IPL Auction: ಆರ್‌ಸಿಬಿ ಬಿಡ್ಡಿಂಗ್ ಮೆದುಳುಗಳನ್ನು ಹೊಗಳಲು ಪದಗಳಿಲ್ಲ; ಸಿಎಸ್‌ಕೆ ನೋಡಿ ಕಲೀರಿ; ಫ್ಯಾನ್ಸ್ ಆಕ್ರೋಶ
ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ತಂತ್ರಗಳ ಬಗ್ಗೆ ಅಭಿಮಾನಿಗಳು ಟೀಕಿಸುತ್ತಿದ್ದಾರೆ. ಪರ್ಸ್ ಮೊತ್ತ ಇದ್ದರೂ ಪ್ರಮುಖ ಆಟಗಾರರ ಖರೀದಿಗೆ ಅದನ್ನು ವಿನಿಯೋಗಿಸಿಲ್ಲ. ಅಲ್ಲದೆ ಕೆಲವು ಆಟಗಾರರ ಖರೀದಿಗೆ ಮಿತಿಮೀರಿ ಹಣ ಸುರಿಯಲಾಗಿದೆ ಎಂದು ಟ್ರೋಲ್ ಮಾಡಲಾಗುತ್ತಿದೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಮೊದಲ ದಿನ ಆರ್‌ಸಿಬಿ ತಂಡವು 6 ಆಟಗಾರರನ್ನು ಖರೀದಿ ಮಾಡಿದೆ. ಇದರಲ್ಲಿ ಮೂವರು ವಿದೇಶಿ ಆಟಗಾರರಾದರೆ, ಉಳಿದ ಮೂವರು ಭಾರತೀಯರು. ಮೊದಲ ದಿನದಲ್ಲಿ ಕೇವಲ 6 ಆಟಗಾರರ ಖರೀದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 52.35 ಕೋಟಿ ರೂಪಾಯಿ ಖರ್ಚು ಮಾಡಿದೆ. ಇದೀಗ ಎರಡನೇ ದಿನದ ಖರೀದಿಗೆ ತಂಡದ ಬಳಿ 30.65 ಕೋಟಿ ರೂಪಾಯಿ ಉಳಿದಿದೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ಫ್ರಾಂಚೈಸಿ ವಿರುದ್ಧ ಅಭಿಮಾನಿಗಳು ಆಕ್ರೋಶ ಹಾಗೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅನಗತ್ಯವಾಗಿ ಕೆಲವು ಆಟಗಾರರಿಗೆ ಹಣ ಸುರಿಯಲಾಗಿದೆ. ಅರ್ಹ ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗೆ ತಲೆ ಇಲ್ಲ ಎಂದು ಕಟು ಟೀಕೆ ವ್ಯಕ್ತವಾಗಿದೆ.
ಮೊದಲ ದಿನದ ಖರೀದಿಯಲ್ಲಿ ತಂಡ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟನ್ (8.75 ಕೋಟಿ ರೂ), ವಿಕೆಟ್ ಕೀಪರ್‌ಗಳಾದ ಫಿಲ್ ಸಾಲ್ಟ್ (11.50 ಕೋಟಿ ರೂ.) ಮತ್ತು ಜಿತೇಶ್ ಶರ್ಮಾ ಶರ್ಮಾ (11 ಕೋಟಿ ರೂ.), ವೇಗಿಗಳಾದ ಜೋಶ್ ಹೇಜಲ್‌ವುಡ್ (12.50 ಕೋಟಿ) ಮತ್ತು ರಾಸಿಖ್ ದಾರ್ (6 ಕೋಟಿ ರೂ.) ಹಾಗೂ ಯುವ ಸ್ಪಿನ್ನರ್ ಸುಯಶ್ ಶರ್ಮಾ (2.60 ಕೋಟಿ ರೂ.)ರನ್ನು ಖರೀದಿಸಿದೆ. ತಂಡಕ್ಕೆ ಇನ್ನೂ ಪ್ರಬಲ ಆಟಗಾರರನ್ನು ಖರೀದಿಸುವ ಅವಕಾಶ ಇತ್ತು. ಆದರೆ, ಬಿಡ್ ಮಾಡಲು ಮುಂದಾಗಿಲ್ಲ.
ಆರ್‌ಸಿಬಿ ತಂಡಕ್ಕೆ ಈ ಬಾರಿ ಹೊಸ ನಾಯಕ ಹಾಗೂ ವಿಕೆಟ್ ಕೀಪರ್ ಅಗತ್ಯವಿದೆ. ಹೀಗಾಗಿ ಈ ಬಾರಿ ಕನ್ನಡಿಗೆ ಕೆಎಲ್ ರಾಹುಲ್ ಅವರನ್ನು ತಂಡ ಖರೀದಿ ಮಾಡುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಕೇವಲ 14 ಕೋಟಿ ರೂಪಾಯಿ ಕೊಟ್ಟು ರಾಹುಲ್ ಖರೀದಿಸುವ ಅವಕಾಶವಿದ್ದರೂ ತಂಡ ಖರೀದಿ ಮಾಡಿಲ್ಲ. ಆದರೆ, ರಾಹುಲ್ ಅವರಷ್ಟು ಅನುಭವ ಇಲ್ಲದ ವಿಕೆಟ್ ಕೀಪರ್ ಜಿತೇಶ್ ಶರ್ಮಾಗೆ ಬರೋಬ್ಬರಿ 11 ಕೋಟಿ ರೂ. ಸುರಿದಿದೆ. ಇದು ಫ್ಯಾನ್ಸ್ ಟೀಕೆಗೆ ಕಾರಣವಾಗಿದೆ.
ಶ್ರೇಯಸ್ ಅಯ್ಯರ್, ರಿಷಬ್ ಪಂತ್ ದೊಡ್ಡ ಮೊತ್ತಕ್ಕೆ ಹರಾಜಾದ ಕಾರಣ ಅವರ ಖರೀದಿಗೆ ಮುಂದಾಗದಿರುವುದರಲ್ಲಿ ಅಚ್ಚರಿಯಿಲ್ಲ. ಆದರೆ, ಜೋಸ್ ಬಟ್ಲರ್, ಡೇವಿಡ್ ಮಿಲ್ಲರ್, ಗ್ಲೆನ್ ಮ್ಯಾಕ್ಸ್ವೆಲ್, ಜೋಫ್ರಾ ಆರ್ಚರ್ ಸೇರಿದಂತೆ ಕೆಲವು ಆಟಗಾರರನ್ನು ಅಲ್ಪಮೊತ್ತಕ್ಕೆ ಖರೀದಿಸುವ ಅವಕಾಶ ಇತ್ತು. ಅದರಲ್ಲೂ ತಂಡ ವಿಫಲವಾಗಿದೆ. ಆದರೆ, ಸಿಎಸ್‌ಕೆ ತಂಡವು ಚಾಣಾಕ್ಷತನದಿಂದ ಪ್ರತಿಭಾವಂತ ಆಟಗಾರರನ್ನು ತೆಕ್ಕೆಗೆ ಹಾಕಿಕೊಂಡಿದೆ. ಅದು ಕೂಡಾ ಅಲ್ಪ ಮೊತ್ತಕ್ಕೆ. ಇದು ಅಭಿಮಾನಿಗಳ ನಿರಾಶೆಗೆ ಕಾರಣವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ನಿರಾಶೆ ಹೊರಹಾಕಿದ್ದಾರೆ. “ಆರ್‌ಸಿಬಿ ಬಿಡ್ಡಿಂಗ್ ಮೆದುಳುಗಳನ್ನು ಹೊಗಳಲು ನನ್ನಲ್ಲಿ ಪದಗಳಿಲ್ಲ. ಹಾಗಾಗಿ ಆ ಬಗ್ಗೆ ಮಾತಾಡುವ ಸಾಹಸಕ್ಕೆ ನಾನು ಕೈ ಹಾಕುವುದಿಲ್ಲ. ಆದರೆ ಕಡಿಮೆ ಮೊತ್ತಕ್ಕೆ ಅತ್ಯಂತ ಉಪಯುಕ್ತ ಆಟಗಾರರನ್ನು ಕೊಳ್ಳುವುದು ಹೇಗೆಂಬುದಕ್ಕೆ ಚೆನ್ನೈ ಉದಾಹರಣೆ. ಹಾಗಾಗೇ ಅವರ ತಂಡ ಹೆಚ್ಚು ಸಲ ಚಾಂಪಿಯನ್ ಆಗಿರುವುದು. ಚಾಂಪಿಯನ್ ಆಗಲು ಸ್ಟಾರ್ ಪ್ಲೇಯರ್ಸ್‌ಗಿಂತ ಇಂತಹಾ ಪ್ರತಿಭಾವಂತ ಆಟಗಾರರು ಹೆಚ್ಚು ಅವಶ್ಯಕ” ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.
ಸಿಎಸ್‌ಕೆ ತಂಡವು ಡೆವೊನ್ ಕಾನ್ವೇ (6.25 ಕೋಟಿ), ರಾಹುಲ್ ತ್ರಿಪಾಠಿ (3.40 ಕೋಟಿ), ರಚಿನ್ ರವೀಂದ್ರ (4 ಕೋಟಿ), ಖಲೀಲ್ ಅಹ್ಮದ್ (4.8 ಕೋಟಿ),
ವಿಜಯ್ ಶಂಕರ್ (1.2 ಕೋಟಿ) ಖರೀದಿಗೆ ಅಲ್ಪಮೊತ್ತ ಮಾತ್ರ ಖರ್ಚು ಮಾಡಿತು. ಇದೇ ವೇಳೆ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಅವರಿಗೆ 9.75 ಕೋಟಿ ರೂ. ಕೊಟ್ಟರೆ, ನೂರ್ ಅಹ್ಮದ್ (10 ಕೋಟಿ) ತಂಡದ ದುಬಾರಿ ಖರೀದಿಯಾದರು.