ಕನ್ನಡ ಸುದ್ದಿ  /  Cricket  /  Bcci Takes Strict Action On Controversial Flying Kiss Behavior Of Harshit Rana To Send Off Mayank Agarwal Kkr Vs Srh Jra

ಹರ್ಷಿತ್‌ ರಾಣಾಗೆ ತುಟ್ಟಿಯಾದ ಫ್ಲೈಯಿಂಗ್‌ ಕಿಸ್;‌ ಮಯಾಂಕ್‌ ಕೆಣಕಿದ ಕೆಕೆಆರ್‌ ಬೌಲರ್‌ಗೆ ದಂಡದ ಬಿಸಿ ಮುಟ್ಟಿಸಿದ ಬಿಸಿಸಿಐ

Harshit Rana: ಐಪಿಎಲ್ 2024ರ ಪಂದ್ಯಾವಳಿಯಲ್ಲಿ ರೋಚಕ ಪಂದ್ಯಗಳು ನಡೆಯುತ್ತಿವೆ. ಶನಿವಾರ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡ ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿತು. ಈ ನಡುವೆ ಮಯಾಂಕ್ ಅಗರ್ವಾಲ್ ಅವರನ್ನು ಔಟ್ ಮಾಡಿದ ನಂತರ ಬೌಲರ್‌ ಹರ್ಷಿತ್ ರಾಣಾ ಅವರ ವರ್ತನೆ ವಿವಾದಕ್ಕೆ ಕಾರಣವಾಗಿದೆ. ಅದರ ಬೆನ್ನಲ್ಲೇ ಬಿಸಿಸಿಐ ದಂಡ ವಿಧಿಸಿದೆ.

ಮಯಾಂಕ್‌ ಕೆಣಕಿದ ಕೆಕೆಆರ್‌ ಬೌಲರ್‌ಗೆ ದಂಡದ ಬಿಸಿ ಮುಟ್ಟಿಸಿದ ಬಿಸಿಸಿಐ
ಮಯಾಂಕ್‌ ಕೆಣಕಿದ ಕೆಕೆಆರ್‌ ಬೌಲರ್‌ಗೆ ದಂಡದ ಬಿಸಿ ಮುಟ್ಟಿಸಿದ ಬಿಸಿಸಿಐ (JioCinema)

ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡವು 4 ರನ್‌ಗಳ ರೋಚಕ ಜಯ ಸಾಧಿಸಿತು. ಕೊನೆಯ ಓವರ್‌ವರೆಗೂ ರೋಚಕತೆ ಹೆಚ್ಚಿಸಿದ್ದ ಪಂದ್ಯದಲ್ಲಿ ಕೆಕೆಆರ್‌ ವೇಗಿ ಹರ್ಷಿತ್ ರಾಣಾ ಅಮೋಘ ಬೌಲಿಂಗ್‌ ಪ್ರದರ್ಶನ ತೋರಿದರು. ತಮ್ಮ ಅದ್ಭುತ ಅಂತಿಮ ಓವರ್‌ನಿಂದ ಪಂದ್ಯದ ಹೀರೋ ಆಗಿ ಮಿಂಚುವುದು ಮಾತ್ರವಲ್ಲದೆ, ಹಿರಿಯ ಕ್ರಿಕೆಟಿಗರು ಹಾಗೂ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಅಲ್ಲದೆ, ತಮ್ಮ ಅನಗತ್ಯ ವರ್ತನೆಯ ಹಿನ್ನೆಲೆಯಲ್ಲಿ ಬಿಸಿಸಿಐನಿಂದ ದಂಡದ ಶಿಕ್ಷೆ ಎದುರಿಸಿದ್ದಾರೆ.

ಎಸ್‌ಆರ್‌ಎಚ್‌ ಇನ್ನಿಂಗ್ಸ್‌ನಲ್ಲಿ‌ ಮೊದಲನೆಯವರಾಗಿ ಔಟಾದವರು ಕನ್ನಡಿಗ ಮಯಾಂಕ್ ಅಗರ್ವಾಲ್‌. ಕೆಕೆಆರ್‌ ತಂಡಕ್ಕೆ ಮೊದಲ ಮುನ್ನಡೆ ತಂದುಕೊಟ್ಟಿದ್ದು ಹರ್ಷಿತಾ ರಾಣಾ. ದೊಡ್ಡ ಹೊಡೆತಕ್ಕೆ ಕೈ ಹಾಕಿದ ಮಯಾಂಕ್‌, ರಿಂಕು ಸಿಂಗ್‌ಗೆ ಕ್ಯಾಚ್‌ ನೀಡಿ ಔಟಾದರು. ಈ ವೇಳೆ ಫ್ಲೈಯಿಂಗ್‌ ಕಿಸ್‌ ನೀಡುವ ಮೂಲಕ ಕನ್ನಡಿಗನಿಗೆ ಹರ್ಷಿತ್‌ ಮೈದಾನದಿಂದ ಬೀಳ್ಕೊಟಟ್ಟರು. ವ್ಯಂಗ್ಯ ವರ್ತನೆಯು ಅವರನ್ನು ಈಗ ತೊಂದರೆಗೆ ಸಿಲುಕಿಸಿದೆ. ಮಯಾಂಕ್‌ ಔಟಾಗಿ ಡ್ರೆಸ್ಸಿಂಗ್ ರೂಮ್ ಕಡೆಗೆ ಹಿಂತಿರುಗುವಾಗ, ರಾಣಾ ವಿಕೆಟ್‌ ಪಡೆದ ಧಿಮಾಕಿನಲ್ಲಿ ಫ್ಲೈಯಿಂಗ್‌ ಕಿಸ್‌ ನೀಡಿದ್ದಾರೆ. ಈ ವರ್ತನೆಗೆ ಇಂಟರ್ನೆಟ್‌ನಲ್ಲಿಯೂ ವಿರೋಧ ಕೇಳಿಬಂದಿದೆ.

ಘಟನೆ ನಡೆದ ಬೆನ್ನಲ್ಲೇ, ಈ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹರ್ಷಿತ್‌ ಪಂದ್ಯದ ಹೀರೋ ಆಗಿ ಮಿಂಚಿದರೂ, ಅವರ ವರ್ತನೆಯನ್ನು ನೆಟ್ಟಿಗರು ಖಂಡಿಸಿದ್ದಾರೆ. ಪಂದ್ಯ ಮುಗಿದ ಬೆನ್ನಲ್ಳೇ, ಬಿಸಿಸಿಐ ಕೂಡಾ ರಾಣಾಗೆ ಬಿಸಿ ಮುಟ್ಟಿಸಿದೆ. ಕೆಕೆಆರ್‌ ವೇಗಿಗೆ ಪಂದ್ಯದ ಶುಲ್ಕದ ಶೇಕಡಾ 60ರಷ್ಟು ದಂಡ ವಿಧಿಸಿದೆ. ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಹರ್ಷಿತ್ ರಾಣಾ ಅವರಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ಪಂದ್ಯದ ನಂತರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ | ರಸೆಲ್ ಮಸ್ಸಲ್ ಪವರ್​​ ಮುಂದೆ ಶರಣಾದ ಹೈದರಾಬಾದ್, ಕೆಕೆಆರ್​ಗೆ ರೋಚಕ ಗೆಲುವು; ಐಪಿಎಲ್​ ದುಬಾರಿ ಕ್ಯಾಪ್ಟನ್​ಗೆ ಮೊದಲ ಸೋಲು

“ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ, ಕೋಲ್ಕತಾ ನೈಟ್ ರೈಡರ್ಸ್ ಬೌಲರ್ ಹರ್ಷಿತ್ ರಾಣಾ ಅವರಿಗೆ ಪಂದ್ಯದ ಶುಲ್ಕದ ಶೇಕಡಾ 60ರಷ್ಟು ದಂಡ ವಿಧಿಸಲಾಗಿದೆ” ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

"ಐಪಿಎಲ್‌ ನೀತಿ ಸಂಹಿತೆಯ ಆರ್ಟಿಕಲ್ 2.5ರ ಅಡಿಯಲ್ಲಿ, ರಾಣಾ ಅವರು ಹಂತ 1ರಲ್ಲಿ ಎರಡು ಅಪರಾಧಗಳನ್ನು ಮಾಡಿದ್ದಾರೆ. ಈ ಎರಡು ಅಪರಾಧಗಳಿಗಾಗಿ ಅವರಿಗೆ ಪಂದ್ಯದ ಶುಲ್ಕದ 10 ಪ್ರತಿಶತ ಮತ್ತು 50 ಪ್ರತಿಶತದಷ್ಟು ದಂಡ ವಿಧಿಸಲಾಯಿತು. ನೀತಿ ಸಂಹಿತೆಯ ಲೆವೆಲ್ 1ರ ನಿಯಮ ಉಲ್ಲಂಘನೆಗಾಗಿ, ಮ್ಯಾಚ್ ರೆಫರಿ ನಿರ್ಧಾರವೇ ಅಂತಿಮವಾಗಿರುತ್ತದೆ" ಎಂದು ಬಿಸಿಸಿಐ ತಿಳಿಸಿದೆ.

ರಾಣಾ ಅವರ ಸಂಭ್ರಮಾಚರಣೆಗೆ ಅಭಿಮಾನಿಗಳು ಕಟುವಾಗಿ ಟೀಕಿಸಿದ್ದಾರೆ. ಅತ್ತ ಮಯಾಂಕ್ ಮಾತ್ರ ರಾಣಾ ಅವರನ್ನು ದಿಟ್ಟಿಸಿ ನೋಡುತ್ತಾ ಶಾಂತರಾಗಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ದಾರೆ. ಬೌಲರ್‌ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಪರಿಸ್ಥಿತಿ ಶಾಂತವಾಗಿ ಇರುವಂತೆ ನೋಡಿಕೊಂಡಿದ್ದಾರೆ. ಆದ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಮಾತ್ರ, ಭಾರತ ತಂಡಕ್ಕೆ ಇನ್ನೂ ಪದಾರ್ಪಣೆ ಮಾಡದ ಯುವ ವೇಗಿಯ ನಡೆಯನ್ನು ಖಂಡಿಸಿದ್ದಾರೆ.

"ಆತ (ಹರ್ಷಿತ್) ಹಾಗೆ ಮಾಡಬಾರದಿತ್ತು. ಸಿಕ್ಸರ್ ಬಾರಿಸುವಾಗ ಬ್ಯಾಟರ್‌ (ಮಯಾಂಕ್)‌ ಅವನಿಗೆ ಏನಾದರೂ ಮಾಡಿದರೇ? ಇಂಥಾ ತುಂಟಾಟಗಳಿಲ್ಲದೆಯೂ ಕ್ರಿಕೆಟ್ ಆಡಬಹುದು. ಇದು ದೂರದರ್ಶನದ ಯುಗ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಏನೇ ಇದ್ದರೂ ಸಹ ಆಟಗಾರರೊಂದಿಗೆ ಸಂಭ್ರಮಿಸಿ. ಆದರೆ ಎದುರಾಳಿಯೊಂದಿಗೆ ಅಂತಹ ವರ್ತನೆಗಳ ಅಗತ್ಯವಿಲ್ಲ" ಎಂದು ಗವಾಸ್ಕರ್ ಕಟುವಾಗಿ ಹೇಳಿದ್ದಾರೆ.

IPL_Entry_Point