ಚೀನಾ ಪದ್ಧತಿ ವರ್ಷ ಭವಿಷ್ಯ: ನಾಯಿ ಚಿಹ್ನೆಯವರಿಗೆ ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ಸಾಧ್ಯತೆ; ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಿ
ಜ್ಯೋತಿಷ್ಯದ ನಂಬಿಕೆ ಒಂದೊಂದು ದೇಶದಲ್ಲಿ ಒಂದೊಂದು ಥರ. ಇಂದಿನ ವರ್ಷ ಭವಿಷ್ಯಕ್ಕೆ ಚೀನಾದಲ್ಲಿ ಅನುಸರಿಸುವ ಜ್ಯೋತಿಷ್ಯ ನಂಬಿಕೆ ಆಧರಿಸಿ ವಿವರ ನೀಡಲಾಗಿದೆ. ಚೀನಾದಲ್ಲಿ ಒಂದು ವರ್ಷಕ್ಕೆ ಒಂದು ಪ್ರಾಣಿಯ ಚಿಹ್ನೆ. ಅಂದರೆ 12 ವರ್ಷಕ್ಕೆ 12 ಪ್ರಾಣಿ. ಈ ಪದ್ಧತಿಯಲ್ಲಿ 10ನೇ ಚಿಹ್ನೆ ನಾಯಿ ಆಗಿರುತ್ತದೆ. 2025ರಲ್ಲಿ ನಾಯಿ ರಾಶಿಯವರ ಭವಿಷ್ಯ ಹೇಗಿರುತ್ತೆ ನೋಡೋಣ.
ವರ್ಷ ಭವಿಷ್ಯ 2025 ಚೀನಾ ಪದ್ಧತಿ: ಇಲ್ಲಿ ನೀಡಿರುವುದು 2025ರ ವರ್ಷ ಭವಿಷ್ಯ. ಆದರೆ ಇದು ಭಾರತದಲ್ಲಿ ಅಲ್ಲ, ಚೀನಾ ದೇಶದಲ್ಲಿ ಅನುಸರಿಸುವ ವಿಧಾನ. ಅಲ್ಲಿ ಹನ್ನೆರಡು ವರ್ಷಕ್ಕೆ ಒಂದು ಚಕ್ರ. ಅಂದರೆ ಪ್ರತಿ ವರ್ಷಕ್ಕೆ ಒಂದರಂತೆ ಹನ್ನೆರಡು ವರ್ಷಕ್ಕೆ ಒಂದೊಂದು ಪ್ರಾಣಿಯ ಚಿಹ್ನೆಯನ್ನು ಇರಿಸಿಕೊಂಡಿದ್ದಾರೆ. ಹನ್ನೆರಡು ವರ್ಷದ ನಂತರ ಅವೇ ಆರಂಭದಿಂದ ಪುನರಾವರ್ತನೆ ಆಗುತ್ತವೆ. ಹಾಗೆ ಅದು ಶುರುವಾಗುವುದು ಇಲಿಯಿಂದ. ಆ ನಂತರ ಎತ್ತು, ಹುಲಿ, ಮೊಲ, ಡ್ರ್ಯಾಗನ್, ಹಾವು, ಕುದುರೆ, ಕುರಿ, ಕೋತಿ, ಹುಂಜ, ನಾಯಿ ಮತ್ತು ಹಂದಿ. ಥೇಟ್ ಭಾರತದಲ್ಲಿ ಇರುವಂತೆಯೇ; ಆದರೆ ಇಲ್ಲಿ ಮೇಷದಿಂದ ಮೀನದ ತನಕ ಹೆಸರನ್ನು ನೀಡಿದ್ದೇವೆ. ಆದರೆ ಚೀನಾದಲ್ಲಿ ಒಂದೊಂದು ಇಸವಿಗೆ ಒಂದೊಂದು ಪ್ರಾಣಿಗಳ ಹೆಸರನ್ನು ನೀಡುತ್ತಾರೆ. ಆ ಇಡೀ ವರ್ಷದಲ್ಲಿ ಯಾವುದೇ ತಿಂಗಳು ಅಥವಾ ದಿನದಂದು ಹುಟ್ಟಿದರೂ ಅವರಿಗೆ ಆ ಪ್ರಾಣಿಯೇ ರಾಶಿ ಅಂದುಕೊಳ್ಳಬೇಕು. 2025ನೇ ಇಸವಿಯನ್ನು ಪ್ರತಿನಿಧಿಸುವುದು ‘ಮರದ ಹಾವು (ವುಡ್ ಸ್ನೇಕ್)‘. ಇನ್ನು ಯಾರೆಲ್ಲಾ ‘ನಾಯಿ‘ಯನ್ನು ಪ್ರತಿನಿಧಿಸುತ್ತಾರೋ ಅವರ ವರ್ಷ ಭವಿಷ್ಯ ಈ ಲೇಖನದಲ್ಲಿದೆ.
ನಾಯಿ ರಾಶಿಯನ್ನು ಪ್ರತಿನಿಧಿಸುವವರು ಸಮತೋಲನ ಕಾಯ್ದುಕೊಳ್ಳುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತೀರಿ. ನಿಮ್ಮ ಆರೋಗ್ಯ, ದೈಹಿಕ ದೃಢತೆ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಮನ ನೀಡಿ. ನಿಮ್ಮ ಜೀವನದ ಯಾವುದೇ ವಿಚಾರ ಅಸಮತೋಲನ ಆಗಿದೆ ಎಂದು ನೀವು ಭಾವಿಸಿದಲ್ಲಿ ಮತ್ತೆ ಸಮತೋಲನ ಸಾಧಿಸುವುದಕ್ಕೆ ಪ್ರಯತ್ನಿಸಿ. ಇನ್ನು ನಿಮ್ಮ ಸುತ್ತಮುತ್ತಲ ಜನರ ಜೊತೆಗೆ ಸಂಬಂಧ ಸುಧಾರಿಸುವುದಕ್ಕೆ ಹಾಗೂ ವೈಮನಸ್ಸು ಅಥವಾ ಮನಸ್ತಾಪವನ್ನು ದೂರ ಮಾಡಿಕೊಳ್ಳುವುದಕ್ಕೆ ಸಮಯಪ್ರಜ್ಞೆ ಹಾಗೂ ಅರ್ಥ ಮಾಡಿಕೊಳ್ಳುವ ಸ್ವಭಾವವು ಸಹಾಯ ಮಾಡುತ್ತದೆ. ಹೊಸ ಹೊಸ ಜನರ ಜತೆಗೆ ಸಂಪರ್ಕವನ್ನು ಸಾಧಿಸುವುದಕ್ಕೆ, ಸ್ನೇಹ ಗಳಿಸಲು ಹೆಚ್ಚು ಸಮಯ ಮೀಸಲಿಡುವುದು ಹಾಗೂ ಶ್ರಮ ವಹಿಸುವುದು ಈ ವರ್ಷ ಬಹಳ ಮುಖ್ಯವಾಗಿರುತ್ತದೆ. ಇನ್ನು ಜೀವನಕ್ಕೆ ಸಂಬಂಧಿಸಿದ ಯಾವುದೇ ಮುಖ್ಯವಾದ ತೀರ್ಮಾನವನ್ನು ಕೈಗೊಳ್ಳುತ್ತೀರಿ. ವೃತ್ತಿಪರರಿಂದಲೇ ಸಲಹೆಯನ್ನು ಪಡೆದುಕೊಂಡು, ಮುಂದುವರಿಯಿರಿ.
1946, 1958, 1970, 1982, 1994, 2006, 2018ನೇ ಇಸವಿಯಲ್ಲಿ ಹುಟ್ಟಿದವರು ನಾಯಿ ಚಿಹ್ನೆಯವರು.
ಉದ್ಯೋಗ-ವೃತ್ತಿ ಭವಿಷ್ಯ
ನೀವು ಹೊಸ ಉದ್ಯೋಗ ಹುಡುಕುತ್ತಿದ್ದಲ್ಲಿ ಈ ವರ್ಷ ಅತ್ಯುತ್ತಮವಾಗಿದೆ. ಕೆಲಸದಲ್ಲಿ ಬದಲಾವಣೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಈಗ ಕೆಲಸ ಮಾಡುತ್ತಿರುವ ಕ್ಷೇತ್ರಕ್ಕಿಂತ ಬೇರೆ ಕಡೆ ಉತ್ತಮ ಸ್ಥಾನ ದೊರೆಯಬಹುದು. ಬಹಳ ಜನರ ಪಾಲಿಗೆ ಅಂಥದ್ದೊಂದು ಕ್ಷೇತ್ರದಲ್ಲಿ ಅಥವಾ ಸ್ಥಾನದಲ್ಲಿ ತಾವು ಕಾಣಿಸಿಕೊಳ್ಳಬಹುದು ಎಂಬುದು ಅತಿ ದೊಡ್ಡ ಕನಸಾಗಿರುತ್ತದೋ ಅಂಥ ಅವಕಾಶ ನಿಮಗೆ ದೊರೆಯಲಿದೆ. ಆದರೆ ಕಾಯಬೇಕಾಗುತ್ತದೆ. ವಿರಳವಾದ ಸ್ಥಾನ-ಮಾನಗಳು ನಿಮಗೆ ಸಿಗಬೇಕು ಎಂದಾದರೆ ಸಮಯ ಬೇಕು. ಇನ್ನು ನಿಮ್ಮ ಗುರಿಯನ್ನು ತಲುಪುವುದಕ್ಕೆ ಕಾರ್ಯತಂತ್ರ ಮಾಡಿಕೊಳ್ಳಿ.
ಈಗಾಗಲೇ ಒಂದೊಳ್ಳೆ ಸಂಸ್ಥೆ ಹಾಗೂ ಹುದ್ದೆಯಲ್ಲಿ ಇದ್ದರೆ ಈ ಹಿಂದೆ ನೀವು ಪಟ್ಟ ಶ್ರಮ ಹಾಗೂ ತೋರಿಸಿದ ಬದ್ಧತೆಗೆ ಉತ್ತಮ ಪ್ರತಿಫಲ ಸಿಗಲಿದೆ. ಹೊಸ ಜವಾಬ್ದಾರಿಗಳು ನಿಮಗೆ ದೊರೆಯಲಿವೆ. ಈ ಹೊಸ ಕಾರ್ಯದಲ್ಲೂ ಯಶಸ್ಸು ಸಾಧಿಸಬೇಕು ಎಂದಾದ್ದಲ್ಲಿ ನೀವು ಹೇಗೆ ಕೆಲಸ ಮಾಡಿಸಬಲ್ಲಿರಿ ಎಂಬುದನ್ನು ಸಾಧಿಸಿ ತೋರಿಸಬೇಕು. ಆ ಹೊಸ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುವುದಕ್ಕೆ ನೀವು ತೋರುವ ಜಾಣತನ, ಅನುಸರಿಸುವ ಕಾರ್ಯತಂತ್ರಗಳು ಹಾಗೂ ಜೊತೆಯಲ್ಲಿ ಕೆಲಸ ಮಾಡುವುದಕ್ಕೆ ಪ್ರೋತ್ಸಾಹಿಸುವ ರೀತಿ ಮೇಲಧಿಕಾರಿಗಳು ನಿಮ್ಮತ್ತ ಮೆಚ್ಚುಗೆಯ ನೋಟವನ್ನು ಬೀರುವುದಕ್ಕೆ- ಮೆಚ್ಚುಗೆಯ ಮಾತುಗಳನ್ನು ಆಡುವುದಕ್ಕೆ ಕಾರಣವಾಗಲಿದೆ. ಆ ವ್ಯಕ್ತಿಗೆ ಎಂಥ ಕಷ್ಟದ ಕೆಲಸಗಳನ್ನು ವಹಿಸಿದರೂ ಮಾಡಬಲ್ಲರು ಎಂದು ನೀವು ಉದ್ಯೋಗ- ವೃತ್ತಿ ಮಾಡುವ ಸ್ಥಳದಲ್ಲಿ ಇತರರು ನಿಮ್ಮ ಬಗ್ಗೆ ಮಾತನಾಡುವಂತಾಗಿದೆ.
ಉದ್ಯೋಗ- ವೃತ್ತಿಯಲ್ಲಿ ಉತ್ತಮ ಪ್ರಗತಿಯಂತೂ ನಿಚ್ಚಳವಾಗಿ ಕಾಣುತ್ತಿದೆ. ಇದರ ಜತೆಗೆ ಕೆಲವು ಆತಂಕಗಳು ಸಹ ಇವೆ. ಉದ್ಯೋಗ ಸ್ಥಳದಲ್ಲಿ ಕೆಲವು ವಿಚಾರ ಭೇದಗಳು ಹಾಗೂ ಗೊಂದಲಗಳು ಇದ್ದೇ ಇರುತ್ತವೆ. ಬಹಳ ಚಾಣಾಕ್ಷತನದಿಂದ ಅವುಗಳನ್ನು ನಿರ್ವಹಿಸಬೇಕಾಗುತ್ತದೆ. ಕಚೇರಿಯಲ್ಲಿನ ಗಾಸಿಪ್ ಗಳು ಅಥವಾ ಸಂಘರ್ಷಗಳಿಂದ ದೂರ ಇದ್ದು ಬಿಡಿ. ಒಂದು ವೇಳೆ ಕುತೂಹಲಕ್ಕೋ ಅಥವಾ ಬುದ್ಧಿವಂತಿಕೆ ಪ್ರದರ್ಶನಕ್ಕೋ ಅಂಥದ್ದರಲ್ಲಿ ಏನಾದರೂ ತೊಡಗಿಕೊಂಡರೆ ನಿಮ್ಮ ವರ್ಚಸ್ಸಿಗೆ ಪೆಟ್ಟು ಬೀಳುತ್ತದೆ.
ಹಣಕಾಸು ಭವಿಷ್ಯ
ಈ ವರ್ಷ ನಿಮ್ಮ ಹಣಕಾಸು ವಿಚಾರವನ್ನು ನಿರ್ವಹಣೆ ಮಾಡುವಾಗ ಎಚ್ಚರಿಕೆ ವಹಿಸಬೇಕು, ಜೊತೆಗೆ ಚುರುಕಾಗಿಯೂ ಇರಬೇಕು. ಅವಕಾಶಗಳಂತೂ ನಾನಾ ರೀತಿಯಲ್ಲಿ ನಿಮಗೆ ಬಂದೇ ಬರುತ್ತದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಏರಿಳಿತ ಇಲ್ಲದ ಸುಭದ್ರ ಹಾಗೂ ಸುಸ್ಥಿರವಾದ ಭವಿಷ್ಯವನ್ನು ಕಾಣಬೇಕು ಅಂತಾದರೆ ಹೂಡಿಕೆಗೆ ಸಂಬಂಧಿಸಿದ ಸರಿಯಾದ ಆಯ್ಕೆ ಮಾಡಿಕೊಳ್ಳಲೇಬೇಕು. ಒಂದು ವೇಳೆ ಈಗಾಗಲೇ ನೀವು ಹೂಡಿಕೆಗಳನ್ನು ಮಾಡುತ್ತಾ ಇದ್ದೀರಿ ಎಂದಾದರೆ ಈಗ ಇರುವಂಥ ಆಸ್ತಿಯ ಇನ್ನಷ್ಟು ಮೌಲ್ಯವನ್ನು ಸೇರಿಸಲು ಅಥವಾ ಅಪ್ ಗ್ರೇಡ್ ಮಾಡಲು ಗಮನವನ್ನು ಕೇಂದ್ರೀಕರಿಸಿ.
ಷೇರುಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಅಪಾಯದ ಹೂಡಿಕೆ ಮಾಡಲು ಹೋಗಬೇಡಿ. ಅದರ ಬದಲಿಗೆ ಈ ಹಿಂದಿನ ಆ ಕಂಪನಿಯ ಆದಾಯ, ಡಿವಿಡೆಂಡ್ ವಿತರಣೆ, ಸ್ಥಿರತೆ, ಭವಿಷ್ಯದಲ್ಲಿ ಅದರ ಬೆಳವಣಿಗೆ, ವಿಸ್ತರಣೆ, ಆದಾಯ ಹೆಚ್ಚಳದ ಸಾಧನೆಯನ್ನೆಲ್ಲ ಅಳೆದು- ತೂಗಿ ಹಣವನ್ನು ಹೂಡಿಕೆ ಮಾಡಿ. ಒಂದು ವೇಳೆ ಷೇರಿನ ಬಗ್ಗೆ ಹೆಚ್ಚಿನ ಅರಿವು ಇಲ್ಲವಾದಲ್ಲಿ ಷೇರು ವ್ಯವಹಾರಕ್ಕಿಂತ ಕಡಿಮೆ ಅಪಾಯದ ಮ್ಯೂಚುವಲ್ ಫಂಡ್ ಅಥವಾ ಇಂಡೆಕ್ಸ್ ಫಂಡ್‌ಗಳನ್ನು ಆರಿಸಿಕೊಳ್ಳಿ.
ಪರ್ಸನಲ್ ಡೆವಲಪ್ ಮೆಂಟ್ ಕೂಡ ಹೂಡಿಕೆ ಅವಕಾಶವೇ. ಹೊಸ ಜ್ಞಾನ- ಲೈಸೆನ್ಸ್ ಪಡೆಯುವುದು, ಉತ್ತಮ ಉದ್ಯೋಗಕ್ಕಾಗಿ ಅಥವಾ ಬಡ್ತಿಗಾಗಿ ಹೊಸದಾಗಿ ಡಿಗ್ರಿ ಅಥವಾ ಕೋರ್ಸ್‌ಗಳನ್ನು ಮಾಡುವುದು ಕೂಡ ಒಂದೊಳ್ಳೆ ಹೂಡಿಕೆ. ವೈಯಕ್ತಿಕ ಬೆಳವಣಿಗೆಗೆ ಹಣ ಹೂಡಿಕೆ ಮಾಡುವುದು ಹಣದ ದೃಷ್ಟಿಯಿಂದ ಲಾಭದಾಯಕ ಅಲ್ಲದೇ ಇರಬಹುದು. ಆದರೆ ಉದ್ಯೋಗದಲ್ಲಿ ಹೆಚ್ಚಿನ ವೇತನ ಪಡೆಯುವುದಕ್ಕೆ ಅಥವಾ ವೃತ್ತಿಜೀವನದಲ್ಲಿ ಉನ್ನತ ಸ್ಥಾನ ಗಳಿಸುವುದಕ್ಕೆ ನೆರವಾಗುತ್ತದೆ
ಪ್ರೀತಿ-ಪ್ರೇಮ, ಮದುವೆ ಭವಿಷ್ಯ
ಈ ವರ್ಷ ಸಂಬಂಧದ ವಿಚಾರಗಳಲ್ಲಿ ದೈವಿಕವಾದ ಅನುಭವ ಪಡೆಯಲಿದ್ದೀರಿ. ಇನ್ನು ಯಾರು ವಿವಾಹ ವಯಸ್ಕರಾಗಿದ್ದೀರಿ ಅಂಥವರಿಗೆ ಆತ್ಮ ಸಂಗಾತಿ ದೊರೆಯುವ ಸಾಧ್ಯತೆ ಹೆಚ್ಚು. ಅದೆಷ್ಟೋ ಜನ್ಮಗಳ ಬಂಧ ಇರುವಂತೆ ಅನಿಸಲಿದೆ. ದೈಹಿಕವಾದ ಆಕರ್ಷಣೆಗಿಂತ ಹೆಚ್ಚಾಗಿ ಭಾವನಾತ್ಮಕವಾದ ತಂತುಗಳು ಬೆಸೆಯುವಂಥ ಅವಧಿ ಇದಾಗಿರುತ್ತದೆ. ಒಂದು ವೇಳೆ ಈ ಹಿಂದಿನ ಸಂಬಂಧಗಳಲ್ಲಿ ಸಮಸ್ಯೆಗಳಾಗಿ, ಅದರಿಂದ ಮನಸ್ಸಿಗೆ ಘಾಸಿ ಆಗುವ ಹಂತಕ್ಕೆ ಬೇಸರವಾಗಿದ್ದಲ್ಲಿ ಅಲ್ಲಿನ ತಪ್ಪುಗಳು ಮರುಕಳಿಸದಂತೆ ಹಾಗೂ ಹೊಂದಾಣಿಕೆ ಆಗುವಂತೆ ಸಂಗಾತಿಯನ್ನು ಹುಡುಕಿಕೊಳ್ಳಿ. ವೈಯಕ್ತಿಕ ನೆಲೆಗಟ್ಟಿನಲ್ಲಿಯೇ ಸಂಗಾತಿಯ ಆಯ್ಕೆಯನ್ನು ಪರಿಗಣಿಸಿ, ಅವರ ಬೇಕು- ಬೇಡಗಳು, ಆಲೋಚನೆಗಳನ್ನು ಪರಿಗಣಿಸಿ.
ಈಗಾಗಲೇ ಪ್ರೀತಿ- ಪ್ರೇಮದಲ್ಲಿ ಇದ್ದೀರಿ ಎಂದಾದಲ್ಲಿ ನಿಮ್ಮ ಗೆಳೆಯ ಅಥವಾ ಗೆಳತಿಯನ್ನು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳುವಂಥ ಸಮಯ ಇದಾಗಿರುತ್ತದೆ. ಒಂದು ಹಂತದಲ್ಲಿ ಈ ವ್ಯಕ್ತಿ ನಿಮಗೆ ಸರಿಹೋಗಬಹುದಾ ಎಂಬ ಅನುಮಾನ ಮೂಡಿದರೂ ಹೆಚ್ಚು ಗೊಂದಲ ಮಾಡಿಕೊಳ್ಳುವ ಅಗತ್ಯ ಇಲ್ಲ.
ಬಹಳ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೀರಿ ಎಂದಾದಲ್ಲಿ ಅದನ್ನು ಮದುವೆ ಹಂತಕ್ಕೆ ಒಯ್ಯುವುದಕ್ಕೆ ಗಮನವನ್ನು ನೀಡಿ. ಮಾತುಕತೆಯಲ್ಲೋ ಅಭಿಪ್ರಾಯ ತಿಳಿಸುವುದರಲ್ಲೋ ವ್ಯತ್ಯಾಸಗಳು ಕಂಡುಬರುತ್ತಿದೆ. ಕೂತು, ಮಾತನಾಡಿಕೊಂಡು ಬಗೆಹರಿಸಿಕೊಳ್ಳಿ. ನೀವು ಒಟ್ಟಾಗಿ ಬದುಕುವುದಕ್ಕೆ ದುಃಖವೋ ಸಂತೋಷವೋ ಅಥವಾ ಆ ಎರಡರ ಮಧ್ಯದ ಕ್ಷಣಗಳೋ ಪರಸ್ಪರರು ನೀವು ಒಬ್ಬರು ಮತ್ತೊಬ್ಬರಿಗೆ ಹೇಗೆ ನೆರವಾದಿರಿ ಎಂಬುದು ತುಂಬ ಮುಖ್ಯವಾಗುತ್ತದೆ ಎಂಬ ಸಂಗತಿ ಈ ವರ್ಷ ನಿಮಗೇ ಅನಿಸುತ್ತದೆ, ಆ ಅಂಶವನ್ನು ಕಲಿಸುತ್ತದೆ.
ಆರೋಗ್ಯ ಭವಿಷ್ಯ
ಈ ವರ್ಷ ಆರೋಗ್ಯ ವಿಚಾರದಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಜೀವನಶೈಲಿಯಲ್ಲಿ ಸಕಾರಾತ್ಮಕವಾಗಿ ಬದಲಾವಣೆ ಮಾಡಿಕೊಂಡು, ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸೂಕ್ತ ಔಷಧೋಪಚಾರ ಪಡೆಯುವುದಕ್ಕೆ ಹಿಂಜರಿಕೆ ಬೇಡ. ಇನ್ನು ಕೆಳಬೆನ್ನಿನ ಭಾಗದ ಬಗ್ಗೆ ಗಮನ ಹೆಚ್ಚು ನೀಡಿ. ದೇಹದ ಮೇಲಿನ ಒತ್ತಡ ಅಥವಾ ಬಹಳ ಸಮಯ ಕೂತುಕೊಂಡೇ ಇರುವುದರಿಂದ ಕೆಳ ಬೆನ್ನಿನ ನೋವು ಕಾಡಬಹುದು. ಸಣ್ಣ- ಪುಟ್ಟ ಮನೆ ಔಷಧ ಮಾಡಿದರೆ ಇದು ಸರಿಹೋಗುತ್ತದೆ ಎಂಬ ಧೋರಣೆ ಮಾಡಬೇಡಿ. ಕೆಲವು ನೋವುಗಳ ಬಹಳ ಗಂಭೀರ ಸ್ವರೂಪ ಪಡೆದುಕೊಳ್ಳುತ್ತವೆ ಹಾಗೂ ದೀರ್ಘಾವಧಿಯಲ್ಲಿ ಹಾಗೇ ಉಳಿದು, ಬಹಳ ಕೆಟ್ಟ ಸ್ಥಿತಿಗೆ ಕಾರಣ ಆಗುತ್ತದೆ. ನಿರ್ದಿಷ್ಟ ಸಮಸ್ಯೆಗೆ ಚಿಕಿತ್ಸೆ ನೀಡುವುದರಲ್ಲಿ ತಜ್ಞರು ಎನಿಸಿಕೊಂಡವರನ್ನೇ ಭೇಟಿ ಮಾಡಿ, ಔಷಧೋಪಚಾರ ಪಡೆದುಕೊಳ್ಳಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.