ವಿರಾಟ್ ಕೊಹ್ಲಿ ನೋಡಲು 58 ಕಿಮೀ ಸೈಕಲ್ ತುಳಿದು ಸ್ಟೇಡಿಯಂಗೆ ಬಂದ 15 ವರ್ಷದ ಬಾಲಕ; ಆಸೆ ಈಡೇರಿತಾ? ವಿಡಿಯೊ ವೈರಲ್
ಸೆಪ್ಟೆಂಬರ್ 27 ರಿಂದ ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ಶುರುವಾಗಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ತನ್ನ ನೆಚ್ಚಿನ ಆಟಗಾರರನ್ನು ವೀಕ್ಷಿಸಲು ಹದಿಹರೆಯದ ಹುಡುಗ ಉನ್ನಾವೊದಿಂದ ಕಾನ್ಪುರಕ್ಕೆ ಬಂದಿದ್ದಾನೆ. ಈತನ ವಿಡಿಯೊ ವೈರಲ್ ಆಗಿದೆ. (ವರದಿ: ವಿನಯ್ ಭಟ್)
ಟೀಮ್ ಇಂಡಿಯಾದ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿರುವ 15 ವರ್ಷದ ಬಾಲಕ ತನ್ನ ನೆಚ್ಚಿನ ಸ್ಟಾರ್ ಆಟಗಾರನ ಬ್ಯಾಟಿಂಗ್ ವೀಕ್ಷಿಸಲು ತನ್ನ ಸೈಕಲ್‌ನಲ್ಲಿ 58 ಕಿಲೋಮೀಟರ್ ಪ್ರಯಾಣಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಸೆಪ್ಟೆಂಬರ್ 27 ರಂದು ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ಶುರುವಾಗಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ತನ್ನ ನೆಚ್ಚಿನ ಆಟಗಾರರನ್ನು ವೀಕ್ಷಿಸಲು ಹದಿಹರೆಯದ ಹುಡುಗ ಉನ್ನಾವೊದಿಂದ ಕಾನ್ಪುರಕ್ಕೆ ಬಂದಿದ್ದಾರೆ.
ವೈರಲ್ ವೀಡಿಯೊದಲ್ಲಿ, ಚಿಕ್ಕ ಹುಡುಗ ತನ್ನ ಹೆಸರನ್ನು ಕಾರ್ತಿಕೇಯ ಎಂದು ಹೇಳಿದ್ದಾರೆ. ತನ್ನ ತವರು ಪಟ್ಟಣದಿಂದ ಕ್ರೀಡಾಂಗಣಕ್ಕೆ ಏಳು ಗಂಟೆಗಳ ಪ್ರಯಾಣ ಮಾಡಿದ್ದೇನೆ ಎಂದರು. ಕಾರ್ತಿಕೇಯ ಮುಂಜಾನೆ 4:00 ಗಂಟೆಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿ ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್‌ನ ಆರಂಭಿಕ ದಿನದಂದು ಬೆಳಿಗ್ಗೆ 11:00 ಗಂಟೆಗೆ ಕ್ರೀಡಾಂಗಣವನ್ನು ತಲುಪಿದ್ದಾನೆ.
ಸ್ಟೇಡಿಯಂ ಬಳಿ ಇದ್ದವರು ಕಾರ್ತಿಕೇಯನಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ನಿನ್ನ ಪೋಷಕರು ಈ ರೀತಿ ಹೊಗದಂತೆ ತಡೆದಿಲ್ಲವೇ? ಎಂದು ಕೇಳಿದಾಗ, 10ನೇ ತರಗತಿಯ ವಿದ್ಯಾರ್ಥಿ ಕಾರ್ತಿಕೇಯ ಅವರು ನನಗೆ ಸ್ವಂತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟರು, ಯವುದೇ ವಿರೋಧ ಮಾಡಲಿಲ್ಲ ಎಂದು ಹೇಳಿದ್ದಾರೆ. ಆದರೆ, ತಮ್ಮ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೀಕ್ಷಿಸಲು ಕಾರ್ತಿಕೇಯಗೆ ಮೊದಲ ದಿನ ಸಾಧ್ಯವಾಗಲಿಲ್ಲ.
ಏಕೆಂದರೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದ ನಂತರ ಮೋಡ ಕವಿದ ವಾತಾವರಣ ಇದ್ದ ಕಾರಣ ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಕಿಂಗ್ ಕೊಹ್ಲಿಯ ಬ್ಯಾಟಿಂಗ್ ವೈಭವ ನೋಡಲು ಪುಟ್ಟ ಅಭಿಮಾನಿಗೆ ಅಸಾಧ್ಯವಾಯಿತು. ಆದರೆ, ಇವರ ಅಭಿಮಾನವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಭಾರತ ಹಾಗೂ ಬಾಂಗ್ಲಾ ನಡುವಣ ಎರಡನೇ ಹಾಗೂ ಅಂತಿಮ ಟೆಸ್ಟ್‌ನ ಎರಡನೇ ದಿನದಾಟ ಕೂಡ ತಡವಾಗಿ ಆರಂಭವಾಗುತ್ತಿದೆ. ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ಪಂದ್ಯ ದಿನದಾಟ ಆರಂಭಿಸಲು ಸಾಧ್ಯವಾಗುತ್ತಿಲ್ಲ.
ಅಕ್ಯುವೆದರ್ ಪ್ರಕಾರ, ಸೆಪ್ಟೆಂಬರ್ 28ರ ಶನಿವಾರ ಕಾನ್ಪುರದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ತಾಪಮಾನವು ಸುಮಾರು 31 ಡಿಗ್ರಿ ಸೆಲ್ಸಿಯಸ್ ಇರಬಹುದೆಂದು ನಿರೀಕ್ಷಿಸಲಾಗಿದೆ ಮತ್ತು 80 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಮಧ್ಯಾಹ್ನದ ಸಮಯದಲ್ಲಿ, ತಾಪಮಾನವು ಸುಮಾರು 31 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದೆ, 55 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ. ಮೋಡ ಕವಿದ ವಾತಾವರಣವೂ ಹೆಚ್ಚಾಗಲಿದೆ. ಮೊದಲ ದಿನ ಕೂಡ ಪಂದ್ಯಕ್ಕೆ ವರುಣ ಅಡ್ಡಿ ಪಡಿಸಿದ್ದ. ಎರಡನೇ ಸೆಷನ್‌ನ ಮಧ್ಯದಲ್ಲಿ, ಆಟವನ್ನು ರದ್ದುಗೊಳಿಸಲಾಯಿತು ಮತ್ತು ಕೇವಲ 35 ಓವರ್‌ಗಳ ಆಟ ನಡೆದಿತ್ತು. (ವರದಿ: ವಿನಯ್ ಭಟ್).