Vaibhav Suryavanshi: ಐಪಿಎಲ್ ಹರಾಜಿನಲ್ಲಿ ಕೋಟಿ ರೂಪಾಯಿಗೆ ಹರಾಜಾದ 13 ವರ್ಷದ ಪೋರ ವೈಭವ್ ಸೂರ್ಯವಂಶಿ ಯಾರು? -ಇಲ್ಲಿದೆ ವಿವರ
ಐಪಿಎಲ್ ಮೆಗಾ ಹರಾಜಿನಲ್ಲಿ 13 ವರ್ಷದ ಸೂರ್ಯವಂಶಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಸೂರ್ಯವಂಶಿ 1.1 ಕೋಟಿ ರೂಪಾಯಿಗೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ. ಐಪಿಎಲ್ ನಲ್ಲಿ ಹರಾಜಾಗಿರುವ ಅತಿ ಕಿರಿಯ ಆಟಗಾರ ಎಂಬ ದಾಖಲೆ ಬರೆದಿರುವ ವೈಭವ್ ಸೂರ್ಯ ವಂಶಿ ಯಾರು, ಆತನ ಕ್ರಿಕೆಟ್ ವೃತ್ತಿ ಜೀವನದ ಮಾಹಿತಿ ತಿಳಿಯೋಣ.
ಸೌದಿ ಅರೇಬಿಯಾದ ಜೆದ್ದಾದಲ್ಲಿ ಮುಕ್ತಾಯಗೊಂಡ ಐಪಿಎಲ್ ಹರಾಜು 2025 ರಲ್ಲಿ ಮಾರಾಟವಾದ, ಮಾರಾಟವಾಗದ ದೊಡ್ಡ ದೇಶೀಯ ಹಾಗೂ ವಿದೇಶಿ ತಾರಾ ಆಟಗಾರರ ದೊಡ್ಡ ಪಟ್ಟಿಯೇ ಇದೆ. ಇದರ ನಡುವೆ 13 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್ ಹರಾಜಿನಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ವೈಭವ್ ಸೂರ್ಯವಂಶಿ 1.1 ಕೋಟಿ ರೂಪಾಯಿಗೆ ರಾಹುಲ್ ದ್ರಾವಿಡ್ ಕೋಚ್ ಆಗಿರುವ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ. ಎರಡನೇ ದಿನದ (ನವೆಂಬರ್ 25, ಸೋಮವಾರ) ಹರಾಜಿಲ್ಲಿ ವೈಭವ್ ಅವರನ್ನು ಆರ್ ಆರ್ ಖರೀದಿಸಿತು. ಆ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ -ಐಪಿಎಲ್ ಇತಿಹಾಸದಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಈ ಆಟಗಾರರನ್ನು ಖರೀದಿಸಲು ಕಠಿಣ ಪೈಪೋಟಿ ನಡೆಸಿದವು. 13 ವರ್ಷದ ಆಟಗಾರನಿಗೆ ಈ ಬಿಡ್ಡಿಂಗ್ ಸಂಪೂರ್ಣ ಯುದ್ಧವಾಗಿ ಮಾರ್ಪಟ್ಟಿತ್ತು. ಕೊನೆಯಲ್ಲಿ ಆರ್ ಆರ್ ತನ್ನ ದೃಢಸಂಕಲ್ಪದೊಂದಿಗೆ 1.1 ಕೋಟಿ ರೂ.ಗಳ ಗೆಲುವಿನ ಬಿಡ್ ಮಾಡಿತು.
ಐಪಿಎಲ್ ಹರಾಜಿನಲ್ಲಿ ಮಾರಾಟವಾಗಿರುವ ಅತಿ ಕಿರಿಯ ಆಟಗಾರ ವೈಭವ್ ಸೂರ್ಯ ವಂಶಿ ಯಾರು
ವೈಭವ್ ಸೂರ್ಯವಂಶಿ 2011ರ ಮಾರ್ಚ್ 27 ರಂದು ಬಿಹಾರದಲ್ಲಿ ಜನಿಸಿದರು. 4ನೇ ವಯಸ್ಸಿಗೆ ಈತ ತನ್ನ ಕ್ರಿಕೆಟ್ ಪ್ರತಿಭೆಯನ್ನು ತೋರಿಸಲು ಪ್ರಾರಂಭಿಸಿದ. ವೈಭವ್ ಅವರ ತಂದೆ ಸಂಜೀವ್ ಅವರು ಈತನ ಕ್ರಿಕೆಟ್ ಉತ್ಸಾಹವನ್ನು ಗಮನಿಸಿ ಮನೆಯ ಬಳಿಯೇ ಸಣ್ಣದಾಗಿ ಆಟದ ಸ್ಥಳವನ್ನು ಸಿದ್ಧಪಡಿಸಿದರು. ಇಲ್ಲಿಂದ ವೈಭವ್ ಕ್ರಿಕೆಟ್ ಸಿದ್ಧತೆ ಆರಂಭವಾಗುತ್ತದೆ. 9ನೇ ವಯಸ್ಸಿನಲ್ಲಿ ವೈಭವ್ ಅವರ ತಂದೆ ಸಮೀಪದ ಸಮಸ್ತಿಪುರದ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು. ಕ್ರಿಕೆಟ್ ಪ್ರತಿಭೆಯ ವಿಷಯದಲ್ಲಿ ವೈಭವ್ ತನ್ನ ವಯಸ್ಸಿಗಿಂತ ಸಾಕಷ್ಟು ಮುಂದಿರುವುದನ್ನು ಪತ್ತೆಹಚ್ಚಲು ಅಕಾಡೆಮಿ ಹೆಚ್ಚು ಸಮಯವನ್ನು ತೆಗೆದುಕೊಳ್ಳಲಿಲ್ಲ. ಇಲ್ಲಿ ಎರಡೂವರೆ ವರ್ಷಗಳ ಕಾಲ ಅಭ್ಯಾಸ ಮಾಡುತ್ತಾನೆ. ಆ ನಂತರ ವಿಜಯ್ ಮರ್ಚೆಂಟ್ ಟ್ರೋಫಿಗಾಗಿ ಅಂಡರ್ -16 ಟ್ರಯಲ್ಸ್ ನೀಡುತ್ತಾನೆ.
ಆದರೆ ಕಡಿಮೆ ವಯಸ್ಸಿನ ಕಾರಣದಿಂದ ಬೆಂಚ್ ಕಾಯಬೇಕಾಗುತ್ತದೆ. ಬಳಿಕ ಇವರಿಗೆ ಮನೀಶ್ ಓಜಾ ಅವರ ಮುಂದಾಳತ್ವದಲ್ಲಿ ತರಬೇತಿ ಸಿಗುತ್ತದೆ. ಇದಾದ ಬಳಿಕ ವೈಭವ್ ಸೂರ್ಯವಂಶಿ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಐಪಿಎಲ್ ವರೆಗೆ ಬಂದಿದ್ದಾರೆ. ವೈಭವ್ 2024 ರ ಜನವರಿಯಲ್ಲಿ ಕೇವಲ 12 ವರ್ಷ 284 ದಿನಗಳ ವಯಸ್ಸಿನಲ್ಲಿ ಬಿಹಾರದ ಪರ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಕಳೆದ ತಿಂಗಳು ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಭಾರತ ಅಂಡರ್ 19 ಪಂದ್ಯದ ಭಾಗವಾಗಿದ್ದರು, ಅಲ್ಲಿ ಅವರು 58 ಎಸೆತಗಳಲ್ಲಿ ಶತಕ ಬಾರಿಸಿ ಗಮನ ಸೆಳೆದರು.
ಐದು ಪ್ರಥಮ ದರ್ಜೆ ಪಂದ್ಯಗಳಲ್ಲಿ ವೈಭವ್ 400 ರನ್ ಗಳಿಸಿದ್ದು, ಗರಿಷ್ಠ ಸ್ಕೋರ್ 41 ಆಗಿದೆ. ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಭಾಗವಹಿಸುತ್ತಿದ್ದಾರೆ. 12ನೇ ವಯಸ್ಸಿನಲ್ಲಿ ಬಿಹಾರ ತಂಡಕ್ಕೆ ಪದಾರ್ಪಣೆ ಮಾಡಿದ ವೈಭವ್, ಕ್ರಿಕೆಟ್ ಲೋಕದಲ್ಲಿ ತಮ್ಮ ಆಟದ ಮೂಲಕ ಬಹುಬೇಗನೆ ಹೆಸರು ಮಾಡಿದ್ದಾರೆ.
2023 ರಲ್ಲಿ ಆಂಧ್ರಪ್ರದೇಶದ ಮುಲಪಾಡುನಲ್ಲಿ ನಡೆದ ಅಂಡರ್ - 19 ಚತುರ್ಭುಜ ಸರಣಿಯಲ್ಲಿ ಭಾರತ ಬಿ ಯು-19 ತಂಡದ ಭಾಗವಾಗಿದ್ದಾರೆ. ಬಾಂಗ್ಲಾದೇಶ, ಇಂಗ್ಲೆಂಡ್ ಯು-19 ತಂಡಗಳ ವಿರುದ್ಧದ ಭಾರತದ ಎ ತಂಡದಲ್ಲಿ ಸ್ಥಾನ ಪಡೆದಿದ್ದರು. ವೈಭವ್ 2024ರ ಜನವರಿಯಲ್ಲಿ ಪಾಟ್ನಾದಲ್ಲಿ ನಡೆದಿದ್ದ ಮುಂಬೈ ವಿರುದ್ಧ ರಣಜಿ ಟ್ರೋಫಿಯಲ್ಲಿ ಬಿಹಾರದ ಪರ ಎಲೈಟ್ ಗ್ರೂಪ್ ಬಿ ಹಣಾಹಣಿಯಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದ್ದರು. ವೈಭವ್ ಸೂರ್ಯವಂಶಿ ತನ್ನ ಆಟವನ್ನು ದಿನದಿಂದ ದಿನಕ್ಕೆ ಹೆಚ್ಚಿಕೊಂಡು ಸಾಗಿದರೆ ಮುಂದಿನ ದಿನಗಳಲ್ಲಿ ಟೀಂ ಇಂಡಿಯಾದ ಭಾಗವುದರಲ್ಲಿ ಯಾವುದೇ ಅನುಮಾನವಿಲ್ಲ.