IND vs SA 3rd T20I: ತಿಲಕ್ ವರ್ಮಾ ಸ್ಫೋಟಕ ಶತಕ; ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 11 ರನ್ಗಳ ರೋಚಕ ಗೆಲುವು, ಸರಣಿ ಮುನ್ನಡೆ
India vs South Africa 3rd T20I: ಸೌತ್ ಆಫ್ರಿಕಾ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ, 11 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಸೂಪರ್ ಸ್ಪೋರ್ಟ್ ಪಾರ್ಕ್ನಲ್ಲಿ ನಡೆದ ಈ ಪಂದ್ಯದಲ್ಲಿ ತಿಲಕ್ ವರ್ಮಾ ಭರ್ಜರಿ ಶತಕ ಸಿಡಿಸಿ ಗೆಲುವಿನ ರೂವಾರಿಯಾದರು.
ಸೂಪರ್ ಸ್ಪೋರ್ಟ್ ಪಾರ್ಕ್ನಲ್ಲಿ ಬುಧವಾರ (ನವೆಂಬರ್ 14) ನಡೆದ 3ನೇ ಟಿ20ಐ (IND vs SA 3rd T20I) ಪಂದ್ಯದಲ್ಲಿ ತಿಲಕ್ ವರ್ಮಾ ಅವರ (107*) ಶತಕದ ನೆರವಿನಿಂದ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ 11 ರನ್ಗಳ ಭರ್ಜರಿ ಜಯ ದಾಖಲಿಸಿದೆ. ಮಾರ್ಕೋ ಜಾನ್ಸನ್ ಹೋರಾಟದ ನಡುವೆಯೂ ಆತಿಥೇಯರು ವಿರೋಚಿತ ಸೋಲೊಪ್ಪಿಕೊಂಡರು. 22 ವರ್ಷದ ಎಡಗೈ ಬ್ಯಾಟರ್ ತಿಲಕ್ 56 ಎಸೆತಗಳಲ್ಲಿ ಅಜೇಯ 107 ರನ್ ಗಳಿಸಿ ಭಾರತದ ಮೊತ್ತವನ್ನು 219/6ಕ್ಕೆ ಏರಿಸಿದರು. ದಕ್ಷಿಣ ಆಫ್ರಿಕಾ 7 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿದ್ದು, 4 ಪಂದ್ಯಗಳ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು ಆರಂಭಿಕ ಆಘಾತಕ್ಕೆ ಒಳಗಾಯಿತು. ಆರಂಭಿಕ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸಂಜು ಸ್ಯಾಮ್ಸನ್ ಸತತ ಎರಡನೇ ಬಾರಿಗೂ ಡಕೌಟ್ ಆದರು. ಕಳೆದ ಹಲವು ಪಂದ್ಯಗಳಲ್ಲಿ ಸ್ಕೋರ್ ಗಳಿಸಲು ವಿಫಲನಾಗಿದ್ದ ಅಭಿಷೇಕ್ ಶರ್ಮಾ ಕೊನೆಗೂ ಫಾರ್ಮ್ಗೆ ಮರಳಿದರು. 25 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ ಸಹಿತ 50 ರನ್ ಗಳಿಸಿ ಎರಡನೇ ವಿಕೆಟ್ಗೆ ತಿಲಕ್ ವರ್ಮಾ ಜೊತೆ ಸೇರಿ 107 ರನ್ಗಳ ಪಾಲುದಾರಿಕೆ ನೀಡಿ ಔಟಾದರು. ಆ ಬಳಿಕ ತಿಲಕ್ ವರ್ಮಾ, ಸೌತ್ ಆಫ್ರಿಕಾ ಬೌಲರ್ಗಳ ಫುಲ್ ಚಾರ್ಜ್ ಮಾಡದರು.
ತಿಲಕ್ ವರ್ಮಾ ಚೊಚ್ಚಲ ಟಿ20ಐ ಶತಕ
ಮೈದಾನದ ಮೂಲೆ ಮೂಲೆಗೂ ಚೆಂಡಿನ ದರ್ಶನ ಮಾಡಿಸಿದ ತಿಲಕ್ ವರ್ಮಾ, ಟಿ20ಐ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಆದರೆ ಉಳಿದ ಆಟಗಾರರಿಗೆ ಆತನಿಗೆ ಸರಿಯಾದ ಸಾಥ್ ಸಿಗಲಿಲ್ಲ. ಸೂರ್ಯಕುಮಾರ್ ಯಾದವ್ 1 ರನ್ ಗಳಿಸಿ ನಿರಾಸೆ ಮೂಡಿಸಿದರೆ, ಹಾರ್ದಿಕ್ ಪಾಂಡ್ಯ 18, ರಿಂಕು ಸಿಂಗ್ 8 ರನ್ಗೆ ಔಟಾಗಿ ಸ್ಕೋರ್ ಏರಿಸುವಲ್ಲಿ ವಿಫಲರಾದರು. ಮತ್ತೊಂದೆಡೆ ರಮಣ್ ದೀಪ್ ಸಿಂಗ್ ತನ್ನ ಪದಾರ್ಪಣೆ ಪಂದ್ಯದಲ್ಲಿ 15 ರನ್ ಗಳಿಸಿ ರನೌಟ್ ಆದರು. ಆದರೆ ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ತಿಲಕ್, 7 ಬೌಂಡರಿ, 8 ಸಿಕ್ಸರ್ ಸಹಿತ 107 ರನ್ ಚಚ್ಚಿದರು. ಆಂಡಿಲೆ ಸಿಮೆಲೆನ್, ಕೇಶವ್ ಮಹಾರಾಜ್ ತಲಾ 2 ವಿಕೆಟ್ ಪಡೆದರು.
ಮಾರ್ಕೋ ಜಾನ್ಸನ್ 16 ಎಸೆತಗಳಲ್ಲಿ ಅರ್ಧಶತಕ
ಈ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ, ಉತ್ತಮ ಆರಂಭ ಪಡೆಯಲಿಲ್ಲ. ರಯಾನ್ ರಿಕೆಲ್ಟನ್ 20 ರನ್ ಗಳಿಸಿದರೆ, ರೀಜಾ ಹೆಂಡ್ರಿಕ್ಸ್ 21, ಟ್ರಿಸ್ಟಾನ್ ಸ್ಟಬ್ಸ್ 12, ಏಡನ್ ಮಾರ್ಕ್ರಮ್ 29, ಡೇವಿಡ್ ಮಿಲ್ಲರ್ 18 ರನ್ ಗಳಿಸಿ ಔಟಾದರು. ಇವರು ದೊಡ್ಡ ಸ್ಕೋರ್ ಗಳಿಸದ ಹಿನ್ನೆಲೆ ಆಫ್ರಿಕಾ ಗೆಲುವಿನ ಕನಸು ಕಾಣುವಲ್ಲಿ ವಿಫಲವಾಯಿತು. ಮತ್ತೊಂದೆಡೆ ಹೆನ್ರಿಚ್ ಕ್ಲಾಸೆನ್ ಮತ್ತು ಕೊನೆಯಲ್ಲಿ ಮಾರ್ಕೋ ಜಾನ್ಸನ್ ಹೋರಾಟ ನಡೆಸಿದರು. ಕ್ಲಾಸೆನ್ 22 ಎಸೆತಗಳಲ್ಲಿ1 ಬೌಂಡರಿ, 4 ಸಿಕ್ಸರ್ ಸಹಿತ ಔಟಾದರು.
ಮತ್ತೊಂದೆಡೆ ಮಾರ್ಕೋ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ದಾಖಲೆಯ ವೇಗದ ಅರ್ಧಶತಕ ಸಿಡಿಸಿದರು. 16 ಎಸೆತಗಳಲ್ಲಿ 50ರ ಗಡಿ ದಾಟಿದರು. 17 ಎಸೆತಗಳಲ್ಲಿ 54 ರನ್ ಗಳಿಸಿದ ಜಾನ್ಸನ್ ಇನ್ನಿಂಗ್ಸ್ನಲ್ಲಿ 4 ಬೌಂಡರಿ, 5 ಸಿಕ್ಸರ್ಗಳಿದ್ದವು. ಆದರೂ ಸೌತ್ ಆಫ್ರಿಕಾ 11 ರನ್ಗಳಿಂದ ಸೋಲು ಒಪ್ಪಿಕೊಂಡಿತು. ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆದು ಭಾರತದ ಪರ ಅತ್ಯಧಿಕ ವಿಕೆಟ್ ಪಡೆದ 2ನೇ ಬೌಲರ್ ಎನಿಸಿದ್ದಾರೆ. ವರುಣ್ ಚಕ್ರವರ್ತಿ 2, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ ತಂಡ: 20 ಓವರ್ಗಳಲ್ಲಿ 6 ವಿಕೆಟ್ಗೆ 219 ರನ್
ದಕ್ಷಿಣ ಆಫ್ರಿಕಾ: 20 ಓವರ್ಗಳಲ್ಲಿ 7 ವಿಕೆಟ್ಗೆ 208 ರನ್
ಫಲಿತಾಂಶ: ಭಾರತಕ್ಕೆ 11 ರನ್ ಗಳ ಜಯ (ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ 2-1 ಮುನ್ನಡೆ)
ಟಾಸ್ ಗೆಲುವು: ದಕ್ಷಿಣ ಆಫ್ರಿಕಾ
ಉಳಿದ ಪಂದ್ಯ: ನವೆಂಬರ್ 15, ಜೋಹಾನ್ಸ್ ಬರ್ಗ್
ಭಾರತದ ಪರ ಟಿ20ಐ ಶತಕ ಗಳಿಸಿದ ಕಿರಿಯ ಆಟಗಾರ
21 ವರ್ಷ 279 ದಿನ: ಯಶಸ್ವಿ ಜೈಸ್ವಾಲ್ 100 vs ನೇಪಾಳ, ಹ್ಯಾಂಗ್‌ಝೌ 2023
22 ವರ್ಷ 5 ದಿನ: ತಿಲಕ್ ವರ್ಮಾ 100* vs ಸೌತ್ ಆಫ್ರಿಕಾ, ಸೆಂಚುರಿಯನ್ 2024
23 ವರ್ಷ 146 ದಿನ: ಶುಭ್ಮನ್ ಗಿಲ್ 126* vs ನ್ಯೂಜಿಲೆಂಡ್, ಅಹಮದಾಬಾದ್ 2023
23 ವರ್ಷ 156 ದಿನ: ಸುರೇಶ್ ರೈನಾ 101 vs ಸೌತ್ ಆಫ್ರಿಕಾ, ಗ್ರೋಸ್ ಐಲೆಟ್ 2010
ದಕ್ಷಿಣ ಆಫ್ರಿಕಾ ಪರ ವೇಗದ ಟಿ20ಐ ಅರ್ಧಶತಕ (ಎಸೆತಗಳಲ್ಲಿ)
15 ಎಸೆತ, ಕ್ವಿಂಟನ್ ಡಿ ಕಾಕ್ vs WI ಸೆಂಚುರಿಯನ್, 2023
16 ಎಸೆತ, ಮಾರ್ಕೊ ಜಾನ್ಸೆನ್ vs ಇಂಡ್ ಸೆಂಚುರಿಯನ್, 2024
17 ಎಸೆತ, ಕ್ವಿಂಟನ್ ಡಿ ಕಾಕ್ vs ಇಂಗ್ ಡರ್ಬನ್, 2020
19 ಎಸೆತ, ಟ್ರಿಸ್ಟಾನ್ ಸ್ಟಬ್ಸ್ vs ಇಂಗ್ ಬ್ರಿಸ್ಟಲ್, 2022