2021-2024ರ ನಡುವೆ ಫ್ಯಾಬ್-4 ಆಟಗಾರರ ಸೆಂಚುರಿಗಳ ವ್ಯತ್ಯಾಸ; 4ನೇ ಸ್ಥಾನಕ್ಕೆ ಕುಸಿದ ವಿರಾಟ್ ಕೊಹ್ಲಿ, ಜೋ ರೂಟ್ ಟಾಪ್
Fab 4 Players Centuries Difference: 2021-2024ರ ನಡುವೆ ಫ್ಯಾಬ್-4 ಆಟಗಾರರ ಸೆಂಚುರಿಗಳಲ್ಲಿ ತುಂಬಾ ವ್ಯತ್ಯಾಸವಾಗಿದೆ. 3 ವರ್ಷದೊಳಗೆ ವಿರಾಟ್ ಕೊಹ್ಲಿ 4ನೇ ಸ್ಥಾನಕ್ಕೆ ಕುಸಿದರೆ, 19 ಶತಕ ಸಿಡಿಸಿದ ಜೋ ರೂಟ್ ಅಗ್ರಸ್ಥಾನಕ್ಕೇರಿದ್ದಾರೆ.
ವಿರಾಟ್ ಕೊಹ್ಲಿ.. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ನಾಲ್ಕೈದು ವರ್ಷಗಳ ಹಿಂದೆ ಶತಕ ಸಿಡಿಸುವುದನ್ನೇ ಚಟ ಮಾಡಿಕೊಂಡಿದ್ದರು. ಪ್ರತಿ ಪಂದ್ಯದಲ್ಲೂ ರನ್ ಗಳಿಸುತ್ತಿದ್ದರು. ಬೌಲರ್ಗಳೇ ಸುಸ್ತಾಗುವಂತೆ ಮಾಡುತ್ತಿದ್ದರು. ಅಸಾಧ್ಯ ಎನ್ನುತ್ತಿದ್ದ ದಾಖಲೆಗಳನ್ನೂ ಮುರಿಯುತ್ತಿದ್ದರು. ನೂತನ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದ್ದರು. ಆದರೆ, ಕಳೆದ ಮೂರ್ನಾಲ್ಕು ವರ್ಷಗಳಿಂದ ಈಚೆಗೆ ಕೊಹ್ಲಿ ಆಟದ ವಿಧಾನ ಬದಲಾಗಿದೆ. ಬ್ಯಾಟಿಂಗ್ ಮರೆತವರಂತೆ ಆಡುತ್ತಿದ್ದಾರೆ. ಒಂದೇ ರೀತಿಯ ಎಸೆತಗಳಿಗೆ ಔಟ್ ಆಗುತ್ತಿದ್ದಾರೆ. ಅನಾನುಭವಿ ಬೌಲರ್ಗಳ ಎದುರೇ ರನ್ಗಳಿಸಲು ಪರದಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.
ಹೌದು, ವಿರಾಟ್ ಕೊಹ್ಲಿ ಪ್ರಸ್ತುತ ಕೆಟ್ಟ ದಿನಗಳನ್ನು ಎದುರಿಸುತ್ತಿದ್ದಾರೆ. ಸಕ್ರಿಯ ಆಟಗಾರರ ಪೈಕಿ ಅತ್ಯಧಿಕ ಶತಕಗಳನ್ನು ಸಿಡಿಸಿದ್ದ ಟಾಪ್ನಲ್ಲಿ ವಿರಾಟ್, 4ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮೂರೇ ವರ್ಷಗಳಲ್ಲಿ ಎಂದು ಎಂಬುದು ಅಚ್ಚರಿ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಫ್ಯಾಬ್ 4 ಎಂದು ವಿರಾಟ್ ಕೊಹ್ಲಿ, ಜೋ ರೂಟ್, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್ ಅವರನ್ನು ಕರೆಯಲಾಗುತ್ತದೆ. ಏಕೆಂದರೆ ಸಕ್ರಿಯ ಆಟಗಾರರಲ್ಲಿ ಅತಿ ಹೆಚ್ಚು ಟೆಸ್ಟ್ ಶತಕ, ಟೆಸ್ಟ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ ಇವರು. ಆದರೆ 2021-2024ರ ನಡುವೆ ಫ್ಯಾಬ್-4 ಆಟಗಾರರ ಸೆಂಚುರಿಗಳಲ್ಲಿ ತುಂಬಾ ವ್ಯತ್ಯಾಸವಾಗಿದೆ. 3 ವರ್ಷದೊಳಗೆ ವಿರಾಟ್ ಕೊಹ್ಲಿ 4ನೇ ಸ್ಥಾನಕ್ಕೆ ಕುಸಿದರೆ, 19 ಶತಕ ಸಿಡಿಸಿದ ಜೋ ರೂಟ್ ಅಗ್ರಸ್ಥಾನಕ್ಕೇರಿದ್ದಾರೆ.
ಕೊಹ್ಲಿ ಟಾಪರ್, ರೂಟ್ ಲಾಸ್ಟ್
2021ರ ಜನವರಿ 1ಕ್ಕೆ ಫ್ಯಾಬ್ 4 ಆಟಗಾರರ ಶತಕಗಳ ಪಟ್ಟಿಯನ್ನು ನೋಡುವುದಾದರೆ ಕೊಹ್ಲಿ ನಂಬರ್ 1 ಆಗಿದ್ದರು. ಕಡಿಮೆ ಇನ್ನಿಂಗ್ಸ್ಗಳಲ್ಲಿ 27 ಶತಕಗಳಲ್ಲಿ ಚಚ್ಚಿದ್ದರು. ಆದರೆ ಅಂದು ರೂಟ್ (17) ಶತಕಗಳ ಸಂಖ್ಯೆ ಕೊಹ್ಲಿಗಿಂತ 10 ಕಡಿಮೆ ಇತ್ತು. ಹಾಗೆಯೇ ಸ್ಮಿತ್, ವಿಲಿಯಮ್ಸನ್ ಅವರೂ ಕ್ರಮವಾಗಿ 1, 4 ಸೆಂಚುರಿ ಕಡಿಮೆ ಹೊಂದಿದ್ದರು. ಯಾರು ಎಷ್ಟು ಇನ್ನಿಂಗ್ಸ್ಗಳಲ್ಲಿ ಎಷ್ಟು ಶತಕ ಸಿಡಿಸಿದ್ದರು? ಫ್ಯಾಬ್ 4 ಆಟಗಾರರ ಶತಕಗಳ ವ್ಯತ್ಯಾಸ ಇಲ್ಲಿದೆ.
ಜನವರಿ 01, 2021ಕ್ಕೆ ಫ್ಯಾಬ್-4 ಆಟಗಾರರ ಶತಕಗಳ ಅಂಕಿ ಅಂಶ
- ವಿರಾಟ್ ಕೊಹ್ಲಿ - 27 ಶತಕ (147 ಇನ್ನಿಂಗ್ಸ್)
- ಸ್ಟೀವ್ ಸ್ಮಿತ್ - 26 ಶತಕ (136 ಇನ್ನಿಂಗ್ಸ್)
- ಕೇನ್ ವಿಲಿಯಮ್ಸನ್ - 23 ಶತಕ (143 ಇನ್ನಿಂಗ್ಸ್)
- ಜೋ ರೂಟ್ - 17 ಶತಕ (177 ಇನ್ನಿಂಗ್ಸ್)
ಅಗ್ರಸ್ಥಾನಕ್ಕೇರಿದ ಜೋ ರೂಟ್, ಕೊಹ್ಲಿ 4ನೇ ಸ್ಥಾನ
2024ರ ಡಿಸೆಂಬರ್ 16ರ ತನಕ ಇದೇ ಫ್ಯಾಬ್-4 ಆಟಗಾರರ ಶ್ರೇಯಾಂಕಾ ಉಲ್ಟಾ ಆಗಿದೆ. ಜೋರೂಟ್ ನಾಲ್ಕರಿಂದ ಅಗ್ರಸ್ಥಾನಕ್ಕೇರಿದರೆ, ಕೊಹ್ಲಿ ಒಂದರಿಂದ ನಾಲ್ಕಕ್ಕೆ ಕುಸಿದಿದ್ದಾರೆ. ಅಲ್ಲದೆ, ಶತಕಗಳ ಸಂಖ್ಯೆಯಲ್ಲೂ ಭಾರೀ ಬದಲಾವಣೆಯಾಗಿದೆ. ರೂಟ್ ಈ ಮೂರು ವರ್ಷಗಳಲ್ಲಿ ಬರೋಬ್ಬರಿ 19 ಶತಕ ಬಾರಿಸಿದ್ದಾರೆ. ಆದರೆ ಕೊಹ್ಲಿ ಸಿಡಿಸಿರೋದು ಮೂರೇ ಮೂರು. ಇನ್ನು ಕೇನ್ ವಿಲಿಯಮ್ಸನ್ 10, ಸ್ಮಿತ್ 7 ಶತಕ ಸಿಡಿಸಿದ್ದಾರೆ. ಮೂರನೇ ಸ್ಥಾನದಲ್ಲಿದ್ದ ಕೇನ್, 2ಕ್ಕೇರಿದ್ದಾರೆ.
ಡಿಸೆಂಬರ್ 16, 2024ಕ್ಕೆ ಫ್ಯಾಬ್-4 ಆಟಗಾರರ ಶತಕಗಳ ಅಂಕಿ ಅಂಶ
- ಜೋ ರೂಟ್ - 36 ಶತಕ (177 ಇನ್ನಿಂಗ್ಸ್)
- ಕೇನ್ ವಿಲಿಯಮ್ಸನ್ - 33 ಶತಕ (186 ಇನ್ನಿಂಗ್ಸ್)
- ಸ್ಟೀವ್ ಸ್ಮಿತ್ - 33 ಶತಕ (199 ಇನ್ನಿಂಗ್ಸ್)
- ವಿರಾಟ್ ಕೊಹ್ಲಿ - 30 ಶತಕ (206 ಇನ್ನಿಂಗ್ಸ್)
ಇದನ್ನೂ ಓದಿ: ಕಾಮೆಂಟರಿ ವೇಳೆ ಜಸ್ಪ್ರೀತ್ ಬುಮ್ರಾ ನಿಂದಿಸಿದ ಇಸಾ ಗುಹಾ; ವ್ಯಾಪಕ ಖಂಡನೆ ಬೆನ್ನಲ್ಲೇ ಕ್ಷಮೆಯಾಚನೆ, ಮೆಚ್ಚಿದ ರವಿಶಾಸ್ತ್ರಿ
2021 ಮತ್ತು 2024ರ ಕ್ಯಾಲೆಂಡರ್ ವರ್ಷಗಳ ನಡುವೆ ರೂಟ್ 100 ಟೆಸ್ಟ್ ಇನ್ನಿಂಗ್ಸ್ ಆಡಿದ್ದು, ಒಟ್ಟು 19 ಶತಕ ಸಿಡಿಸಿದ್ದಾರೆ. ವಿಲಿಯಮ್ಸನ್ 43 ಇನ್ನಿಂಗ್ಸ್ಗಳಲ್ಲಿ 10 ಶತಕ, ಸ್ಮಿತ್ 63 ಇನ್ನಿಂಗ್ಸ್ಗಳಲ್ಲಿ 7 ಶತಕ, ಕೊಹ್ಲಿ 59 ಇನ್ನಿಂಗ್ಸ್ಗಳಲ್ಲಿ ಕೇವಲ 3 ಶತಕ ಬಾರಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಕೊಹ್ಲಿ ಫಾರ್ಮ್ ಹೇಗಿದೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಮತ್ತೊಂದಿಲ್ಲ.
ಕೊಹ್ಲಿ ಈ ವರ್ಷ ಟೆಸ್ಟ್ ಬ್ಯಾಟಿಂಗ್ ಸರಾಸರಿ (2024ರಲ್ಲಿ)
ಪಂದ್ಯ - 09
ಇನ್ನಿಂಗ್ಸ್ - 17
ರನ್ - 376
ಸರಾಸರಿ - 25.06
50/100 - 01/01
4s/6s - 39/05