ಕನ್ನಡ ಸುದ್ದಿ  /  Cricket  /  Bcci To Conduct Womens Red Ball Tournament Senior Inter Zonal Multi Day Trophy In Pune From March 28 After Wpl 2024 Jra

ಮಹಿಳಾ ಕ್ರಿಕೆಟಿಗರಿಗೆ ಶುಭ ಸುದ್ದಿ; ವನಿತೆಯರ ರೆಡ್‌ ಬಾಲ್ ಕ್ರಿಕೆಟ್‌ ಟೂರ್ನಿ ನಡೆಸಲು ಬಿಸಿಸಿಐ ಮಹತ್ವದ ನಿರ್ಧಾರ

ವನಿತೆಯರ ರೆಡ್ ಬಾಲ್ ಪಂದ್ಯಾವಳಿಯನ್ನು ಆಯೋಜಿಸಲು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸಜ್ಜಾಗಿದೆ. ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ಮುಗಿದ ಬೆನ್ನಲ್ಲೇ ಪುಣೆಯಲ್ಲಿ ಸೀನಿಯರ್ ಇಂಟರ್ ಜೋನಲ್ ಮಲ್ಟಿ-ಡೇ ಟ್ರೋಫಿ ಆರಂಭವಾಗಲಿದೆ. ಇದರಲ್ಲಿ ಆರು ತಂಡಗಳು ಭಾಗವಹಿಸಲಿವೆ.

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ಮುಗಿದ ಬೆನ್ನಲ್ಲೇ ಪುಣೆಯಲ್ಲಿ ಸೀನಿಯರ್ ಇಂಟರ್ ಜೋನಲ್ ಮಲ್ಟಿ-ಡೇ ಟ್ರೋಫಿ ಆರಂಭ
ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ಮುಗಿದ ಬೆನ್ನಲ್ಲೇ ಪುಣೆಯಲ್ಲಿ ಸೀನಿಯರ್ ಇಂಟರ್ ಜೋನಲ್ ಮಲ್ಟಿ-ಡೇ ಟ್ರೋಫಿ ಆರಂಭ (PTI)

ಪುರುಷರ ದೇಶಿಯ ಕ್ರಿಕೆಟ್‌ ಮಾದರಿಯಲ್ಲೇ ವನಿತೆಯರಿಗೂ ರೆಡ್‌ ಬಾಲ್‌ ಕ್ರಿಕೆಟ್‌ ಪಂದ್ಯವನ್ನು ನಡೆಸಲು ಬಿಸಿಸಿಐ ಮುಂದಾಗಿದೆ. ಇದಕ್ಕಾಗಿ ಮಾರ್ಚ್ 28ರಿಂದ ಸೀನಿಯರ್ ಇಂಟರ್ ಜೋನಲ್ ಮಲ್ಟಿ-ಡೇ ಟ್ರೋಫಿಯನ್ನು (Senior Inter Zonal Multi Day Trophy) ನಡೆಸಲು ನಿರ್ಧರಿಸಲಾಗಿದೆ. ಪುಣೆಯಲ್ಲಿ ಪಂದ್ಯಗಳನ್ನು ನಡೆಸಲು ಅಂತಿಮ ಸಿದ್ಧತೆ ನಡೆದಿದೆ. ಆ ಮೂಲಕ ಬರೋಬ್ಬರಿ ಆರು ವರ್ಷಗಳ ನಂತರ ವನಿತೆಯರ ರೆಡ್ ಬಾಲ್ ಕ್ರಿಕೆಟ್ ಪಂದ್ಯಗಳು ಭಾರತದ ದೇಶೀಯ ಕ್ರಿಕೆಟ್‌ ಪಂದ್ಯಗಳ ಪಟ್ಟಿಗೆ ಸೇರ್ಪಡೆಯಾಗಿದೆ.

ಇತ್ತೀಚೆಗಷ್ಟೇ ಭಾರತ ಮಹಿಳಾ ತಂಡವು ಟೆಸ್ಟ್ ಕ್ರಿಕೆಟ್‌ ಆಡಿತ್ತು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಗಳನ್ನು ಆಡಿ ಮನಗೆದ್ದಿತು. ಅತ್ತ ಕೊನೆಯ ಬಾರಿಗೆ ಮಹಿಳೆಯರ ದೇಶೀಯ ರೆಡ್ ಬಾಲ್ ಕ್ರಿಕೆಟ್ ಪಂದ್ಯವು 2018ರಲ್ಲಿ ನಡೆದಿತ್ತು. ಆ ಬಳಿಕ ಇದೇ ಮೊದಲ ಬಾರಿಗೆ ದೇಶೀಯ ಪ್ರತಿಭೆಗಳನ್ನು ಬೆಂಬಲಿಸುವ ಸಲುವಾಗಿ ಮತ್ತೆ ರೆಡ್‌ ಬಾಲ್‌ ಪಂದ್ಯಗಳನ್ನು ನಡೆಸಲಾಗುತ್ತಿದೆ.

ಇದು ವಲಯ ಮಟ್ಟದ ಪಂದ್ಯಾವಳಿಯಾಗಿದೆ. ಮುಂದೆ ರಣಜಿ ಮಾದರಿಯಲ್ಲಿ ದೇಶಿಯ ಮಟ್ಟದ ಪಂದ್ಯಗಳನ್ನು ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ | ಭಾರತದ ಮಹಿಳಾ ಕ್ರಿಕೆಟರ್ಸ್​ಗೆ ಶುಭ ಸುದ್ದಿ; ವನಿತೆಯರಿಗೂ ಶುರುವಾಗಲಿದೆ ರಣಜಿ ಟ್ರೋಫಿ ಮಾದರಿಯ ಟೂರ್ನಿ

"ಇದು ಬಿಸಿಸಿಐ ತೆಗೆದುಕೊಂಡ ಸ್ವಾಗತಾರ್ಹ ಹೆಜ್ಜೆಯಾಗಿದೆ. ರಾಷ್ಟ್ರೀಯ ತಂಡವು ಮತ್ತೆ ಟೆಸ್ಟ್ ಕ್ರಿಕೆಟ್ ಆಡಲು ಪ್ರಾರಂಭಿಸಿದೆ. ದೇಶೀಯ ಮಟ್ಟದಲ್ಲಿ ರೆಡ್ ಬಾಲ್ ಕ್ರಿಕೆಟ್ ಆಡುವ ಮುಂದಿನ ಪೀಳಿಗೆಯ ಕ್ರಿಕೆಟಿಗರ ಅಗತ್ಯವಿದೆ. ಕೆಂಪು ಚೆಂಡು ಪಂದ್ಯಗಳನ್ನು ವಲಯ ಮಟ್ಟದಲ್ಲಿ ಮಾತ್ರವಲ್ಲದೆ ರಾಜ್ಯ ಮಟ್ಟದಲ್ಲಿಯೂ ಆಡಬೇಕೆಂದು ನಾನು ಬಯಸುತ್ತೇನೆ," ಎಂದು ಭಾರತದ ಮಾಜಿ ವೇಗಿ ಅಮಿತಾ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ.

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಈ ಪಂದ್ಯಾವಳಿಗೆ ಆತಿಥ್ಯ ವಹಿಸಲಿದೆ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಮಧ್ಯ ಮತ್ತು ಈಶಾನ್ಯ ವಲಯಗಳನ್ನು ಪ್ರತಿನಿಧಿಸುವ ಆರು ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ತಲಾ ಮೂರು ದಿನಗಳ ಐದು ಪಂದ್ಯಗಳ ಸರಣಿಯಲ್ಲಿ ತಂಡಗಳು ಸ್ಪರ್ಧಿಸಲಿವೆ. 2018ರ ಋತುವಿನಲ್ಲಿ ಎರಡು ದಿನಗಳ ಪಂದ್ಯ ಆಡಿಸಲಾಗಿತ್ತು. ಈ ಬಾರಿ ಒಂದು ದಿನ ಹೆಚ್ಚಿರಲಿದೆ.

ಇದನ್ನೂ ಓದಿ | ಇಂಗ್ಲೆಂಡ್‌ ವಿರುದ್ಧದ 5ನೇ ಟೆಸ್ಟ್‌ಗೆ ಭಾರತ ತಂಡ ಪ್ರಕಟ; ತಂಡಕ್ಕೆ ಮರಳಿದ ಬುಮ್ರಾ, ಕೆಎಲ್ ರಾಹುಲ್ ಹೊರಕ್ಕೆ

ಇದೇ ಮಾರ್ಚ್ 17ರಂದು ಮಹಿಳಾ ಪ್ರೀಮಿಯರ್ ಲೀಗ್‌ ಪಂದ್ಯಾವಳಿ ಕೊನೆಗೊಳ್ಳಲಿದೆ. ಆ ಬಳಿಕ ರೆಡ್‌ ಬಾಲ್‌ ಪಂದ್ಯಾವಳಿ ಪ್ರಾರಂಭವಾಗಲಿದೆ. ಮಾರ್ಚ್ 28ರಂದು ಪೂರ್ವ ವಲಯ ಮತ್ತು ಈಶಾನ್ಯ ವಲಯ, ಪಶ್ಚಿಮ ವಲಯ ಮತ್ತು ಕೇಂದ್ರ ವಲಯಗಳ ನಡುವೆ ಕ್ವಾರ್ಟರ್ ಫೈನಲ್ ಪಂದ್ಯಗಳು ಆರಂಭವಾಗಲಿವೆ. ಏಪ್ರಿಲ್ 3ರಂದು ಸೆಮಿಫೈನಲ್ ಪಂದ್ಯಗಳು ನಡೆದರೆ, ಫೈನಲ್ ಪಂದ್ಯ ಏಪ್ರಿಲ್ 9ರಂದು ನಡೆಯಲಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point