Bhagavad Gita: ಪರಮಾತ್ಮನಾಗಿ ಪ್ರತಿಯೊಂದು ದೇಹದಲ್ಲಿಯೂ ಇದ್ದೇನೆ; ಭಗವದ್ಗೀತೆಯ ಅರ್ಥ ತಿಳಿಯಿರಿ-spiritual news bhagavad gita updesh lord krishna i am present in every body bhagavad gita quotes in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಪರಮಾತ್ಮನಾಗಿ ಪ್ರತಿಯೊಂದು ದೇಹದಲ್ಲಿಯೂ ಇದ್ದೇನೆ; ಭಗವದ್ಗೀತೆಯ ಅರ್ಥ ತಿಳಿಯಿರಿ

Bhagavad Gita: ಪರಮಾತ್ಮನಾಗಿ ಪ್ರತಿಯೊಂದು ದೇಹದಲ್ಲಿಯೂ ಇದ್ದೇನೆ; ಭಗವದ್ಗೀತೆಯ ಅರ್ಥ ತಿಳಿಯಿರಿ

Bhagavad Gita: ಪರಮಾತ್ಮನಾಗಿ ಪ್ರತಿಯೊಂದು ದೇಹದಲ್ಲಿಯೂ ಇದ್ದೇನೆ ಎಂದು ಶ್ರೀಕೃಷ್ಣ ಹೇಳಿರುವುದರ ಅರ್ಥವನ್ನು ಭಗವದ್ಗೀತೆ 13 ನೇ ಅಧ್ಯಾಯದ 3ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - ಶ್ಲೋಕ 3

ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿ ಸರ್ವಕ್ಷೇತ್ರೇಷು ಭಾರತ |

ಕ್ಷೇತ್ರಕ್ಷೇತ್ರಜ್ಞಯೋರ್ಜ್ಞಾನಂ ಯತ್ತಜ್‌ಜ್ಞಾನಂ ಮತಂ ಮಮ ||3|

ಅನುವಾದ: ಭರತವಂಶ ಶ್ರೇಷ್ಠನಾದ ಅರ್ಜುನನೆ, ಎಲ್ಲ ದೇಹಗಳಲ್ಲಿರುವ ಕ್ಷೇತ್ರಜ್ಞನು ನಾನೇ. ಈ ದೇಹವನ್ನೂ ಅದರ ಕ್ಷೇತ್ರಜ್ಞನನ್ನೂ ತಿಳಿಯುವುದೇ ಜ್ಞಾನ ಎನ್ನುವುದನ್ನು ನೀನು ಅರ್ಥಮಾಡಿಕೊಳ್ಳಬೇಕು. ಇದೇ ನನ್ನ ಅಭಿಪ್ರಾಯ.

ಭಾವಾರ್ಥ: ದೇಹ ಮತ್ತು ಕ್ಷೇತ್ರಜ್ಞ, ಆತ್ಮ ಮತ್ತು ಪರಮಾತ್ಮ ಈ ವಿಷಯವನ್ನು ಚರ್ಚಿಸುವಾಗ ನಾವು ಅಧ್ಯಯನ ಮಾಡಬೇಕಾದ ಮೂರು ಬೇರೆ ಬೇರೆ ವಿಷಯಗಳಿವೆ - ಪ್ರಭು, ಜೀವಿ ಮತ್ತು ಜಡವಸ್ತು. ಪ್ರತಿಯೊಂದು ದೇಹದಲ್ಲಿಯೂ, ಚಟುವಟಿಕೆಗಳ ಪ್ರತಿಯೊಂದು ಕ್ಷೇತ್ರದಲ್ಲಿಯೂ ಎರಡು ಆತ್ಮಗಳಿವೆ. ವ್ಯಕ್ತಿಗತ ಆತ್ಮ ಮತ್ತು ಪರಮಾತ್ಮ. ಪರಮಾತ್ಮನು ದೇವೋತ್ತಮ ಪರಮ ಪುರುಷನಾದ ಕೃಷ್ಣನ ಸ್ವಾಂಶ ವಿಸ್ತರಣೆಯಾದದ್ದರಿಂದ, ಕೃಷ್ಣನು ನಾನು ಕ್ಷೇತ್ರಜ್ಞ, ಆದರೆ ವ್ಯಕ್ತಿಗತ ಕ್ಷೇತ್ರಜ್ಞನಲ್ಲ, ಪರಮ ಕ್ಷೇತ್ರಜ್ಞ. ನಾನು ಪರಮಾತ್ಮನಾಗಿ ಪ್ರತಿಯೊಂದು ದೇಹದಲ್ಲಿಯೂ ಇದ್ದೇನೆ ಎಂದು ಹೇಳುತ್ತಾನೆ.

ಭಗವದ್ಗೀತೆಯಲ್ಲಿ ನಿರೂಪಿಸಿರುವಂತೆ ಕ್ಷೇತ್ರ ಮತ್ತು ಕ್ಷೇತ್ರಜ್ಞರ ವಿಷಯವನ್ನು ಬಹು ಸೂಕ್ಷ್ಮವಾಗಿ ಅಧ್ಯಯನ ಮಾಡಿದವನು ಜ್ಞಾನವನ್ನು ಪಡೆಯಬಲ್ಲ. ಪ್ರಭುವು, ಪ್ರತಿ ವ್ಯಕ್ತಿಗತ ದೇಹದಲ್ಲಿರುವ ಕ್ಷೇತ್ರಜ್ಞನು ನಾನು ಎಂದು ಹೇಳುತ್ತಾನೆ. ಒಬ್ಬ ವ್ಯಕ್ತಿಗೆ ತನ್ನ ದೇಹದ ವಿಷಯ ತಿಳಿದಿರಬಹುದು, ಆದರೆ ಇತರ ದೇಹಗಳ ವಿಷಯ ಅವನಿಗೇನೂ ತಿಳಿಯದು. ಪರಮಾತ್ಮನಾಗಿ ಎಲ್ಲ ದೇಹಗಳಲ್ಲಿರುವ ದೇವೋತ್ತಮ ಪರಮ ಪುರುಷನಿಗೆ ಎಲ್ಲ ದೇಹಗಳ ಎಲ್ಲ ವಿಷಯಗಳೂ ತಿಳಿದಿರುತ್ತವೆ. ಅವನಿಗೆ ವಿವಿಧ ಜೀವ ವರ್ಗಗಳ ಬೇರೆ ಬೇರೆ ದೇಹಗಳೆಲ್ಲವೂ ತಿಳಿದಿರುತ್ತವೆ.

ಪೌರನೊಬ್ಬನಿಗೆ ತನ್ನ ಭೂಮಿಯ ತುಂಡಿನ ವಿಷಯ ಎಲ್ಲವೂ ತಿಳಿದಿರಬಹುದು. ಆದರೆ ರಾಜನಿಗೆ ತನ್ನ ಅರಮನೆ ಮಾತ್ರವಲ್ಲ, ವ್ಯಕ್ತಿಗತ ಪೌರರು ಹೊಂದಿರುವ ಎಲ್ಲ ಆಸ್ತಿಗಳ ವಿಷಯವೂ ತಿಳಿದಿರುತ್ತದೆ. ಹಾಗೆಯೇ ವ್ಯಕ್ತಿಯು ತನ್ನ ಶರೀರದ ಒಡೆಯನಾಗಿರಬಹುದು. ಆದರೆ ಭಗವಂತನು ಸಕಲ ಶರೀರಗಳ ಒಡೆಯನಾಗಿದ್ದಾನೆ. ರಾಜನು ರಾಜ್ಯದ ಮೂಲ ಯಜಮಾನ. ಪೌರನು ಎರಡನೆಯ ವರ್ಗದ ಯಜಮಾನ. ಇದೇ ರೀತಿಯಲ್ಲಿ ಪರಮ ಪ್ರಭುವು ಎಲ್ಲ ದೇಹಗಳ ಪರಮ ಪ್ರಭು.

ದೇಹದಲ್ಲಿ ಇಂದ್ರಿಯಗಳಿವೆ. ಪರಮ ಪ್ರಭುವು ಹೃಷಿಕೇಶ, ಹೀಗೆಂದರೆ ಇಂದ್ರಿಯಗಳ ನಿಯಂತ್ರಕ ಎಂದು ಅರ್ಥ. ರಾಜನು ರಾಜ್ಯದ ಎಲ್ಲ ಚಟುವಟಿಕೆಗಳ ಮೂಲ ನಿಯಂತ್ರಕ. ಪೌರರು ಎರಡನೆಯ ವರ್ಗದ ನಿಯಂತ್ರಕರು. ಇದೇ ರೀತಿಯಲ್ಲಿ ಪರಮ ಪ್ರಭುವು ಇಂದ್ರಿಯಗಳ ಮೂಲ ನಿಯಂತ್ರಕ. ಪರಮ ಪ್ರಭುವು, ನಾನು ಕ್ಷೇತ್ರಜ್ಞನೂ ಹೌದು ಎಂದು ಹೇಳುತ್ತಾನೆ. ಹೀಗೆಂದರೆ ಅವನು ಪರಮ ಜ್ಞಾನಿ ಎಂದರ್ಥ. ವ್ಯಕ್ತಿಗತ ಆತ್ಮನಿಗೆ ತನ್ನ ದೇಹದ ವಿಷಯ ಮಾತ್ರ ತಿಳಿದಿರುತ್ತದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.