182 ರನ್ ಸಿಡಿಸಿ ದಾಖಲೆಗಳ ಸಂಹರಿಸಿದ ಬೆನ್ ಸ್ಟೋಕ್ಸ್; ನಿವೃತ್ತಿ ಹಿಂಪಡೆದ ಬಳಿಕ ಘರ್ಜಿಸಿದ ಆಲ್‌ರೌಂಡರ್
ಕನ್ನಡ ಸುದ್ದಿ  /  ಕ್ರಿಕೆಟ್  /  182 ರನ್ ಸಿಡಿಸಿ ದಾಖಲೆಗಳ ಸಂಹರಿಸಿದ ಬೆನ್ ಸ್ಟೋಕ್ಸ್; ನಿವೃತ್ತಿ ಹಿಂಪಡೆದ ಬಳಿಕ ಘರ್ಜಿಸಿದ ಆಲ್‌ರೌಂಡರ್

182 ರನ್ ಸಿಡಿಸಿ ದಾಖಲೆಗಳ ಸಂಹರಿಸಿದ ಬೆನ್ ಸ್ಟೋಕ್ಸ್; ನಿವೃತ್ತಿ ಹಿಂಪಡೆದ ಬಳಿಕ ಘರ್ಜಿಸಿದ ಆಲ್‌ರೌಂಡರ್

Ben Stokes: ಬೆನ್‌ ಸ್ಟೋಕ್ಸ್ ಅವರ ನಾಲ್ಕನೇ ಏಕದಿನ ಶತಕವು, ಏಕದಿನ ನಿವೃತ್ತಿಯಿಂದ ತಂಡಕ್ಕೆ ಮರಳಿದ ಬಳಿಕ ಅವರ ಮೊದಲ ಶತಕವಾಗಿದೆ. ಗ್ಲೆನ್ ಫಿಲಿಪ್ಸ್ ಎಸೆದ 29ನೇ ಓವರ್‌ನಲ್ಲಿ ಆಂಗ್ಲ ಬ್ಯಾಟರ್‌ ತಮ್ಮ ಶತಕ ಪೂರೈಸಿದರು.

ಬೆನ್‌ ಸ್ಟೋಕ್ಸ್
ಬೆನ್‌ ಸ್ಟೋಕ್ಸ್ (AP)

2019ರ ಏಕದಿನ ವಿಶ್ವಕಪ್‌ನ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ (England vs New Zealand) ನಡುವಣ ಸರಣಿಯ 3ನೇ ಏಕದಿನ ಪಂದ್ಯದಲ್ಲಿ ಬೆನ್‌ ಸ್ಟೋಕ್ಸ್‌ (Ben Stokes) ಅಬ್ಬರಿಸಿದ್ದಾರೆ. ಆರಂಭಿಕ ಆಘಾತದಿಂದ ತಂಡವನ್ನು ರಕ್ಷಿಸಿದ ಅವರು, ತಮ್ಮ ಏಕದಿನ ವೃತ್ತಿಜೀವನದ ವೇಗದ ಶತಕ ಸಿಡಿಸಿದ್ದಾರೆ. ಅಲ್ಲದೆ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ಗೂ (ICC World Cup) ಮುನ್ನ ಭರ್ಜರಿ ಫಾರ್ಮ್‌ನಲ್ಲಿರುವ ಸೂಚನೆ ರವಾನಿಸಿದ್ದಾರೆ.

ಇಂಗ್ಲೆಂಡ್‌ನ ರಾಜಧಾನಿ ಲಂಡನ್‌ನ ಕೆನ್ನಿಂಗ್ಟನ್ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸ್ಟೋಕ್ಸ್‌ ಈ ದಾಖಲೆ ನಿರ್ಮಿಸಿದ್ದಾರೆ. 2017ರಲ್ಲಿ ಕೊನೆಯ ಬಾರಿಗೆ ಏಕದಿನ ಶತಕ ಸಿಡಿಸಿದ್ದ ಸ್ಟೋಕ್ಸ್, ಆ ಬಳಿಕ ಇದೇ ಮೊದಲ ಶತಕ ದಾಖಲಿಸಿದರು. ಪಂದ್ಯದಲ್ಲಿ ಅಂತಿಮವಾಗಿ ಅವರು 124 ಎಸೆತಗಳಲ್ಲಿ 15 ಬೌಂಡರಿ ಹಾಗೂ 9 ಸ್ಫೋಟಕ ಸಿಕ್ಸರ್‌ಗಳ ನೆರವಿನಿಂದ 182 ರನ್‌ ಸಿಡಿಸಿ, ಬೆನ್‌ ಲಿಸ್ಟರ್‌ ಎಸೆತದಲ್ಲಿ ವಿಲ್‌ ಯಂಗ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಆ ಮೂಲಕ ಕೇವಲ 18 ರನ್‌ಗಳಿಂದ ದ್ವಿಶತಕ ವಂಚಿತರಾದರು.

ಸ್ಟೋಕ್ಸ್‌ ಮೈದಾನದಲ್ಲಿ ಇರುವವರೆಗೆ ಬೃಹತ್‌ ಮೊತ್ತ ಕಲೆ ಹಾಕುವ ಸುಳಿವು ನೀಡಿದ್ದ ಇಂಗ್ಲೆಂಡ್‌, ಅಂತಿಮವಾಗಿ 48.1 ಓವರ್‌ಗಳಲ್ಲಿ 368 ರನ್‌ ಗಳಿಸಿ ಆಲೌಟ್‌ ಆಗಿದೆ. ತಂಡವು ಕೊನೆಯ 5 ಓವರ್‌ಗಳಲ್ಲಿ 31 ರನ್‌ ಆಗುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡಿತು.

ಏಕದಿನ ವೃತ್ತಿಜೀವನದ ವೇಗದ ಶತಕ

ಸ್ಟೋಕ್ಸ್ ಅವರ ನಾಲ್ಕನೇ ಏಕದಿನ ಶತಕವು, ಏಕದಿನ ನಿವೃತ್ತಿಯಿಂದ ತಂಡಕ್ಕೆ ಮರಳಿದ ಬಳಿಕ ಅವರ ಮೊದಲ ಶತಕವಾಗಿದೆ. ಗ್ಲೆನ್ ಫಿಲಿಪ್ಸ್ ಎಸೆದ 29ನೇ ಓವರ್‌ನಲ್ಲಿ ಆಂಗ್ಲ ಬ್ಯಾಟರ್‌ ತಮ್ಮ ಶತಕ ಪೂರೈಸಿದರು. ಕೇವಲ 76 ಎಸೆತಗಳಲ್ಲಿ 11 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ ಸಿಎಸ್‌ಕೆ ಆಟಗಾರ ಮೂರಂಕಿ ಗಡಿ ದಾಡಿದರು. ಆ ಮೂಲಕ ಕೆಲವೇ ದಿನಗಳಲ್ಲಿ ವಿಶ್ವಕಪ್‌ ಪಂದ್ಯವಾಡಲು ಭಾರತ ವಿಮಾನ ಹತ್ತುವ ಮುನ್ನ ಎದುರಾಳಿ ತಂಡಗಳಿಗೆ ಅಬ್ಬರಿಸುವ ಸುಳಿವು ನೀಡಿದರು.

ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗಾಗಿ ಸ್ಟೋಕ್ಸ್ ಇಂಗ್ಲೆಂಡ್ ಏಕದಿನ ತಂಡಕ್ಕೆ ಮರಳಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಬಳಿಕ 32 ವರ್ಷದ ಆಟಗಾರ 50 ಓವರ್‌ಗಳ ಸ್ವರೂಪಕ್ಕೆ ನಿವೃತ್ತಿ ಘೋಷಿಸಿದ್ದರು. ಆದರೆ, ಮಹತ್ವದ ಏಕದಿನ ವಿಶ್ವಕಪ್‌ ಪಂದ್ಯಾವಳಿಗೆ ತಂಡಕ್ಕೆ ಬಲ ತುಂಬುವ ಸಲುವಾಗಿ ಮತ್ತೆ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ.

ಕಿವೀಸ್ ವಿರುದ್ಧ ಸ್ಟೋಕ್ಸ್ ಮತ್ತು ಮಲನ್ ದಾಖಲೆಯ ಜೊತೆಯಾಟ

ಕಿವೀಸ್‌ ವಿರುದ್ಧ ಡೇವಿಡ್ ಮಲಾನ್‌ ಜೊತೆಗೂಡಿ ಸ್ಟೋಕ್ಸ್‌ ಯಾವುದೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟ ದಾಖಲಿಸಿದ್ದಾರೆ. 2015ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಇಯಾನ್ ಮಾರ್ಗನ್ ಮತ್ತು ಜೋ ರೂಟ್ ಒಟ್ಟುಗೂಡಿಸಿದ್ದ 198 ರನ್‌ಗಳ ಜೊತೆಯಾಟವನ್ನು ಸ್ಟೋಕ್ಸ್ ಮತ್ತು ಮಲನ್ ಕೇವಲ ಒಂದು ರನ್‌ಗಳಿಂದ ಮೀರಿಸಿದ್ದಾರೆ. ಸ್ಟೋಕ್ಸ್ ಕೇವಲ 76 ಎಸೆತಗಳಲ್ಲಿ ತಮ್ಮ ವೃತ್ತಿಜೀವನದ ವೇಗದ ಶತಕ ಸಿಡಿಸಿದರೆ, ಮಲಾನ್ ನರ್ವಸ್‌ ನೈಂಟಿಯಲ್ಲಿ ಔಟ್‌ ಆಗಿ ಶತಕ ವಂಚಿತರಾದರು. ಒಂದು ಹಂತದಲ್ಲಿ 13 ರನ್‌ ವೇಳೆಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡವನ್ನು 300ರ ಗಡಿ ದಾಟಿಸುವಲ್ಲಿ ಉಭಯ ಆಟಗಾರರು ಮಹತ್ವದ ಪಾತ್ರ ವಹಿಸಿದರು.

Whats_app_banner