ಐಸಿಸಿಗೆ ನೂತನ ಬಾಸ್ ಜಯ್ ಶಾ, ವಿನೂತನ ದಾಖಲೆ ಬರೆದ ಬಿಸಿಸಿಐ ಮಾಜಿ ಕಾರ್ಯದರ್ಶಿ, ಐಸಿಸಿ ಅಧ್ಯಕ್ಷರ ಪಟ್ಟಿ ಹೀಗಿದೆ
Jay Shah Record: ಬಿಸಿಸಿಐ ಮಾಜಿ ಕಾರ್ಯದರ್ಶಿ ಜಯ್ ಶಾ ಅವರು ಐಸಿಸಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇದರೊಂದಿಗೆ ವಿಶೇಷ ದಾಖಲೆ ನಿರ್ಮಿಸಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಮಾಜಿ ಕಾರ್ಯದರ್ಶಿ ಜಯ್ ಶಾ (Jay Shah) ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ಅಧ್ಯಕ್ಷರಾಗಿ ತಮ್ಮ ಹೊಸ ಪಾತ್ರವನ್ನು ವಹಿಸಿಕೊಂಡಿದ್ದಾರೆ. ಭಾರತೀಯ ಆಡಳಿತಾಧಿಕಾರಿ ವಿಶ್ವ ಕ್ರಿಕೆಟ್ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಡಿಸೆಂಬರ್ 1ರ ಭಾನುವಾರ ಅಧಿಕಾರಕ್ಕೇರುವ ಮೂಲಕ ಜಯ್ ಶಾ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಐಸಿಸಿ ಅಧ್ಯಕ್ಷ ಪಟ್ಟಕ್ಕೇರಿದ ಅತ್ಯಂತ ಕಿರಿಯ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ 2019 ರಿಂದ ಬಿಸಿಸಿಐ ಕಾರ್ಯದರ್ಶಿಯಾಗಿದ್ದ 36 ವರ್ಷದ ಜಯ್ ಶಾ, ಈ ವರ್ಷದ ಆರಂಭದಲ್ಲಿ ಅವಿರೋಧವಾಗಿ ಆಯ್ಕೆಯಾಗಿ ನೇಮಕಗೊಂಡಿದ್ದರು. ಅಪೆಕ್ಸ್ ಕ್ರಿಕೆಟ್ ಆಡಳಿತ ಮಂಡಳಿಯ ಹೊಸ ಅಧ್ಯಕ್ಷರಾಗಿ ನೇಮಕದ ನಂತರ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಒತ್ತು ನೀಡಿರುವುದಾಗಿ ಹೇಳಿದ್ದಾರೆ. ಐಸಿಸಿ ಅಧ್ಯಕ್ಷರ ಪಾತ್ರ ವಹಿಸಿಕೊಳ್ಳಲು ನನಗೆ ತುಂಬಾ ಗೌರವ ಇದೆ. ಐಸಿಸಿ ಸದಸ್ಯ ಮಂಡಳಿಗಳ ಬೆಂಬಲ, ನಂಬಿಕೆಗೆ ಕೃತಜ್ಞನಾಗಿದ್ದೇನೆ ಎಂದು ಐಸಿಸಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಶಾ ಹೇಳಿದ್ದಾರೆ.
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತಯಾರಿ ನಡೆಸುತ್ತೇವೆ. ವಿಶ್ವಕ್ಕೆ ಕ್ರಿಕೆಟ್ ಪರಿಚಯವಾಗುವಂತೆ ಮಾಡಬೇಕು. ಹೆಚ್ಚೆಚ್ಚು ಮಂದಿ ಕ್ರಿಕೆಟ್ನಲ್ಲಿ ತೊಡಗಿಸಿಕೊಳ್ಳಬೇಕು. ಇದು ಕ್ರೀಡೆಗೆ ರೋಮಾಂಚನಕಾರಿ ಎಂದು ಹೇಳಿದ್ದಾರೆ. ನಾವು ಬಹು ಸ್ವರೂಪಗಳ ಸಹಬಾಳ್ವೆ ಮತ್ತು ಮಹಿಳಾ ಆಟದ ಬೆಳವಣಿಗೆಯನ್ನು ವೇಗಗೊಳಿಸುವ ಅಗತ್ಯತೆಯೊಂದಿಗೆ ನಿರ್ಣಾಯಕ ಘಟ್ಟದಲ್ಲಿದ್ದೇವೆ. ಕ್ರಿಕೆಟ್ ಜಾಗತಿಕವಾಗಿ ಅಪಾರ ಸಾಮರ್ಥ್ಯ ಹೊಂದಿದೆ. ಈ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ಕ್ರೀಡೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. 2028ರ ಒಲಿಂಪಿಕ್ಸ್ನಲ್ಲಿ ಟಿ20ಐ ಮಾದರಿಯಲ್ಲಿ ಕ್ರಿಕೆಟ್ ಪಾಲ್ಗೊಳ್ಳುತ್ತಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮುಂದಿನ ಆವೃತ್ತಿಯ ಆತಿಥ್ಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದವನ್ನು ಪರಿಹರಿಸುವುದು ಜಯ್ ಶಾಗೆ ದೊಡ್ಡ ಸವಾಲಾಗಿದೆ. ಜಾಗತಿಕ ಕಾರ್ಯಕ್ರಮಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಲು ಬಿಸಿಸಿಐ ನಿರಾಕರಿಸಿದೆ. ಟೂರ್ನಿ ಆಯೋಜಿಸಲು ಹೈಬ್ರಿಡ್ ಮಾದರಿ ಯೋಜನೆಯನ್ನು ಸ್ವೀಕರಿಸಲು ಐಸಿಸಿ ಪಿಸಿಬಿಗೆ ಅಲ್ಟಿಮೇಟಮ್ ನೀಡಿದೆ ಎಂದು ವರದಿಯಾಗಿದೆ.
ಅತ್ಯಂತ ಕಿರಿಯ ಐಸಿಸಿ ಅಧ್ಯಕ್ಷ
ಜಯ್ ಶಾ ಅವರು ಅತ್ಯಂತ ಕಿರಿಯ ಐಸಿಸಿ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರಿಗೀಗ 36 ವರ್ಷ. ಅಲ್ಲದೆ ಐಸಿಸಿ ಅಧ್ಯಕ್ಷರಾದ ಐದನೇ ಭಾರತೀಯ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ಈ ಹಿಂದೆ ಜಗನ್ ಮೋಹನ್ ದಾಲ್ಮಿಯಾ 1997 ರಿಂದ 2000ರ ತನಕ ಅಧ್ಯಕ್ಷರಾಗಿದ್ದರು. ಶರದ್ ಪವಾರ್ 2010ರಿಂದ 2012ರ ತನಕ, ಎನ್ ಶ್ರೀನಿವಾಸನ್ 2014ರ ಜುಲೈ 26ರಿಂದ 2015ರ ನವೆಂಬರ್ 9ರವರೆಗೂ ಸೇವೆ ಸಲ್ಲಿಸಿದ್ದರು. ಬಳಿಕ ಶಶಾಂಕ್ ಮನೋಹರ್ ಅವರು 2015ರ ನವೆಂಬರ್ 22ರಿಂದ 2020ರ ಜೂನ್ 30ರ ಅಧ್ಯಕ್ಷರಾಗಿದ್ದರು. ಇದೀಗ ಜಯ್ ಶಾ ಡಿಸೆಂಬರ್ 1ರಿಂದ ಅಧಿಕಾರಕ್ಕೇರಿದ್ದಾರೆ.
ಐಸಿಸಿ ಅಧ್ಯಕ್ಷರ ಪಟ್ಟಿ
ಲಾರ್ಡ್ ಕಾಲಿನ್ ಕೌಡ್ರೆ: 1989 - 1993 *
ಸರ್ ಕ್ಲೈಡ್ ವಾಲ್ಕಾಟ್: 1993 - 1997 *
ಜಗಮೋಹನ್ ದಾಲ್ಮಿಯಾ: 1997 - 2000
ಮಾಲ್ಕಮ್ ಗ್ರೇ: 2000 - 2003
ಎಹ್ಸಾನ್ ಮಣಿ: 2003 - 2006
ಪರ್ಸಿ ಸನ್: 2006 - 2007
ರೇ ಮಾಲಿ: 2007 - 2008
ಡೇವಿಡ್ ಮೋರ್ಗನ್: 2008 - 2010
ಶರದ್ ಪವಾರ್: 2010 - 2012
ಅಲನ್ ಐಸಾಕ್: 2012 - 2014
ಎನ್.ಶ್ರೀನಿವಾಸನ್: 2014 - 2015
ಮುಸ್ತಫಾ ಕಮಾಲ್: 2014 - 2015 * (ಪದಾಧಿಕಾರಿ)
ಶಶಾಂಕ್ ಮನೋಹರ್: 2015 - 2020 *
ಜಹೀರ್ ಅಬ್ಬಾಸ್: 2015 - 2016 * (ಪದಾಧಿಕಾರಿ)
ಗ್ರೆಗ್ ಬಾರ್ಕ್ಲೇ: 2020 - 2024
ಜಯ್ ಶಾ: 2024 - ಪ್ರಸ್ತುತ