IND vs BAN: ಭಾರತ vs ಬಾಂಗ್ಲಾದೇಶ ಮೊದಲ ಟೆಸ್ಟ್; ಸಂಭಾವ್ಯ ತಂಡ, ಚೆಪಾಕ್ ಪಿಚ್-ಹವಾಮಾನ ವರದಿ ಹೀಗಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Ban: ಭಾರತ Vs ಬಾಂಗ್ಲಾದೇಶ ಮೊದಲ ಟೆಸ್ಟ್; ಸಂಭಾವ್ಯ ತಂಡ, ಚೆಪಾಕ್ ಪಿಚ್-ಹವಾಮಾನ ವರದಿ ಹೀಗಿದೆ

IND vs BAN: ಭಾರತ vs ಬಾಂಗ್ಲಾದೇಶ ಮೊದಲ ಟೆಸ್ಟ್; ಸಂಭಾವ್ಯ ತಂಡ, ಚೆಪಾಕ್ ಪಿಚ್-ಹವಾಮಾನ ವರದಿ ಹೀಗಿದೆ

ಚೆನ್ನೈನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುವ ಮೊದಲ ಟೆಸ್ಟ್‌ ಪಂದ್ಯ ಗೆದ್ದರೆ, ಭಾರತ ಕ್ರಿಕೆಟ್‌ ತಂಡವು ಟೆಸ್ಟ್‌ ಸ್ವರೂಪದಲ್ಲಿ ಇದೇ ಮೊದಲ ಬಾರಿಗೆ ಸೋಲಿಗಿಂತ ಹೆಚ್ಚು ಗೆಲುವು ಪಡೆದ ಸಾಧನೆ ಮಾಡಿದಂತಾಗುತ್ತದೆ. ಗೌತಮ್‌ ಗಂಭೀರ್‌ ಕೋಚಿಂಗ್‌ನಲ್ಲಿ ಟೀಮ್‌ ಇಂಡಿಯಾ ಮೊದಲ ಬಾರಿಗೆ ರೆಡ್‌ ಬಾಲ್‌ ಕ್ರಿಕೆಟ್‌ ಆಡಲು ಸಜ್ಜಾಗಿದೆ.

ಭಾರತ vs ಬಾಂಗ್ಲಾದೇಶ ಮೊದಲ ಟೆಸ್ಟ್ ಪಿಚ್-ಹವಾಮಾನ ವರದಿ
ಭಾರತ vs ಬಾಂಗ್ಲಾದೇಶ ಮೊದಲ ಟೆಸ್ಟ್ ಪಿಚ್-ಹವಾಮಾನ ವರದಿ (PTI)

ಭಾರತ ಮತ್ತು ಬಾಂಗ್ಲಾದೇಶ (India vs Bangladesh 1st Test) ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ನಾಳೆ (ಸೆಪ್ಟೆಂಬರ್‌ 19ರ ಗುರುವಾರ) ಆರಂಭವಾಗುತ್ತಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸರಣಿಯ ಮೊದಲ ಟೆಸ್ಟ್‌ ಪಂದ್ಯ ನಡೆಯಲಿದೆ. ಭಾರತದ ಪಾಲಿಗೆ 2024-25ರಲ್ಲಿ ಇದು ಮೊದಲ ಟೆಸ್ಟ್ ಸರಣಿಯಾಗಿದೆ. ಈ ಕ್ಯಾಲೆಂಡರ್‌ ವರ್ಷದ ಆರಂಭದಲ್ಲಿ ಭಾರತವು ಆಡಿದ್ದ ಕೊನೆಯ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 4-1 ಅಂತರದಿಂದ ಸರಣಿ ಜಯ ಸಾಧಿಸಿತ್ತು. ಅದಾದ ಬಳಿಕ ಟೆಸ್ಟ್‌ ಸರಣಿಯಲ್ಲಿ ತಂಡ ಕಣಕ್ಕಿಳಿದಿಲ್ಲ. ಕೊನೆಯ ಬಾರಿಗೆ ಶ್ರೀಲಂಕಾ ವಿರುದ್ಧ ಸೀಮಿತ ಓವರ್‌ಗಳ ಸರಣಿ ಸೋತಿದ್ದ ರೋಹಿತ್‌ ಶರ್ಮಾ ಪಡೆ, ಇದೀಗ ನಜ್ಮುಲ್ ಹೊಸೈನ್ ಶಾಂಟೊ ಬಳಗದ ವಿರುದ್ಧ ತವರಿನ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ.

ನೂತನ ಮುಖ್ಯ ಕೋಚ್‌ ಆಗಿ ನೇಮಕಗೊಂಡ ಬಳಿಕ, ಗೌತಮ್‌ ಗಂಭೀರ್‌ ಅವರಿಗೆ ಇದು ಮೊದಲ ಟೆಸ್ಟ್‌ ಸವಾಲು. ಭಾರತದ ವಿರುದ್ಧ ಬಾಂಗ್ಲಾದೇಶ ತಂಡ ಇದುವರೆಗೂ ಟೆಸ್ಟ್‌ ಸರಣಿ ಗೆದ್ದಿಲ್ಲ. ಹಾಗಂತ, ಬಾಂಗ್ಲಾ ಹುಲಿಗಳನ್ನು ರೋಹಿತ್ ಶರ್ಮಾ ಪಡೆ ಲಘುವಾಗಿ ಪರಿಗಣಿಸುವಂತಿಲ್ಲ. ಇತ್ತೀಚೆಗೆ ಬಾಂಗ್ಲಾದೇಶವು ಎಲ್ಲಾ ಮೂರು ಸ್ವರೂಪಗಳಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ತಿಂಗಳ ಆರಂಭದಲ್ಲಿ ಆಡಿದ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಕಿಸ್ತಾನವನ್ನು ಅದರದ್ದೇ ನೆಲದಲ್ಲಿ 2-0 ಅಂತರದಲ್ಲಿ ವೈಟ್‌ ವಾಶ್‌ ಮಾಡಿತ್ತು. ಅಲ್ಲಿಂದ ಬಾಂಗ್ಲಾ ಆಟಗಾರರು ಭಾರತ ವಿರುದ್ಧವೂ ಸರಣಿ ಗೆಲುವಿನ ಗುರಿಯೊಂದಿಗೆ ಚೆನ್ನೈಗೆ ಆಗಮಿಸಿದ್ದಾರೆ. ‌

ಭಾರತವೇನಾದರೂ ಚೆನ್ನೈ ಟೆಸ್ಟ್‌ ಗೆದ್ದರೆ, ಟೆಸ್ಟ್‌ ಸ್ವರೂಪದಲ್ಲಿ ಇದೇ ಮೊದಲ ಬಾರಿಗೆ ಸೋಲಿಗಿಂತ ಹೆಚ್ಚು ಗೆಲುವು ಸಂಪಾದಿಸಿದ ಸಾಧನೆ ಮಾಡಿದಂತಾಗುತ್ತದೆ.

ಭಾರತ vs ಬಾಂಗ್ಲಾದೇಶ ಪಂದ್ಯದ ವಿವರ

  • ದಿನಾಂಕ: ಸೆಪ್ಟೆಂಬರ್ 19, ಗುರುವಾರ
  • ಆರಂಭ ಸಮಯ: ಬೆಳಗ್ಗೆ 9:30
  • ಎಲ್ಲಿ: ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
  • ನೇರಪ್ರಸಾರ: ಸ್ಪೋರ್ಟ್ಸ್ 18 (ಟಿವಿ)
  • ಲೈವ್‌ ಸ್ಟ್ರೀಮಿಂಗ್: ಜಿಯೋಸಿನಿಮಾ (ಆನ್‌ಲೈನ್‌ಗಾಗಿ ಅಪ್ಲಿಕೇಶನ್ ಮತ್ತು ವೆಬ್‌ಸೈಟ್)

ಚೆನ್ನೈ ಹವಾಮಾನ ವರದಿ

ಭಾರತ ಮತ್ತು ಬಾಂಗ್ಲಾದೇಶ ನಡುವಿನ 1ನೇ ಟೆಸ್ಟ್‌ಗೆ ಮಳೆಯ ಆತಂಕ ಇಲ್ಲ. ತಮಿಳುನಾಡಿನ ರಾಜಧಾನಿ, ಬಂದರು ನಗರಿಯಲ್ಲಿ ಗುರುವಾರ ಮಳೆಯಾಗುವ ಸಾಧ್ಯತೆ ಶೇಕಡ 23ರಷ್ಟು ಮಾತ್ರ ಇದೆ. ಪಂದ್ಯದುದ್ದಕ್ಕೂ ವಾತಾವರಣ ಆಟಕ್ಕೆ ಪೂರಕವಾಗಿರಲಿದೆ. ಹಗಲಿನಲ್ಲಿ ತಾಪಮಾನವು ಸುಮಾರು 35 ಡಿಗ್ರಿ ಸೆಲ್ಸಿಯಸ್ ಮತ್ತು ರಾತ್ರಿಯಲ್ಲಿ 28 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹೀಗಾಗಿ ಆಟದ ಸಮಯದಲ್ಲಿ ಆಟಗಾರರಿಗೆ ಬಿಸಿಲು ಹಾಗೂ ಸೆಕೆಯ ಅನುಭವ ಆಗಲಿದೆ.

ಚೆನ್ನೈ ಪಿಚ್‌ ವರದಿ

ಭಾರತದಲ್ಲಿ ಅತ್ಯಂತ ಸಮತೋಲಿತ ಪಿಚ್‌ ಎಂದೇ ಕರೆಸಿಕೊಳ್ಳುವ ಚೆಪಾಕ್‌ ಪಿಚ್‌, ಟೆಸ್ಟ್‌ ಪಂದ್ಯಗಳಿಗೆ ಹೆಚ್ಚು ಜನಪ್ರಿಯ. ಕೆಂಪು ಮಣ್ಣಿನ ಪಿಚ್ ಇದಾಗಿದ್ದು, ಉತ್ತಮ ಬೌನ್ಸ್ ನೀಡುತ್ತದೆ. ಈ ಪಿಚ್‌ ವೇಗಿಗಳಿಗಿಂತ ಹೆಚ್ಚಾಗಿ ಸ್ಪಿನ್ನರ್‌ಗಳಿಗೆ ನೆರವಾಗಲಿದೆ. ಹೀಗಾಗಿ ಭಾರತ ಹಾಗೂ ಬಾಂಗ್ಲಾ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಸುವುದು ಬಹುತೇಕ ಖಚಿತ.

ಬಾಂಗ್ಲಾದೇಶ ಸಂಭಾವ್ಯ ತಂಡ

ಶದ್ಮನ್ ಇಸ್ಲಾಂ, ಝಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್ (ವಿಕೆಟ್‌ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ನಹಿದ್ ರಾಣಾ.

ಭಾರತ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್‌ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಆಕಾಶ್ ದೀಪ್ / ಮೊಹಮ್ಮದ್ ಸಿರಾಜ್.

Whats_app_banner