ಭಾರತ ದಕ್ಷಿಣ ಆಫ್ರಿಕಾ ಟಿ 20 ಕ್ರಿಕೆಟ್ : ಸಂಜು- ತಿಲಕ್‌ ಹೊಡೆತಕ್ಕೆ ಹರಿಣಗಳು ಚಿತ್‌, ಭಾರೀ ಅಂತರದಲ್ಲಿ ಮಣಿಸಿದ ಭಾರತಕ್ಕೆ ಸರಣಿ‌
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ದಕ್ಷಿಣ ಆಫ್ರಿಕಾ ಟಿ 20 ಕ್ರಿಕೆಟ್ : ಸಂಜು- ತಿಲಕ್‌ ಹೊಡೆತಕ್ಕೆ ಹರಿಣಗಳು ಚಿತ್‌, ಭಾರೀ ಅಂತರದಲ್ಲಿ ಮಣಿಸಿದ ಭಾರತಕ್ಕೆ ಸರಣಿ‌

ಭಾರತ ದಕ್ಷಿಣ ಆಫ್ರಿಕಾ ಟಿ 20 ಕ್ರಿಕೆಟ್ : ಸಂಜು- ತಿಲಕ್‌ ಹೊಡೆತಕ್ಕೆ ಹರಿಣಗಳು ಚಿತ್‌, ಭಾರೀ ಅಂತರದಲ್ಲಿ ಮಣಿಸಿದ ಭಾರತಕ್ಕೆ ಸರಣಿ‌

ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ 20 ಕ್ರಿಕೆಟ್ ಸರಣಿಯ ಕೊನೆಯ ಪಂದ್ಯದಲ್ಲಿ ಸಂಪೂರ್ಣ ಭಾರತ ಮಯವಾಗಿತ್ತು.ಮೊದಲು ಬ್ಯಾಟಿಂಗ್‌ ವೈಭವ, ನಂತರ ಬೌಲರ್‌ಗಳ ಮೋಡಿಯಿಂದ ಭಾರತ ಪಂದ್ಯದ ಜತೆಗೆ ಸರಣಿಯನ್ನೂ ಗೆದ್ದಿತು.

ದಕ್ಷಿಣ ಆಫ್ರಿಕಾ ತಂಡವನ್ನು ಟಿ 20 ಕ್ರಿಕೆಟ್ ಸರಣಿಯ ಕೊನೆಯ ಪಂದ್ಯವನ್ನು ಭಾರೀ ಅಂತರದಿಂದ ಮಣಿಸಿದ ಭಾರತ ಸರಣಿಯನ್ನು ತನ್ನದಾಗಿಸಿಕೊಂಡಿತು.
ದಕ್ಷಿಣ ಆಫ್ರಿಕಾ ತಂಡವನ್ನು ಟಿ 20 ಕ್ರಿಕೆಟ್ ಸರಣಿಯ ಕೊನೆಯ ಪಂದ್ಯವನ್ನು ಭಾರೀ ಅಂತರದಿಂದ ಮಣಿಸಿದ ಭಾರತ ಸರಣಿಯನ್ನು ತನ್ನದಾಗಿಸಿಕೊಂಡಿತು.

ಜೋಹಾನ್ಸ್‌ ಬರ್ಗ್‌:ಅದೇ ಪಿಚ್‌ನಲ್ಲಿ ಭಾರತೀಯ ಬ್ಯಾಟ್ಸ್‌ ಮನ್‌ಗಳು ರನ್‌ ಮೆಷಿನ್‌ ನಂತೆ ಕಂಡರು. ಆನಂತರ ಆತಿಥೇಯರು ತಮ್ಮದೇ ಪಿಚ್‌ನಲ್ಲಿ ಭಾರತದ ಬೌಲರ್‌ಗಳ ಕರಾರುವಕ್ಕಾದ ಎಸೆತಗಳ ಆಟಕ್ಕೆ ತರಗಲೆಗಳಂತೆ ಉದುರಿ ಹೋದರು. ಜೋಹ್ಸಾನ್‌ಬರ್ಗ್‌ನಲ್ಲಿ ಮಳೆ ಬರಬಹುದು ಎನ್ನುವ ಆತಂಕವನ್ನು ದೂರ ಮಾಡಿ ಸಂಜು ಸ್ಯಾಮ್ಸನ್‌ ಹಾಗೂ ತಿಲಕ್‌ ವರ್ಮ ರನ್‌ಗಳ ಸುರಿಮಳೆಗೈದರು. ಸಿಕ್ಸರ್‌ ಹಾಗೂ ಬೌಂಡರಿಗಳನ್ನೇ ಬಾರಿಸಿದರು. ಇಬ್ಬರೂ ಶತಕವನ್ನಷ್ಟೇ ಸಿಡಿಸಲಿಲ್ಲ.ಬದಲಿಗೆ ಹಲವು ದಾಖಲೆಗಳನ್ನೂ ಬರೆದರು. ಆನಂತರ ಬೌಲರ್‌ಗಳು ಭಾರತದ ಗೆಲುವಿಗೆ ಶರಾ ಬರೆದರು. ಭಾರತವು ಬ್ಯಾಟಿಂಗ್‌ ವೈಭವ, ಬೌಲರ್‌ಗಳ ಕರಾರುವಕ್‌ ಎಸೆತಗಳಿಂದಾಗಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಟಿ20 ಕ್ರಿಕೆಟ್ ಸರಣಿ ಕೊನೆಯ ಪಂದ್ಯದಲ್ಲಿ135 ರನ್‌ಗಳ ಭಾರೀ ಅಂತರದಲ್ಲಿ ಮಣಿಸಿ ಸರಣಿಯನ್ನು3 -1 ರಿಂದ ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಭಾರತ 20 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು 283 ರನ್‌ಗಳನ್ನು ಭಾರತ ಗಳಿಸಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 18.2 ಓವರ್‌ಗಳಲ್ಲಿ 148 ರನ್‌ ಗಳಿಸಲು ಶಕ್ತವಾಯಿತು. ತಿಲಕ್‌ ವರ್ಮ ಸ್ಪೋಟಕ ಬ್ಯಾಟಿಂಗ್‌ನಿಂದ ಪಂದ್ಯ ಹಾಗೂ ಸರಣಿ ಪುರುಷೋತ್ತಮ ಎನ್ನಿಸಿದರು.

ಬೌಲರ್‌ಗಳ ಬಿಗಿ ಹಿಡಿತ

284 ರನ್‌ಗಳ ಭಾರೀ ಗುರಿಯೊಂದಿಗೆ ಅಖಾಡಕ್ಕೆ ಇಳಿದ ಆತಿಥೇಯ ತಂಡ ಆರಂಭದಲ್ಲಿಯೇ ಭಾರತದ ಬೌಲರ್‌ಗಳ ಎಸೆತಗಳಿಗೆ ನಲುಗಿ ಹೋಯಿತು. ಅದೂ ಅರ್ಷದೀಪ್‌ ಬೌಲಿಂಗ್‌ ಹೊಡೆತಕ್ಕೆ ಹರಿಣಗಳು ಸಿಲುಕಿದರು. ಒಂದು ರನ್‌ ಆಗಿದ್ದಾಗಲೇ ರೀಜಾ(ಶೂನ್ಯ) ಅವರನ್ನು ಬೌಲ್ಡ್‌ ಮಾಡಿದ ಅರ್ಷದೀಪ್‌ ಮರು ಓವರ್‌ನಲ್ಲಿಯೇ ನಾಯಕ ಮಕ್ರಮ್‌(8) ಹಾಗೂ ಹೀನ್‌ ರಿಚ್(ಶೂನ್ಯ) ಅವರ ವಿಕೆಟ್‌ ಅನ್ನು ಸತತ ಎಸೆತಗಳಲ್ಲಿ ಪಡೆದು ದಕ್ಷಿಣ ಆಫ್ರಿಕಾದ ಬ್ಯಾಟಿಂಗ್‌ ಬಲವನ್ನೇ ಮುರಿದರು. ಇನ್ನೊಂದು ತುದಿಯಲ್ಲಿ ಹಾರ್ದಿಕ್‌ ಪಾಂಡ್ಯ ಕೂಡ ರಿಯಾನ್‌( 1) ವಿಕೆಟ್‌ ಕಬಳಿಸಿದರು. ದಕ್ಷಿಣ ಆಫ್ರಿಕಾ 10 ರನ್‌ ಆಗುವ ಹೊತ್ತಿಗೆ 4 ವಿಕೆಟ್‌ ಕಳೆದುಕೊಂಡಿತ್ತು. ದಕ್ಷಿಣ ಆಫ್ರಿಕಾದ ಈ ಪ್ರದರ್ಶನ ಸ್ಥಳೀಯರಿಗೆ ಭಾರೀ ನಿರಾಶೆಯನ್ನು ತಂದಿತು. ಈ ವೇಳೆ ಐದನೇ ವಿಕೆಟ್‌ಗೆ ಜತೆಯಾದ ಮಿಲ್ಲರ್‌ ಹಾಗೂ ಸ್ಟಬ್ಸ್‌ ಅವರು ಮಾತ್ರ ಕೊಂಚ ಚೇತರಿಕೆ ತಂದರು.ಅದರೂ ಹತ್ತು ಓವರ್‌ ಮುಕ್ತಾಯಕ್ಕೆ ದಕ್ಷಿಣ ಆಫ್ರಿಕಾ 73 ರನ್‌ ಗಳಿಸಲು ಮಾತ್ರ ಸಾಧ್ಯವಾಗಿತ್ತು

ಜೋಡಿ ಮುರಿದ ಚಕ್ರವರ್ತಿ- ಬಿಷ್ಣೋಯ್‌

ವೇಗದ ಬೌಲರ್‌ಗಳ ನಡುವೆ ಸ್ಪಿನ್ನರ್‌ ಗಳು ಕೊಂಚ ದುಬಾರಿ ಎನ್ನಿಸಿದರೂ ಆನಂತರ ಮಿಲ್ಲರ್‌ ಹಾಗೂ ಸ್ಟಬ್ಸ್‌ ಜೋಡಿಯನ್ನು ಇಬ್ಬರೂ ಮುರಿಯಲು ಯಶಸ್ವಿಯಾದವರು ವರುಣ್‌ ಚಕ್ರವರ್ತಿ- ರವಿ ಬಿಷ್ಣೋಯ್‌ ಮಿಲ್ಲರ್‌ ವಿಕೆಟ್‌ ಅನ್ನು ವರುಣ್‌ ಕಿತ್ತರೆ, ಸ್ಟಬ್ಸ್‌ ಅನ್ನು ಎಲ್‌ಬಿ ಬಲೆಗೆ ಬಿಷ್ಣೋಯ್‌ ಕೆಡವಿದರು. ಇದರೊಂದಿಗೆ ದಕ್ಷಿಣ ಆಫ್ರಿಕಾದ ಬಹುತೇಕ ಬ್ಯಾಟಿಂಗ್‌ ಅಂತ್ಯಗೊಂಡಿತು. .ಆನಂತರ ರನ್‌ ಗತಿ ಕಡಿಮೆಯಾಗಿ ನಿರಂತರವಾಗಿ ವಿಕೆಟ್‌ ಪತನವಾದವು. ಅಕ್ಸರ್‌ ಪಟೇಲ್‌ ಕೂಡ ಎರಡು ವಿಕೆಟ್‌ ಪಡೆದು ಗಮನ ಸೆಳೆದರು.

ಭಾರತದ ಬ್ಯಾಟಿಂಗ್‌ ವೈಭವ

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ನಾಯಕ ಸೂರ್ಯಕುಮಾರ್‌ ಯಾದವ್‌ ಅವರ ನಿರ್ಧಾರ ಸರಿಯಾಗಿತ್ತು ಎಂದು ಭಾರತೀಯ ಬ್ಯಾಟ್ಸ್‌ಮನ್‌ ಗಳು ಸಾಬೀತುಪಡಿಸಿದರು. ಈ ಸರಣಿಯಲ್ಲಿ ಮಿಂಚಿರುವ ಸಂಜು ಸ್ಯಾಮ್ಸನ್‌ ಹಾಗೂ ಅಭಿಷೇಕ್‌ ಶರ್ಮಾ ಉತ್ತಮ ಆರಂಭವನ್ನೇ ಹಾಕಿಕೊಟ್ಟರು. ಸರಾಸರಿ ಹತ್ತಕ್ಕೂ ಅಧಿಕ ರನ್‌ರೇಟ್‌ ಅನ್ನು ಕಾಪಾಡಿಕೊಂಡು ಬಂದರು. ಸಂಜು ಹಾಗೂ ಶರ್ಮಾ ಐದು ಓವರ್‌ ಗಳಲ್ಲಿ ಐವತ್ತು ರನ್‌ ದಾಟಿದ್ದರು. ಈ ವೇಳ ಶರ್ಮಾ(36) ಭರ್ಜರಿ ಹೊಡೆಯಲು ಯತ್ನಿಸಿ ವಿಕೆಟ್‌ ಅರ್ಪಿಸಿದರು. ಶರ್ಮ ನಾಲ್ಕು ಸಿಕ್ಸರ್‌ ಮೂಲಕ ಗಮನ ಸೆಳೆದರೂ ಬೇಗನೆ ನಿರ್ಗಮಿಸಿದರು.

ಸಂಜು-ತಿಲಕ್‌ ಜೋಡಿ ದಾಖಲೆ

ಆಗಲೇ ಕಚ್ಚಿಕೊಂಡದೇ ಆಟವಾಡುತ್ತಿದ್ದ ಸಂಜುಗೆ ಸಾಥಿಯಾದವರು ತಿಲಕ್‌ ವರ್ಮ. ಮೊದಲ ಪಂದ್ಯದಲ್ಲಿ ಸಂಜು, ಹಿಂದಿನ ಪಂದ್ಯದಲ್ಲಿ ತಿಲಕ್‌ ಶತಕದೊಂದಿಗೆ ಭಾರತವನ್ನು ಗೆಲ್ಲಿಸಿದರು. ಕೊನೆಯ ಪಂದ್ಯದಲ್ಲೂ ಅದೇ ರೀತಿ ಆಟವಾಡಿದರು. ಸಂಜು(109) ಹಾಗೂ ತಿಲಕ್‌ ವರ್ಮ(120 ) ರನ್‌ ಮೆಷಿನ್‌ನಂತೆ ಆಡಿ ಹಲವು ದಾಖಲೆಗಳನ್ನು ಬರೆದರು.

ಈ ಜೋಡಿ 200ಕ್ಕೂ ಅಧಿಕ ರನ್‌ ಅನ್ನು ಅಜೇಯವಾಗಿಯೇ ಎರಡನೇ ವಿಕೆಟ್‌ಗೆ ದಾಖಲಿಸಿತು. ಸಂಜು 56 ಎಸೆತಗಳಲ್ಲಿ 9 ಸಿಕ್ಸರ್‌, 6 ಬೌಂಡರಿಯೊಂದಿಗೆ ಶತಕ ದಾಟಿದರೆ, ತಿಲಕ್‌ ವರ್ಮ ಅವರಂತೂ ಆಕ್ರಮಣಕಾರಿಯಾಗಿಯೆ ಆಡಿದರು.

ಬರೀ ಬೌಂಡರಿ, ಸಿಕ್ಸರ್‌

ಅವರ 47 ಎಸೆತಗಳ ಆಟದಲ್ಲಿ 10 ಸಿಕ್ಸರ್‌, 9 ಬ್ಯಾಂಡರಿ ಇದ್ದವು. ಒಂದೇ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 23 ಸಿಕ್ಸರ್‌, ಹಾಗೂ 17 ಬೌಂಡರಿ ದಾಖಲಾದವು. ಯಾರು ಮೊದಲು ಶತಕ ದಾಖಲಿಸುತ್ತಾರೆ ಎನ್ನುವ ರೀತಿಯಲ್ಲಿ ಆಟವಾಡಿದ ಇಬ್ಬರೂ ಜೀವದಾನಗಳನ್ನು ಸದುಪಯೋಗಪಡಿಸಿಕೊಂಡರು. ಸಂಜು ಹಾಗೂ ತಿಲಕ್‌ ಇಬ್ಬರೂ ಈ ಸರಣಿಯಲ್ಲಿ ಎರಡನೇ ಶತಕವನ್ನು ದಾಖಲಿಸಿದರು.

ವಿದೇಶಿ ನೆಲದಲ್ಲಿ ಟಿ 20ಯಲ್ಲಿ ಅತ್ಯಧಿಕ ರನ್‌ ದಾಖಲೆ ಬರೆಯಲು ಈ ಜೋಡಿ ನೆರವಾಯಿತು. ಕೊನೆಗೆ 20 ಓವರ್‌ ಮುಕ್ತಾಯಕ್ಕೆ 210 ರನ್‌ ಜೊತೆಯಾಟದೊಂದಿಗೆ 283 ರನ್‌ಗಳನ್ನು ಭಾರತ ಗಳಿಸಿತು.

ದಕ್ಷಿಣ ಆಫ್ರಿಕಾದ ಎಲ್ಲಾ ಬೌಲರ್‌ಗಳು ದಂಡನೆಗೆ ಒಳಗಾದರು. ಭಾರತದ ಬ್ಯಾಟಿಂಗ್‌ ವೈಭವ ಮಳೆಯ ಆತಂಕದ ನಡುವೆಯೂ ಸೇರಿದ್ದ ಕ್ರಿಕೆಟ್‌ ಅಭಿಮಾನಿಗಳಿಗೆ ರಸದೌತಣದಂತೆಯೇ ಇತ್ತು.

Whats_app_banner