ಎಂಎಸ್ ಧೋನಿಗಾಗಿ ಹಳೆಯ ನಿಯಮವನ್ನೇ ಜಾರಿಗೆ ತರಲು ಬಿಸಿಸಿಐಗೆ ಒತ್ತಾಯಿಸಿದ ಸಿಎಸ್ಕೆ ಫ್ರಾಂಚೈಸಿ ಮಾಲೀಕರು
MS Dhoni: ಎಂಎಸ್ ಧೋನಿ ಅವರನ್ನು ಉಳಿಸಿಕೊಳ್ಳುವ ಸಲುವಾಗಿ ಹಳೆಯ ನಿಯಮವನ್ನು ಬದಲಿಸುವಂತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ, ಬಿಸಿಸಿಐಗೆ ಮನವಿ ಮಾಡಿದೆ.
ಮಹೇಂದ್ರ ಸಿಂಗ್ ಧೋನಿ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ನಿಯಮಗಳನ್ನು ಬದಲಿಸಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಇಂಡಿಯನ್ ಪ್ರೀಮಿಯರ್ ಲೀಗ್ಗೆ ತಿಳಿಸಿದೆ. ತಮ್ಮ ಮಾಜಿ ನಾಯಕನನ್ನು ಅನ್ಕ್ಯಾಪ್ಡ್ ಆಟಗಾರನಾಗಿ ಉಳಿಸಿಕೊಳ್ಳಲು ಅನುವು ಮಾಡಿಕೊಡುವ ನಿಯಮವನ್ನು ಮತ್ತೆ ಪರಿಚಯಿಸಬೇಕೆಂದು ಒತ್ತಾಯಿಸಿದೆ ಎಂದು ವರದಿಯಾಗಿದೆ.
ಕೆಲವು ವರ್ಷಗಳಿಂದ ಸಿಎಸ್ಕೆ ಧೋನಿ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿದ್ದು, 2025ರ ಐಪಿಎಲ್ನಲ್ಲಿ ಕೊನೆಯದಾಗಿ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. 2024ರ ಐಪಿಎಲ್ನಲ್ಲಿ ಧೋನಿ, ಋತುರಾಜ್ ಗಾಯಕ್ವಾಡ್ಗೆ ನಾಯಕತ್ವ ಹಸ್ತಾಂತರಿಸಿದ ಬೆನ್ನಲ್ಲೇ ಇದೇ ವರ್ಷ ವಿದಾಯ ಹೇಳಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಅವರು ಈ ಬಗ್ಗೆ ಎಲ್ಲಿಯೂ ಸ್ಪಷ್ಟನೆ ನೀಡಿಲ್ಲ.
ಹಳೆಯ ನಿಯಮ ಜಾರಿ ತರಲು ಸಿಎಸ್ಕೆ ಒತ್ತಾಯ
2025ರ ಆವೃತ್ತಿಗೂ ಮುನ್ನ ನಡೆದ ಐಪಿಎಲ್ ಆಡಳಿತ ಮಂಡಳಿ ಮತ್ತು 10 ಫ್ರಾಂಚೈಸ್ಗಳೊಂದಿಗಿನ ಬಿಸಿಸಿಐ ಸಭೆಯಲ್ಲಿ ಸಿಎಸ್ಕೆ ಮಾಲೀಕರು 2008ರ ಉದ್ಘಾಟನಾ ಲೀಗ್ನಿಂದ 2021ರ ತನಕ ಜಾರಿಯಲ್ಲಿದ್ದ ನಿಯಮ ಮರಳಿ ತರುವಂತೆ ಸಲಹೆ ನೀಡಿದ್ದಾರೆ. ಈ ನಿಯಮವು 5 ವರ್ಷಗಳಿಗಿಂತ ಹೆಚ್ಚು ಕಾಲ ನಿವೃತ್ತರಾದ ಅಂತಾರಾಷ್ಟ್ರೀಯ ಕ್ರಿಕೆಟಿಗರನ್ನು ಅನ್ಕ್ಯಾಪ್ಡ್ ಆಟಗಾರರ ಪಟ್ಟಿಗೆ ಸೇರಿಸಲಾಗುತ್ತದೆ. ಎಂಎಸ್ ಧೋನಿ ಆಗಸ್ಟ್ 2020ರಲ್ಲಿ ಎಲ್ಲಾ ರೀತಿಯ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದರು.
ಧೋನಿ ಅವರನ್ನು ಅನ್ಕ್ಯಾಪ್ಡ್ ಆಟಗಾರ ಎಂದು ವರ್ಗೀಕರಿಸಿದರೆ, ಸಿಎಸ್ಕೆ ಮತ್ತೊಬ್ಬ ಭಾರತೀಯ ಆಟಗಾರನನ್ನು ಉಳಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ಹೀಗಾಗಿ ಹಳೆ ನಿಯಮ ಜಾರಿಗೆ ತರಲು ಒತ್ತಾಯಿಸಿದ್ದಾರೆ ಸಿಎಸ್ಕೆ ಮಾಲೀಕರು ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ. ಹಲವು ಫ್ರಾಂಚೈಸಿಗಳು ಉಳಿಸಿಕೊಳ್ಳಬಹುದಾದ ಆಟಗಾರರ ಸಂಖ್ಯೆಯನ್ನು ಹೆಚ್ಚಿಸಲು ಕರೆ ನೀಡಿವೆ. 2022ರ ಮೆಗಾ ಹರಾಜಿಗೂ ಮುನ್ನ ಗರಿಷ್ಠ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿ ನೀಡಲಾಗಿತ್ತು.
ಎಸ್ಆರ್ಹೆಚ್ ತೀವ್ರ ವಿರೋಧ
ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮಾಲೀಕರ ನಿರ್ಧಾರಕ್ಕೆ ಇತರೆ ಫ್ರಾಂಚೈಸ್ ಮಾಲೀಕರಿಂದ ವಿರೋಧ ವ್ಯಕ್ತವಾಗಿದೆ. ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾದ ಕಾವ್ಯಾ ಮಾರನ್ ಅವರು ಈ ವಿಚಾರದ ವಿರುದ್ಧ ವಿಶೇಷವಾಗಿ ಧ್ವನಿ ಎತ್ತಿದ್ದು, ಇದು ಆಟಗಾರ ಮತ್ತು ಮಾರುಕಟ್ಟೆ ಮೌಲ್ಯವನ್ನು ಅಗೌರವಗೊಳಿಸುತ್ತದೆ ಎಂದು ವಾದಿಸಿದ್ದಾರೆ. ನಿವೃತ್ತರನ್ನು ಎಂದಿಗೂ ಅನ್ಕ್ಯಾಪ್ಡ್ ಎಂದು ಪರಿಗಣಿಸಬಾರದು ಎಂದು ಹೇಳಿದ್ದಾರೆ.
ಐಪಿಎಲ್ ಆಡಳಿತ ಮಂಡಳಿ ಆಗಸ್ಟ್ ಅಂತ್ಯದ ವೇಳೆಗೆ ಉಳಿಸಿಕೊಳ್ಳುವ ನಿಯಮಗಳ ಪ್ರಕಟಿಸುವ ಸಾಧ್ಯತೆ ಇದೆ. ಕೆಲವು ಫ್ರಾಂಚೈಸಿಗಳು ಇದನ್ನು ವಿರೋಧಿಸಿರುವುದರಿಂದ ಮುಂದಿನ ಆವೃತ್ತಿಯ ಮೆಗಾ ಹರಾಜಿಗೂ ಮುನ್ನ ಮತ್ತೊಮ್ಮೆ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆ ಇದೆ.
ಎಂಎಸ್ ಧೋನಿ ಐಪಿಎಲ್ ವೃತ್ತಿಜೀವನ
ಎಂಎಸ್ ಧೋನಿ ಅವರು 2008ರ ಐಪಿಎಲ್ನಿಂದಲೂ ಆಡುತ್ತಿದ್ದು, 264 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಪೈಕಿ 229 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ್ದು, 39.13ರ ಬ್ಯಾಟಿಂಗ್ ಸರಾಸರಿಯಲ್ಲಿ 5243 ರನ್ ಗಳಿಸಿದ್ದಾರೆ. 137.54 ಸ್ಟ್ರೈಕ್ರೇಟ್ ಹೊಂದಿರುವ ಧೋನಿ, 363 ಬೌಂಡರಿ, 252 ಸಿಕ್ಸರ್ಗಳನ್ನು ಚಚ್ಚಿದ್ದಾರೆ. ನಾಯಕನಾಗಿ ಸಿಎಸ್ಕೆಗೆ 5 ಟ್ರೋಫಿಗಳನ್ನು ಗೆದ್ದಿರುವ ಕೊಟ್ಟಿದ್ದಾರೆ.
ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ