ಕೊಹ್ಲಿ, ಕೆಎಲ್‌ ರಾಹುಲ್‌ ಬೊಂಬಾಟ್‌ ಬ್ಯಾಟಿಂಗ್‌; 6 ವಿಕೆಟ್‌ಗಳಿಂದ ಆಸೀಸ್ ಹೆಡೆಮುರಿ ಕಟ್ಟಿದ ಭಾರತ
ಕನ್ನಡ ಸುದ್ದಿ  /  ಕ್ರಿಕೆಟ್  /  ಕೊಹ್ಲಿ, ಕೆಎಲ್‌ ರಾಹುಲ್‌ ಬೊಂಬಾಟ್‌ ಬ್ಯಾಟಿಂಗ್‌; 6 ವಿಕೆಟ್‌ಗಳಿಂದ ಆಸೀಸ್ ಹೆಡೆಮುರಿ ಕಟ್ಟಿದ ಭಾರತ

ಕೊಹ್ಲಿ, ಕೆಎಲ್‌ ರಾಹುಲ್‌ ಬೊಂಬಾಟ್‌ ಬ್ಯಾಟಿಂಗ್‌; 6 ವಿಕೆಟ್‌ಗಳಿಂದ ಆಸೀಸ್ ಹೆಡೆಮುರಿ ಕಟ್ಟಿದ ಭಾರತ

India vs Australia, ODI World Cup 2023: ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿಯ 5ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಟೀಮ್ ಇಂಡಿಯಾ ದರ್ಬಾರ್ ನಡೆಸಿದೆ. ಕಾಂಗರೂಗಳನ್ನು ಭರ್ಜರಿ 6 ವಿಕೆಟ್‌ಗಳಿಂದ ಮಣಿಸಿ ವಿಶ್ವಕಪ್‌ನಲ್ಲಿ ಗೆಲುವಿನ ಆರಂಭ ಪಡೆದಿದೆ.

ವಿರಾಟ್‌ ಕೊಹ್ಲಿ ಮತ್ತು ಕೆಎಲ್‌ ರಾಹುಲ್‌ ಆಕರ್ಷಕ ಜೊತೆಯಾಟ
ವಿರಾಟ್‌ ಕೊಹ್ಲಿ ಮತ್ತು ಕೆಎಲ್‌ ರಾಹುಲ್‌ ಆಕರ್ಷಕ ಜೊತೆಯಾಟ (AFP)

ಏಕದಿನ ವಿಶ್ವಕಪ್‌ನಲ್ಲಿ ಭಾರತ ಶುಭಾರಂಭ ಮಾಡಿದೆ. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ರೋಹಿತ್‌ ಶರ್ಮಾ ಬಳಗವು 6 ವಿಕೆಟ್‌ಗಳಿಂದ ಜಯಭೇರಿ ಬಾರಿಸಿದೆ.

200 ರನ್‌ಗಳ ಸ್ಪರ್ಧಾತ್ಮಕ ಗುರಿ ಪಡೆದು, ಆರಂಭಿಕ ಆಘಾತದ ಹೊರತಾಗಿಯೂ ಭಾರತ ಗುರಿ ತಲುಪಿತು. ಭಾರತದ ಪರ ಆಪದ್ಬಾಂಧವರಾಗಿ ಆಡಿದವರು ವಿರಾಟ್‌ ಕೊಹ್ಲಿ ಮತ್ತು ಕನ್ನಡಿಗ ಕೆಎಲ್‌ ರಾಹುಲ್.‌ ಉಭಯ ಆಟಗಾರರ 165(215) ರನ್‌ ಜೊತೆಯಾಟವು ಪಂದ್ಯದ ದಿಕ್ಕನ್ನೇ ಬದಲಾಯಿಸಿತು.

ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿ ಆಸ್ಟ್ರೇಲಿಯಾ, 49.3 ಓವರ್‌ಗಳಲ್ಲಿ 199 ರನ್‌ ಗಳಿಸಿ ಆಲೌಟ್‌ ಆಯ್ತು. ಚೇಸಿಂಗ್‌ ಆರಂಭಿಸಿದ ಭಾರತ, 2 ರನ್‌ ಆಗುವಷ್ಟರಲ್ಲಿ ಪ್ರಮುಖ ಮೂವರು ಬ್ಯಾಟರ್‌ಗಳನ್ನು ಕಳೆದುಕೊಂಡಿತು. ಆದರೆ, ರಾಹುಲ್‌ ಮತ್ತು ಕೊಹ್ಲಿ ಜೊತೆಯಾಟದ ನೆರವಿನಿಂದ ಭಾರತವು 41.2 ಓವರ್‌ಗಳಲ್ಲಿ 201/4 ರನ್‌ ಗಳಿಸಿ ಗೆದ್ದು ಗೆಲುವು ಸಾಧಿಸಿತು.

ರಾಹುಲ್-ಕೊಹ್ಲಿ ಮನಮೋಹಕ ಬ್ಯಾಟಿಂಗ್

ಚೇಸಿಂಗ್‌ ವೇಳೆ ತಂಡದ ಮೊತ್ತ 2 ಆಗುವಷ್ಟರಲ್ಲಿ ಭಾರತದ ಮೂವರು ಬ್ಯಾಟರ್‌ಗಳು ಪೆವಿಲಿಯನ್‌ ಸೇರಿಕೊಂಡರು. ಇಶಾನ್‌ ಕಿಶನ್‌, ರೋಹಿತ್‌ ಶರ್ಮಾ ಹಾಗೂ ಶ್ರೇಯಸ್‌ ಅಯ್ಯರ್‌ ಒಬ್ಬರ ಹಿಂದೊಬ್ಬರಂತೆ ಸೊನ್ನೆ ಸುತ್ತಿ ಔಟಾದರು. ಈ ವೇಳೆ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದವರು ಕೊಹ್ಲಿ ಮತ್ತು ಕೆಎಲ್‌. ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶಿಸಿದ ಅವರು, ತಲಾ ಅರ್ಧಶತಕ ಸಿಡಿಸುವುದರೊಂದಿಗೆ ಶತಕದ ಜೊತೆಯಾಟ ಪೂರೈಸಿದರು.

ಇಬ್ಬರ ಬ್ಯಾಟ್‌ನಿಂದ 165(215) ರನ್‌ಗಳ ಅತ್ಯಮೂಲ್ಯ ಜೊತೆಯಾಟ ದಾಖಲಾಯ್ತು. 116 ಎಸೆತಗಳಲ್ಲಿ 85 ರನ್‌ ಗಳಿಸಿದ ಕೊಹ್ಲಿ, ತಂಡದ ಗೆಲುವಿನ ಸನಿಹದಲ್ಲಿ ವಿಕೆಟ್‌ ಒಪ್ಪಿಸಿದರು. ಆದರೆ, ರಾಹುಲ್‌ ಆರ್ಭಟ ಮುಂದುವರೆಯಿತು. 115 ಎಸೆತಗಳಿಂದ 8 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 97 ರನ್‌ ಕಲೆ ಹಾಕಿದರು. ಗೆಲುವಿನ ಸಿಕ್ಸರ್‌ ಸಿಡಿಸುವ ಮೂಲಕ ತಂಡವನ್ನು ಗೆಲ್ಲಿಸಿದರು. ಈ ನಡುವೆ 8 ಎಸೆತ ಎದುರಿಸಿದ ಹಾರ್ದಿಕ್‌ ಒಂದು ಸಿಕ್ಸರ್‌ ಸಹಿತ 11 ರನ್‌ ಗಳಿಸಿದರು.

ಶತಕ ವಂಚಿತ ರಾಹುಲ್‌

ಪಂದ್ಯದಲ್ಲಿ ಶತಕ ಸಿಡಿಸುವ ಅವಕಾಶ ರಾಹುಲ್‌ಗಿತ್ತು. ಒಂದು ವೇಳೆ ಅವರು ಕೊನೆಯದಾಗಿ ಸಿಡಿಸಿದ ಸಿಕ್ಸರ್‌ ಬೌಂಡರಿಯಾಗುತ್ತಿದ್ದರೆ, ಪಂದ್ಯ ಟೈ ಆಗುತ್ತಿತ್ತು. ಮುಂದಿನ ಎಸೆತದಲ್ಲಿ ಸಿಕ್ಸರ್‌ ಸಿಡಿಸಿ ಶತಕ ಪೂರೈಸಬಹುದಿತ್ತು. ಆದರೆ, ರಾಹುಲ್‌ ಖಡಕ್‌ ಹೊಡೆತಕ್ಕೆ ಸಿಕ್ಕ ಚೆಂಡು ಬೌಂಡರಿ ಲೈನ್‌ ದಾಟಿತು. ಹೀಗಾಗಿ ರಾಹುಲ್‌ ಅಜೇಯರಾದರೂ ಶತಕ ವಂಚಿತರಾದರು.

ಭಾರತೀಯ ಸ್ಪಿನ್ನರ್​ಗಳ ದರ್ಬಾರ್

ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಆಸೀಸ್‌ಗೆ ಭಾರತದ ಸ್ಪಿನ್ನರ್‌ಗಳು ಕಂಟಕರಾದರು. ಬುಮ್ರಾ, ಭಾರತಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರೆ ಆ ಬಳಿಕ ನಡೆದಿದ್ದು, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಅಬ್ಬರ. ನಿಧಾನಗತಿ ಆಟದ ಮೂಲಕ ಕ್ರೀಸ್​ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಡೇವಿಡ್ ವಾರ್ನರ್ 52 ಎಸೆತಗಳಲ್ಲಿ 6 ಬೌಂಡರಿ ಸಹಿತ​ 41 ರನ್​ಗಳಿಸಿ ಆಟ ಮುಗಿಸಿದರು. ಕುಲ್ದೀಪ್​ ಬೌಲಿಂಗ್​​ನಲ್ಲಿ ಕ್ಯಾಚ್​ ನೀಡಿ ಪೆವಿಲಿಯನ್ ಸೇರಿದರು.

ಅರ್ಧಶತಕದ ಹೊಸ್ತಿಲಲ್ಲಿದ್ದ ಸ್ಟೀವ್ ಸ್ಮಿತ್​ಗೆ ಜಡೇಜಾ ಶಾಕ್ ನೀಡಿದರು. 71 ಎಸೆತಗಳಲ್ಲಿ 5 ಬೌಂಡರಿ ಸಹಿತ 46 ರನ್​ ಗಳಿಸಿದ್ದ ಸ್ಮಿತ್, ಜಡ್ಡುಗೆ ಕ್ಲೀನ್​ ಬೋಲ್ಡ್​ ಆದರು. ಆ ಬಳಿಕ ಕಣಕ್ಕಿಳಿದ ಆಸೀಸ್​ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಮಾರ್ನಸ್ ಲಬುಶೇನ್​ (27) ತಂಡಕ್ಕೆ ಚೇತರಿಕೆ ನೀಡುವ ಯತ್ನ ನಡೆಸಿದರು. ಆದರೆ ಜಡೇಜಾ ಸ್ಪಿನ್ ಮೋಡಿಗೆ ಮಂಕಾದರು. ಜಡೇಜಾ ಎಸೆತದಲ್ಲಿ ಲ್ಯಾಬುಶೇನ್​ ಔಟಾದರೆ, ಅದೇ ಓವರ್​ನ 4ನೇ ಎಸೆತದಲ್ಲಿ ಅಲೆಕ್ಸ್ ಕ್ಯಾರಿ ಶೂನ್ಯಕ್ಕೆ ನಿರ್ಗಮಿಸಿದರು. ಇದು ಜಡೇಜಾ 3ನೇ ವಿಕೆಟ್. ಇದರ ಮಧ್ಯೆ ಕುಲ್ದೀಪ್​ ಸ್ಪಿನ್​ ಮೋಡಿಗೆ ಬೆಕ್ಕಸ ಬೆರಗಾದ ಗ್ಲೆನ್ ಮ್ಯಾಕ್ಸ್​ವೆಲ್ 15 ರನ್ ಗಳಿಸಿ ಕ್ಲೀನ್​ ಬೋಲ್ಡ್ ಆದರು. ಹೋಮ್​ ಪಿಚ್​​ನಲ್ಲಿ ರನ್​ಗೆ ನಿಯಂತ್ರಣ ಹೇರಿದರೂ ವಿಕೆಟ್​​ಗಾಗಿ ಕಾಯುತ್ತಿದ್ದ ಅಶ್ವಿನ್, ಕ್ಯಾಮರೂನ್ ಗ್ರೀನ್​ರನ್ನು ಬಲಿ ಪಡೆದು ವಿಕೆಟ್ ಖಾತೆ ತೆರೆದರು. ಭಾರತದ ಪರ ಜಡೇಜಾ 3 ವಿಕೆಟ್, ಕುಲ್ದೀಪ್, ಬುಮ್ರಾ ತಲಾ 2 ವಿಕೆಟ್, ಅಶ್ವಿನ್, ಹಾರ್ದಿಕ್, ಸಿರಾಜ್ ತಲಾ 1 ವಿಕೆಟ್ ಪಡೆದರು.

ಡೆತ್‌ ಓವರ್‌ಗಳಲ್ಲಿ ಜಂಪಾ 6 ರನ್, ಮಿಚೆಲ್ ಸ್ಟಾರ್ಕ್ 28 ರನ್ ಗಳಿಸಿ ಕೊನೆಯ ಹಂತದಲ್ಲಿ ಮಿಂಚಿದರು. ಅಂತಿಮವಾಗಿ ಆಸ್ಟ್ರೇಲಿಯಾ 49.3 ಓವರ್​​​ಗಳಲ್ಲಿ 199 ರನ್​ಗಳಿಗೆ ಆಲೌಟ್​ ಆಯಿತು.

Whats_app_banner