ಬೌಲಿಂಗ್‌ನಲ್ಲಿ ಮಿಂಚಿದರೂ ಬ್ಯಾಟಿಂಗ್ನಲ್ಲಿ ಮತ್ತೆ ಅದೇ ರಾಗ, ಅದೇ ಹಾಡು; ಕಿವೀಸ್ 235ಕ್ಕೆ ಆಲೌಟ್, ಭಾರತ 86ಕ್ಕೆ 4
India vs New Zealand 3rd Test: ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಪಿನ್ ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ, ವಾಷಿಂಗ್ಟರ್ ಸುಂದರ್ ಅಬ್ಬರಿಸಿದರು. ಪರಿಣಾಮ ಕಿವೀಸ್ 235ಕ್ಕೆ ಆಲೌಟ್ ಆಯಿತು.
ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ರವೀಂದ್ರ ಜಡೇಜಾ (Ravindra Jadeja) ಮತ್ತು ವಾಷಿಂಗ್ಟನ್ ಸುಂದರ್ (Washington Sundar) ಅವರ ಸ್ಪಿನ್ ದಾಳಿಗೆ ನ್ಯೂಜಿಲೆಂಡ್ ತಂಡ ತತ್ತರಿಸಿದೆ. ಇದರೊಂದಿಗೆ ಪ್ರವಾಸಿಗರು ಮೊದಲ ಇನ್ನಿಂಗ್ಸ್ನಲ್ಲಿ ಅಲ್ಪ ಮೊತ್ತಕ್ಕೆ ಕುಸಿಯಿತು. ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಕಿವೀಸ್ ತಂಡ, 65.4 ಓವರ್ಗಳಲ್ಲಿ 235 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಕಳೆದ ಎರಡು ಪಂದ್ಯಗಳಲ್ಲಿ ಹೀನಾಯ ಸೋಲನುಭವಿಸಿದ ಭಾರತ ಇದೀಗ 3ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲೂ ಮತ್ತೊಮ್ಮೆ ಕಳಪೆ ಪ್ರದರ್ಶನ ಮುಂದುವರೆಸಿದ್ದು, 149 ರನ್ಗಳ ಹಿನ್ನಡೆಯಲ್ಲಿದೆ.
ನ್ಯೂಜಿಲೆಂಡ್ ಪರ ಡ್ಯಾರಿಲ್ ಮಿಚೆಲ್ (82) ಮತ್ತು ವಿಲ್ ಯಂಗ್ (71) ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಮೊತ್ತ 200ರ ಗಡಿ ದಾಟಿಸಿದರು. ಈ ಇಬ್ಬರನ್ನು ಹೊರತುಪಡಿಸಿದರೆ, ಉಳಿದ ಆಟಗಾರರು ಕಳಪೆ ಪ್ರದರ್ಶನ ನೀಡಿದರು. ಭಾರತ ತಂಡದ ಪರ ಬೌಲಿಂಗ್‌ನಲ್ಲಿ ಅಬ್ಬರಿಸಿದ ಜಡೇಜಾ ಐದು ವಿಕೆಟ್ಗಳ ಗೊಂಚಲು ಪಡೆದಿದರು. ಇವರಿಗೆ ಸಾಥ್ ಕೊಟ್ಟ ಸುಂದರ್ 4 ವಿಕೆಟ್ ಉರುಳಿಸಿದರು. ಉಳಿದ ಒಂದು ವಿಕೆಟ್ ಆಕಾಶ್ ದೀಪ್ ಪಾಲಾಯಿತು. ಇದೀಗ ಭಾರತ ತಂಡವು ಬ್ಯಾಟಿಂಗ್ ಆರಂಭಿಸಿದ್ದು, ದಿನದಂತ್ಯಕ್ಕೆ 19 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 89 ರನ್ (India vs New Zealand 3rd Test Day 1) ಗಳಿಸಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತೆ ವೈಫಲ್ಯ ಅನುಭವಿಸಿದರು.
ನ್ಯೂಜಿಲೆಂಡ್ ಕಳಪೆ ಆರಂಭ
ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್, ಕಳಪೆ ಆರಂಭ ಪಡೆಯಿತು. ಡೆವೊನ್ ಕಾನ್ವೆ 4 ರನ್ ಗಳಿಸಿ ಆಕಾಶ್ ದೀಪ್ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ನಾಯಕ ಟಾಮ್ ಲೇಥಮ್ 28 ರನ್ ಗಳಿಸಿ ಔಟಾದರು. ರಚಿನ್ ರವೀಂದ್ರ (5) ಸಹ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಇರಲಿಲ್ಲ. ಸುಂದರ್ ಈ ಇಬ್ಬರನ್ನು ಹೊರದಬ್ಬಿದರು. ಆದರೆ ಈ ಹಂತದಲ್ಲಿ ವಿಲ್ ಯಂಗ್ ಮತ್ತು ಮಿಚೆಲ್ ಒಂದಾಗಿ ಭಾರತದ ಬೌಲರ್ಗಳನ್ನು ಕೆಲ ಹೊತ್ತು ಕಾಡಿದರು. ನಾಲ್ಕನೇ ವಿಕೆಟ್ಗೆ 87 ರನ್ಗಳ ಪಾಲುದಾರಿಕೆ ಒದಗಿಸಿದರು. ಈ ವೇಳೆ ದಾಳಿಗಿಳಿದ ಜಡೇಜಾ 71 ರನ್ ಸಿಡಿಸಿದ್ದ ಯಂಗ್ರನ್ನು ಹೊರಹಾಕಿದರು.
ಇದನ್ನೂ ಓದಿ: ಐದು ವಿಕೆಟ್ ಪಡೆದು ದಿಗ್ಗಜರ ದಾಖಲೆ ಮುರಿದ ಜಡೇಜಾ
ಇದರ ನಂತರ ಕಿವೀಸ್ ಪೆವಿಲಿಯನ್ ಪರೇಡ್ ನಡೆಸಿತು. ಇದರ ನಡುವೆಯೂ ಡ್ಯಾರಿಲ್ ಮಿಚೆಲ್, ಸತತ ವಿಕೆಟ್ಗಳ ನಡುವೆಯೂ ಅರ್ಧಶತಕ ಸಿಡಿಸಿ ತಂಡವನ್ನು ಲೀಡ್ ಮಾಡಿದರು. 129 ಎಸೆತಗಳಲ್ಲಿ 82 ರನ್ ಬಾರಿಸಿದ ಮಿಚೆಲ್, ಸುಂದರ್ ಬೌಲಿಂಗ್‌ನಲ್ಲಿ ಔಟಾದರು. ಆ ಬಳಿಕ ಟಾಮ್ ಬ್ಲಂಡೆಲ್ ಡಕೌಟ್ ಆದರೆ, ಗ್ಲೆನ್ ಫಿಲಿಪ್ಸ್ 17, ಇಶ್ ಸೋಧಿ 7, ಮ್ಯಾಟ್ ಹೆನ್ರಿ 0, ಅಜಾಜ್ ಪಟೇಲ್ 7, ವಿಲಿಯಮ್ ಓರೊಕೆ 7 ರನ್ ಗಳಿಸಿದರು.
ಭಾರತ ಮತ್ತೆ ಹೀನಾಯ ಪ್ರದರ್ಶನ
235 ರನ್ಗಳಿಗೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ನಡೆಸಿದ ಭಾರತ ಮತ್ತೆ ಕೆಟ್ಟ ಪ್ರದರ್ಶನ ನೀಡಿದೆ. ಟಾಪ್ ಆರ್ಡರ್ ಬ್ಯಾಟರ್ಗಳು ಮತ್ತೊಮ್ಮೆ ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. ನಾಯಕ ರೋಹಿತ್ ಶರ್ಮಾ ಅವರು 18 ರನ್ ಗಳಿಸಿ ಔಟಾಗುವ ಮೂಲಕ ಆರಂಭಿಕ ಆಘಾತಕ್ಕೆ ಕಾರಣವಾದರು. ಆದರೆ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದರು. 2ನೇ ವಿಕೆಟ್ಗೆ 53 ರನ್ಗಳ ಜೊತೆಯಾಟವಾಡಿದರು. ಈ ಬೆನ್ನಲ್ಲೇ ಯಶಸ್ವಿ ಜೈಸ್ವಾಲ್ (30) ಔಟಾದರು. ನಂತರ ಮೊಹಮ್ಮದ್ ಸಿರಾಜ್ ಡಕೌಟ್ ಆದರೆ, ವಿರಾಟ್ ಕೊಹ್ಲಿ 4 ರನ್ ಗಳಿಸಿ ರನೌಟ್ ಆದರು. ಪ್ರಸ್ತುತ ಗಿಲ್ ಮತ್ತು ಪಂತ್ ಕ್ರೀಸ್ನಲ್ಲಿದ್ದಾರೆ. 2ನೇ ದಿನಂದು ಭಾರತ ತಂಡವು ಪ್ರವಾಸಿಗರಿಗೆ ತಿರುಗೇಟು ನೀಡುತ್ತಾ ಇಲ್ಲವೇ ಎಂಬುದನ್ನು ಕಾದುನೋಡಬೇಕಿದೆ.