನ್ನರ್‌ ಅಪ್‌ ಆಗಿತ್ತು.

ಪುಣೆರಿ ಪಲ್ಟನ್ ತಂಡ

ಅಸ್ಲಾಂ ಇನಾಮ್ದಾರ್, ಅಭಿನೇಶ್ ನಟರಾಜನ್, ಸಂಕೇತ್ ಸಾವಂತ್, ಮೋಹಿತ್ ಗೋಯತ್, ಪಂಕಜ್ ಮೋಹಿತೆ, ಗೌರವ್ ಖತ್ರಿ, ಮೊಹಮ್ಮದ್ರೇಜಾ ಶಾದ್ಲೋಯಿ.

ಪಟ್ನಾ ಪೈರೇಟ್ಸ್ ತಂಡ

ಸಚಿನ್, ಮಯೂರ್ ಕದಮ್, ಬಾಬು ಎಂ, ಮಂಜೀತ್, ಸುಧಾಕರ್ ಎಂ, ಕ್ರಿಶನ್, ಅಂಕಿತ್.‌

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.