ನಮ್ಮ ಭೇಟಿ ಅಪರೂಪ, ಆದರೆ ಸಿಕ್ಕಾಗೆಲ್ಲಾ..; ವಿರಾಟ್ ಕೊಹ್ಲಿ ಜತೆಗಿನ ಗೆಳೆತನದ ಕುರಿತು ಎಂಎಸ್ ಧೋನಿ ಮಾತು-ms dhoni opens up on his relationship with virat kohli says it is not like we meet very often friendship day 2024 prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ನಮ್ಮ ಭೇಟಿ ಅಪರೂಪ, ಆದರೆ ಸಿಕ್ಕಾಗೆಲ್ಲಾ..; ವಿರಾಟ್ ಕೊಹ್ಲಿ ಜತೆಗಿನ ಗೆಳೆತನದ ಕುರಿತು ಎಂಎಸ್ ಧೋನಿ ಮಾತು

ನಮ್ಮ ಭೇಟಿ ಅಪರೂಪ, ಆದರೆ ಸಿಕ್ಕಾಗೆಲ್ಲಾ..; ವಿರಾಟ್ ಕೊಹ್ಲಿ ಜತೆಗಿನ ಗೆಳೆತನದ ಕುರಿತು ಎಂಎಸ್ ಧೋನಿ ಮಾತು

MS Dhoni on Virat Kohli: ವಿರಾಟ್ ಕೊಹ್ಲಿ ಅವರೊಂದಿಗಿನ ತಮ್ಮ ಸ್ನೇಹದ ಕುರಿತು ಎಂಎಸ್ ಧೋನಿ ಮಾತನಾಡಿದ್ದು, ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇಬ್ಬರೂ ಭಾರತಕ್ಕೆ ಒಟ್ಟಿಗೆ ಬ್ಯಾಟಿಂಗ್ ಮಾಡಿದ ಸಮಯವನ್ನು ನೆನಪಿಸಿಕೊಂಡರು.

ವಿರಾಟ್ ಕೊಹ್ಲಿ ಜತೆಗಿನ ಗೆಳೆತನದ ಕುರಿತು ಮಾತನಾಡಿದ ಎಂಎಸ್ ಧೋನಿ
ವಿರಾಟ್ ಕೊಹ್ಲಿ ಜತೆಗಿನ ಗೆಳೆತನದ ಕುರಿತು ಮಾತನಾಡಿದ ಎಂಎಸ್ ಧೋನಿ

ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಸಂಬಂಧ ಮತ್ತು ಗೆಳೆತನದ ಕುರಿತು ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮಾತನಾಡಿದ್ದಾರೆ. ಆಫ್​​ ಫೀಲ್ಡ್ ಮತ್ತು ಆನ್​​ಫೀಲ್ಡ್​ನಲ್ಲಿ​ ಕೊಹ್ಲಿ ಜೊತೆಗಿನ ಸಂಬಂಧವನ್ನು ಎಂಎಸ್ ಧೋನಿ ಅವರು ವಿಶೇಷವಾಗಿ ಸ್ಮರಿಸಿಕೊಂಡಿದ್ದಾರೆ. ಆಧುನಿಕ ಕ್ರಿಕೆಟ್ ದಿಗ್ಗಜ ಎನಿಸಿರುವ ಕೊಹ್ಲಿ 2008ರಲ್ಲಿ ಮಾಹಿ ನಾಯಕತ್ವದಡಿಯಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟಿದ್ದರು.

ಧೋನಿ ನಾಯಕತ್ವದಲ್ಲಿ ಕೊಹ್ಲಿ ಹಲವು ವರ್ಷಗಳ ಬ್ಯಾಟ್ ಬೀಸಿದ್ದಾರೆ, ಅದೇ ರೀತಿ ವಿರಾಟ್ ಕ್ಯಾಪ್ಟನ್ಸಿಯ ಅಡಿಯಲ್ಲೂ ಎಂಎಸ್ ಆಡಿದ್ದರು. ಭಾರತ ಕ್ರಿಕೆಟ್​ನ​​​ ಇಬ್ಬರು ದೈತ್ಯರು ಪರಸ್ಪರರ ನಾಯಕತ್ವದಲ್ಲಿ ಒಟ್ಟಿಗೆ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಕೊಹ್ಲಿಯೂ ಈ ಹಿಂದೆ ಮೈದಾನದ ಹೊರಗೆ ಮತ್ತು ಒಳಗೆ ತಮ್ಮ ಸ್ನೇಹ ಹೇಗಿತ್ತು ಎಂಬುದನ್ನು ನೆನಪಿಸಿಕೊಂಡಿದ್ದರು. ಕಠಿಣ ಸಮಯದಲ್ಲಿ ಬೆಂಬಲಿಸಿದ್ದಕ್ಕೆ ಧನ್ಯವಾದ ಅರ್ಪಿಸಿದ್ದರು.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಧೋನಿ, ಇಬ್ಬರು ಭಾರತಕ್ಕೆ ಒಟ್ಟಿಗೆ ಆಡಿದ ಕ್ಷಣವನ್ನು ನೆನಪಿಸಿಕೊಂಡರು. 'ನಾನು ಮತ್ತು ವಿರಾಟ್ ಭಾರತ ತಂಡಕ್ಕೆ ಸುದೀರ್ಘ ಕಾಲ ಒಟ್ಟಿಗೆ ಆಡಿದ್ದೇವೆ. ಕೊಹ್ಲಿ ನಿಜಕ್ಕೂ ವಿಶ್ವದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರು. ಆತನೊಂದಿಗೆ ಹೆಚ್ಚು ಮಧ್ಯಮ ಓವರ್​​ಗಳಲ್ಲಿ ಬ್ಯಾಟಿಂಗ್ ನಡೆಸಿದ್ದು, ಅದ್ಭುತವಾಗಿತ್ತು. ಇಬ್ಬರೂ ಕ್ರೀಸ್‌ನಲ್ಲಿದ್ದಾಗ ಉತ್ತಮ ಸಂವಹನದಿಂದ 2 ಅಥವಾ 3 ರನ್ ಕದಿಯುತಿದ್ವಿ ನಿಜಕ್ಕೂ ಸಂತಸದ ಕ್ಷಣವಾಗುತ್ತಿತ್ತು ಎಂದು ಎಂಎಸ್ ಧೋನಿ ಹೇಳಿದ್ದಾರೆ.

ಪ್ರಸ್ತುತ ಯಾವಾಗಾಲೂ ಭೇಟಿಯಾಗುವುದು ಕಷ್ಟ. ಆದರೆ ಐಪಿಎಲ್ ಸಮಯದಲ್ಲಿ ಅಥವಾ ಕಾರ್ಯಕ್ರಮವೊಂದರಲ್ಲಿ ಭೇಟಿಯಾದಾಗಲು ಅವಕಾಶ ಸಿಕ್ಕಾಗಲೆಲ್ಲಾ ಪರಸ್ಪರ ಮಾತನಾಡುತ್ತೇವೆ. ನಾವು ಬದಿಗೆ ಹೋಗಿ ಸ್ವಲ್ಪ ಸಮಯದವರೆಗೆ ಹರಟೆ ಹೊಡೆಯುತ್ತೇವೆ. ಪ್ರಸ್ತುತ ಕ್ರಿಕೆಟ್​ ಕುರಿತು ನಾವು ಮಾತನಾಡುತ್ತೇವೆ. ಕುಟುಂಬಗಳ ಕುರಿತು ಮಾತನಾಡುತ್ತೇವೆ. ನಮ್ಮಿಬ್ಬರ ಸಂಬಂಧ ಅಂತಹದ್ದು ಎಂದು 2011ರ ವಿಶ್ವಕಪ್ ವಿಜೇತ ನಾಯಕ ಹೇಳಿದ್ದಾರೆ.

ಐಪಿಎಲ್ 2024ರ ಸಮಯದಲ್ಲಿ ಧೋನಿ ಕೊನೆಯ ಬಾರಿಗೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡರು. ಋತುರಾಜ್ ಗಾಯಕ್ವಾಡ್ ನಾಯಕತ್ವದ ಅಡಿಯಲ್ಲಿ ಮಾಹಿ ಆಡಿದ್ದರು. ಆದರೆ, 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್​ಗೆ ಅರ್ಹತೆ ಪಡೆಯಲು ವಿಫಲವಾಯಿತು. ಇದರ ನಡುವೆಯೂ ಧೋನಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದರು. ಪಂದ್ಯ ನಡೆದ ಮೈದಾನಕ್ಕೆ ಹರಿದು ಬರುತ್ತಿದ್ದ ಫ್ಯಾನ್ಸ್, ಅವರಿಗೆ ಅಪಾರ ಬೆಂಬಲ ನೀಡುತ್ತಿದ್ದರು. ಧೋನಿ 11 ಇನ್ನಿಂಗ್ಸ್​ಗಳಲ್ಲಿ 53.66ರ ಸರಾಸರಿಯಲ್ಲಿ 161 ರನ್ ಗಳಿಸಿದ್ದು, 220.54ರ ಸ್ಟ್ರೈಕ್ ರೇಟ್​​ನಲ್ಲಿ ರನ್ ಗಳಿಸಿದ್ದರು.

ಏತನ್ಮಧ್ಯೆ, ಕೊಹ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಿದ್ದಾರೆ. ಆದರೆ ಮೊದಲ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದರು. ರೋಚಕ ಟೈ ಆದ ಪಂದ್ಯದಲ್ಲಿ 32 ಎಸೆತಗಳಲ್ಲಿ 24 ರನ್ ಪೇರಿಸಿದರು. ಇದೀಗ 2ನೇ ಪಂದ್ಯಕ್ಕೆ ಸಜ್ಜಾಗಿದ್ದು, ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ. ಟಿ20 ವಿಶ್ವಕಪ್​ 2024ರ ಫೈನಲ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕೊಹ್ಲಿ, ಭಾರತ ಟ್ರೋಫಿ ಗೆಲ್ಲಲು ಮಹತ್ವದ ಪಾತ್ರ ವಹಿಸಿದ್ದರು.

ಇದನ್ನೂ ಓದಿ: