ಸಂಪತ್ತನ್ನು ಕರುಣಿಸುವ ಸಂಪದ ಗೌರಿ ವ್ರತ ಸೇರಿದಂತೆ ಈ ದಿನ ಏನೆಲ್ಲಾ ವಿಶೇಷವಿದೆ? ಬುಧವಾರದ ದಿನ ವಿಶೇಷ
ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತಿದಿನವೂ ಒಂದಲ್ಲಾ ಒಂದು ವಿಶೇಷ ಇದ್ದೇ ಇರುತ್ತದೆ. ಸದ್ಯಕ್ಕೆ ಶ್ರಾವಣ ಮಾಸ ಆರಂಭವಾಗಿದೆ. ಈ ಸಮಯದಲ್ಲಿ ಶಿವನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. 7 ಆಗಸ್ಟ್, ಬುಧವಾರ ಸಂಪದ ಗೌರಿ ವ್ರತ ಆಚರಿಸಲಾಗುತ್ತಿದೆ. ಇದನ್ನು ಹೊರತುಪಡಿಸಿ ಈ ದಿನ ಬೇರೆ ಏನು ವಿಶೇಷವಿದೆ ನೋಡೋಣ.
ದಿನ ವಿಶೇಷ: ಇಂದು 7 ಆಗಸ್ಟ್ 2024, ಶುಕ್ಲಪಕ್ಷದ ಬುಧವಾರ. ಇಂದು ರಾತ್ರಿ ಪೂರ್ವ ಫಲ್ಗುಣಿ ನಕ್ಷತ್ರವಿದ್ದು ನಂತರ ಉತ್ತರ ಫಲ್ಗುಣಿ ನಕ್ಷತ್ರ ಆರಂಭವಾಗುತ್ತದೆ. ಇಂದು ಬೆಳಗ್ಗೆ 06:06 ಗಂಟೆಗೆ ಸೂರ್ಯೋದಯವಾಗಲಿದ್ದು ಸಂಜೆ 06:44ಕ್ಕೆ ಸೂರ್ಯಾಸ್ತವಾಗಲಿದೆ. ಬೆಳಗ್ಗೆ 04:35 ರಿಂದ 05:21 ವರೆಗೆ ಬ್ರಹ್ಮ ಮುಹೂರ್ತವಿದ್ದು ಮಧ್ಯಾಹ್ನ 12:25 ರಿಂದ 02:00ವರೆಗೆ ರಾಹು ಕಾಲ ಇರಲಿದೆ.
ಗಣೇಶನ ಪೂಜೆಗೆ ಆದ್ಯತೆ
ಬುಧವಾರ ಸಾಮಾನ್ಯವಾಗಿ ವಿಘ್ನ ವಿನಾಶಕ ಗಣೇಶನನ್ನು ಪೂಜಿಸಲಾಗುತ್ತದೆ. ಪ್ರತಿಯೊಂದು ವಾರವೂ ಒಂದೊಂದು ದೇವತೆಗೆ ಮೀಸಲಾಗಿರುವಂತೆ ಪ್ರತಿ ಬುಧವಾರ ಗಣಪತಿಯನ್ನು ಆರಾಧಿಸಲಾಗುತ್ತದೆ. ಮೊದಲ ಪೂಜೆಗೆ ಅಧಿಪತಿ ಗಣಪತಿಗೆ ಇಷ್ಟವಾದ ಗರಿಕೆ, ಲಡ್ಡು, ಮೋದಕವನ್ನು ನೈವೇದ್ಯವನ್ನು ಇಟ್ಟು, ತಮ್ಮ ಕೆಲಸಗಳಲ್ಲಿ ಅಡೆತಡೆಗಳು ಎದುರಾಗದಂತೆ ಪ್ರಾರ್ಥಿಸಿ ಭಕ್ತರು ಪ್ರಾರ್ಥಿಸುತ್ತಾರೆ. ಬುಧವಾರ ಮಾತ್ರವಲ್ಲದೆ ಇತರ ದಿನಗಳಲ್ಲೂ ಇತರ ದೇವತೆಗಳಿಗೂ ಮುನ್ನ ಗಣಪತಿಗೆ ಮೊದಲ ಪೂಜೆ ಮಾಡಿ ನಮಿಸಲಾಗುತ್ತದೆ.
ಪುಬ್ಬ ನಕ್ಷತ್ರ
ಈ ದಿನದ ವಿಶೇಷ ಹೇಳಬೇಕೆಂದರೆ ಇಂದು ಪುಬ್ಬ ನಕ್ಷತ್ರವಿದೆ. ಇದನ್ನು ಪೂರ್ವ ಫಲ್ಗುಣಿ ನಕ್ಷತ್ರ ಎಂದೂ ಕರೆಯಲಾಗುತ್ತದೆ. ಇದು ಶುಕ್ರನ ನಕ್ಷತ್ರವಾಗಿದೆ. ಭಗ, ಈ ನಕ್ಷತ್ರದ ದೇವತೆಯಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರ ಬಗ್ಗೆ ಹೇಳಬೇಕೆಂದರೆ ವಿಶೇಷವಾಗಿ ಹೆಣ್ಣು ಮಕ್ಕಳು ಸಾಧನೆ ಮಾಡುತ್ತಾರೆ. ಶುಕ್ರನು ಪ್ರೀತಿ ಹಾಗೂ ಸೌಂದರ್ಯದ ದೇವತೆ ಆಗಿರುವುದರಿಂದ ಈ ನಕ್ಷತ್ರದಲ್ಲಿ ಜನಿಸಿದವರು ಕೂಡಾ ಎಲ್ಲರಿಗೂ ಸುಖ, ಸಂತೋಷ ನೆಮ್ಮದಿಯನ್ನು ಹಂಚುತ್ತಾ ಬಾಳುತ್ತಾರೆ. ಒಂದು ವಿಚಾರದ ಬಗ್ಗೆ ಅಧ್ಯಯನ ಮಾಡಿದರೆ ಅದರ ಬಗ್ಗೆ ಬಹಳ ಆಳವಾದ ಪಾಂಡಿತ್ಯ ಪಡೆಯುತ್ತಾರೆ. ದುರಾಸೆಯ ಗುಣ ಇಲ್ಲದ ಇವರು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲು ಸದಾ ಮುಂದೆ ಇರುತ್ತಾರೆ. ಈ ರಾಶಿಯಲ್ಲಿ ಜನಿಸಿದವರಿಗೆ ವಿಶೇಷ ಕಲೆಯೊಂದು ಸಿದ್ಧಿಸಿರುತ್ತದೆ. ತಾವು ಕಲಿತಿರುವ ವಿದ್ಯೆಯನ್ನು ಎಲ್ಲರಿಗೂ ಹಂಚುತ್ತಾರೆ.
ಸಂಪದ್ಗೌರಿ ವ್ರತ
ಇಂದಿನ ಮತ್ತೊಂದು ವಿಶೇಷವೆಂದರೆ ಈ ದಿನ ಸಂಪದ್ಗೌರಿ ವ್ರತವಿದೆ. ಈ ವ್ರತ ಮಾಡಿದರೆ ಹೆಸರೇ ಸೂಚಿಸುವಂತೆ ಗೌರಿಯು ಭಕ್ತರಿಗೆ ಸಂಪತ್ತನ್ನು ನೀಡಿ ಕರುಣಿಸುತ್ತಾಳೆ. ಇದನ್ನು ಸಂಪದ ಗೌರಿ ವ್ರತ ಎಂದೂ ಕರೆಯಲಾಗುತ್ತದೆ. ಗೌರಿಯನ್ನು ಪೂಜೆ ಮಾಡಿ ಸಂಪತ್ತನ್ನು ಕರುಣಿಸುವಂತೆ ಪ್ರಾರ್ಥಿಸಲಾಗುತ್ತದೆ. ಬಡವರಿಗೆ ಬಟ್ಟೆ, ಫಲ, ಅಕ್ಕಿ, ಗೋಧಿ, ಉದ್ದಿನ ಬೇಳೆಯನ್ನು ದಾನ ಮಾಡಿದರೆ ದಾರಿದ್ಯ್ರ ಕಳೆದು ಮನೆಯಲ್ಲಿ ಸಂಪತ್ತು ಉಕ್ಕುತ್ತದೆ ಎಂದು ನಂಬಲಾಗಿದೆ. ಸಂಪದ ಗೌರಿ ವ್ರತವನ್ನು ಮಾಡಬೇಕೆಂದು ಆಸೆ ಇರುವವರು ಸೂಕ್ತ ಜ್ಯೋತಿಷಿಗಳನ್ನು ಸಂಪರ್ಕಿಸಿ ಪೂಜಾ ವಿಧಿ ವಿಧಾನದ ಬಗ್ಗೆ ತಿಳಿದುಕೊಳ್ಳಬಹುದು.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮ ಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.