ತಿಪ್ಪರಲಾಗ ಹಾಕಿದರೂ ಪಾಕಿಸ್ತಾನಕ್ಕೆ ಹೋಗಲ್ಲ ಭಾರತ; ಐಸಿಸಿ ಹೈಬ್ರಿಡ್ ಮಾದರಿಗೆ ಒಪ್ಪದಿದ್ರೆ ಪಾಕ್ಗೆ ಲಕ್ಷಾಂತರ ಡಾಲರ್ ನಷ್ಟ
ICC Champions Trophy 2025: ಮಾರ್ಕ್ಯೂ ಈವೆಂಟ್‌ಗೆ ನೆರೆಯ ಪಾಕಿಸ್ತಾನ ದೇಶಕ್ಕೆ ಪ್ರಯಾಣಿಸಲು ಬಿಸಿಸಿಐ ನಿರಾಕರಿಸಿದ ನಂತರ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಸ್ಥಿತಿಯ ಬಗ್ಗೆ ಸ್ಪಷ್ಟತೆ ಕಂಡುಕೊಳ್ಳಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನವೆಂಬರ್ 29ರಂದು ಮಹತ್ವದ ಸಭೆ ಆಯೋಜಿಸಿದೆ.
ಪಾಕಿಸ್ತಾನಕ್ಕೆ ಪ್ರಯಾಣಿಸದಿರಲು ಕೈಗೊಂಡ ಭಾರತದ ನಿರ್ಧಾರದ ನಂತರ ಅನಿಶ್ಚಿತತೆ ಎದುರಿಸುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಸುತ್ತಲಿನ ಬಿಕ್ಕಟ್ಟು ಪರಿಹರಿಸಲು ನವೆಂಬರ್ 29ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತನ್ನ ನಿರ್ದೇಶಕರ ಮಂಡಳಿಯು ಮಹತ್ವದ ಸಭೆಯನ್ನು ಕರೆದಿದೆ. ಶುಕ್ರವಾರ (ನ 29) ಆನ್ಲೈನ್ನಲ್ಲಿ ನಡೆಯಲಿರುವ ಈ ಸಭೆಯಲ್ಲಿ ಹೈಬ್ರಿಡ್ ಮಾದರಿ ಪ್ರಸ್ತಾಪಿಸಲು ಐಸಿಸಿ ತೀರ್ಮಾನಿಸಿದೆ.
ಪ್ರತಿಷ್ಠಿತ ಟೂರ್ನಿ ಆಯೋಜಿಸುವ ಹಕ್ಕುಗಳನ್ನು ಪಾಕಿಸ್ತಾನ ಪಡೆದಿದೆ. ಸಂಪೂರ್ಣ ಟೂರ್ನಿಯನ್ನು ಪಾಕಿಸ್ತಾನದಲ್ಲೇ ಆಯೋಜಿಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಟ್ಟು ಹಿಡಿದಿದೆ. ಇತ್ತ ಬಿಸಿಸಿಐ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸುವಂತೆ ಹಠ ಹಿಡಿದಿದೆ. ಈ 2 ಕ್ರಿಕೆಟ್ ಮಂಡಳಿಗಳ ನಿರ್ಧಾರ ಗೊಂದಲಕ್ಕೆ ಒಳಗಾದ ಐಸಿಸಿ, ಎಲ್ಲಾ ಸದಸ್ಯ ಮಂಡಳಿಗಳಿಗೆ ಬದ್ಧವಾಗಿರುವ ನಿರ್ಣಾಯಕ ನಿರ್ಧಾರ ಕೈಗೊಳ್ಳಲು ಈ ಸಭೆ ಕರೆದಿದ್ದು, ಅಂತಿಮ ನಿರ್ಧಾರಕ್ಕೆ ಬರಲಿದೆ.
2025ರ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯುವ ಪಂದ್ಯಾವಳಿಗೆ ಬಿಸಿಸಿಐ ಪ್ರಯಾಣ ಬೆಳೆಸುವುದಿಲ್ಲ ಎಂದು ಹೇಳಿದ ನಂತರ ಚಾಂಪಿಯನ್ಸ್ ಟ್ರೋಫಿ ಸ್ಥಳಗಳ ಆಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ಕ್ರಿಕೆಟ್ ಮಂಡಳಿಗಳ ಜೊತೆಗೆ ಚರ್ಚೆ ನಡೆಸಲಿದೆ. ಫೆಬ್ರವರಿ 19-ಮಾರ್ಚ್ 9ರ ನಡುವೆ ನಡೆಯುವ 15 ಪಂದ್ಯಗಳ ಸ್ಪರ್ಧೆಗೆ ಹೈಬ್ರಿಡ್ ಮಾದರಿ ಒಪ್ಪುವಂತಹದ್ದಲ್ಲ ಎಂದು ಪಿಸಿಬಿ ಸಮರ್ಥಿಸಿಕೊಂಡಿದೆ. ಆದರೆ ಹೈಬ್ರಿಡ್ ಮಾದರಿಗೆ ಒಪ್ಪುತ್ತೇವೆ, ಇಲ್ಲವಾದರೆ ಬರುವುದಿಲ್ಲ ಎಂದು ಭಾರತ ತಂಡ ಕಡ್ಡಿಮುರಿದಂತೆ ಹೇಳಿದೆ.
ಪಾಕಿಸ್ತಾನದಲ್ಲಿ 10 ಪಂದ್ಯ, ಬೇರೆಡೆ 5 ಪಂದ್ಯ
ಮತ್ತೊಂದೆಡೆ ಭಾರತ, ನಮ್ಮ ದೇಶಕ್ಕೆ ಬರಲಿಲ್ಲವೆಂದರೆ ನಾವು ಕೂಡ ಟೂರ್ನಿಯನ್ನು ಬಹಿಷ್ಕರಿಸುತ್ತೇವೆ ಎಂದು ಪಿಸಿಬಿ, ಐಸಿಸಿಗೆ ಬೆದರಿಕೆ ಹಾಕಿದೆ. ಈ ಎರಡು ಮಂಡಳಿಗಳ ಬಿಕ್ಕಟ್ಟಿನ ಮಧ್ಯೆ ಐಸಿಸಿ ಸೀಮಿತ ಪರ್ಯಾಯ ಮಾರ್ಗ ಕಂಡುಕೊಳ್ಳಲು ನೋಡುತ್ತಿದೆ. ಸದ್ಯ ಹೈಬ್ರಿಡ್ ಮಾದರಿಯಲ್ಲಿ ಪಾಕಿಸ್ತಾನದಲ್ಲಿ 10 ಪಂದ್ಯ ಮತ್ತು ತಟಸ್ಥ ಸ್ಥಳದಲ್ಲಿ 5 ಪಂದ್ಯ ಆಯೋಜಿಸುವ ಯೋಜನೆ ಹೊಂದಿದೆ. ಸೆಮಿಫೈನಲ್, ಫೈನಲ್ ಪಂದ್ಯಗಳ ಆಯೋಜನೆಗೆ ಸ್ಥಳಗಳ ಕುರಿತು ಸಭೆಯಲ್ಲಿ ಐಸಿಸಿ ಪ್ರಸ್ತಾಪಿಸುತ್ತದೆ ಎನ್ನಲಾಗುತ್ತಿದೆ.
ಪಾಕಿಸ್ತಾನ ಕೆಲವೊಂದು ಷರತ್ತುಗಳಿಗೆ ಹೈಬ್ರಿಡ್ ಮಾದರಿಗೆ ಒಪ್ಪಿಗೆ ನೀಡಬಹುದು ಎಂದು ಹೇಳಲಾಗುತ್ತಿದೆ. ಲೀಗ್ ಪಂದ್ಯಗಳಿಗೆ ಸ್ಥಳ ಅಂತಿಮಗೊಳಿಸಿ ಸೆಮಿಫೈನಲ್, ಫೈನಲ್ಗೆ ಬಾಕಿ ಉಳಿಸಲಾಗುತ್ತದೆ ಎನ್ನಲಾಗುತ್ತಿದೆ. ಏಕೆಂದರೆ ಭಾರತ ತಂಡ ಸೆಮಿಫೈನಲ್ ಪ್ರವೇಶಿಸದೇ ಇದ್ದರೆ ಸೆಮಿಫೈನಲ್ ಮತ್ತು ಫೈನಲ್ ಪಾಕಿಸ್ತಾನದಲ್ಲೇ ಆಯೋಜಿಸಲು ಪಿಸಿಬಿ ಒಪ್ಪಿಗೆ ನೀಡಬಹುದು ಎಂದು ವರದಿಯಾಗಿದೆ. ಆದರೆ ಪಿಸಿಬಿ, ನಾವು ಭಾರತಕ್ಕೆ ವಿಶ್ವಕಪ್ ಆಡಲು ಹೋಗಿದ್ದೆವು. ಅದೇ ರೀತಿ ಅವರು ನಮ್ಮ ದೇಶಕ್ಕೆ ಬರಬೇಕು ಎಂದು ಈ ಹಿಂದೆ ಹೇಳಿತ್ತು.
ಭಾರತದ ಪಂದ್ಯಗಳಿಗೆ ಸ್ಥಳ ಅಂತಿಮಗೊಂಡಿಲ್ಲ
ಈ ಹಂತದಲ್ಲಿ ಭಾರತ ಪಂದ್ಯಗಳನ್ನು ಎಲ್ಲಿ ಆಯೋಜಿಸಬೇಕು ಎಂಬುದರ ಕುರಿತು ಐಸಿಸಿ ಇನ್ನೂ ನಿರ್ಧರಿಸಿಲ್ಲ. ಯುಎಇ, ದುಬೈ, ಅಬುಧಾಬಿ ಅಥವಾ ಶ್ರೀಲಂಕಾದಲ್ಲಿ ಆಯೋಜಿಸಬಹುದು ಎಂದು ಹೇಳಲಾಗಿದೆ. ಸಂಭಾವ್ಯ ಮತ್ತು ಅನುಕೂಲಕರ ಮತ್ತು ಹವಾಮಾನ ಪರಿಸ್ಥಿತಿಗಳಿಗೆ ತಕ್ಕಂತೆ ಆಯೋಜಿಸಲು ನಿರ್ಧರಿಸಿದೆ. ಹೈಬ್ರಿಡ್ ಮಾದರಿಯ ಪರವಾಗಿ ಐಸಿಸಿ ನಿರ್ಧಾರವನ್ನು ಪಿಸಿಬಿ ತಕ್ಷಣವೇ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ. ಆದರೆ ಐಸಿಸಿ 14 ಮಂಡಳಿ ಸದಸ್ಯರ ನಡುವೆ ವೋಟಿಂಗ್ ನಡೆಸಬಹುದು.
ಐಸಿಸಿ ಜೊತೆಗೆ ಪಾಕ್ಗೆ ಲಕ್ಷಾಂತರ ಡಾಲರ್ ನಷ್ಟ
ಐಸಿಸಿ ಮಂಡಳಿಯು ಹೈಬ್ರಿಡ್ ಮಾದರಿಯನ್ನು ತಿರಸ್ಕರಿಸಿದರೆ ಇಡೀ ಟೂರ್ನಿಯನ್ನು ಪಾಕಿಸ್ತಾನದಿಂದ ಬೇರೆಡೆಗೆ ಸ್ಥಳಾಂತರಿಸಲು ಪ್ರಸ್ತಾಪಿಸಬಹುದು. ಹಾಗಾಗಿ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಪಾಕಿಸ್ತಾನ ಸರ್ಕಾರವನ್ನು ಸಮಾಲೋಚಿಸಲು ಕಾಲಾವಕಾಶವನ್ನು ಕೇಳಬಹುದು. ಸರ್ಕಾರದ ಮುಂದೆ ಪರಿಸ್ಥಿತಿ ವಿವರಿಸಬೇಕು. ಭಾರತ ಇಲ್ಲದೆ ಚಾಂಪಿಯನ್ಸ್ ಟ್ರೋಫಿಯು ಆಯೋಜನೆಗೆ ಐಸಿಸಿ ಒಪ್ಪುವುದಿಲ್ಲ. ಏಕೆಂದರೆ ಐಸಿಸಿ ಜೊತೆಗೆ ಎಲ್ಲಾ ಕ್ರಿಕೆಟ್ ಮಂಡಳಿಗೆ ಭಾರೀ ನಷ್ಟವಾಗಲಿದೆ. ಅದರಲ್ಲೂ ಆತಿಥ್ಯ ವಹಿಸುತ್ತಿರುವ ಪಿಸಿಬಿಗೆ ಲಕ್ಷಾಂತರ ಡಾಲರ್ಗಳು ನಷ್ಟ ಅನುಭವಿಸಬೇಕಾಗುತ್ತದೆ.