ಶ್ರೀ ಕ್ರೋಧಿನಾಮ ಸಂವತ್ಸರ ಮೇಷ ರಾಶಿಯವರ ವರ್ಷ ಭವಿಷ್ಯ: ಪರಿಪಕ್ವ ನಿರ್ಧಾರದಿಂದ ಉದ್ಯೋಗದಲ್ಲಿ ಯಶಸ್ಸು, ಮನೆಯಲ್ಲಿ ನೆಮ್ಮದಿ-mesh rashi ugadi varsha bhavishya aries ugadi predictions for krodhi nama samvatsara yearly horoscope in kannada rsm ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶ್ರೀ ಕ್ರೋಧಿನಾಮ ಸಂವತ್ಸರ ಮೇಷ ರಾಶಿಯವರ ವರ್ಷ ಭವಿಷ್ಯ: ಪರಿಪಕ್ವ ನಿರ್ಧಾರದಿಂದ ಉದ್ಯೋಗದಲ್ಲಿ ಯಶಸ್ಸು, ಮನೆಯಲ್ಲಿ ನೆಮ್ಮದಿ

ಶ್ರೀ ಕ್ರೋಧಿನಾಮ ಸಂವತ್ಸರ ಮೇಷ ರಾಶಿಯವರ ವರ್ಷ ಭವಿಷ್ಯ: ಪರಿಪಕ್ವ ನಿರ್ಧಾರದಿಂದ ಉದ್ಯೋಗದಲ್ಲಿ ಯಶಸ್ಸು, ಮನೆಯಲ್ಲಿ ನೆಮ್ಮದಿ

ಯುಗಾದಿ ರಾಶಿ ಭವಿಷ್ಯ: ದೈಹಿಕ ಸಾಮರ್ಥ್ಯದಿಂದ ಗಮನ ಸೆಳೆಯುವ ಮೇಷ ರಾಶಿಯವರು ಮಾನಸಿಕವಾಗಿಯೂ ಇಷ್ಟೇ ಸದೃಢರು ಎಂದು ಹೇಳಲು ಆಗುವುದಿಲ್ಲ. ಮೇಷ ರಾಶಿಗೆ ಈ ವರ್ಷ ಯಾವುದರಲ್ಲಿ ಬೇವು, ಯಾವುದಲ್ಲಿ ಬೆಲ್ಲ. ಜ್ಯೋತಿಷಿ ಎಚ್.ಸತೀಶ್ ಅವರು ಈ ಬರಹದಲ್ಲಿ ವಿವರ ನೀಡಿದ್ದಾರೆ.

ಯುಗಾದಿ ಮೇಷ ರಾಶಿಯವರ ವರ್ಷ ಭವಿಷ್ಯ
ಯುಗಾದಿ ಮೇಷ ರಾಶಿಯವರ ವರ್ಷ ಭವಿಷ್ಯ

Ugadi Predictions: ಮೇಷ ರಾಶಿಯ ಯುಗಾದಿ ವರ್ಷ ಭವಿಷ್ಯ: ನೀವು ಅಶ್ವಿನಿ ನಕ್ಷತ್ರದ 1, 2, 3 ಮತ್ತು 4ನೇ ಪಾದಗಳು, ಭರಣಿ ನಕ್ಷತ್ರದ 1, 2, 3 ಮತ್ತು 4ನೇ ಪಾದ ಪಾದಗಳು, ಕೃತ್ತಿಕ ನಕ್ಷದ 1ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ಮೇಷ ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ಚು, ಚೆ, ಚೊ, ಲ ಆಗಿದ್ದಲ್ಲಿ ನಿಮ್ಮದು ಅಶಿನಿ ನಕ್ಷತ್ರ ಆಗಿರಬಹುದು. ನಿಮ್ಮ ಹೆಸರಿನ ಮೊದಲ ಅಕ್ಷರಗಳು ಲಿ, ಲು, ಲೆ, ಲೊ ಆಗಿದ್ದಲ್ಲಿ ಭರಣಿ ನಕ್ಷತ್ರ ಮತ್ತು ಅ ಆಗಿದ್ದಲ್ಲಿ ಕೃತ್ತಿಕ ನಕ್ಷತ್ರ ಆಗಿರಬಹುದು. ಮೇಷ ರಾಶಿಯು ದ್ವಾದಶ ರಾಶಿ ಚಕ್ರಗಳಲ್ಲಿ ಮೊದಲ ಸ್ಥಾನದಲ್ಲಿರುವ ರಾಶಿ. ಟಗರು ಈ ರಾಶಿಯ ಚಿಹ್ನೆ. ಮಂಗಳ ಗ್ರಹವು ಈ ರಾಶಿಯ ಅಧಿಪತಿ. ಯಾವುದೇ ವಿಚಾರ, ಎಂಥದ್ದೇ ಪರಿಸ್ಥಿತಿಯಲ್ಲಿ ತಮ್ಮ ಅಸ್ತಿತ್ವ ಎದ್ದು ಕಾಣಬೇಕು ಎಂಬ ಬಯಕೆ ಈ ರಾಶಿಯವರಿಗೆ ಸಾಮಾನ್ಯವಾಗಿ ಇರುತ್ತದೆ.

ಮೇಷ ರಾಶಿಯ ಗುಣಲಕ್ಷಣಗಳು (Aries characteristics in Kannada)

ಮೇಷ ರಾಶಿಯ ಮಹಿಳೆಯರಿಗೆ ಸಾಮಾನ್ಯವಾಗಿ ವಿಶೇಷ ಜನಾಕರ್ಷಕ ಶಕ್ತಿ ಇರುತ್ತದೆ. ಜೀವನದಲ್ಲಿ ಎದುರಾಗುವ ಯಾವುದೇ ಸವಾಲುಗಳನ್ನು ಗೆಲ್ಲುವುದಲ್ಲದೆ ತಮ್ಮ ಇಚ್ಛೆಯಂತೆ ನಿರೀಕ್ಷಿತ ಗುರಿಯನ್ನು ತಲುಪುತ್ತಾರೆ. ನಾಯಕತ್ವದ ಗುಣ ಇರುತ್ತದೆ, ಆದರೆ ಕೋಪ ಬೇಗನೆ ಬರುತ್ತದೆ. ಮನದಲ್ಲಿ ಆತಂಕದ ಭಾವನೆ ಮನೆ ಮಾಡಿರುತ್ತದೆ. ಕೈಹಿಡಿದ ಕೆಲಸ ಕಾರ್ಯಗಳನ್ನು ಪೂರೈಸುವವರೆಗೂ ಮನಸ್ಸನ್ನು ಬದಲಿಸುವುದಿಲ್ಲ. ನಿರಾಸೆಯನ್ನು ತಡೆದುಕೊಳ್ಳಲಾಗದೆ ಬೇಗನೆ ಕೋಪಕ್ಕೆ ಒಳಗಾಗುತ್ತಾರೆ.

ಮೇಷ ರಾಶಿಯಲ್ಲಿ ಜನಿಸಿದ ಪುರುಷರು ಸದಾ ಉತ್ಸಾಹದಿಂದ ಕೂಡಿರುತ್ತಾರೆ. ಸಮಯ ವ್ಯರ್ಥ ಮಾಡದೆ ಯಾವುದಾದರೊಂದು ಚಟುವಟಿಕೆಗಳಲ್ಲಿ ಮುಳುಗುತ್ತಾರೆ. ಇವರಲ್ಲಿರುವ ಆಚಲ ವಿಶ್ವಾಸ ಮತ್ತು ಧೈರ್ಯದ ಗುಣವು ಕಷ್ಟ ಕಾಲದಲ್ಲಿ ಸಹಾಯಕವಾಗುತ್ತದೆ. ಒಳ್ಳೆಯ ಕ್ರೀಡಾಮನೋಭಾವ ಇರುವ ಕಾರಣ ಗೆದ್ದರೆ ಬೆನ್ನು ತಟ್ಟಿಕೊಳ್ಳುವುದು ಇಲ್ಲ. ಸೋತರೆ ಕೊರಗುವುದೂ ಇಲ್ಲ. ಸಮಾಜದಲ್ಲಿ ಗೌರವದ ಸ್ಥಾನಮಾನ ಗಳಿಸುತ್ತಾರೆ. ಗೌರವ ಕಡಿಮೆ ಆಗುವ ಯಾವುದೇ ಕೆಲಸ ಮಾಡುವುದಿಲ್ಲ.

ಮೇಷ ರಾಶಿಗೆ ಶುಭ ದಿನಾಂಕ, ವಾರ, ಬಣ್ಣ

ಮೇಷ ರಾಶಿಯಲ್ಲಿ ಜನಿಸಿದವರು ನೆನಪಿಟ್ಟುಕೊಳ್ಳಬೇಕಾದ ವಿಚಾರಗಳು ಇವು. ಶುಭ ದಿನಾಂಕಗಳು: 1, 2, 3, 12, 13, 29, 31. ಶುಭ ವಾರಗಳು: ಭಾನುವಾರ, ಸೋಮವಾರ, ಮಂಗಳವಾರ ಮತ್ತು ಗುರುವಾರ. ಶುಭ ವರ್ಣ: ಬಿಳಿ ಮತ್ತು ಕೆಂಪು. ಅಶುಭ ವರ್ಣ: ಕಪ್ಪು ಮತ್ತು ಹಸಿರು. ಶುಭ ದಿಕ್ಕು: ಪೂರ್ವ, ಉತ್ತರ ಮತ್ತು ಈಶಾನ್ಯ. ಶುಭ ತಿಂಗಳು: ಜುಲೈ 15ರಿಂದ ಸೆ 15 ಮತ್ತು ಡಿಸೆಂಬರ್ 15ರಿಂದ ಜನವರಿ 14. ಶುಭ ಹರಳು: ಹವಳ, ಮಾಣಿಕ್ಯ ಮತ್ತು ಕನಕ ಪುಷ್ಯರಾಗ. ಶುಭ ರಾಶಿ: ಕಟಕ, ಸಿಂಹ, ವೃಶ್ಚಿಕ ಮತ್ತು ಧನಸ್ಸ. ಅಶುಭ ರಾಶಿ: ಮಿಥುನ, ಕನ್ಯಾ ಮತ್ತು ಕುಂಭ.

ಶ್ರೀ ಕ್ರೋಧಿನಾಮ ಸಂವತ್ಸರದ ಮೇಷ ರಾಶಿಯ ಗೋಚಾರ ಫಲ

ಮೇಷ ರಾಶಿಗೆ ಸೇರಿದವರಿಗೆ ಶ್ರೀ ಕ್ರೋಧಿನಾಮ ಸಂವತ್ಸರದಲ್ಲಿ ಏಪ್ರಿಲ್ ತಿಂಗಳ ಕೊನೆಯವರೆಗೂ ಸಾಧಾರಣ ಫಲಗಳು ಕಂಡುಬರುತ್ತವೆ. ಆರೋಗ್ಯದಲ್ಲಿ ತೊಂದರೆ ಮತ್ತು ಅನವಶ್ಯಕವಾದ ಖರ್ಚು ವೆಚ್ಚಗಳು ಇರಲಿವೆ. ಉತ್ತಮ ಆದಾಯವಿದ್ದರೂ ಎದುರಾಗುವ ಅನವಶ್ಯಕ ಖರ್ಚುಗಳು ಹಣದ ಕೊರತೆಗೆ ಕಾರಣವಾಗುತ್ತದೆ. ಆದರೆ ಮೇ 1 ರ ನಂತರ ಗುರುವಿನ ಅನುಗ್ರಹದಿಂದ ಉತ್ತಮ ಫಲಗಳನ್ನು ಪಡೆಯುವಿರಿ. ಕೆಲಸಗಳು ತಡವಾದರೂ ಸಹ ನಿರೀಕ್ಷಿಸಿದ ಯಶಸ್ಸು ದೊರೆಯುತ್ತದೆ. ಹೆಚ್ಚಿನ ಪ್ರಯತ್ನದಿಂದ ಮಾತ್ರ ಹಣವನ್ನು ಉಳಿಸಬಹುದು. ನಿಮ್ಮಲ್ಲಿನ ಆತ್ಮವಿಶ್ವಾಸವು ಯಾವುದೇ ವಿಚಾರವಾದರೂ ಪರಿಪಕ್ವ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು.

ಮೇಷ ರಾಶಿಯವರಿಗೆ ಈ ವರ್ಷದ ಸ್ನೇಹ, ವಿಶ್ವಾಸದ ಬಂಧ

ಮೇಷ ರಾಶಿಯವರು ಕ್ರೋಧಿನಾಮ ಸಂವತ್ಸರದಲ್ಲಿ ಜನರ ಪ್ರೀತಿ ವಿಶ್ವಾಸವನ್ನು ಗಳಿಸುವಿರಿ. ಸದಾ ಕಾಲ ಕ್ರಿಯಾಶೀಲರಾಗಿರುವುದೇ ಇದಕ್ಕೆ ಕಾರಣ. ಯಾವುದೇ ಕೆಲಸ ನಿಧಾನಗತಿಯಲ್ಲಿ ನಡೆದರೂ ಸರಿಯಾದ ಯೋಜನೆಯೊಂದಿಗೆ ಕ್ರಮಬದ್ಧವಾಗಿಯೇ ಮುಂದುವರೆಯುವಿರಿ. ಇದರಿಂದಾಗಿ ಸೋಲಿನ ಭಯ ಬಹಳ ಕಡಿಮೆ. ಕೇವಲ ಕುಟುಂಬ ವರ್ಗದವರಲ್ಲದೆ ಬೇರೆಯವರು ಸಹ ನಿಮ್ಮ ಸ್ನೇಹ ಸಂಬಂಧವನ್ನು ಬಯಸುತ್ತಾರೆ. ಸಣ್ಣಪುಟ್ಟ ಅಡಚಣೆಗಳನ್ನು ಗೆಲ್ಲುವಿರಿ. ಮುಖ್ಯವಾಗಿ ದಂಪತಿಗಳ ನಡುವೆ ಪ್ರೀತಿವಿಶ್ವಾಸವು ಗಾಢವಾಗಿರುತ್ತದೆ. ಅಪರೂಪವೆಂಬಂತೆ ಸಂಗಾತಿಯೊಂದಿಗೆ ಅವರಿಗೆ ಇಷ್ಟವಾದ ಸ್ಥಳಗಳಿಗೆ ಭೇಟಿ ನೀಡುವಿರಿ. ಮಕ್ಕಳು ನಿಮ್ಮ ಮೇಲೆ ಹೆಚ್ಚಿನ ವಿಶ್ವಾಸವನ್ನು ಹೊಂದಿರುತ್ತಾರೆ.

ಉದ್ಯೋಗ: ಸ್ಥಿರ ಉದ್ಯೋಗ, ಮೇಲಧಿಕಾರಿಗಳ ಪ್ರಶಂಸೆ

ಮೇಷ ರಾಶಿಯವರಿಗೆ ಯುಗಾದಿ-2024 ರ ನಂತರ ಉದ್ಯೋಗದಲ್ಲಿ ಅನುಕೂಲಕರ ಫಲಗಳು ದೊರೆಯಲಿವೆ. ನಿಮಗೆ ಇಂಥ ಶುಭ ಜರುಗಿ ಬಹುಕಾಲವಾಗಿದೆ, ಆದರೂ ಈ ಸಲ ನಿಮಗೆ ಶುಭವಾಗಲಿದೆ. ಸ್ಥಿರವಾದ ಉದ್ಯೋಗ ಲಭಿಸುವ ಕಾರಣ ಮನಸ್ಸಿನ ಚಿಂತೆಯು ದೂರವಾಗುತ್ತದೆ. ನಿಮ್ಮ ಕಾರ್ಯದಕ್ಷತೆ ಮತ್ತು ಸಮರ್ಪಣಾ ಮನೋಭಾವಕ್ಕೆ ಹಿರಿಯ ಅಧಿಕಾರಿಗಳ ಪ್ರಶಂಸೆಯು ದೊರೆಯುತ್ತದೆ. ಬಯಸದೇ ಹೋದರು ಕೀರ್ತಿ ಪ್ರತಿಷ್ಠೆ ತಾವಾಗಿಯೇ ದೊರೆಯುತ್ತದೆ. ಕಾಲಕ್ಕೆ ತಕ್ಕಂತೆ ಆದಾಯವು ಹೆಚ್ಚುತ್ತದೆ. ಉದ್ಯೋಗವನ್ನು ಬದಲಿಸುವ ನಿರ್ಧಾರಕ್ಕೆ ಬಂದರೆ ಅನೇಕ ಅವಕಾಶಗಳು ತಾವಾಗಿಯೇ ಬರಲಿವೆ. ಉದ್ಯೋಗ ನೀಡಿದ ಸಂಸ್ಥೆಯ ಮುಖಾಂತರ ವಿದೇಶಕ್ಕೆ ತೆರಳುವಿರಿ. ಏಪ್ರಿಲ್ ನಂತರ ಮಾತಿನಲ್ಲಿಯೇ ಮೋಡಿ ಮಾಡುವ ಗುಣ ಬರಲಿದೆ.

ವಿದ್ಯಾಭ್ಯಾಸ: ಕಲಿಕೆಗೆ ತಡೆ ಒಡ್ಡುವ ಸ್ನೇಹಿತರಿಂದ ದೂರ ಇರಿ

ಮೇಷ ರಾಶಿಯವರಿಗೆ ಕ್ರೋಧಿನಾಮ ಸಂವತ್ಸರದಲ್ಲಿ ಕಲಿಯುವ ಮನಸ್ಸು ಇರುತ್ತದೆ. ಆದರೆ, ಮನಸ್ಸು ಬದಲಿಸುವ ಸ್ನೇಹಿತರಿಂದ ದೂರವಿರಬೇಕು. ಸದಾಕಾಲ ಯಾವುದಾದರೂ ಒಂದು ವಿಚಾರ ಕಲಿಯಬೇಕೆಂಬ ಹಂಬಲವಿರುತ್ತದೆ. ಕಲಿಕೆಯಲ್ಲಿ ಪ್ರಥಮ ಸ್ಥಾನದಲ್ಲಿ ಮುಂದುವರೆಯುವಿರಿ. ಚಿಕ್ಕ ವಯಸ್ಸಿನಲ್ಲಿಯೇ ಬರವಣಿಗೆ ಹವ್ಯಾಸವನ್ನು ರೂಢಿಸಿಕೊಳ್ಳುವಿರಿ. ಕತೆ ಕಾದಂಬರಿಗಳಿಗಿಂತಲೂ ಲೇಖನಗಳು ಮತ್ತು ಕವಿತೆಗಳ ಕಡೆಗೆ ಒಲವು ಹೆಚ್ಚು. ಗ್ರಹಣ ಶಕ್ತಿ ಸ್ವಲ್ಪ ಕಡಿಮೆ ಮಟ್ಟದಲ್ಲಿ ಇರುತ್ತದೆ. ಸಣ್ಣಪುಟ್ಟ ಅಡೆತಡೆಗಳು ಎದುರಾದರು ಯಾವುದೇ ತೊಂದರೆ ಇರುವುದಿಲ್ಲ. ಒಮ್ಮೆ ಓದಲು ಆರಂಭಿಸಿದರೆ ಅದರಲ್ಲಿರುವ ಸತ್ವವನ್ನು ಗ್ರಹಿಸುವ ಶಕ್ತಿ ನಿಮ್ಮಲ್ಲಿ ಅಡಕವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ಸತತ ಪರಿಶ್ರಮದ ಅವಶ್ಯಕತೆ ಇದೆ. ಒಟ್ಟಾರೆ ಕಲಿಯುವ ಆಸೆಗೆ ಎಲ್ಲರ ಸಹಾಯ, ಸಹಕಾರ ದೊರೆಯಲಿದೆ.

ಹಣಕಾಸು: ಆದಾಯದಲ್ಲಿ ಸ್ಥಿರತೆ ಇರದಿದ್ದರೂ, ಕಾಸಿಗೆ ಕೊರತೆಯಿಲ್ಲ

ಮೇಷ ರಾಶಿಯವರಿಗೆ ಈ ವರ್ಷ ಹಣಕಾಸಿಗೆ ತೊಂದರೆ ಇರುವುದಿಲ್ಲ. ಆದರೆ ಆದಾಯದಲ್ಲಿ ಸ್ಥಿರತೆ ಕಾಣುವುದಿಲ್ಲ. ಬುದ್ಧಿವಂತಿಕೆ, ಪರಿಶ್ರಮದಿಂದ ನಿಮಗೆ ಅವಶ್ಯಕತೆ ಇರುವಷ್ಟು ಹಣ ಗಳಿಸಬಲ್ಲಿರಿ. ಏಪ್ರಿಲ್ ತಿಂಗಳವರೆಗೂ ಅನವಶ್ಯಕ ಖರ್ಚು ವೆಚ್ಚಗಳು ಎದುರಾಗಲಿವೆ. ಆದರೆ ಮೇ ತಿಂಗಳಿನ ನಂತರ ಅನಿರೀಕ್ಷಿತ ಧನ ಲಾಭ ಕಂಡು ಬರುತ್ತದೆ. ಅತಿಯಾದ ಅತುರ ಅಥವಾ ಅತಿನಿಧಾನವು ಪ್ರಯೋಜನಕ್ಕೆ ಬಾರದು. ಸಂಯಮದಿಂದ ನಡೆದುಕೊಂಡಲ್ಲಿ ನಿರೀಕ್ಷೆಗೂ ಮೀರಿದ ಸಂಪಾದನೆ ನಿಮಗಿರುತ್ತದೆ. ಸರಿಯಾದ ಯೋಜನೆಯನ್ನು ರೂಪಿಸಿದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಹಳೆಯ ಹಣಕಾಸಿನ ಹೂಡಿಕೆಗಳಿಂದ ಉತ್ತಮ ಆದಾಯ ದೊರೆಯಲಿದೆ. ಸಂಪಾದಿಸುವ ಬಹುತೇಕ ಹಣ ಬೇರೆಯವರಿಗಾಗಿ ಖರ್ಚಾಗುವ ಸಾಧ್ಯತೆ ಇದೆ.

ಕೌಟುಂಬಿಕ ಜೀವನ: ಕೋಪಕ್ಕೆ ಕಡಿವಾಣ ಬಿದ್ದರೆ, ಕಲಹಕ್ಕೆ ವಿರಾಮ

ಮೇಷ ರಾಶಿಗೆ ಸೇರಿದವರ ಕೌಟುಂಬಿಕ ಜೀವನ ಸಂತೋಷ ಹಾಗೂ ನೆಮ್ಮದಿಯಿಂದ ಕೂಡಿರುತ್ತದೆ. ಅನವಶ್ಯಕ ಕೌಟುಂಬಿಕ ಕಲಹಗಳು ಮರೆಯಾಗುತ್ತದೆ. ಮೇ ಆರಂಭವಾಗುವವರೆಗೂ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ದಂಪತಿ ನಡುವೆ ಉತ್ತಮ ಸಾಮರಸ್ಯ ಕಂಡು ಬರುತ್ತದೆ. ಮಕ್ಕಳ ವಿಚಾರದಲ್ಲಿ ಕೆಲವೊಮ್ಮೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಏಳುಬೀಳು ಕಂಡು ಬರುತ್ತವೆ. ಸಂಗಾತಿಯೊಂದಿಗೆ ಪ್ರವಾಸ ಹೊರಡುವ ಸಾಧ್ಯತೆಯಿದೆ. ಇಂಥ ಪ್ರವಾಸಗಳಿಂದ ಆತ್ಮೀಯತೆ ಹೆಚ್ಚಾಗುತ್ತದೆ. ಸ್ತ್ರೀಯರು ಕೆಲವೊಮ್ಮೆ ಕಟುಟೀಕೆಗಳನ್ನು ಕೇಳಬೇಕಾಗುತ್ತದೆ. ಆದರೆ ಪತಿಯ ಸಹಕಾರ ಇರುವ ಕಾರಣ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ.

ಮಕ್ಕಳ ವಿಚಾರ: ಈ ವರ್ಷ ಸಂತಾನ ಲಾಭದ ಫಲವಿದೆ

ಮೇಷ ರಾಶಿಗೆ ಸೇರಿದವರು ಇತ್ತೀಚೆಗೆ ಮದುವೆಯಾಗಿದ್ದರೆ ಖಂಡಿತ ಶುಭ ಸುದ್ದಿ ಕೇಳುತ್ತಾರೆ. ನೂತನ ದಂಪತಿಗಳಿಗೆ ಸಂತಾನ ಲಾಭವಿದೆ. ಮಕ್ಕಳು ಗುರುಹಿರಿಯರ ಆಶೀರ್ವಾದದೊಂದಿಗೆ ಸನ್ಮಾರ್ಗದಲ್ಲಿ ಬೆಳೆಯುತ್ತಾರೆ. ವಿದ್ಯಾರ್ಥಿಗಳು ಉತ್ತಮ ಜ್ಞಾನವನ್ನು ಗಳಿಸುತ್ತಾರೆ. ಕುಟುಂಬದ ಸಮಸ್ಯೆಯನ್ನು ಬಗೆಹರಿಸುವ ಮಟ್ಟಕ್ಕೆ ಬೆಳೆಯುತ್ತಾರೆ. ಕೇವಲ ಅಧ್ಯಯನದಲ್ಲಿ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮುಂಚೂಣಿಯಲ್ಲಿ ಇರುತ್ತಾರೆ. ವಿದ್ಯಾಭ್ಯಾಸ ಮುಗಿಯುವ ಮುನ್ನವೇ ಕೆಲವರಿಗೆ ಉದ್ಯೋಗ ಲಭಿಸಲಿದೆ. ಹೆಚ್ಚಿನ ಪ್ರಯತ್ನದಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ಅವಕಾಶ ದೊರೆಯುತ್ತದೆ.

ವಿವಾಹ ಮತ್ತು ದಾಂಪತ್ಯ: ತಾಳ್ಮೆಯೇ ದಿವ್ಯೌಷಧ

ಮೇಷ ರಾಶಿಯ ಅವಿವಾಹಿತರಿಗೆ ಕ್ರೋಧಿನಾಮ ಸಂವತ್ಸರದಲ್ಲಿ ವಿವಾಹ ಯೋಗ ಕೂಡಿ ಬರುತ್ತದೆ. ದಂಪತಿಗಳ ನಡುವೆ ಇರುವ ಅಂತರವು ಕಡಿಮೆಯಾಗುತ್ತದೆ. ಪರಸ್ಪರ ಸಹಾನುಭೂತಿ ಮತ್ತು ವಿಶ್ವಾಸವು ಮೂಡಲಿದೆ. ಹೆಚ್ಚಿನ ಪ್ರಯತ್ನದಿಂದ ವಿವಾಹವು ಸಾಧ್ಯವಾಗುತ್ತದೆ. ಕೌಟುಂಬಿಕ ಜೀವನದಲ್ಲಿ ಶಾಂತಿ ನೆಮ್ಮದಿ ಮತ್ತು ಸಂತೋಷಕ್ಕೆ ಕೊನೆ ಇರುವುದಿಲ್ಲ. ಸಂಗಾತಿಯ ಜೊತೆಯಲ್ಲಿ ಅನೇಕ ಕಾರ್ಯಕ್ರಮಗಳಿಗೆ ತೆರಳುವಿರಿ. ಏಕಾಂತಕ್ಕೆ ಭಂಗ ಬರುವುದಿಲ್ಲ. ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಲ್ಲಿ ಸಂಬಂಧವು ಮತ್ತಷ್ಟು ದೃಢವಾಗುತ್ತದೆ. ಕೆಲವೊಮ್ಮೆ ಸವಾಲುಗಳು ಎದುರಾದರೂ ಯಾವುದೇ ತೊಂದರೆ ಕಂಡುಬರುವುದಿಲ್ಲ. ತಾಳ್ಮೆಯೊಂದೇ ಹಲವು ಸಮಸ್ಯೆಗಳಿಗೆ ದಿವ್ಯೌಷಧಿ ಆಗಲಿದೆ. ಪುರುಷರಿಗಿಂತ ಸ್ತ್ರೀಯರಿಗೆ ಪತಿ ಮತ್ತು ಮಕ್ಕಳ ಬಗ್ಗೆ ವಿಶೇಷವಾದ ಪ್ರೀತಿ ವಾತ್ಸಲ್ಯ ಇರಲಿದೆ.

ವ್ಯಾಪಾರ ಮತ್ತು ವ್ಯವಹಾರ: ಕಾರ್ಮಿಕರ ವಿಶ್ವಾಸ ಗಳಿಸಿ

ಮೇಷ ರಾಶಿಗೆ ಸೇರಿದವರು ಈ ಬಾರಿಯ ಯುಗಾದಿ ಹಬ್ಬದ ನಂತರ ವ್ಯಾಪಾರ ವ್ಯವಹಾರಗಳಲ್ಲಿ ಹೊಸ ಆಯಾಮವನ್ನು ಸೃಷ್ಟಿಸಲಿದ್ದಾರೆ. ಆದರೆ ಆತುರವನ್ನು ಬದಿಗಿಟ್ಟು ಸಂಯಮದಿಂದ ನಡೆದುಕೊಳ್ಳಬೇಕು. ಸ್ವತಂತ್ರವಾಗಿ ನಡೆಸುವ ವ್ಯಾಪಾರದಲ್ಲಿ ಯಾವುದೇ ತೊಂದರೆ ಬರುವುದಿಲ್ಲ. ಕೇವಲ ವ್ಯಾಪಾರಕ್ಕಾಗಿ ಸ್ನೇಹ ಬೆಳಸಿದರೆ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆದಾಯವು ನಿರ್ಧಾರವಾಗುತ್ತದೆ. ಪಾಲುಗಾರಿಕೆಯ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ನಿಮ್ಮ ಕೈಕೆಳಗೆ ಕೆಲಸ ಮಾಡುವ ಕಾರ್ಮಿಕರ ವಿಶ್ವಾಸವನ್ನು ಗಳಿಸಬೇಕು. ಅಧಿಕಾರಿಗಳಿಗೆ ನಾವಶ್ಯಕ ಮಾನಸಿಕ ಒತ್ತಡ ಇರಲಿದೆ. ವಿದೇಶಿ ಸಂಸ್ಥೆಯ ಸಹಭಾಗಿತ್ವ ಲಭಿಸಲಿದೆ.

ವಾಹನ ವಿಚಾರ: ಹೊಸ ಗಾಡಿ ಬರಬಹುದು ಸ್ವಾಮಿ

ಮೇಷ ರಾಶಿಗೆ ಸೇರಿದವರು ಆಗಸ್ಟ್ ತಿಂಗಳ ನಂತರ ಹೊಸ ವಾಹನ ಖರೀದಿಸುವ ಸಾಧ್ಯತೆ ಇದೆ. ಈಗ ಬಳಸುತ್ತಿರುವ ವಾಹನದ ಗುಣಮಟ್ಟವು ಸರಿಯಿಲ್ಲ ಎನ್ನುವ ತಕರಾರು ಈ ರಾಶಿಗೆ ಸೇರಿದವರಿಗೆ ಇತ್ತು. ನಿಮಗೆ ಬಿಳಿ ಅಥವಾ ನೀಲಿ ಬಣ್ಣದ ವಾಹನ ಇಷ್ಟವಾಗುವ ಸಾಧ್ಯತೆಗಳಿವೆ. ದಿಢೀರನೆ ನಿಮ್ಮ ಆಸೆಯು ಕೈಗೂಡುತ್ತದೆ. ಸದ್ಯದ ದಿನಗಳಲ್ಲಿ ನಿಮ್ಮ ಬಳಿ ಇರುವ ಹಳೆಯ ವಾಹನವನ್ನು ಮಾರುವ ಯೋಚನೆ ಇರುವುದಿಲ್ಲ. ವಾಹನ ಚಾಲನೆ ಮಾಡುವ ವೇಳೆ ತಲೆಗೆ ಪೆಟ್ಟು ಬೀಳಬಹುದು. ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನಗಳಲ್ಲಿ ಓಡಾಡಬೇಡಿ.

ಆರೋಗ್ಯದ ವಿಚಾರ: ಕಣ್ಣು, ಕೈಕಾಲು ಜೋಪಾನ

ಮೇಷ ರಾಶಿಗೆ ಸೇರಿದವರಿಗೆ ಕಣ್ಣಿನ ತೊಂದರೆ ಬಹುವಾಗಿ ಕಾಡುತ್ತದೆ. ಕಣ್ಣಿನಿಂದ ನೀರು ಸೋರುವ ತೊಂದರೆ ಉಂಟಾಗಬಹುದು. ಕೈಕಾಲುಗಳಲ್ಲಿ ಊತ ಸಂಭವಿಸಬಹುದು. ಸಣ್ಣಪುಟ್ಟ ತೊಂದರೆಗೂ ಹೆಚ್ಚಿನ ಕಾಳಜಿ ವಹಿಸಬೇಕು. ಮೇ ತಿಂಗಳ ನಂತರ ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆ ಇರುತ್ತದೆ. ಉಸಿರಾಟದಲ್ಲಿ ಏರುಪೇರು ಕಂಡು ಬರಬಹುದು. ನಿಶ್ಯಕ್ತಿ ಉಂಟಾಗದಲ್ಲಿ ಎಚ್ಚರಿಕೆ ತೆಗೆದುಕೊಳ್ಳಬೇಕು. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಮಕ್ಕಳ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ಜನವರಿ ತಿಂಗಳಿನಲ್ಲಿ ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ.

ಮೇಷ ರಾಶಿಗೆ ಪರಿಹಾರಗಳು

1) ಪ್ರತಿದಿನ ಶ್ರೀ ಆದಿತ್ಯಹೃದಯ ಪಠಿಸುವುದರಿಂದ ಅಥವಾ ಕೇಳುವುದರಿಂದ ಆತ್ಮಶಕ್ತಿಯು ಹೆಚ್ಚುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.

2) ಕಪ್ಪುಬಣ್ಣದ ಬಟ್ಟೆ ಮತ್ತು ಉದ್ದಿನಬೇಳೆಯನ್ನು ದಾನ ನೀಡುವುದರಿಂದ ಖರ್ಚು ವೆಚ್ಚಗಳು ಕಡಿಮೆ ಆಗಲಿವೆ.

3) ಕೆಂಪು ಹೂಬಿಡುವ (ಗುಲಾಬಿ ಗಿಡವಲ್ಲ) ಗಿಡವನ್ನು ಪೂರ್ವ ದಿಕ್ಕಿನಲ್ಲಿ ಇಟ್ಟು, 12 ಬಾರಿ ನೀರನ್ನು ಹಾಕಿದಲ್ಲಿ ಎಲ್ಲ ಸಮಸ್ಯೆಗಳು ದೂರವಾಗುತ್ತವೆ.

4) ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ವಿಭೂತಿ ಅಭಿಷೇಕ ಮಾಡಿಸುವುದು ಕ್ಷೇಮ. ಮನೆಯಲ್ಲೂ ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡಬಹುದು.

5) ಮನೆಯ ಮುಂಬಾಗಿಲಿಗೆ ದುರ್ಗಾದೇವಾಲಯದ ಕುಂಕುಮವನ್ನು ಇಡುವುದರಿಂದ ಋಣಾತ್ಮಕ ಶಕ್ತಿಯು ಕಡಿಮೆ ಆಗಲಿವೆ.

6) ಬಿಳಿ, ಕೆಂಪು ಮತ್ತು ಕೇಸರಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಬರಹ: ಎಚ್‌.ಸತೀಶ್, ಜ್ಯೋತಿಷಿ, ಬೆಂಗಳೂರು

ಇಮೇಲ್: sathishaapr23@gmail.com

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು.

(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್‌ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ಯುಗಾದಿ ಹಬ್ಬ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ಮಾಹಿತಿಗೆ kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.