ನಿಮ್ಮದು ಇಬ್ಬಗೆ ನೀತಿ; ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿ ಒಪ್ಪಿಕೊಂಡರೂ ಪಾಕಿಸ್ತಾನದ ಮುಗಿಯದ ಗೋಳು
ಕನ್ನಡ ಸುದ್ದಿ  /  ಕ್ರಿಕೆಟ್  /  ನಿಮ್ಮದು ಇಬ್ಬಗೆ ನೀತಿ; ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿ ಒಪ್ಪಿಕೊಂಡರೂ ಪಾಕಿಸ್ತಾನದ ಮುಗಿಯದ ಗೋಳು

ನಿಮ್ಮದು ಇಬ್ಬಗೆ ನೀತಿ; ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿ ಒಪ್ಪಿಕೊಂಡರೂ ಪಾಕಿಸ್ತಾನದ ಮುಗಿಯದ ಗೋಳು

ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಪಿಸಿಬಿ ಒಪ್ಪಿಕೊಂಡರೂ, ಬಿಸಿಸಿಐ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಹೇಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿ ಒಪ್ಪಿಕೊಂಡರೂ ಪಾಕಿಸ್ತಾನದ ಮುಗಿಯದ ಗೋಳು
ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿ ಒಪ್ಪಿಕೊಂಡರೂ ಪಾಕಿಸ್ತಾನದ ಮುಗಿಯದ ಗೋಳು ((PCB/X))

ಭಾರತ ಮತ್ತು ಪಾಕಿಸ್ತಾನ ನಡುವೆ ಚಾಂಪಿಯನ್ಸ್ ಟ್ರೋಫಿ ಬಿಕ್ಕಟ್ಟು ಸಂಪೂರ್ಣವಾಗಿ ಬಗೆಹರಿದಿಲ್ಲ. ಎಂಟು ತಂಡಗಳ ಐಸಿಸಿ ಪಂದ್ಯಾವಳಿಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಹೀಗಾಗಿ ಭಾರತದ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ತಟಸ್ಥ ಸ್ಥಳದಲ್ಲಿ ನಿಗದಿಪಡಿಸಲು ಕೋರಲಾಗಿದೆ. ಹೀಗಾಗಿ ಸದ್ಯ ಟೂರ್ನಿ ಹೈಬ್ರಿಡ್‌ ಮಾದರಿಯಲ್ಲಿ ನಡೆಸುವುದು ಬಹುತೇಕ ಖಚಿತ. ಪಂದ್ಯಾವಳಿಯ ಅನಿಶ್ಚಿತತೆ ನಡುವೆ, ಉಭಯ ತಂಡಗಳು ದ್ವಿಪಕ್ಷೀಯ ಕ್ರಿಕೆಟ್ ಆಡಲು ಪ್ರಾರಂಭಿಸುವವರೆಗೆ ಐಸಿಸಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳನ್ನು ನಿಗದಿಪಡಿಸಬಾರದು ಎಂದು ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಹೇಳಿದ್ದಾರೆ.

ಒಂದು ವೇಳೆ ಚಾಂಪಿಯನ್ಸ್ ಟ್ರೋಫಿಗೆ ಹೈಬ್ರಿಡ್ ಮಾದರಿಯನ್ನು ಅಂತಿಮಗೊಳಿಸಿದರೆ, ಮುಂಬರುವ ಪುರುಷರ ಟಿ20 ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್ ಸೇರಿದಂತೆ 2025-2031ವರೆಗೆ ಭಾರತ ಆತಿಥ್ಯದಲ್ಲಿ ನಡೆಯುವ ಟೂರ್ನಿಗಳಿಗೂ ಐಸಿಸಿ ಅದೇ ಕಾರ್ಯವಿಧಾನವನ್ನು (ಹೈಬ್ರಿಡ್‌ ಮಾದರಿ) ಅನುಸರಿಸಬೇಕು ಎಂದು ಕಮ್ರಾನ್ ಅಕ್ಮಲ್ ಹೇಳಿದ್ದಾರೆ.

“ಐಸಿಸಿ ಮಹತ್ವ ನಿರ್ಧಾರ ತೆಗೆದುಕೊಳ್ಳುವಾಗ ಶಾಶ್ವತ ಪರಿಹಾರವನ್ನು ಕಂಡುಹಿಡಿಯಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವು ಪಾಕಿಸ್ತಾನಕ್ಕೆ ಬರದೆ ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಂಡರೆ, ಪಾಕಿಸ್ತಾನ ಕೂಡಾ ಭಾರತಕ್ಕೆ ಪ್ರವಾಸ ಮಾಡದಿರುವ ಕಾರಣ ಭಾರತದಲ್ಲಿನ ಇತರ ಎಲ್ಲಾ ಐಸಿಸಿ ಪಂದ್ಯಾವಳಿಗಳು ಅದೇ ಮಾದರಿಯನ್ನು ಅಳವಡಿಸಿಕೊಳ್ಳಬೇಕು” ಎಂದು ಕಮ್ರಾನ್ ಟೆಲಿಕಾಂ ಏಷ್ಯಾ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

ಐಸಿಸಿ ಇಂಡೋ-ಪಾಕ್ ಪಂದ್ಯ ನಡೆಸಬಾರದು

“ನನ್ನ ಪ್ರಕಾರ, ದ್ವಿಪಕ್ಷೀಯ ಸರಣಿ ಇರುವವರೆಗೂ ಐಸಿಸಿ ಇಂಡೋ-ಪಾಕ್ ಪಂದ್ಯಗಳನ್ನು ನಿಗದಿಪಡಿಸಬಾರದು. ಒಮ್ಮೆ ಎರಡೂ ತಂಡಗಳು ಪರಸ್ಪರ ಆಡಲು ಪ್ರಾರಂಭಿಸಿದರೆ ಮಾತ್ರ ನಾವು ಬಹುರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪಂದ್ಯಗಳನ್ನು ಆಡಬಹುದು,” ಎಂದು ಅಕ್ಮಲ್ ಹೇಳಿದ್ದಾರೆ.

ಫೆಬ್ರವರಿ 19 ರಿಂದ ಮಾರ್ಚ್ 9ರವರೆಗೆ ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿಯಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಪಿಸಿಬಿ ಮತ್ತು ಬಿಸಿಸಿಐ ಎರಡೂ ತಮ್ಮ ನಿಲುವಿನಿಂದ ಹಿಂದೆ ಸರಿಯದ ಕಾರಣ, ಐಸಿಸಿ ಕಳೆದ ಶುಕ್ರವಾರ(ನವೆಂಬರ್‌ 29) ಮಂಡಳಿಯ ಸಭೆಯನ್ನು ನಿಗದಿಪಡಿಸಿತು. ಆದರೆ ಕೇವಲ 15 ನಿಮಿಷಗಳ ಸಭೆ ಮುಗಿಯಿತು.

“2016ರ ವಿಶ್ವಕಪ್ ಪಂದ್ಯವನ್ನು ಧರ್ಮಶಾಲಾದಿಂದ ಕೋಲ್ಕತ್ತಾಗೆ ಸ್ಥಳಾಂತರಿಸಿದರೂ, ಪಾಕಿಸ್ತಾನವು ಭಾರತ ಪ್ರವಾಸ ಕೈಗೊಂಡಿತು. ಆ ನಂತರ ಕಳೆದ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನವು ಅಹಮದಾಬಾದ್‌ನಲ್ಲಿ ಆಡಿತು” ಎಂದು ಕಮ್ರಾನ್ ಅಕ್ಮಲ್ ಹೇಳಿದರು.

ಭಾರತದ ಇಬ್ಬಗೆ ನೀತಿ

“ಪಾಕಿಸ್ತಾನವು ಬಲವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಅಲ್ಲದೆ ಅದಕ್ಕೆ ಅಂಟಿಕೊಳ್ಳಬೇಕು. ಇದು ಪಾಕಿಸ್ತಾನಕ್ಕೆ ಉತ್ತಮ ಚಿತ್ರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಒಂದೆಡೆ, ರಾಜಕೀಯ ವಿಷಯವಾಗಿ ಭಾರತ ಪಾಕಿಸ್ತಾನದಲ್ಲಿ ಪಾಕಿಸ್ತಾನದೊಂದಿಗೆ ಆಡಲು ಬಯಸುವುದಿಲ್ಲ. ಆದರೆ ಮತ್ತೊಂದೆಡೆ, ಅವರು ತಮ್ಮ ದೇಶದಲ್ಲಿ ನಮ್ಮೊಂದಿಗೆ ಆಡುತ್ತಾರೆ. ಇದು ಇಬ್ಬಗೆ ನೀತಿ” ಎಂದು ಅವರು ಹೇಳಿದರು.

2008ರ ಬಳಿಕ ಭಾರತ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವಿನ ಕೊನೆಯ ದ್ವಿಪಕ್ಷೀಯ ಸರಣಿ 2012-13ರಲ್ಲಿ ನಡೆದಿತ್ತು. 1996ರ ಬಳಿಕ ಪಾಕಿಸ್ತಾನ ಯಾವುದೇ ಐಸಿಸಿ ಟೂರ್ನಿಯನ್ನು ಆಯೋಜಿಸಿಲ್ಲ. ಕಳೆದ ವರ್ಷ, ಭಾರತವು ಪಾಕ್‌ ಪ್ರಯಾಣಿಸಲು ನಿರಾಕರಿಸಿದ ನಂತರ ಪಾಕಿಸ್ತಾನವು ಹೈಬ್ರಿಡ್ ಮಾದರಿಯಲ್ಲಿ ಏಷ್ಯಾ ಕಪ್ ಆಯೋಜಿಸಿತ್ತು.

Whats_app_banner