logo
ಕನ್ನಡ ಸುದ್ದಿ  /  ಕ್ರೀಡೆ  /  ಚೆಸ್ ಚಾಂಪಿಯನ್‌ಶಿಪ್ ಗೆದ್ದು ಕೋಟ್ಯಧಿಪತಿಯಾದ ಗುಕೇಶ್‌ಗೆ ಭಾರಿ ತೆರಿಗೆ ಹೊರೆ; ಹಣಕಾಸು ಸಚಿವಾಲಯಕ್ಕೆ ಶುಭಾಶಯ ಎಂದ ನೆಟ್ಟಿಗರು

ಚೆಸ್ ಚಾಂಪಿಯನ್‌ಶಿಪ್ ಗೆದ್ದು ಕೋಟ್ಯಧಿಪತಿಯಾದ ಗುಕೇಶ್‌ಗೆ ಭಾರಿ ತೆರಿಗೆ ಹೊರೆ; ಹಣಕಾಸು ಸಚಿವಾಲಯಕ್ಕೆ ಶುಭಾಶಯ ಎಂದ ನೆಟ್ಟಿಗರು

Jayaraj HT Kannada

Dec 17, 2024 02:23 PM IST

google News

ಕೋಟ್ಯಧಿಪತಿ ಗುಕೇಶ್‌ಗೆ ಭಾರಿ ತೆರಿಗೆ ಹೊರೆ; ಹಣಕಾಸು ಸಚಿವಾಲಯಕ್ಕೆ ಶುಭಾಶಯ ಎಂದ ನೆಟ್ಟಿಗರು

    • ಚೆಸ್ ಚಾಂಪಿಯನ್ ಗುಕೇಶ್ ದೊಮ್ಮರಾಜು ತವರಿಗೆ ಮರಳಿದ್ದಾರೆ. ಅಂದಾಜು 11.45 ಕೋಟಿ ರೂ. ಬಹುಮಾನ ಪಡೆಯುವ ಅವರು ಶೇಕಡಾ 42ರವರೆಗೆ ತೆರಿಗೆ ಪಾವತಿಸಬೇಕಾಗುತ್ತದೆ. ಇದರ ಬೆನ್ನಲ್ಲೇ ಸೋಷಿಯಲ್‌ ಮೀಡಿಯಾದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಹಣಕಾಸು ಸಚಿವಾಲಯವನ್ನು ಟ್ರೋಲ್‌ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಹೀಗಿದೆ.
ಕೋಟ್ಯಧಿಪತಿ ಗುಕೇಶ್‌ಗೆ ಭಾರಿ ತೆರಿಗೆ ಹೊರೆ; ಹಣಕಾಸು ಸಚಿವಾಲಯಕ್ಕೆ ಶುಭಾಶಯ ಎಂದ ನೆಟ್ಟಿಗರು
ಕೋಟ್ಯಧಿಪತಿ ಗುಕೇಶ್‌ಗೆ ಭಾರಿ ತೆರಿಗೆ ಹೊರೆ; ಹಣಕಾಸು ಸಚಿವಾಲಯಕ್ಕೆ ಶುಭಾಶಯ ಎಂದ ನೆಟ್ಟಿಗರು (ANI, X)

ನೂತನ ವಿಶ್ವ ಚಾಂಪಿಯನ್ ಗುಕೇಶ್ ದೊಮ್ಮರಾಜು, ಡಿಸೆಂಬರ್‌ 16ರ ಸೋಮವಾರ ಭಾರತಕ್ಕೆ ಮರಳಿದ್ದಾರೆ. ಡಿಸೆಂಬರ್ 12ರಂದು ಸಿಂಗಾಪುರದಲ್ಲಿ ನಡೆದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿದ ಗುಕೇಶ್‌, ಫಿಡೆ ವಿಶ್ವ ಚಾಂಪಿಯನ್‌ಶಿಪ್ ಗೆದ್ದರು. ಆ ಮೂಲಕ ವಿಶ್ವ ಚಾಂಪಿಯನ್‌ ಆದ ವಿಶ್ವದ ಅತ್ಯಂತ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಎನಿಸಿಕೊಂಡರು. ಚಾಂಪಿಯನ್‌ ಆಗುವುದರೊಂದಿಗೆ 18 ವರ್ಷದ ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್, ಕೋಟ್ಯಾಧಿಪತಿಯಾಗಿದ್ದಾರೆ. ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ ಅವರಿಗೆ 11.45 ಕೋಟಿ ರೂ. ಬಹುಮಾನ ನೀಡಿದೆ. ಹಾಗಂತಾ ಈ ಎಲ್ಲಾ ಹಣವನ್ನು ಚೆಸ್ ಗ್ರ್ಯಾಂಡ್ ಮಾಸ್ಟರ್ ಉಳಿಸಿಕೊಳ್ಳುವಂತಿಲ್ಲ. ತನ್ನ ಬಹುಮಾನದ ಮೊತ್ತದ ಮೇಲೆ ಭಾರಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಫಿಡೆ ನಿಯಮಗಳ ಪ್ರಕಾರ, ಪ್ರತಿ ಆಟಗಾರನು ಗೆಲ್ಲುವ ಪ್ರತಿ ಪಂದ್ಯಕ್ಕೆ 200,000 ಡಾಲರ್ (ಅಂದಾಜು 1.68 ಕೋಟಿ ರೂ.) ಬಹುಮಾನ ಪಡೆಯುತ್ತಾರೆ. ಉಳಿದ ಬಹುಮಾನದ ಹಣವನ್ನು ಇಬ್ಬರು ಸ್ಪರ್ಧಿಗಳ ನಡುವೆ ಸಮಾನವಾಗಿ ಹಂಚಲಾಗುತ್ತದೆ. ಭಾರತೀಯ ಗ್ರಾಂಡ್‌ ಮಾಸ್ಟರ್ ಚಾಂಪಿಯನ್‌ಶಿಪ್‌ನಲ್ಲಿ ಮೂರು ಪಂದ್ಯಗಳನ್ನು ಗೆದ್ದಿದ್ದಾರೆ. ಹೀಗಾಗಿ ಅವರು 6 ಲಕ್ಷ ಡಾಲರ್ ಗಳಿಸುವ ಸಾಧ್ಯತೆಯಿದೆ. ಅಂದರೆ ಸರಿಸುಮಾರು 5.04 ಕೋಟಿ ರೂಪಾಯಿ. ಇದರೊಂದಿಗೆ ಗುಕೇಶ್ ಒಟ್ಟು 11.34 ಕೋಟಿ ರೂ. (ಅಂದಾಜು ಮೊತ್ತ) ಬಹುಮಾನ ಪಡೆಯುತ್ತಾರೆ.

ತೆರಿಗೆಯದ್ದೇ ಸಿಂಹಪಾಲು

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 194 ಬಿ, ನಿಯಮ 26ರ ಪ್ರಕಾರ, ಭಾರತೀಯ ಚೆಸ್ ಆಟಗಾರನು ತಮಗೆ ಸಿಕ್ಕ ಬಹುಮಾನದ ಮೊತ್ತದ ಶೇಕಡಾ 39ರಿಂದ 42ರಷ್ಟು ಪ್ರಮಾಣವನ್ನು ತೆರಿಗೆ ಪಾವತಿಸಬೇಕಾಗುತ್ತದೆ.

“ಐಟಿ ಕಾಯ್ದೆಯ ಸೆಕ್ಷನ್ 194 ಬಿ ಮತ್ತು ನಿಯಮ 26ರ ನಿಬಂಧನೆಗಳಡಿ ಡೀಫಾಲ್ಟ್ ಚೌಕಟ್ಟಾಗಿರುವ ಹೊಸ ತೆರಿಗೆ ವಿಧಾನವು ಡಿ ಗುಕೇಶ್‌ಗೆ ಸ್ವಲ್ಪ ರಿಲೀಫ್‌ ನೀಡಬಹುದು. ಹಳೆಯ ತೆರಿಗೆ ರೆಜಿಮ್‌ ಪ್ರಕಾರ 42.744 ಶೇಕಡಾಕ್ಕೆ ಹೋಲಿಸಿದರೆ ಹೊಸ ರೆಜಿಮ್‌ನಲ್ಲಿ ಶೇಕಡಾ 39ರಷ್ಟು ತೆರಿಗೆ ಕಡಿತ ದರವು ಗುಖೇಶ್‌ಗೆ ನೆರವಾಗಬಹುದು” ಎಂದು ಬಿಟಿಜಿ ಅದ್ವೈಯಾ ತೆರಿಗೆ ವಿಭಾಗದ ಮುಖ್ಯಸ್ಥ ಅಮಿತ್ ಬೈದ್ ಹೇಳುತ್ತಾರೆ.

ಸದ್ಯ, ಗುಕೇಶ್ ಪಾವತಿಸಬೇಕಾಗುವ ಬೃಹತ್‌ ಮೊತ್ತದ ತೆರಿಗೆ ವಿಷಯವು ಸಾಮಾಜಿಕ ಮಾಧ್ಯಮದಲ್ಲಿ ಜನರ ಚರ್ಚೆಯ ವಿಷಯವಾಗಿದೆ. ಪಂದ್ಯಾವಳಿಯಲ್ಲಿ ಗಳಿಸಿದ ಬಹುಮಾನ ಹಣದ ಮೇಲೆ ಗುಕೇಶ್ ಪಾವತಿಸಬೇಕಾದ ತೆರಿಗೆ ಮೊತ್ತವನ್ನು ನೋಡಿ ನೆಟ್ಟಿಗರು ಆಘಾತಕ್ಕೊಳಗಾಗಿದ್ದಾರೆ. ಅದರ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಟೀಕಿಸಲು ಶುರು ಮಾಡಿದ್ದಾರೆ.

ವಿಶ್ವ ಚೆಸ್ ಚಾಂಪಿಯನ್‌ಶಿಪ್‌ ಗೆಲುವಿನೊಂದಿಗೆ, ಗುಕೇಶ್ ಅವರ ನಿವ್ವಳ ಮೌಲ್ಯವು 21 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಗುಕೇಶ್ ಶೇ.30ರ ತೆರಿಗೆ ವ್ಯಾಪ್ತಿಗೆ ಬರಲಿದ್ದಾರೆ. ಲೆಕ್ಕಾಚಾರದ ಪ್ರಕಾರ, ಗುಕೇಶ್ ತನ್ನ ಬಹುಮಾನದ ಹಣದಲ್ಲಿ ಸುಮಾರು 3 ಕೋಟಿ ರೂ. ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇದರ ಜೊತೆಗೆ ಇತರ ಶುಲ್ಕಗಳನ್ನು ಸೇರಿಸಿದರೆ ಇದು 4.67 ಕೋಟಿ ರೂ.ಗೆ ಏರಬಹುದು ಎಂದು ಹಲವು ವರದಿಗಳು ಹೇಳಿವೆ.

ನಿರ್ಮಲಾ ಸೀತಾರಾಮನ್ ಟ್ರೋಲ್

'11 ಕೋಟಿ ರೂ. ಬಹುಮಾನದ ಮೊತ್ತದ ಮೇಲೆ 4.67 ಕೋಟಿ ರೂ.ಗಳ ತೆರಿಗೆ' ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇ ವಿಷಯವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಸಚಿವಾಲಯದ ವಿರುದ್ಧ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

“ವಿಶ್ವ ಚೆಸ್ ಚಾಂಪಿಯನ್ ಶಿಪ್ ಗೆದ್ದ ಮತ್ತು 5 ಕೋಟಿ ಆದಾಯ ಗಳಿಸಿರುವ ಭಾರತದ ತೆರಿಗೆ ಇಲಾಖೆಗೆ ನನ್ನ ಶುಭ ಹಾರೈಕೆಗಳು” ಎಂದು ಬಳಕೆದಾರರೊಬ್ಬರು ಪೋಸ್ಟ್‌ ಮಾಡಿದ್ದಾರೆ. “ಈ ಗೆಲುವಿನಲ್ಲಿ ಆದಾಯ ತೆರಿಗೆಯ ಪಾಲು ಇದೆ ಎಂದು ನಾವು ಖಚಿತಪಡಿಸುತ್ತೇವೆ. ದೇಶದಲ್ಲಿ ತೆರಿಗೆ ಇಲಾಖೆ ಯಾವಾಗಲೂ ಒಂದು ಹೆಜ್ಜೆ ಮುಂದಿದೆ” ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ