ಭಾರತದ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ ಫ್ಯಾನ್ಸ್; ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರ
South Africa vs India: ಭಾರತ ಕ್ರಿಕೆಟ್ ತಂಡ ಐತಿಹಾಸಿಕ ಟಿ20 ವಿಶ್ವಕಪ್ ಗೆದ್ದು ಬೀಗಿದೆ. ಟೀಮ್ ಇಂಡಿಯಾ ಐತಿಹಾಸಿಕ ಟ್ರೋಫಿ ಗೆಲ್ಲುತ್ತಿದ್ದಂತೆಯೇ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಕೋಟಿ ಕೋಟಿ ಭಾರತೀಯರು ನಿರೀಕ್ಷೆಯಿಂದ ಕಾಯುತ್ತಿದ್ದ ಆ ಕ್ಷಣ ಕೊನೆಗೂ ಬಂದಿದೆ. 13 ವರ್ಷಗಳ ಐಸಿಸಿ ಟ್ರೋಫಿ ಬರವನ್ನು ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ನೀಗಿಸಿದೆ. ಎರಡನೇ ಟಿ20 ವಿಶ್ವಕಪ್ ಗೆದ್ದು ಭಾರತ ತಂಡದ ಬೀಗುತ್ತಿದೆ. ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಒಂದಷ್ಟು ಭಾವನಾತ್ಮಕ ಕ್ಷಣಗಳೊಂದಿಗೆ, ಐತಿಹಾಸಿಕ ಗೆಲುವಿಗೆ ಟೀಮ್ ಇಂಡಿಯಾ ಸಾಕ್ಷಿಯಾಗಿದೆ. ಇದು ಅಭಿಮಾನಿಗಳಿಗೆ ವಿಶೇಷ ಕ್ಷಣ. ಒಂದು ವರ್ಷದೊಳಗೆ ಸತತ ಎರಡು ಐಸಿಸಿ ಫೈನಲ್‌ಗಳಲ್ಲಿ ಸೋತಿದ್ದ ಭಾರತವು, ಇದೀಗ ವಿಂಡೀಸ್ ನೆಲದಲ್ಲಿ ಟಿ20 ಸ್ವರೂಪಕ್ಕೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶನಿವಾರ ಮಧ್ಯರಾತ್ರಿ ಸಮಯದಲ್ಲಿ ಭಾರತ ಗೆಲುವಿನ ನಗಾರಿ ಬಾರಿಸುತ್ತಿದ್ದಂತೆಯೇ ಭಾರತ ಮಾತ್ರವಲ್ಲದೆ ಜಗತ್ತಿನೆಲ್ಲೆಡೆ ಇರುವ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ.
ಭಾರತದ ಪಾಲಿಗೆ ಈ ಕ್ಷಣ ನಿಜಕ್ಕೂ ಐತಿಹಾಸಿಕ ಕ್ಷಣ. ರಾಹುಲ್ ದ್ರಾವಿಡ್ ಅವರ ಕೋಚಿಂಗ್‌ನಲ್ಲಿ ಭಾರತದ ಪಾಲಿಗೆ ಕೊನೆಯ ಪಂದ್ಯ ಹಾಗೂ ಟೂರ್ನಿ ಎಂಬುದು ಮೊದಲೇ ಸ್ಪಷ್ಟವಾಗಿತ್ತು. ಅದರಂತೆಯೇ ಆಟಗಾರರು ಅವರಿಗೆ ಗೆಲುವಿನ ವಿದಾಯ ಹೇಳಿದ್ದಾರೆ. ಅತ್ತ ತಂಡ ಚಾಂಪಿಯನ್ ಪಟ್ಟ ಅಲಂಕರಿಸುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಹಾಗೂ ನಾಯಕ ರೋಹಿತ್ ಶರ್ಮಾ ಚುಟುಕು ಸ್ವರೂಪಕ್ಕೆ ವಿದಾಯ ಹೇಳಿದ್ದಾರೆ.
ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಭಾರತದ ಸಂಭ್ರಮ ಒಂದೆಡೆಯಾದರೆ, ಸೋಷಿಯಲ್ ಮೀಡಿಯಾದಲ್ಲಿ ಭಾರತದ ಗೆಲುವಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ. ಭಾರತದ ವಿಜಯ ಯಾತ್ರೆಯನ್ನು ಸಂಭ್ರಮಿಸಿದ ಅಭಿಮಾನಿಗಳು ಶುಭಾಶಯಗಳ ಮಾಹಾಪೂರವನ್ನೇ ಹರಿಸಿದ್ದಾರೆ.
ಭಾರತಕ್ಕೆ ಅಭಿಮಾನಿಗಳ ವಿಶ್
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಎಸೆದ ಕೊನೆಯ ಎಸೆತದಲ್ಲಿ ಭಾರತದ ಗೆಲುವು ಖಚಿತವಾದಂತೆ, ಆಟಗಾರರು ಭಾವುಕರಾದರು. ಮೈದಾನದಲ್ಲಿ ಸೇರಿದ್ದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಉಳಿದಂತೆ ಮನೆಯಲ್ಲೇ ಕುಳಿತು ಪಂದ್ಯ ವೀಕ್ಷಿಸಿದ ಅಭಿಮಾನಿಗಳು ಕೂಡಾ ಸಂಭ್ರಮಿಸಿದರು.
ಟಿ20 ವಿಶ್ವಕಪ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ