ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ ಯಾವಾಗ? ಬಿಸಿಸಿಐ ಉತ್ತರ ಹೀಗಿದೆ
T20 World Cup 2024: ಬಿಸಿಸಿಐ ಆಯ್ಕೆ ಸಮಿತಿಯು ಐಪಿಎಲ್ ಪಂದ್ಯಾವಳಿಯ ಮಧ್ಯದಲ್ಲೇ ಭಾರತ ಟಿ20 ವಿಶ್ವಕಪ್ ತಂಡವನ್ನು ಪ್ರಕಟಿಸಲು ಮುಂದಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗುತ್ತಿದ್ದಂತೆಯೇ, ಮೊದಲ ತಂಡ ನ್ಯೂಯಾರ್ಕ್‌ಗೆ ತೆರಳಲಿದೆ.
ಐಪಿಎಲ್ ಪಂದ್ಯಾವಳಿ ನಡೆಯುತ್ತಿರುವುದರ ಮಧ್ಯದಲ್ಲೇ, ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಏಪ್ರಿಲ್ ಕೊನೆಯ ವಾರದಲ್ಲಿ ಟಿ20 ವಿಶ್ವಕಪ್ 2024 (ICC T20 World Cup 2024) ಪಂದ್ಯಾವಳಿಗೆ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಐಸಿಸಿ ನಿಗದಿಪಡಿಸಿರುವಂತೆ, ಈ ಬಾರಿ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್ ಪಂದ್ಯಾವಳಿಗೆ ತಂಡಗಳ ಪಟ್ಟಿಯನ್ನು ಸಲ್ಲಿಸಲು ಮೇ 1 ಕೊನೆಯ ದಿನಾಂಕವಾಗಿದೆ. ಆದರೂ, ಮೇ 25ರವರೆಗೆ ಪ್ರತಿ ತಂಡಗಳು ತಮ್ಮ ಆರಂಭಿಕ ತಂಡದಲ್ಲಿ ಕೇವಲ ಒಂದು ಬದಲಾವಣೆ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ ಪಂದ್ಯಾವಳಿಗೆ ಅಂತಿಮ 15 ಆಟಗಾರ ಪಟ್ಟಿಯನ್ನು ಏಪ್ರಿಲ್ ಅಂತಿಮ ವಾರದಲ್ಲಿ ಬಿಡುಗಡೆ ಮಾಡಲು ಬಿಸಿಸಿಐ ನಿರ್ಧರಿಸಿದೆ.
ಸದ್ಯ ಭಾರತದಲ್ಲಿ ಐಪಿಎಲ್ ಸಂಭ್ರಮ ಜೋರಾಗಿದೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಆಟಗಾರರು ತೋರುವ ಪ್ರದರ್ಶನವು, ವಿಶ್ವಕಪ್ ತಂಡದ ಆಯ್ಕೆಗೆ ನಿರ್ಣಾಯಕವಾಗಲಿದೆ.
ಸುದ್ದಿಸಂಸ್ಥೆ ಪಿಟಿಐ ವರದಿಯ ಪ್ರಕಾರ, ಐಪಿಎಲ್ 2024ರ ಲೀಗ್ ಹಂತದ ಮೊದಲಾರ್ಧ ಪಂದ್ಯಗಳ ಕೊನೆಯಲ್ಲಿ ಭಾರತ ತಂಡವನ್ನು ಬಿಸಿಸಿಐ ಆಯ್ಕೆ ಮಾಡಲಿದೆ. ಅಷ್ಟರಲ್ಲೇ, ಆಯ್ಕೆದಾರರು ಪ್ರತಿಯೊಬ್ಬ ಆಟಗಾರನ ಫಾರ್ಮ್ ಹಾಗೂ ಫಿಟ್ನೆಸ್ ಕುರಿತ ಎಲ್ಲಾ ಅಗತ್ಯ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ. ಈ ನಡುವೆ, ಐಪಿಎಲ್ 2024ರ ಆವೃತ್ತಿಯ ಪ್ಲೇ ಆಫ್ ತಲುಪಲು ವಿಫಲವಾದ ತಂಡಗಳ ಆಟಗಾರರು; ನೇರವಾಗಿ ಯುಎಸ್ಎ ವಿಮಾನ ಹತ್ತಲಿದ್ದಾರೆ. ಆಟಗಾರರು ಅಮೆರಿಕದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಲುವಾಗಿ ಈ ಯೋಚನೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ | IPL 2024: ಗುಜರಾತ್ vs ಎಸ್ಆರ್‌ಎಚ್; ಸಂಭಾವ್ಯ ತಂಡ, ಅಹಮದಾಬಾದ್ ಪಿಚ್ ಹಾಗೂ ಹವಾಮಾನ ವರದಿ ಹೀಗಿದೆ
“ಏಪ್ರಿಲ್ ಕೊನೆಯ ವಾರದಲ್ಲಿ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಾಗುವುದು. ಆ ಹೊತ್ತಿಗೆ ಐಪಿಎಲ್‌ನ ಮೊದಲಾರ್ಧ ಮುಗಿಯುತ್ತದೆ. ಅಷ್ಟರಲ್ಲೇ ರಾಷ್ಟ್ರೀಯ ಆಯ್ಕೆ ಸಮಿತಿಯು ಆಟಗಾರರ ಫಾರ್ಮ್ ಮತ್ತು ಫಿಟ್ನೆಸ್ ಅನ್ನು ನಿರ್ಣಯಿಸುವ ಸ್ಥಿತಿಯಲ್ಲಿರುತ್ತದೆ” ಎಂದು ಬಿಸಿಸಿಐನ ಉನ್ನತ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.
“ಮೇ 19ರಂದು ಐಪಿಎಲ್‌ನ ಲೀಗ್ ಹಂತದ ಪಂದ್ಯಗಳು ಮುಗಿಯುತ್ತವೆ. ಅದಾದ ಕೂಡಲೇ, ಕ್ರಿಕೆಟಿಗರ ಮೊದಲ ಬ್ಯಾಚ್ ನ್ಯೂಯಾರ್ಕ್‌ಗೆ ತೆರಳಲಿದ್ದಾರೆ,” ಎಂದು ಮೂಲಗಳು ತಿಳಿಸಿವೆ.
15 ಸದಸ್ಯರ ತಂಡದ ಹೊರತಾಗಿ, ಕೆಲವು ಸ್ಟ್ಯಾಂಡ್-ಬೈ ಆಟಗಾರರನ್ನು ಸಹ ಕಳಿಸಲಾಗುತ್ತದೆ. ಪ್ರಧಾನ ತಂಡದ ಯಾವುದೇ ಆಟಗಾರನು ಗಾಯಗೊಂಡರೆ ಅಥವಾ ಅನಿರೀಕ್ಷಿತ ಸಂದರ್ಭಗಳಿಂದಾಗಿ ಟೂರ್ನಿಯಿಂದ ಹಿಂದೆ ಸರಿಯಬೇಕಾದ ಸನ್ನಿವೇಶ ಎದುರಾದರೆ, ಎದುರಾಗುವ ಸಮಸ್ಯೆ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.