ನವರಾತ್ರಿಯಲ್ಲಿ ನವದುರ್ಗೆಯರಿಗೆ ಪೂಜೆ ಪುನಸ್ಕಾರ, ಆದಿಶಕ್ತಿಯ 9 ಅವತಾರಗಳಿಗೆ ಮೀಸಲಾದ 9 ದೇವಾಲಯಗಳಿವು-spiritual news navratri 2024 9 temples for each avatar of goddess durga uks ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನವರಾತ್ರಿಯಲ್ಲಿ ನವದುರ್ಗೆಯರಿಗೆ ಪೂಜೆ ಪುನಸ್ಕಾರ, ಆದಿಶಕ್ತಿಯ 9 ಅವತಾರಗಳಿಗೆ ಮೀಸಲಾದ 9 ದೇವಾಲಯಗಳಿವು

ನವರಾತ್ರಿಯಲ್ಲಿ ನವದುರ್ಗೆಯರಿಗೆ ಪೂಜೆ ಪುನಸ್ಕಾರ, ಆದಿಶಕ್ತಿಯ 9 ಅವತಾರಗಳಿಗೆ ಮೀಸಲಾದ 9 ದೇವಾಲಯಗಳಿವು

ನವರಾತ್ರಿ ಅಕ್ಟೋಬರ್ 3 ರಿಂದ 12 ರ ತನಕ ನಡೆಯಲಿದ್ದು, ಭಾರತದ ಉದ್ದಗಲಕ್ಕೂ ಸಿದ್ಧತೆ ಜೋರಾಗಿದೆ. ನವರಾತ್ರಿಯಲ್ಲಿ ನವದುರ್ಗೆಯರಿಗೆ ಪೂಜೆ ಪುನಸ್ಕಾರ ನಡೆಯವುದು ವಾಡಿಕೆ. ಆದಿಶಕ್ತಿಯ 9 ಅವತಾರಗಳಿಗೆ ಮೀಸಲಾದ 9 ದೇವಾಲಯಗಳಿದ್ದು ಅವುಗಳ ವಿವರ ಇಲ್ಲಿದೆ.

ಆದಿಶಕ್ತಿಯ 9 ಅವತಾರಗಳಿಗೆ ಮೀಸಲಾದ 9 ದೇವಾಲಯಗಳ ವಿವರ. (ಸಾಂಕೇತಿಕ ಚಿತ್ರ)
ಆದಿಶಕ್ತಿಯ 9 ಅವತಾರಗಳಿಗೆ ಮೀಸಲಾದ 9 ದೇವಾಲಯಗಳ ವಿವರ. (ಸಾಂಕೇತಿಕ ಚಿತ್ರ)

ಭಾರತದ ಉದ್ದಗಲಕ್ಕೂ ಆಚರಿಸುವ ಹಬ್ಬಗಳ ಪೈಕಿ ನವರಾತ್ರಿ ಪ್ರಮುಖವಾದುದು. ಆಚರಣೆಗಳು ಬೇರೆ ಬೇರೆ ರೀತಿ ಇದ್ದರೂ ಆರಾಧನೆ ಮಾತ್ರ ಆದಿಶಕ್ತಿಯ ಅವತಾರಗಳಾದ ನವದುರ್ಗೆಯರದ್ದೇ. ದುರ್ಗಾ ದೇವಿಯ ಒಂಬತ್ತು ಬೇರೆ ಬೇರೆ ರೂಪಗಳಿಗೆ ಶರತ್‌ಕಾಲದ ನವರಾತ್ರಿಯಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ನವದುರ್ಗೆಯರು ಅಂದರೆ ಶೈಲಪುತ್ರೀ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾಳರಾತ್ರೀ, ಕಾತ್ಯಾಯನಿ, ಮಹಾಗೌರಿ ಮತ್ತು ಸಿದ್ಧಿದಾತ್ರೀ ದೇವಿಯರಿಗೆ ಪೂಜೆ ನಡೆಯುತ್ತವೆ. ಇದು ದೇವಿ ಆರಾಧನೆಯ ಅವಧಿ. ಜಗತ್ತಿನ ಸೃಷ್ಟಿಗೆ ಕಾರಣವಾದ ಶಕ್ತಿದೇವತೆಯ ಆರಾಧನೆಯೂ ಹೌದು. ಈ ಒಂಬತ್ತು ಅವತಾರಗಳಿಗೆ ಮೀಸಲಾದ ದೇವಸ್ಥಾನಗಳು ಭಾರತದಲ್ಲಿವೆ. ಬಹುತೇಕ ದೇವಸ್ಥಾನಗಳು ಉತ್ತರ ಪ್ರದೇಶದಲ್ಲಿದೆ. ಇನ್ನುಳಿದಂತೆ ಪಂಜಾಬ್ ಮತ್ತು ಮಧ್ಯಪ್ರದೇಶದಲ್ಲಿ ತಲಾ ಒಂದೊಂದು ದೇವಸ್ಥಾನ ಇದೆ. ಉತ್ತರ ಪ್ರದೇಶದಲ್ಲೂ ವಿಶೇಷವಾಗಿ ಧಾರ್ಮಿಕ ಮಹತ್ವ ಹೊಂದಿರುವ ವಾರಾಣಸಿಯಲ್ಲೇ ಹೆಚ್ಚಿನ ದೇವಸ್ಥಾನಗಳಿರುವುದು ವಿಶೇಷ.

ನವದುರ್ಗೆಯರಿಗೆ ಮೀಸಲಾದ 9 ದೇವಸ್ಥಾನಗಳಿವು

1) ಶೈಲಪುತ್ರಿ ದೇವಿ ದೇವಸ್ಥಾನ, ವಾರಾಣಸಿ: ಶೈಲಪುತ್ರಿ, ದುರ್ಗೆಯ ಮೊದಲ ರೂಪ, ಶಕ್ತಿ ಮತ್ತು ಶುದ್ಧತೆಯನ್ನು ಸಂಕೇತಿಸುತ್ತದೆ. ವಾರಾಣಸಿಯ ಮರ್ಹಿಯಾ ಘಾಟ್ ಬಳಿ ಇರುವ ಈ ದೇವಾಲಯವು ನವರಾತ್ರಿಯ ಸಮಯದಲ್ಲಿ ಅಸಂಖ್ಯಾತ ಭಕ್ತರನ್ನು ಆಕರ್ಷಿಸುತ್ತದೆ. ವಾರಾಣಸಿ ರೈಲ್ವೆ ನಿಲ್ದಾಣದಿಂದ 2 ಕಿಮೀ ದೂರದಲ್ಲಿದೆ. ಭಕ್ತರು ತಮ್ಮ ಆರೋಗ್ಯ ಮತ್ತು ಸಮೃದ್ಧಿಗಾಗಿ ದೇವಿಯನ್ನು ಪೂಜಿಸುತ್ತಾರೆ.

2) ಬ್ರಹ್ಮಚಾರಿಣೀ ದೇವಿ ದೇವಸ್ಥಾನ, ವಾರಾಣಸಿ: ದುರ್ಗೆಯ ಎರಡನೆಯ ಅವತಾರವೇ ಬ್ರಹ್ಮಚಾರಿಣಿ. ಭಕ್ತಿ ಮತ್ತು ತಪಸ್ಸಿನ ಶಕ್ತಿ ಸ್ವರೂಪಿಯಾಗಿ ಕಾಣಿಸಿಕೊಂಡಿರುವ ದೇವಿ. ವಾರಾಣಸಿಯ ದಶಾಶ್ವಮೇಧ ಘಾಟ್ ಬಳಿ ಇರುವ ಈ ಪ್ರಶಾಂತ ದೇವಾಲಯವು ಬುದ್ಧಿವಂತಿಕೆ ಮತ್ತು ಜೀವನದ ಸವಾಲುಗಳನ್ನು ಜಯಿಸಲು ಶಕ್ತಿಯನ್ನು ಬಯಸುವ ಆರಾಧಕರ ಶಕ್ತಿಕೇಂದ್ರ.

3) ಚಂದ್ರಘಂಟಾ ದೇವಿ ದೇವಸ್ಥಾನ, ವಾರಾಣಸಿ: ಆದಿಶಕ್ತಿಯ 3ನೇ ಅವತಾರ. ವಾರಾಣಸಿಯ ಜೈಟ್‌ಪುರದಲ್ಲಿ ಚಂದ್ರಘಂಟಾ ದೇವಿಯ ದೇಗುಲವಿದೆ. ಇಲ್ಲಿ ಕೆಂಪು ರವಿಕೆ ಕಣ, ಕೆಂಪು ಹೂವು ಮತ್ತು ತೆಂಗಿನ ಕಾಯಿಯನ್ನು ದೇವಿಗೆ ಅರ್ಪಿಸಲಾಗುತ್ತಿದೆ. ಭಕ್ತರು ಶತ್ರುನಾಶಕ್ಕೆ ದೇವಿಯನ್ನು ಪೂಜಿಸುತ್ತಾರೆ.

4) ಕೂಷ್ಮಾಂಡ ದೇವಿ ದೇಗುಲ, ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ಘಟಂಪುರ ಪ್ರದೇಶದಲ್ಲಿ ದುರ್ಗಾದೇವಿಯ ನಾಲ್ಕನೇ ಅವತಾರ ಕೂಷ್ಮಾಂಡ ದೇವಿಯ ದೇವಸ್ಥಾನ. ಸ್ಪಷ್ಟ ಆಲೋಚನೆ ಮತ್ತು ಧನಾತ್ಮಕ ಮನೋಭಾವಕ್ಕಾಗಿ ಭಕ್ತರು ಈ ದೇವಿಯನ್ನು ಪೂಜಿಸುತ್ತಾರೆ.

5) ಸ್ಕಂದಮಾತಾ ದೇವಿ ದೇವಸ್ಥಾನ, ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯ ಪುಣ್ಯ ಭೂಮಿಯಲ್ಲಿ ಜೈಟ್‌ಪುರ ಪ್ರದೇಶದಲ್ಲೇ ಸ್ಕಂದಮಾತಾ ದೇವಿ ದೇವಸ್ಥಾನವೂ ಇದೆ. ಆದಿಶಕ್ತಿಯ 5ನೇ ಅವತಾರವೇ ಸ್ಕಂದಮಾತಾ. ಭಕ್ತರು ತಮ್ಮ ಯೋಗಕ್ಷೇಮ, ಸಂತಾನ, ಫಲವಂತಿಕೆಗಾಗಿ ಸ್ಕಂದಮಾತೆಯನ್ನು ಪೂಜಿಸುತ್ತಾರೆ.

6) ಕಾತ್ಯಾಯನೀ ದೇವಿ ದೇಗುಲ ವೃಂದಾವನ: ಉತ್ತರ ಪ್ರದೇಶದ ವೃಂದಾವನದಲ್ಲಿ ಕಾತ್ಯಾಯನೀ ದೇವಿ ದೇಗುಲವಿದೆ. ಇದು ದುರ್ಗಾ ದೇವಿಯ 6ನೇ ಅವತಾರ. ಮಹಿಷಾಸುರನನ್ನು ಕೊಂದ ಮಹಿಷಮರ್ದಿನಿ (ಕಾತ್ಯಾಯನೀ) ದೇವಿಯನ್ನು ಶತ್ರುಬಾಧೆ ನಿವಾರಣೆಗಾಗಿ ಪೂಜಿಸುತ್ತಾರೆ. ವಿಜಯಕ್ಕಾಗಿ ಪೂಜಿಸುತ್ತಾರೆ. ದೇವಿಯ ಖಡ್ಗ ಉಚ್ವಲ್ ಚಂದ್ರಹಾಸ ಕ್ಕೂ ಇಲ್ಲಿ ಪೂಜೆ ನಡೆಯುತ್ತದೆ.

7) ಕಾಳರಾತ್ರೀ ದೇವಿ ದೇವಸ್ಥಾನ, ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿ ದುರ್ಗೆಯ ಏಳನೇ ಅವತಾರ ಕಾಳರಾತ್ರೀ ದೇವಿಯ ದೇವಸ್ಥಾನವೂ ಇದೆ. ಚತುರ್ಭುಜೆಯಾದ ಕಾಳರಾತ್ರೀ ದೇವಿಯು ಕತ್ತೆ ಮೇಲೆ ಸವಾರಿ ಮಾಡುತ್ತ ದುಷ್ಟ ಸಂಹಾರಕ್ಕೆ ಇಳಿದವಳು. ಈ ಕಾಳರಾತ್ರೀ ದೇವಿಯ ದೇಗಲ ವಾರಾಣಸಿಯ ಕಾಳಿಕಾ ಗಲ್ಲಿಯಲ್ಲಿದೆ.

8) ಮಹಾಗೌರಿ ದೇವಿ ದೇಗುಲ, ಲುಧಿಯಾನ: ಪಂಜಾಬ್‌ನ ಲುಧಿಯಾನದಲ್ಲಿ ಮಹಾಗೌರಿ ದೇವಿ ದೇವಸ್ಥಾನವಿದೆ. ದುರ್ಗಾ ದೇವಿಯ 8ನೇ ಅವತಾರವೇ ಮಹಾಗೌರಿ. ಪಾಪ ನಾಶಕ್ಕೆ, ಮನಸ್ಸಿನ ನೆಮ್ಮದಿಗೆ, ಬದುಕಿನಲ್ಲಿ ಸಾಮರಸ್ಯಕ್ಕೆ ಭಕ್ತರು ಮಹಾಗೌರಿಯ ಮೊರೆ ಹೋಗುತ್ತಾರೆ.

9) ಸಿದ್ಧಿಧಾತ್ರೀ ದೇವಿ ದೇವಸ್ಥಾನ, ಸಾಗರ: ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ದೇವಿಯ ಒಂಬತ್ತನೇ ಅವತಾರವಾಗಿರುವ ಸಿದ್ಧಿಧಾತ್ರೀ ದೇವಿಯ ದೇಗುಲ. ಇದು ಅತ್ಯಂತ ಪ್ರಮುಖ ಶಕ್ತಿ ಪೀಠಗಳ ಪೈಕಿ ಒಂದು. ಭಕ್ತರಿಗೆ ಸಿದ್ಧಿಧಾತ್ರೀಯಾಗಿ ಅವರ ಬೇಡಿಕೆಗಳನ್ನು ಸಿದ್ಧಿಸಿ ಕೊಡುವ ತಾಯಿಯಾಗಿ ಪೂಜಿಸಲ್ಪಡುತ್ತಿದ್ದಾಳೆ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.