ಭಾರತ ಟಿ20 ತಂಡದ ಮುಂದಿನ ನಾಯಕ ಯಾರು; ವಿಶ್ವಕಪ್ ಗೆದ್ದ ರೋಹಿತ್ ಶರ್ಮಾ ಸ್ಥಾನ ತುಂಬಲು ನಾಲ್ವರು ನಡುವೆ ಪೈಪೋಟಿ
Next India T20I captain: ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮಾ ಅವರ ಸ್ಥಾನವನ್ನು ತುಂಬಲು ಭಾರತ ತಂಡದ ನಾಲ್ವರು ನಡುವೆ ಪೈಪೋಟಿ ನಡೆಸುತ್ತಿದ್ದಾರೆ.
ಟಿ20 ವಿಶ್ವಕಪ್ 2024 ಟೂರ್ನಿ (ICC T20 World Cup 2024) ಮುಕ್ತಾಯಗೊಂಡಿದೆ. ಟೀಮ್ ಇಂಡಿಯಾ (Team India) 17 ವರ್ಷಗಳ ನಂತರ ಮತ್ತೊಮ್ಮೆ ಚುಟುಕು ಕ್ರಿಕೆಟ್ನಲ್ಲಿ ಚಾಂಪಿಯನ್ ಆಗಿದೆ. ಟ್ರೋಫಿ ಗೆದ್ದ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ (Rohit Sharma Retir), ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆಯಲಿದ್ದಾರೆ. ಚುಟುಕು ಕ್ರಿಕೆಟ್ನಿಂದ ಹಿಟ್ಮ್ಯಾನ್ ಹಿಂದೆ ಸರಿದ ಬೆನ್ನಲ್ಲೇ ಭಾರತ ಟಿ20ಐ ತಂಡದ ಮುಂದಿನ ಕ್ಯಾಪ್ಟನ್ (Next India T20I captain) ಯಾರೆಂಬ ಪ್ರಶ್ನೆ ಎದ್ದಿದೆ.
ರೋಹಿತ್ ಜೊತೆಗೆ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಅವರು ಸಹ ನಿವೃತ್ತಿ ಘೋಷಿಸಿದ್ದಾರೆ. ಹಿರಿಯ ಆಟಗಾರರು ಚುಟುಕು ಕ್ರಿಕೆಟ್ನಲ್ಲಿ ಇನ್ಮುಂದೆ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ 2026ರ ಟಿ20 ವಿಶ್ವಕಪ್ಗೆ ಯುವ ಭಾರತ ತಂಡವನ್ನು ಕಟ್ಟಲು ಬಿಸಿಸಿಐ ಚಿಂತನೆ ನಡೆಸಿದೆ. ಇದರ ನಡುವೆ ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮಾ ನಾಯಕತ್ವದ ಸ್ಥಾನ ತುಂಬಲು ಹಾಗೂ ಟೀಮ್ ಇಂಡಿಯಾದ ಟಿ20 ನಾಯಕನಾಗಲು ನಾಲ್ವರ ನಡುವೆ ಪೈಪೋಟಿ ಏರ್ಪಟ್ಟಿದೆ.
1. ಹಾರ್ದಿಕ್ ಪಾಂಡ್ಯ
ಭಾರತ ತಂಡದ ವೈಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರ ಹೆಸರು ನಾಯಕತ್ವದ ಸ್ಥಾನಕ್ಕೆ ಮುಂಚೂಣಿಯಲ್ಲಿದೆ. ಟಿ20 ವಿಶ್ವಕಪ್ನಲ್ಲೂ ಹಾರ್ದಿಕ್ ಉಪನಾಯಕನಾಗಿ ಸೇವೆ ಸಲ್ಲಿಸಿದ್ದರು. ಈ ಹಿಂದೆ ರೋಹಿತ್ ಅನುಪಸ್ಥಿತಿಯಲ್ಲಿ ಹಾರ್ದಿಕ್, 16 ಪಂದ್ಯಗಳಲ್ಲಿ ಮುನ್ನಡೆಸಿದ ದಾಖಲೆ ಹೊಂದಿದ್ದು, ಈ ಪೈಕಿ 10ರಲ್ಲಿ ತಂಡಕ್ಕೆ ಜಯ ತಂದಿಟ್ಟಿದ್ದಾರೆ. ಸದ್ಯ ವೈಸ್ ಕ್ಯಾಪ್ಟನ್ ಆಗಿರುವ ಕಾರಣ ನಾಯಕತ್ವ ನೀಡುವ ನಿರೀಕ್ಷೆ ಇದೆ. ಅಲ್ಲದೆ, ಅವರು ಐಪಿಎಲ್ನಲ್ಲೂ ನಾಯಕನಾಗಿ ಆಡಿದ ಅನುಭವ ಹೊಂದಿದ್ದು, ಎರಡು ಟ್ರೋಫಿಗಳನ್ನೂ ಗೆದ್ದಿದ್ದಾರೆ.
2. ಜಸ್ಪ್ರೀತ್ ಬುಮ್ರಾ
ಹಿಂದಿನಿಂದಲೂ ಅಪವಾದ ಇದೆ. ಬ್ಯಾಟರ್ಗಳನ್ನೇ ನಾಯಕನನ್ನಾಗಿ ಆಯ್ಕೆ ಮಾಡುವುದೇಕೆ? ಬೌಲರ್ಗೇಕೆ ಕ್ಯಾಪ್ಟನ್ಸಿ ಕೊಡಲ್ಲ ಎಂದು ಮಾಜಿ ಕ್ರಿಕೆಟರ್ಸ್ ಒತ್ತಾಯಿಸಿದ್ದರು. ರೋಹಿತ್ ಅನುಪಸ್ಥಿತಿಯಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ನಾಯಕತ್ವ ವಹಿಸಿದ್ದರು. ಉಪನಾಯಕನಾಗಿಯೂ ನೇಮಕವಾಗಿದ್ದಾರೆ. ಇದೀಗ ಚುಟುಕು ಕ್ರಿಕೆಟ್ ತಂಡಕ್ಕೂ ಬುಮ್ರಾ ನಾಯಕನಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. 2023ರಲ್ಲಿ ಐರ್ಲೆಂಡ್ ಎದುರಿನ ಟಿ20ಐ ಸರಣಿಯಲ್ಲಿ ಬುಮ್ರಾ ನಾಯಕನಾಗಿದ್ದರು. ಹೀಗಾಗಿ ಟಿ20ಐ ನಾಯಕನಾಗಿ ಬುಮ್ರಾ ಆಯ್ಕೆಯಾದರೂ ಅಚ್ಚರಿಪಡಬೇಕಿಲ್ಲ.
3. ರಿಷಭ್ ಪಂತ್
ಎಂಎಸ್ ಧೋನಿ ಅವರ ಉತ್ತರಾಧಿಕಾರಿ ಎಂದೇ ಕರೆಸಿಕೊಳ್ಳುವ ರಿಷಭ್ ಪಂತ್ ಅವರು 5 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಈ ವೇಳೆ ಭಾರತವು ಎರಡು ಪಂದ್ಯಗಳಲ್ಲಿ ಗೆದ್ದಿದೆ. ಎರಡಲ್ಲಿ ಸೋಲು ಕಂಡಿದೆ. ಮತ್ತೊಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಐಪಿಎಲ್ನಲ್ಲೂ ನಾಯಕನಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ ಅಪಾರ ಅನುಭವ ಹೊಂದಿರುವ ಪಂತ್ಗೆ ಭಾರತದ ಟಿ20ಐ ತಂಡದ ನಾಯಕ ಸ್ಥಾನಕ್ಕೆ ರೇಸ್ನಲ್ಲಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಆಗಿ ಮಿಂಚಿರುವ ಪಂತ್ಗೆ ನಾಯಕತ್ವ ಒಲಿದರೂ ಅಚ್ಚರಿ ಇಲ್ಲ.
4. ಸೂರ್ಯಕುಮಾರ್ ಯಾದವ್
ಟಿ20 ಕ್ರಿಕೆಟ್ನಲ್ಲಿ ಸ್ಟೈಲಿಶ್ ಬ್ಯಾಟರ್ ಎಂದೇ ಕರೆಸಿಕೊಳ್ಳುವ ಸೂರ್ಯ ಕುಮಾರ್ ಯಾದವ್ ಅವರು ನಾಯಕತ್ವದ ಸ್ಥಾನಕ್ಕೆ ರೇಸ್ನಲ್ಲಿದ್ದಾರೆ. ಟೀಮ್ ಇಂಡಿಯಾವನ್ನು ಏಳು ಪಂದ್ಯಗಳಲ್ಲಿ ಮುನ್ನಡೆಸಿದ್ದು, 5ರಲ್ಲಿ ಗೆಲುವು ಸಾಧಿಸಿದ್ದಾರೆ. ಟಿ20ಐ ಕ್ರಿಕೆಟ್ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಸೂರ್ಯ, ನಾಯಕತ್ವದ ಆಕಾಂಕ್ಷಿಯಾಗಿದ್ದಾರೆ. ನಾಯಕತ್ವದ ಅನುಭವ ಕಡಿಮೆ ಇದ್ದರೂ ರೇಸ್ನಲ್ಲಿದ್ದಾರೆ. ಇವರ ಜೊತೆಗೆ ಶುಭ್ಮನ್ ಗಿಲ್ ಕೂಡ ಪೈಪೋಟಿಯಲ್ಲಿದ್ದಾರೆ.