ಭಾರತದಲ್ಲಿ ಅತಿ ಹೆಚ್ಚು ಸೆರ್ಚ್ ಆದವರಲ್ಲಿ ಕುಸ್ತಿಪಟುವಿಗೆ ಅಗ್ರಸ್ಥಾನ; ವಿರಾಟ್-ರೋಹಿತ್‌ಗಿಲ್ಲ ಸ್ಥಾನ, ಅಗ್ರ 10ರಲ್ಲಿ ಐವರು ಕ್ರೀಡಾಪಟುಗಳು
Dec 11, 2024 10:49 AM IST
ಭಾರತದ ಅತಿ ಹೆಚ್ಚು ಸೆರ್ಚ್ ಆದವರಲ್ಲಿ ಕುಸ್ತಿಪಟುವಿಗೆ ಅಗ್ರಸ್ಥಾನ
- ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸೆರ್ಚ್ ಆದ ವ್ಯಕ್ತಿಗಳ ಪಟ್ಟಿಯಲ್ಲಿ ಕುಸ್ತಿಪಟು ವಿನೀಶ್ ಫೋಗಟ್ ಅಗ್ರಸ್ಥಾನದಲ್ಲಿದ್ದಾರೆ. ಅಗ್ರ 10ರಲ್ಲಿ ಮೂವರು ಕ್ರಿಕೆಟಿಗರಿದ್ದಾರೆ. ಲಕ್ಷ್ಯ ಸೇನ್ 10ನೇ ಸ್ಥಾನದಲ್ಲಿದ್ದಾರೆ.
2024ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಸೆರ್ಚ್ ಆದ (ಹುಡುಕಲ್ಪಟ್ಟ) ಭಾರತದ ಟಾಪ್ 10 ವ್ಯಕ್ತಿಗಳಲ್ಲಿ ಐವರು ಕ್ರೀಡಾಪಟುಗಳು ಸ್ಥಾನ ಪಡೆದಿದ್ದಾರೆ. ಆದರೆ, ಭಾರತದ ಜನಪ್ರಿಯ ಕ್ರೀಡಾಪಟುಗಳಲ್ಲಿ ಹೆಚ್ಚು ಮುನ್ನೆಲೆಯಲ್ಲಿರುವ ಜನಪ್ರಿಯ ಕ್ರಿಕೆಟಿಗರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರಂಥ ಹೆಸರುಗಳು ಇಲ್ಲ. ಇದೇ ವೇಳೆ 2024ರ ಮಹತ್ವದ ಕ್ರೀಡಾ ಈವೆಂಟ್ ಆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಆರು ಅಥ್ಲೀಟ್‌ಗಳು ಕೂಡಾ ಕಾಣಿಸಿಕೊಂಡಿಲ್ಲ. ಪಟ್ಟಿಯಲ್ಲಿ ಕೆಲವೊಂದು ಅಚ್ಚರಿಯ ಹೆಸರುಗಳು ಸೇರಿವೆ.
ಸೆರ್ಚ್ ಎಂಜಿನ್ ಗೂಗಲ್ ಬಿಡುಗಡೆ ಮಾಡಿದ ಫಲಿತಾಂಶಗಳ ಪ್ರಕಾರ, ಕುಸ್ತಿಪಟು ವಿನೇಶ್ ಫೋಗಟ್ ಈ ವರ್ಷ ಭಾರತದ ಹೆಚ್ಚು ಸರ್ಚ್ ಆದ ವ್ಯಕ್ತಿಯಾಗಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೋಗಟ್ ಎದುರಿಸಿದ ಅನರ್ಹತೆಯು ಜಾಗತಿಕ ಮಟ್ಟದಲ್ಲಿ ಸುದ್ದಿಯಾಯ್ತು. ಅವರಿಗೆ ವ್ಯಾಪಕ ಬೆಂಬಲವೂ ಸಿಕ್ಕಿತು. ಒಲಿಂಪಿಕ್ಸ್ ಫೈನಲ್ ತಲುಪಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದ ಕುಸ್ತಿಪಟು, ಪ್ರೇಮನಗರಿಯಲ್ಲಿ ಇತಿಹಾಸ ನಿರ್ಮಿಸಿದರು. ಇನ್ನೇನು ಒಲಿಂಪಿಕ್ ಚಾಂಪಿಯನ್ ಆಗೇಬಿಟ್ಟರು ಎನ್ನುವಷ್ಟರಲ್ಲಿ, ತೂಕ ಪರೀಕ್ಷೆಯಲ್ಲಿ ವಿಫಲವಾದ ಕಾರಣದಿಂದ ಅನರ್ಹಗೊಂಡರು.
ಅನರ್ಹರಾದ ಕೆಲವೇ ದಿನಗಳಲ್ಲಿ ಫೋಗಟ್ ಕುಸ್ತಿಗೆ ವಿದಾಯ ಘೋಷಿಸಿದರು. ಕನಿಷ್ಠ ಬೆಳ್ಳಿ ಪದಕ ನೀಡಬೇಕೆಂದು ಕ್ರೀಡಾ ನ್ಯಾಯಾಲಯಕ್ಕೆ ಮೊಕದ್ದಮೆ ಹೂಡಿದರು. ಅದರಲ್ಲೂ ವಿಫಲರಾದರು. ಆ ಬಳಿಕ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. 2024ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಜುಲಾನಾದಿಂದ ಎಂಎಲ್‌ಎ ಆಗಿ ಚುನಾಯಿತರಾದರು.
ಹಾರ್ದಿಕ್ ಪಾಂಡ್ಯ ಎರಡನೇ ಸ್ಥಾನ
2024ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ನಾಲ್ಕನೇ ವ್ಯಕ್ತಿ ಹಾರ್ದಿಕ್ ಪಾಂಡ್ಯ. ಕ್ರೀಡಾಪಟುಗಳ ಪೈಕಿ ಇವರಿಗೆ ಎರಡನೆಯ ಸ್ಥಾನ ಹಾಗೂ ಕ್ರಿಕೆಟಿಗರ ಪೈಕಿ ಅಗ್ರಸ್ಥಾನ. ಟೀಮ್ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್ ಸ್ಟಾರ್ ಆಲ್‌ರೌಂಡರ್ ಐಪಿಎಲ್ ಸಮಯದಲ್ಲಿ ಗಮನ ಸೆಳೆದಿದ್ದರು. ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಆಯ್ಕೆಯಾಗಿ ಸಾರ್ವಜನಿಕವಾಗಿ ಅಪಾರ ಟೀಕೆ ಎದುರಿಸಿದ್ದರು. ಅಲ್ಲದೆ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಲದೆ ಈ ವರ್ಷವೇ ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್‌ಗೆ ವಿಚ್ಛೇದನವನ್ನು ಘೋಷಿಸಿ ಟ್ರೆಂಡ್ ಆಗಿದ್ದರು.
ಶಶಾಂಕ್ ಸಿಂಗ್‌ಗೆ ಸ್ಥಾನ
ಈ ಪಟ್ಟಿಯಲ್ಲಿ ಅಚ್ಚರಿಯ ಸ್ಥಾನ ಪಡೆದವರು ಶಶಾಂಕ್ ಸಿಂಗ್. ಐಪಿಎಲ್ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್ ತಂಡಕ್ಕೆ ರಿಟೈನ್ ಆದ ಆಟಗಾರ, ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಕ್ರಿಕೆಟಿಗರ ಪೈಕಿ ಇವರಿಗೆ ಎರಡನೇ ಸ್ಥಾನ. ಪಂಜಾಬ್ ತಂಡವು ಶಶಾಂಕ್ ಅವರನ್ನು 5.5 ಕೋಟಿ ರೂ ಕೊಟ್ಟು ಉಳಿಸಿಕೊಂಡಿತು.
ಕ್ರೀಡಾಪಟುಗಳ ಹೊರತಾಗಿ ನಿತೀಶ್ ಕುಮಾರ್ 2ನೇ ಸ್ಥಾನದಲ್ಲಿದ್ದರೆ, ಚಿರಾಗ್ ಪಾಸ್ವಾನ್ 3 ಸ್ಥಾನದಲ್ಲಿದ್ದಾರೆ. ತೆಲುಗು ನಟ ಪವನ್ ಕಲ್ಯಾಣ್ 4, ನಟಿ ಪೂನಂ ಪಾಂಡೆ 7 ಹಾಗೂ ಮುಖೇಶ್ ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್ 8ನೇ ಸ್ಥಾನ ಪಡೆದಿದ್ದಾರೆ.
ಕ್ರಿಕೆಟಿಗ ಅಭಿಷೇಕ್ ಶರ್ಮಾ 2024ರಲ್ಲಿ ಅತಿ ಹೆಚ್ಚು ಹುಡುಕಾಡಲ್ಪಟ್ಟ ಭಾರತದ 9ನೇ ವ್ಯಕ್ತಿ. ಕಳೆದ ಬಾರಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಫೈನಲ್ ತಲುಪುವಲ್ಲಿ 24 ವರ್ಷದ ಆಟಗಾರ ಪ್ರಮುಖ ಪಾತ್ರ ವಹಿಸಿದ್ದಾರೆ. ಆಡಿದ 16 ಪಂದ್ಯಗಳಲ್ಲಿ 204.21ರ ದಾಖಲೆಯ ಸ್ಟ್ರೈಕ್ ರೇಟ್‌ನಲ್ಲಿ 484 ರನ್ ಸಿಡಿಸಿದ್ದರು. ಐಪಿಎಲ್ ಬೆನ್ನಲ್ಲೇ ಟೀಮ್ ಇಂಡಿಯಾ ಪದಾರ್ಪಣೆ ಮಾಡಿ, ಜಿಂಬಾಬ್ವೆ ವಿರುದ್ಧ ಟಿ20 ಪಂದ್ಯವಾಡಿದರು. ಎರಡನೇ ಪಂದ್ಯದಲ್ಲೇ ದಾಖಲೆಯ ಶತಕ ಬಾರಿಸಿ ಮಿಂಚಿದರು.
ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿಯಲ್ಲಿ ಲಕ್ಷ್ಯ ಸೇನ್ 10ನೇ ಸ್ಥಾನದಲ್ಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಲಕ್ಷ್ಯ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದರು. ಆದರೆ ಸೆಮಿಫೈನಲ್‌ನಲ್ಲಿ ಸೋತರು.