ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕಾಶಿಯ ಈ ಶಿವಲಿಂಗವನ್ನು ಮುಟ್ಟಿದರೆ ಭಕ್ತರಿಗೆ ಮರಣದ ಭಯವೇ ಇರುವುದಿಲ್ಲ; ಅಮೃತೇಶ್ವರ ಶಿವಲಿಂಗದ ಹಿನ್ನೆಲೆ ಏನು?

ಕಾಶಿಯ ಈ ಶಿವಲಿಂಗವನ್ನು ಮುಟ್ಟಿದರೆ ಭಕ್ತರಿಗೆ ಮರಣದ ಭಯವೇ ಇರುವುದಿಲ್ಲ; ಅಮೃತೇಶ್ವರ ಶಿವಲಿಂಗದ ಹಿನ್ನೆಲೆ ಏನು?

ಶಿವನನ್ನು ಮೃತ್ಯುಂಜಯ ಎಂದು ಕರೆಯಲಾಗುತ್ತದೆ. ಪ್ರಾಣ ಭಯ ಇರುವವರು ಶಿವನನ್ನು ಆರಾಧಿಸಿದರೆ ಒಳ್ಳೆಯದು, ಕಾಶಿಯಲ್ಲಿರುವ ಶಿವಲಿಂಗವನ್ನು ಮುಟ್ಟುವುದರಿಂದಲೂ ಮರಣದ ಭಯ ದೂರವಾಗುತ್ತದೆ. ಹಾಗಾದರೆ ಕಾಶಿಯಲ್ಲಿರುವ ಆ ಶಿವಲಿಂಗ ಯಾವುದು? ಅದರ ಇತಿಹಾಸವೇನು ಇಲ್ಲಿದೆ ಓದಿ.

ಕಾಶಿಯ ಈ ಶಿವಲಿಂಗ ಮುಟ್ಟಿದರೆ ಮರಣದ ಭಯವೇ ಇರುವುದಿಲ್ಲ; ಅಮೃತೇಶ್ವರ ಶಿವಲಿಂಗದ ಹಿನ್ನೆಲೆ ( ಸಾಂದರ್ಭಿಕ ಚಿತ್ರ)
ಕಾಶಿಯ ಈ ಶಿವಲಿಂಗ ಮುಟ್ಟಿದರೆ ಮರಣದ ಭಯವೇ ಇರುವುದಿಲ್ಲ; ಅಮೃತೇಶ್ವರ ಶಿವಲಿಂಗದ ಹಿನ್ನೆಲೆ ( ಸಾಂದರ್ಭಿಕ ಚಿತ್ರ)

ಭೂಮಿಯಲ್ಲಿ ಹುಟ್ಟಿದ ಪ್ರತಿ ಜೀವಿಗೂ ಮರಣ ನಿಶ್ಚಿತ. ಸಾವಿನಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವೇ ಇಲ್ಲ. ಪ್ರತಿಯೊಬ್ಬ ಮನುಷ್ಯನು ಭಯಪಡುವ ವಿಷಯವೆಂದರೆ ಅದು ಸಾವು. ಹುಟ್ಟು ಸಾವಿನ ಬಗ್ಗೆ ತಿಳಿದವರು ಯಾರೂ ಇಲ್ಲ. ಆದರೆ ಸದಾಕಾಲ ಸಾವಿನ ಭಯದಿಂದ ಬದುಕುವುದನ್ನು ಬಿಟ್ಟರೆ ಮೋಕ್ಷವನ್ನು ಪಡೆದು ದೇವರಲ್ಲಿ ಐಕ್ಯವಾಗಬಹುದು. ಪುರಾಣಗಳಲ್ಲಿ ಶಿವನನ್ನು ಮೃತ್ಯುಂಜಯ ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಸಾವಿನ ಭಯ ದೂರವಾಗುತ್ತದೆ ಎಂಬ ನಂಬಿಕೆ ಇದೆ.

ಸಾವಿನ ಭಯವನ್ನು ದೂರ ಮಾಡುವ ಪವಿತ್ರ ಕ್ಷೇತ್ರ

ಶಿವಲಿಂಗವನ್ನು ಸ್ಪರ್ಶಿಸುವುದರಿಂದಲೂ ಸಾವಿನ ಭಯದಿಂದ ಮುಕ್ತಿ ಸಿಗುತ್ತದೆ ಎಂಬುದು ಹಲವರ ನಂಬಿಕೆ. ಅದು ಮನಸ್ಸಿಗೆ ಶಾಶ್ವತ ಶಾಂತಿಯನ್ನು ನೀಡುತ್ತದೆ ಎಂದು ಭಕ್ತರು ನಂಬುತ್ತಾರೆ. ಭಾರತದಲ್ಲಿ ಮೋಕ್ಷವನ್ನು ಪಡೆಯಲು ದೇವಸ್ಥಾನಗಳಿರುವಂತೆ ಸಾವಿನ ಭಯವನ್ನು ದೂರಮಾಡಲು ಪವಿತ್ರ ಕ್ಷೇತ್ರವಿದೆ. ಕಾಶಿಯಲ್ಲಿರುವ ಅಮೃತೇಶ್ವರ ಶಿವಲಿಂಗ ಇದಕ್ಕೆ ಸಾಕ್ಷಿಯಾಗಿದೆ. ಕಾಶಿಯನ್ನು ದೇವರುಗಳ ವಾಸಸ್ಥಾನ ಎಂದು ಪರಿಗಣಿಸಲಾಗಿದೆ. ಕಾಶಿಯಲ್ಲಿ ಸತ್ತರೆ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ. ಕಾಶಿ ಭಾರತದ ಅತ್ಯಂತ ಹಳೆಯ ಮತ್ತು ಪವಿತ್ರ ನಗರಗಳಲ್ಲಿ ಒಂದು. ಇದು ಆಧ್ಯಾತ್ಮಿಕ ಕೇಂದ್ರವೂ ಹೌದು.

ಹಿಂದೂಗಳು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕಾಶಿಗೆ ಭೇಟಿ ನೀಡಿ, ಗಂಗಾ ನದಿಯಲ್ಲಿ ಸ್ನಾನ ಮಾಡಿ ಪುಣ್ಯ ಗಳಿಸಬೇಕೆಂದು ಬಯಸುತ್ತಾರೆ. ಮರಣಾನಂತರ ಅವರ ಅಸ್ಥಿಯನ್ನು ಕಾಶಿಯ ಗಂಗಾ ನದಿಯಲ್ಲಿ ವಿಸರ್ಜಿಸುವುದರಿಂದ ಮೋಕ್ಷವನ್ನು ಪಡೆಯುತ್ತಾರೆ ಎಂಬ ನಂಬಿಕೆಯೂ ಇದೆ. ಅದಕ್ಕಾಗಿಯೇ ಕಾಶಿ ನಗರವು ಅನೇಕ ವರ್ಷಗಳಿಂದ ತೀರ್ಥಯಾತ್ರೆ ಮತ್ತು ಭಕ್ತಿಯ ಸ್ಥಳವಾಗಿದೆ. ಈ ಪವಿತ್ರ ನಗರದಲ್ಲಿ ಒಂದು ಶಿವಲಿಂಗವಿದೆ. ಇದನ್ನು ಅಮೃತೇಶ್ವರ ಶಿವಲಿಂಗ ಎಂದು ಕರೆಯಲಾಗುತ್ತದೆ.

ಅಮೃತೇಶ್ವರ ಶಿವಲಿಂಗದ ಹಿಂದಿನ ಕಥೆ

ಅಮೃತೇಶ್ವರ ಶಿವಲಿಂಗದ ಬಗ್ಗೆ ಒಂದು ಜನಪ್ರಿಯ ಕಥೆಯಿದೆ. ಸ್ಕಂದ ಪುರಾಣದ ಕಾಶಿಖಂಡದ ಪ್ರಕಾರ, ಉಪಜಂಗಿನಿ ಎಂಬುವವನು ಋಷಿಯ ಮಗನಾಗಿದ್ದನು. ಒಂದು ದಿನ ಅವನು ಮರಣಶಯ್ಯೆಯಲ್ಲಿದ್ದಾಗ ಋಷಿಯು ಅವನ ದೇಹವನ್ನು ಒಂದು ಸ್ಥಳಕ್ಕೆ ಕೊಂಡೊಯ್ದುನು. ಅಲ್ಲಿ ತನ್ನ ಮಗನ ಅಂತ್ಯಸಂಸ್ಕಾರವನ್ನು ಹೇಗೆ ಮಾಡುವುದು ಎಂದು ಯೋಚಿಸುತ್ತಿದ್ದನು. ತನ್ನ ಮಗನ ಶವವನ್ನು ನೆಲದ ಮೇಲೆ ಮಲಗಿಸಿದನು. ಅದ್ಭುತವೆಂಬಂತೆ ಋಷಿಯ ಮಗನಿಗೆ ಮರುಜೀವಬಂದಿತು. ಉಪಜಂಗಿನಿಯು ಸಾವನ್ನು ಗೆದ್ದುಬಂದಿದ್ದನು. ಋಷಿಗೆ ಇದನ್ನೆಲ್ಲ ನಂಬಲಾಗಲಿಲ್ಲ. ಆದರೆ ಮಗ ಮತ್ತೆ ಬದುಕಿದ್ದಾನೆ ಎಂದು ಖುಷಿಪಟ್ಟನು. ನಂತರ ಋಷಿಯು ತನ್ನ ಮಗ ಬದುಕಲು ಕಾರಣವೇನು ಎಂದು ಕಂಡು ಹಿಡಿಯಲು ಪ್ರಾರಂಭಿಸಿದನು. ಬಾಲಕನನ್ನು ಮಲಗಿಸಿದ ಜಾಗವನ್ನು ಅಗೆದು ನೋಡಿದಾಗ ಅಲ್ಲಿ ಒಂದು ನೆಲ್ಲಿಕಾಯಿಯಷ್ಟು ಚಿಕ್ಕ ಶಿವಲಿಂಗ ದೊರೆಯಿತು. ಅದನ್ನು ಹೊರ ತೆಗೆದನು. ಆ ಶಿವಲಿಂಗವನ್ನು ಅತ್ಯಂತ ಭಕ್ತಿಯಿಂದ ಪೂಜಿಸಿದನು. ಅದೇ ಕಾಶಿಯಲ್ಲಿರುವ ಅಮೃತೇಶ್ವರ ಶಿವಲಿಂಗ. ಈ ಪವಿತ್ರ ಶಿವಲಿಂಗದಿಂದಲೇ ತನ್ನ ಮಗನ ಜೀವವು ಉಳಿಯತು ಎಂದು ಋಷಿಯು ನಂಬಿದನು. ಹಾಗಾಗಿಯೇ ಈ ಶಿವಲಿಂಗಕ್ಕೆ ಅಮೃತೇಶ್ವರ ಎಂಬ ಹೆಸರು ಬಂದಿತು.

ಮೃತ್ಯು ಭಯವನ್ನು ಹೋಗಲಾಡಿಸುವ ಶಿವಲಿಂಗ

ಶಿವನನ್ನು ಸೃಷ್ಟಿಕರ್ತ, ಲಯಕಾರಕ, ಭೋಲಾ ಶಂಕರ, ಪರಮೇಶ್ವರ, ಭೋಲೆನಾಥ, ಮಹಾಕಾಲ ಎಂದೆಲ್ಲಾ ಕರೆಯುತ್ತಾರೆ. ಶಿವನು ಸೃಷ್ಟಿಯ ಸೃಷ್ಟಿಕರ್ತ ಮತ್ತು ನಾಶಕ ಎಂದು ಹೇಳಲಾಗುತ್ತದೆ. ಅಂತಹ ಪರಮಾತ್ಮನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ಭಕ್ತರಿಗೆ ಮೃತ್ಯು ಭಯ ದೂರವಾಗುತ್ತದೆ, ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿದೆ. ಮಹಾಮೃತ್ಯುಂಜಯ ಮಂತ್ರವು ಶಿವನ ಕರುಣೆಗೆ ಪಾತ್ರರಾಗಲು ಪಠಿಸುವ ಮಂತ್ರವಾಗಿದೆ. ಮಹಾಮೃತ್ಯುಂಜಯವೆಂದರೆ ಸಾವಿನ ಭಯವನ್ನು ಹೋಗಲಾಡಿಸುವುದು ಎಂದರ್ಥ. ಭಕ್ತರು ತಮ್ಮ ಮನಸ್ಸಿನಲ್ಲಿರುವ ಸಾವಿನ ಭಯವನ್ನು ಹೋಗಲಾಡಿಸಿಕೊಳ್ಳಲು ಈ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುತ್ತಾರೆ. ಕಾಶಿಯಲ್ಲಿ ನೆಲೆಸಿರುವ ಈ ಅಮೃತೇಶ್ವರ ಶಿವಲಿಂಗವನ್ನು ಸ್ಪರ್ಶಿಸುವುದರಿಂದಲೂ ಮೃತ್ಯು ಭಯ ದೂರವಾಗುತ್ತದೆ ಎಂಬುದು ಭಕ್ತರ ನಂಬಿಕೆ.

ಮಹಾಮೃತ್ಯುಂಜಯ ಮಂತ್ರ

ಓಂ ತ್ರ್ಯಂಬಕಂ ಯಜಾಮಹೆ ಸುಗಂಧಿಂ ಪುಷ್ಟಿವರ್ಧನಂ |

ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್ ||

ಈ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಮೃತ್ಯು ಭಯ ದೂರವಾಗುತ್ತದೆ. ಈ ಮಂತ್ರವನ್ನು ಪ್ರಾಣರಕ್ಷಕ ಮತ್ತು ಮೋಕ್ಷ ಮಂತ್ರವೆಂದೂ ಕರೆಯಲಾಗುತ್ತದೆ. ಇದನ್ನು ಭಕ್ತಿಯಿಂದ ಹೇಳುವ ಮೂಲಕ ಶಿವನ ಕೃಪೆಗೆ ಪಾತ್ರರಾಗಬಹುದು ಎಂಬುದು ಭಕ್ತರ ನಂಬಿಕೆಯಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಬರಹ: ಅರ್ಚನಾ ಹೆಗ್ಡೆ