ರೋಹಿತ್ ಶರ್ಮಾರನ್ನು ಭಾರತ ತಂಡದ ನಾಯಕರನ್ನಾಗಿ ಮಾಡಿದ್ದು ಈ ಕಾರಣಕ್ಕೆ; ಸೌರವ್ ಗಂಗೂಲಿ ಹೇಳಿದ್ದು ಹೀಗೆ
Sourav Ganguly on Rohit Sharma: ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದಾಗ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದರು. ಈ ವೇಳೆ ರೋಹಿತ್ ಶರ್ಮಾ ಅವರನ್ನು ಭಾರತ ತಂಡದ ನಾಯಕರನ್ನಾಗಿ ಮಾಡಲಾಯ್ತು. ಈ ಮಹತ್ವದ ನಿರ್ಧಾರ ಕುರಿತು ದಾದಾ ಮಾತನಾಡಿದ್ದಾರೆ. ಅಲ್ಲದೆ ಹಿಟ್‌ಮ್ಯಾನ್ ನಾಯಕತ್ವವನ್ನು ಸಮರ್ಥಿಸಿದ್ದಾರೆ.
ಭಾರತ ಕ್ರಿಕೆಟ್ ತಂಡವು ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಸೋತರೂ, ಟೀಮ್ ಇಂಡಿಯಾ ಪ್ರದರ್ಶನವು ಅಭಿಮಾನಿಗಳ ಮನಗೆದ್ದಿತು. ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಆಡಿದ ಭಾರತವು, ಟೂರ್ನಿಯುದ್ದಕ್ಕೂ ಅಜೇಯವಾಗಿ ಫೈನಲ್ ಪ್ರವೇಶಿಸಿ, ಆಸೀಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೋತಿತು. ಆದರೆ, ರೋಹಿತ್ ಬಳಗದ ಅಮೋಘ ಪ್ರದರ್ಶನವನ್ನು ಎಳ್ಳಷ್ಟೂ ದೂರುವಂತಿಲ್ಲ. ಇದೀಗ ಹಿಟ್‌ಮ್ಯಾನ್ ನಾಯಕತ್ವದಲ್ಲೇ, ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನೂ ವಶಪಡಿಸಿಕೊಂಡಿದೆ. ಆಕ್ರಮಣಕಾರಿ ಆಟಕ್ಕೆ ಮಣೆಹಾಕಿ ಬಜ್‌ಬಾಲ್ ತಂತ್ರದೊಂದಿಗೆ ಆಡುವ ಬೆನ್ ಸ್ಟೋಕ್ಸ್ ಬಳಗಕ್ಕೆ ರೋಹಿತ್ ಪಡೆ ನೀರು ಕುಡಿಸಿದೆ. ಈ ನಡುವೆ ಮುಂಬೈಕರ್ ನಾಯಕತ್ವದ ಕುರಿತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದಾರೆ.
ಈ ವರ್ಷ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲೂ, ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸುವುದು ಬಹುತೇಕ ಖಚಿತ. ಇದು ಹಲವು ದಿಗ್ಗಜ ಕ್ರಿಕೆಟಿಗರ ಅಭಿಪ್ರಾಯವೂ ಹೌದು. ಇದೇ ಮಾತನ್ನು ದಾದಾ ಸೌರವ್ ಗಂಗೂಲಿ ಕೂಡಾ ಸಮರ್ಥಿಸಿದ್ದಾರೆ. ಗಂಗೂಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿದ್ದಾಗ, ರೋಹಿತ್ ಶರ್ಮಾ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಯ್ತು. ವಿರಾಟ್ ಕೊಹ್ಲಿ ದಿಢೀರನೆ ನಾಯಕತ್ವದಿಂದ ಕೆಳಗಿಳಿದಾಗ, ಬಿಸಿಸಿಐ ಅಧ್ಯಕ್ಷರಾಗಿದ್ದ ಗಂಗೂಲಿ ಈ ನಿರ್ಧಾರಕ್ಕೆ ಬಂದರು.
ಭಾರತ ತಂಡದ ನಾಯಕತ್ವದಿಂದ ಕೊಹ್ಲಿಯನ್ನು ತಾನು ತೆಗೆದುಹಾಕಿಲ್ಲ ಎಂದು ಗಂಗೂಲಿ ಈ ಹಿಂದೆಯೇ ಸ್ಪಷ್ಟಪಡಿಸಿದ್ದರು. ಟಿ20 ತಂಡದ ನಾಯಕತ್ವದಿಂದ ಹೊರಬರುವುದನ್ನು ಮರುಪರಿಶೀಲಿಸುವಂತೆ ಉನ್ನತ ಕ್ರಿಕೆಟ್ ಮಂಡಳಿಯು ಕೊಹ್ಲಿಗೆ ಸೂಚಿಸಿತ್ತು ಎಂದು ಗಂಗೂಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ | ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್‌ಗೆ ಭಾರತ ತಂಡ ಪ್ರಕಟ; ತಂಡಕ್ಕೆ ಮರಳಿದ ಬುಮ್ರಾ, ಕೆಎಲ್ ರಾಹುಲ್ ಹೊರಕ್ಕೆ
ಕೊಹ್ಲಿ ನಾಯಕತ್ವದಲ್ಲಿ ಆಡಿದ್ದ ಕೊನೆಯ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡವು ಗುಂಪು ಹಂತದಲ್ಲೇ ನಿರ್ಗಮಿಸಿತು. ಆ ಬಳಿಕ ರೋಹಿತ್ ಶರ್ಮಾ ನೇತೃತ್ವದಲ್ಲಿ ನಡೆದ ಟೂರ್ನಿಯಲ್ಲಿ ಭಾರತದ 2022ರ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿತು. ಅದಾದ ಒಂದು ವರ್ಷದ ನಂತರ, ಭಾರತವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಿತು. ಆ ಬಳಿಕ ಏಕದಿನ ವಿಶ್ವಕಪ್ ಫೈನಲ್‌ಗೂ ಲಗ್ಗೆ ಇಟ್ಟಿತು. ಈ ಎರಡೂ ಐಸಿಸಿ ಟೂರ್ನಿಗಳಲ್ಲಿ ಸೋತರೂ. ರೋಹಿತ್ ಬಳಗದ ಪ್ರದರ್ಶನ ಮಾತ್ರ ಅಮೋಘವಾಗಿತ್ತು.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ನಡುವೆ ರೋಹಿತ್ ನಾಯಕತ್ವದ ಬಗ್ಗೆ ಮಾತನಾಡಿರುವ ಬಿಸಿಸಿಐ ಮಾಜಿ ಅಧ್ಯಕ್ಷ ಗಂಗೂಲಿ, ಅನುಭವಿ ಬ್ಯಾಟರ್ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವ ಪರಿಯಿಂದ ಆಶ್ಚರ್ಯವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಐಸಿಸಿ ವಿಶ್ವಕಪ್‌ನಲ್ಲಿ ರೋಹಿತ್ ನೇತೃತ್ವದ ಟೀಮ್ ಇಂಡಿಯಾ ಅತ್ಯುತ್ತಮ ತಂಡವಾಗಿತ್ತು ಎಂದು ದಾದಾ ಹೇಳಿದ್ದಾರೆ.
ರೋಹಿತ್ ಬೆಸ್ಟ್ ನಾಯಕ
ವಿಶ್ವಕಪ್‌ನಲ್ಲಿ ಅವರು ನಾಯಕತ್ವ ವಹಿಸಿದ ರೀತಿಯನ್ನೊಮ್ಮೆ ನೋಡಿ. ಭಾರತ ತಂಡವನ್ನು ಅವರು ಫೈನಲ್‌ಗೆ ಮುನ್ನಡೆಸಿದರು. ಫೈನಲ್‌ನಲ್ಲಿ ಸೋಲುವವರೆಗೂ ಭಾರತವು ಟೂರ್ನಿಯುದ್ದಕ್ಕೂ ಅತ್ಯುತ್ತಮ ತಂಡವಾಗಿತ್ತು. ಅವರು ಉತ್ತಮ ನಾಯಕ. ಅವರು ತಂಡವನ್ನು ಮುನ್ನಡೆಸಿದ ಪರಿ ನೋಡಿ ನನಗೇನೂ ಆಶ್ಚರ್ಯವಾಗಿಲ್ಲ. ನಾನು ಬಿಸಿಸಿಐ ಅಧ್ಯಕ್ಷನಾಗಿದ್ದಾಗ ಅವರು ನಾಯಕರಾದರು. ಅವಲ್ಲಿರುವ ಪ್ರತಿಭೆಯನ್ನು ನೋಡಿ ನಾನು ಅವರನ್ನು ಭಾರತೀಯ ಕ್ರಿಕೆಟ್ ತಂಡದ ನಾಯಕನನ್ನಾಗಿ ಮಾಡಿದೆ. ಹೀಗಾಗಿ ಆತನ ಪ್ರದರ್ಶನ ಹಾಗೂ ನಾಯಕತ್ವ ನೋಡಿ ನನಗೆ ಆಶ್ಚರ್ಯವಿಲ್ಲ" ಎಂದು ಗಂಗೂಲಿ ರೆವ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
(This copy first appeared in Hindustan Times Kannada website. To read more like this please logon to kannada.hindustantimes.com)