ರಾಮಾಯಣದ ಉಗಮದ ಮನೋಜ್ಞ ಕಥೆಯಿದು; ಮಹಾಕಾವ್ಯವನ್ನು ಮೊದಲು ಯಾರು ಯಾರಿಗೆ ಹೇಳಿದರು? ನಮೋ ಮಹರ್ಷಿ ವಾಲ್ಮೀಕಿ-spiritual sri ramayana story how maharishi valmiki wrote story of sri rama narada narrates the story of perfect man sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾಮಾಯಣದ ಉಗಮದ ಮನೋಜ್ಞ ಕಥೆಯಿದು; ಮಹಾಕಾವ್ಯವನ್ನು ಮೊದಲು ಯಾರು ಯಾರಿಗೆ ಹೇಳಿದರು? ನಮೋ ಮಹರ್ಷಿ ವಾಲ್ಮೀಕಿ

ರಾಮಾಯಣದ ಉಗಮದ ಮನೋಜ್ಞ ಕಥೆಯಿದು; ಮಹಾಕಾವ್ಯವನ್ನು ಮೊದಲು ಯಾರು ಯಾರಿಗೆ ಹೇಳಿದರು? ನಮೋ ಮಹರ್ಷಿ ವಾಲ್ಮೀಕಿ

ನಾರದರು ಬ್ರಹ್ಮನ ಮಾನಸಪುತ್ರರು. ನಾರದರಿಂದ ರಾಮಾಯಣವನ್ನು ಕೇಳಿ ಅದನ್ನು ಬರೆದವರು ವಾಲ್ಮೀಕಿ ಮಹರ್ಷಿಗಳು. ಹಾಗಾದರೆ ವಾಲ್ಮೀಕಿಗಳು ಯಾರೆಂದು ತಿಳಿಯುವುದು ಅತ್ಯವಶ್ಯಕ. (ಬರಹ: ಸತೀಶ್ ಎಚ್.)

ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ಬಂದ ನಾರದ ಮಹಾಮುನಿ
ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ಬಂದ ನಾರದ ಮಹಾಮುನಿ (wikipedia.org/wiki/Narada)

ಶ್ರೀರಾಮನ ಬಗ್ಗೆ ಭಾರತೀಯರಿಗೆ ಹೆಮ್ಮೆ, ಭಕ್ತಿ, ಆಸಕ್ತಿ. ರಾಮಾಯಣದ ಹೆಸರು ಕೇಳದವರು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ನಾವೆಲ್ಲರೂ ಸಂತೋಷದಿಂದ ಭಯಭಕ್ತಿಗಳಿಂದ ರಾಮಾಯಣವನ್ನು ಓದುತ್ತೇವೆ. ಬೇರೆಯವರಿಂದ ಕೇಳುತ್ತೇವೆ. ದೃಶ್ಯ ಮಾಧ್ಯಮದಲ್ಲಿಯೂ ನೋಡುತ್ತೇವೆ. ಆದರೆ ಮೊದಲು ರಾಮಾಯಣವನ್ನು ಯಾರು ಯಾರಿಗೆ ಹೇಳಿದರು ಎಂಬುದು ನಿಮಗೆ ತಿಳಿದಿದೆಯೇ? ಇದು ನಿಜಕ್ಕೂ ಆಶ್ಚರ್ಯಕರ ಸಂಗತಿ. ನೂರು ಕೋಟಿ ಶ್ಲೋಕಗಳ ರಾಮಾಯಣವನ್ನು ರಚಿಸಿದ್ದು ಸಾಕ್ಷಾತ್ ಬ್ರಹ್ಮದೇವ. ಮೊದಲು ಇದನ್ನು ನಾರದರ ಆದಿಯಾಗಿ ಅನೇಕ ಮಹರ್ಷಿಗಳಿಗೆ ಉಪದೇಶಿಸುತ್ತಾನೆ. ಬ್ರಹ್ಮನ ಆದೇಶದಂತೆ ನಾರದರು ಭೂಲೋಕದ ಜನರಿಗೆ ಸುಲಭವಾಗಿ ಮತ್ತು ಸಂಕ್ಷೇಪವಾಗಿ ಉಪದೇಶ ಮಾಡುವ ಕಾರಣದಿಂದಾಗಿ ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ಬರುತ್ತಾರೆ.

ವಾಲ್ಮೀಕಿ ಮಹರ್ಷಿ ನಾರದರನ್ನು ಸಕಲ ಗೌರವಗಳೊಂದಿಗೆ ಸತ್ಕಾರ ಮಾಡುತ್ತಾರೆ. ನಾರದರು ವಾಲ್ಮೀಕಿ ಮಹರ್ಷಿಯ ಕೆಲ ಧರ್ಮ ಸಂದೇಹಗಳ ಬಗ್ಗೆ ವಿವರಿಸುತ್ತಾರೆ. ನಮ್ಮ ಮನಸ್ಸನ್ನು ನಿಗ್ರಹಿಸಿಕೊಂಡು ಕೆಲಸದಲ್ಲಿ, ಅಧ್ಯಯನದಲ್ಲಿ, ಮನಸ್ಸಿನಲ್ಲಿ ಮತ್ತು ದೇಹಶಕ್ತಿಯಲ್ಲಿ ದೇವರನಾಮವನ್ನು ಅಳವಡಿಸಿಕೊಳ್ಳಬೇಕು. ಶ್ರೇಷ್ಠವಾದ ವ್ಯಕ್ತಿ ಯಾರೆಂದರೆ ಒಳ್ಳೆಯ ಮಾತನ್ನು ಬಲ್ಲವನು ಮಾತ್ರ. ಕೆಲವರಿಗೆ ಮಾತಿನ ಮೇಲೆ ಹತೋಟಿ ಇರುತ್ತದೆ ಅವರನ್ನು ವಾಗ್ಮಿ ಎನ್ನಬಹುದು. ಶ್ರೇಷ್ಠ ಎನ್ನಬೇಕಾದಲ್ಲಿ ಕೆಟ್ಟ ಪದಗಳನ್ನು ಬಳಸದೆ ಒಳ್ಳೆಯ ನುಡಿಗಳನ್ನು ಮಾತ್ರವೇ ಆಡುವ ಮನುಷ್ಯನಾಗಿ ಬದುಕಬೇಕು.

ನಾರದರು ಬ್ರಹ್ಮನ ಮಾನಸಪುತ್ರರು. ನಾರದರಿಂದ ರಾಮಾಯಣವನ್ನು ಕೇಳಿ ಅದನ್ನು ಬರೆದವರು ವಾಲ್ಮೀಕಿ ಮಹರ್ಷಿಗಳು. ಹಾಗಾದರೆ ವಾಲ್ಮೀಕಿಗಳು ಯಾರೆಂದು ತಿಳಿಯಬೇಕಾದ ಅವಶ್ಯಕತೆ ಇದೆ. ವಲ್ಮಿಕ ಎಂದರೆ ಹುತ್ತ ಎಂಬ ಅರ್ಥ ಬರುತ್ತದೆ. ಅಂದರೆ ಹುತ್ತದಲ್ಲಿ ಹುಟ್ಟಿದವರು ವಾಲ್ಮೀಕಿ ಮಹರ್ಷಿಗಳು. ಬಹಳ ಹಿಂದೆ ಭೃಗುವಂಶದಲ್ಲಿ ಪ್ರಚೇತಸ ಎಂಬ ಮಹರ್ಷಿ ಇದ್ದರು. ಅವರ ಮಗನೇ ಋಕ್ಷ. ಒಮ್ಮೆ ಋಕ್ಷನು ಗಾಢವಾದ ತಪಸ್ಸನ್ನು ಆಚರಿಸಲು ಅನುವಾಗುತ್ತಾನೆ.

ಕೆಲ ಅಡ್ಡಿ ಆತಂಕಗಳನ್ನು ದೂರ ಮಾಡಿ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ಬಿಸಿಲು, ಮಳೆ, ಚಳಿ ಗಾಳಿ ಎನ್ನದೆ ಕಠಿಣ ಪರಿಶ್ರಮದಿಂದ ಹಲವು ವರ್ಷಗಳು ಕಠಿಣ ತಪಸ್ಸನ್ನು ಆಚರಿಸುತ್ತಾರೆ. ಅವರ ಮೇಲೆ ಅವನನ್ನು ಮೀರಿದಂತೆ ದೊಡ್ಡ ಹುತ್ತ ಒಂದು ಬೆಳೆಯುತ್ತದೆ. ಇದನ್ನು ನೋಡಿ ಕನಿಕರಗೊಂಡ ವರುಣನು ಭಾರಿ ಮಳೆಯನ್ನೇ ಸೃಷ್ಟಿಸುತ್ತಾನೆ. ಆಗ ಋಕ್ಷನು ಹುತ್ತದಿಂದ ಹೊರ ಬರುತ್ತಾನೆ. ಆನಂತರದ ದಿನಗಳಲ್ಲಿ ಇವನು ವಾಲ್ಮೀಕಿ ಎಂಬ ಹೆಸರಿನಿಂದ ಪ್ರಸಿದ್ದಿಯಾಗುತ್ತಾರೆ. ವಾಲ್ಮೀಕಿ ಎಂಬ ಮಹಾನ್ ತತ್ವಜ್ಞಾನಿ ಹೇಗೆ ರೂಪುಗೊಂಡರು ಎನ್ನುವುದಕ್ಕೆ ಹಲವು ಕಥೆಗಳಿವೆ. ಇದರ ಪೈಕಿ ಇದೂ ಸಹ ಒಂದು.

ನಾರದರನ್ನು ವಾಲ್ಮೀಕಿ ಮುನಿಗಳು ತನಗೆ ಓರ್ವ ವ್ಯಕ್ತಿಯ ಕಥೆಯನ್ನು ಹೇಳಬೇಕು ಎಂದು ಕೇಳುತ್ತಾರೆ. ಆದರೆ ಆ ವ್ಯಕ್ತಿಯು ಎಲ್ಲಾ ರೀತಿಯ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡಿರಬೇಕೆಂಬ ಷರತ್ತು ವಿಧಿಸುತ್ತಾರೆ. ಮಹಾಜ್ಞಾನಿಗಳಾದ ನಾರದರು ಈ ಮಾತನ್ನು ಕೇಳಿದ ನಂತರ ಎಲ್ಲಾ ರೀತಿಯ ಒಳ್ಳೆಯ ಗುಣಗಳನ್ನು ಹೊಂದಿರುವ ವ್ಯಕ್ತಿ ಎಂದರೆ ಶ್ರೀರಾಮ ಮಾತ್ರ ಎಂಬ ತೀರ್ಮಾನಕ್ಕೆ ಬಂದು ಶ್ರೀರಾಮನ ಕಥೆಯನ್ನು ಹೇಳಲು ಆರಂಭಿಸುತ್ತಾರೆ.

ಅತಿ ಸಂಕ್ಷಿಪ್ತವಾಗಿ ಇಡೀ ರಾಮಾಯಣದ ಕಥೆಯನ್ನು ನಾರದರು ವಾಲ್ಮೀಕಿಗೆ ಹೇಳುತ್ತಾರೆ. ಆನಂತರ ಸ್ವಯಂ ಬ್ರಹ್ಮದೇವನೇ ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ಬರುತ್ತಾನೆ. ಮುನಿಗಳಿಂದ ಆತಿಥ್ಯವನ್ನು ಸ್ವೀಕರಿಸಿ ಬ್ರಹ್ಮದೇವನು ಸಂತುಷ್ಟನಾಗುತ್ತಾನೆ. ನಾರದ ಮಹರ್ಷಿಗಳು ಸಂಕ್ಷಿಪ್ತವಾಗಿ ತಿಳಿಸಿದ ಶ್ರೀರಾಮನ ಕಥೆಯನ್ನು ನೀನು ವಿಸ್ತರಿಸಿ ಬರೆಯಬೇಕೆಂದು ಬ್ರಹ್ಮದೇವನು ವಾಲ್ಮೀಕಿಗಳನ್ನು ವಿನಂತಿಸಿಕೊಳ್ಳುತ್ತಾನೆ. ಶ್ರೀ ರಾಮನ ಚರಿತೆಯು ನಮ್ಮ ಕಣ್ಣೆದುರೇ ನಡೆದಂತೆ ಗೋಚರಿಸುತ್ತದೆ. ಆದ್ದರಿಂದ ನಾರದರು ತಿಳಿಸದೆ ಹೋದ ಎಲ್ಲಾ ವಿಚಾರಗಳು ನಿಮಗೆ ತಿಳಿಯುತ್ತದೆ. ಇದೊಂದು ಮಹಾಕಾವ್ಯವಾಗಿ ಸೂರ್ಯ-ಚಂದ್ರರು ಇರುವವರೆಗೂ ಜನರು ಇದನ್ನು ಓದುತ್ತಾರೆ ಎಂದು ನುಡಿಯುತ್ತಾನೆ. ಆ ನಂತರ ವಾಲ್ಮೀಕಿ ಮುನಿಗಳು 24,000 ಶ್ಲೋಕಗಳ ರಾಮಾಯಣ ಗ್ರಂಥವನ್ನು ಬರೆದು ಮುಗಿಸುತ್ತಾರೆ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.