ಎನ್ಒಸಿ ಹಿಂಪಡೆದ ಎಸಿಬಿ; ನವೀನ್, ಫಾರೂಕಿ, ಮುಜೀಬ್ 2024ರ ಐಪಿಎಲ್ ಆಡೋದು ಕಷ್ಟ ಕಷ್ಟ
ಅಫ್ಘಾನಿಸ್ತಾನದ ಮುಜೀಬ್ ಉರ್ ರೆಹಮಾನ್, ಫಜಲ್ಹಕ್ ಫಾರೂಕಿ ಮತ್ತು ನವೀನ್ ಉಲ್ ಹಕ್ ಮೇಲೆ ಕ್ರಿಕೆಟ್ ಮಂಡಳಿಯು ನಿರ್ಬಂಧ ಹೇರಿದ್ದು, ಮುಂಬರುವ ಐಪಿಎಲ್‌ನಲ್ಲಿ ಈ ಮೂವರು ಕ್ರಿಕೆಟಿಗರು ಆಡುವ ಸಾಧ್ಯತೆ ಇಲ್ಲ.
ಅಫ್ಘಾನಿಸ್ತಾನ ಮೂವರು ಕ್ರಿಕೆಟಿಗರು ಮುಂಬರುವ ಐಪಿಎಲ್‌ನಲ್ಲಿ ಆಡುವ ಅವಕಾಶವನ್ನು ಬಹುತೇಕ ಕಳೆದುಕೊಂಡಿದ್ದಾರೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಮುಜೀಬ್ ಉರ್ ರಹಮಾನ್ (Mujeeb Ur Rahman), ಫಜಲ್ಹಕ್ ಫಾರೂಕಿ (Fazalhaq Farooqi) ಮತ್ತು ನವೀನ್ ಉಲ್ ಹಕ್ (Naveen Ul Haq) ಅವರ ಎನ್‌ಒಸಿಗಳನ್ನು (ನಿರಾಕ್ಷೇಪಣಾ ಪ್ರಮಾಣಪತ್ರ-No Objection Certificate) ತಕ್ಷಣವೇ ರದ್ದುಗೊಳಿಸಲು ನಿರ್ಧರಿಸಿದೆ. ಹೀಗಾಗಿ ಫ್ರಾಂಚೈಸಿ ಕ್ರಿಕೆಟ್ ಆಡಲು ಈ ಮೂವರಿಗೆ ಅನುಮತಿ ಇರುವುದಿಲ್ಲ.
ರಾಷ್ಟ್ರೀಯ ಕ್ರಿಕೆಟ್ ತಂಡದ ಪರ ಆಡುವ ಕೇಂದ್ರೀಯ ಒಪ್ಪಂದಗಳಿಂದ ಹೊರಗುಳಿದು, ಫ್ರಾಂಚೈಸ್ ಆಧರಿತ ಲೀಗ್‌ಗಳಿಗೆ ಆದ್ಯತೆ ನೀಡಲು ಯತ್ನಿಸಿದ ಹಿನ್ನೆಲೆಯಲ್ಲಿ ಕ್ರಿಕೆಟಿಗರ ಮೇಲೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಕಠಿಣ ಕ್ರಮ ಕೈಗೊಂಡಿದೆ. ಈ ಪ್ರಕರಣದ ತನಿಖೆಗೆ ನಿಯೋಜಿಸಲಾದ ಸಮಿತಿಯ ಶಿಫಾರಸಿನ ಮೇರೆಗೆ ಈ ಮೂವರು ಆಟಗಾರರ ವಾರ್ಷಿಕ ಒಪ್ಪಂದಗಳನ್ನು ವಿಳಂಬಗೊಳಿಸಲು ಎಸಿಬಿ ನಿರ್ಧರಿಸಿದೆ.
ಇದನ್ನೂ ಓದಿ | ಸೂರ್ಯಕುಮಾರ್ ಅಲ್ಲ; ಅಫ್ಘಾನಿಸ್ತಾನ ಟಿ20 ಸರಣಿಗೆ ನಾಯಕನಾಗಿ ಮರಳಲು ಸಿದ್ಧವಾದ ಸ್ಟಾರ್ ಆಟಗಾರ
“ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು (ACB) ರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರರಾದ ಮುಜೀಬ್ ಉರ್ ರೆಹಮಾನ್, ಫಜಲ್ ಹಕ್ ಫಾರೂಕಿ ಮತ್ತು ನವೀನ್ ಉಲ್ ಹಕ್ ಅವರಿಗೆ 2024ರ ವಾರ್ಷಿಕ ಕೇಂದ್ರೀಯ ಒಪ್ಪಂದಗಳನ್ನು ವಿಳಂಬಗೊಳಿಸಲು ನಿರ್ಧರಿಸಿದೆ. ಇದಕ್ಕೆ ಹೆಚ್ಚುವರಿಯಾಗಿ, ಮಂಡಳಿಯು ಅವರಿಗೆ ಎನ್‌ಒಸಿ ನೀಡದಿರಲು ನಿರ್ಧರಿಸಿದೆ. ಮುಂದಿನ ಎರಡು ವರ್ಷಗಳವರೆಗೆ ಅವರ ವಾರ್ಷಿಕ ಕೇಂದ್ರ ಒಪ್ಪಂದಗಳಿಂದ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ,” ಎಂದು ಎಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮೂವರು ಮುಂಬರುವ ಐಪಿಎಲ್‌ನಲ್ಲಿ ಆಡಬೇಕಿತ್ತು. ಆಫ್-ಸ್ಪಿನ್ನರ್ ಮುಜೀಬ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಮೂಲ ಬೆಲೆ 2 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಉಳಿದಂತೆ ವೇಗಿಗಳಾದ ನವೀನ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಫಾರೂಕಿಯನ್ನು ಸನ್‌ರೈಸರ್ಸ್ ಹೈದರಾಬಾದ್ ರಿಟೈನ್ ಮಾಡಿಕೊಂಡಿದೆ.
ಮುಜೀಬ್ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಪರ ಆಡುತ್ತಿದ್ದಾರೆ. ಎಸಿಬಿ ಸಮಿತಿಯು ಮೂವರು ಕ್ರಿಕೆಟಿಗರಿಗೆ ನೀಡಲಾದ ಎಲ್ಲಾ ಎನ್‌ಒಸಿಗಳನ್ನು ರದ್ದುಪಡಿಸಿರುವುದರಿಂದ, ಬಿಗ್ ಬ್ಯಾಷ್ ಲೀಗ್‌ನಲ್ಲಿ ಅವರು ಮುಂದುವರೆಯುವುದು ಅನುಮಾನ.
ಇದನ್ನೂ ಓದಿ | ಭಾರತ, ಪಾಕಿಸ್ತಾನ ಅಲ್ಲ; ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದ ಏಷ್ಯಾದ ಏಕೈಕ ತಂಡವಿದು
“ವಾಣಿಜ್ಯ ಲೀಗ್‌ಗಳಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ಈ ಆಟಗಾರರ ಕೇಂದ್ರೀಯ ಒಪ್ಪಂದಕ್ಕೆ ಸಹಿ ಮಾಡಿಲ್ಲ. ಅಫ್ಘಾನಿಸ್ತಾನ ರಾಷ್ಟ್ರೀಯ ತಂಡದಲ್ಲಿ ಆಡುವುದಕ್ಕಿಂತ ಅವರ ವೈಯಕ್ತಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡಿರುವುದು ಇಲ್ಲಿ ಎದ್ದು ಕಾಣುತ್ತಿದೆ. ಹೀಗಾಗಿ ಒಪ್ಪಂದದಿಂದ ಅವರನ್ನು ಕೈಬಿಡುವ ಮೂಲಕ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಈ ಆಟಗಾರರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ” ಎಂದು ಎಸಿಬಿ ಹೇಳಿದೆ.
2024ರ ಜನವರಿ 1ರಿಂದ ಮೂವರು ಆಟಗಾರರು ಒಂದು ವರ್ಷದವರೆಗೆ ಕೇಂದ್ರ ಒಪ್ಪಂದಕ್ಕೆ ಅರ್ಹರಾಗಿರುವುದಿಲ್ಲ. ಅಲ್ಲದೆ ಎರಡು ವರ್ಷಗಳವರೆಗೆ ಇವರು ಎನ್‌ಒಸಿ ಪಡೆಯಲು ಅರ್ಹರಲ್ಲದ ಪರಿಣಾಮ, ಐಪಿಎಲ್ ಸೇರಿದಂತೆ ಫ್ರಾಂಚೈಸಿ ಆಧರಿತ ಲೀಗ್‌ಗಳಲ್ಲಿ ಆಡಲು ಅನುಮತಿ ಸಿಗುವುದಿಲ್ಲ.