ಅನ್ಶುಮಾನ್ ಗಾಯಕ್ವಾಡ್ಗೆ ಕ್ಯಾನ್ಸರ್; ಕಪಿಲ್ ದೇವ್ ಒತ್ತಾಯದ ಬೆನ್ನಲ್ಲೇ 1 ಕೋಟಿ ರೂಪಾಯಿ ನೆರವು ಘೋಷಿಸಿದ ಬಿಸಿಸಿಐ
Anshuman Gaekwad: ರಕ್ತದ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಮಾಜಿ ಕ್ರಿಕೆಟಿಗ ಅನ್ಶುಮಾನ್ ಗಾಯಕ್ವಾಡ್ ಅವರಿಗೆ ಬಿಸಿಸಿಐ 1 ಕೋಟಿ ರೂಪಾಯಿ ಸಹಾಯ ಮಾಡಿದೆ.
ಮಾರಕ ಬ್ಲಡ್ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ (Anshuman Gaekwad) ಅವರ ವೈದ್ಯಕೀಯ ವೆಚ್ಚಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ 1 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಅವರು ಮಂಡಳಿಯ ಅಪೆಕ್ಸ್ ಕೌನ್ಸಿಲ್‌ಗೆ ಸೂಚನೆ ನೀಡಿದ್ದಾರೆ. ಅಂಶುಮಾನ್ ಗಾಯಕ್ವಾಡ್ ಕುಟುಂಬದೊಂದಿಗೆ ಮಾತನಾಡಿ ಮಾಹಿತಿ ಕಲೆ ಹಾಕಿರುವ ಜಯ್ ಶಾ ಅವರು, ಅವರಿಗೆ ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದ್ದಾರೆ.
ಅಂಶುಮಾನ್ ಅವರ ಚಿಕಿತ್ಸೆಯನ್ನು ನಿಕಟವಾಗಿ ಮೇಲ್ವಿಚಾರಣೆ ನಡೆಸುತ್ತಿರುವ ಬಿಸಿಸಿಐ, ಹಿರಿಯ ಕ್ರಿಕೆಟಿಗ ಮಾರಣಾಂತಿಕ ರೋಗದಿಂದ ಚೇತರಿಸಿಕೊಳ್ಳುವ ಕುರಿತು ಆಶಾವಾದಿ ವ್ಯಕ್ತಪಡಿಸಿದೆ. ರಕ್ತದ ಕ್ಯಾನ್ಸರ್ಗೆ ಲಂಡನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಬಿಸಿಸಿಐ, ಅವರ ಚಿಕಿತ್ಸೆಗೆ 1 ಕೋಟಿ ರೂಪಾಯಿ ಆರ್ಥಿಕ ಸಹಾಯವಾಗಿ ಬಿಡುಗಡೆ ಮಾಡಿದೆ. 71 ವರ್ಷದ ಕ್ರಿಕೆಟಿಗನಿಗೆ ಬೆಂಬಲ ನೀಡುವಂತೆ 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಕರೆ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ. ಸಂದೀಪ್ ಪಾಟೀಲ್ ಕೂಡ ಗಾಯಕ್ವಾಡ್ ಪರ ಮನವಿ ಮಾಡಿದ್ದರು.
ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಭಾರತದ ಹಿರಿಯ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಅವರಿಗೆ ಆರ್ಥಿಕ ನೆರವು ನೀಡಲು ತಕ್ಷಣದಿಂದ ಜಾರಿಗೆ ಬರುವಂತೆ 1 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಜಯ್ ಶಾ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಸೂಚನೆ ನೀಡಿದ್ದಾರೆ ಎಂದು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಹೇಳಿಕೆಯಲ್ಲಿ ತಿಳಿಸಿದೆ. ಗಾಯಕ್ವಾಡ್ ಅವರ ಪುತ್ರ ಪ್ರಸ್ತುತ ಲಂಡನ್ ಕಿಂಗ್ಸ್ ಕಾಲೇಜು ಆಸ್ಪತ್ರೆಯಲ್ಲಿ ರಕ್ತದ ಕ್ಯಾನ್ಸರ್ಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ ಎಂದು ಪಾಟೀಲ್ ಈ ತಿಂಗಳ ಆರಂಭದಲ್ಲೇ ಬಹಿರಂಗಪಡಿಸಿದ್ದರು.
ಸಹ ಆಟಗಾರರ ಬಳಿ ಸಹಾಯ ಕೇಳಿದ್ದ ಅನ್ಶುಮಾನ್
ಭಾರತದ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕರ್ ಅವರು ಬಿಸಿಸಿಐ ಖಜಾಂಚಿ ಆಶಿಶ್ ಸೆಲಾರ್ ಅವರೊಂದಿಗೆ ಮಾತನಾಡುವ ಮೊದಲು ಗಾಯಕ್ವಾಡ್ ಸ್ವತಃ ಆರ್ಥಿಕ ಸಹಾಯದ ಅಗತ್ಯದ ಬಗ್ಗೆ ಹೇಳಿದ್ದರು ಎಂದು ಪಾಟೀಲ್ ಬಹಿರಂಗಪಡಿಸಿದ್ದರು. ನಂತರ, 1983 ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಬಿಸಿಸಿಐಗೆ ಆರ್ಥಿಕ ಸಹಾಯಕ್ಕಾಗಿ ಒತ್ತಾಯಿಸಿದರು. ಮಾಜಿ ಕ್ರಿಕೆಟಿಗರಾದ ಮೊಹಿಂದರ್ ಅಮರನಾಥ್, ಸುನಿಲ್ ಗವಾಸ್ಕರ್, ಸಂದೀಪ್ ಪಾಟೀಲ್, ದಿಲೀಪ್ ವೆಂಗ್ಸರ್ಕರ್, ಮದನ್ ಲಾಲ್, ರವಿ ಶಾಸ್ತ್ರಿ ಮತ್ತು ಕೀರ್ತಿ ಆಜಾದ್ ಅವರ ಅನ್ಶುಮಾನ್ ಸಹಾಯ ಕೇಳಿದ್ದರು.
ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತು ಬೆಂಬಲವನ್ನು ವಿಸ್ತರಿಸಲು ಶಾ ಅವರು ಗಾಯಕ್ವಾಡ್ ಅವರ ಕುಟುಂಬದೊಂದಿಗೆ ಮಾತನಾಡಿದ್ದಾರೆ. ಈ ಬಿಕ್ಕಟ್ಟಿನ ಸಮಯದಲ್ಲಿ ಮಂಡಳಿಯು ಗಾಯಕ್ವಾಡ್ ಅವರ ಕುಟುಂಬದೊಂದಿಗೆ ನಿಲ್ಲುತ್ತದೆ. ಗಾಯಕ್ವಾಡ್ ಅವರ ತ್ವರಿತ ಚೇತರಿಕೆಗೆ ಅಗತ್ಯವಾದ ಎಲ್ಲವನ್ನೂ ಬಿಸಿಸಿಐ ಮಾಡುತ್ತದೆ. ಮಾಜಿ ನಾಯಕನ ಪ್ರಗತಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ. ಅವರು ಈ ಹಂತದಿಂದ ಬಲವಾಗಿ ಹೊರಬರುತ್ತಾರೆ ಎಂಬ ವಿಶ್ವಾಸ ಇದೆ ಎಂದು ಮಂಡಳಿಯ ಹೇಳಿಕೆ ತಿಳಿಸಿದೆ.
ಅನ್ಶುಮಾನ್ ಗಾಯಕ್ವಾಡ್ ವೃತ್ತಿಜೀವನ
71 ವರ್ಷದ ಗಾಯಕ್ವಾಡ್ 1975 ಮತ್ತು 1987ರ ನಡುವೆ ಭಾರತ ತಂಡದ ಪರ 40 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಸುದೀರ್ಘ ಸ್ವರೂಪದಲ್ಲಿ 1985 ರನ್ ಗಳಿಸಿದ್ದರೆ, ಎರಡು ಶತಕಗಳು ಮತ್ತು 10 ಅರ್ಧಶತಕ ಸಿಡಿಸಿದ್ದಾರೆ. 50 ಓವರ್ಗಳ ಕ್ರಿಕೆಟ್ನಲ್ಲಿ ಸ್ವರೂಪದಲ್ಲಿ 269 ರನ್ ಸಿಡಿಸಿದ್ದಾರೆ.